ಈ ವಿಷಯದಲ್ಲಿ ಟಾಲಿವುಡ್​ ಬೆಸ್ಟ್​ ಅಂತೆ: ಕನ್ನಡ ಸಿನಿ ಇಂಡಸ್ಟ್ರಿ ವಿರುದ್ಧ ಅಪ್ಸರಾ ರಾಣಿ ಗಂಭೀರ ಆರೋಪ

Apsara Rani
Published on

ಹೈದರಾಬಾದ್​: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ.

ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಮಾಲಿವುಡ್​ನಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದು, ಇದೀಗ ಆ ಸಾಲಿಗೆ ಮತ್ತೊಬ್ಬ ನಟಿ ಅಪ್ಸರಾ ರಾಣಿ ಸೇರಿಕೊಂಡಿದ್ದಾರೆ.

ವಿವಾದಗಳಿಂದಲೇ ಸುದ್ದಿಯಾಗುವ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರು ಅಪ್ಸರಾ ರಾಣಿಯನ್ನು ಸಿನಿ ಜಗತ್ತಿಗೆ ಪರಿಚಯಿಸಿದ್ದಾರೆ. ವರ್ಮಾ ಅವರ ಡೇಂಜರಸ್​ ಚಿತ್ರದಲ್ಲಿ ಅಪ್ಸರಾ ಸಲಿಂಗಕಾಮಿ ಪಾತ್ರದಲ್ಲಿ ನಟಿಸಿದ್ದು, ಈಗಾಗಲೇ ಭಾರೀ ಸುದ್ದಿಯಲ್ಲಿದ್ದಾರೆ. ಅಲ್ಲದೆ, ತೆಲುಗಿನ ಕ್ರ್ಯಾಕ್​ ಸಿನಿಮಾದ ಐಟಂ ಸಾಂಗ್​ನಲ್ಲಿ ಸೊಂಟ ಬಳುಕಿಸುವ ಮೂಲಕ ತೆಲುಗು ಮಂದಿಗೆ ಪರಿಚಿತರಾಗಿದ್ದಾರೆ.

ತಮ್ಮ ವೃತ್ತಿ ಜೀವನದ ಕಹಿ ಅನುಭವದ ಬಗ್ಗೆ ಅಪ್ಸರಾ ಮಾತನಾಡಿದ್ದು, ಕನ್ನಡ ಇಂಡಸ್ಟ್ರಿಯ ಬಗ್ಗೆ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ಕನ್ನಡದ ಸಿನಿಮಾ ಒಂದಕ್ಕೆ ನಾಯಕಿಯಾಗಿ ಅಪ್ಸರಾ ಆಯ್ಕೆಯಾಗಿದ್ದರಂತೆ. ನಿರ್ದೇಶಕರನ್ನು ಭೇಟಿಯಾಗಲು ತಮ್ಮ ತಂದೆಯೊಂದಿಗೆ ಅಪ್ಸರಾ ಹೋಗಿದ್ದಾಗ, ನಿಮಗೆ ಅವಕಾಶ ಬೇಕು ಅಂದ್ರೆ ನಮ್ಮ ಬಯಕೆಯನ್ನು ಈಡೇರಿಸಬೇಕು. ನಿಮ್ಮ ತಂದೆಯ ಜತೆ ಬರದೇ ಒಬ್ಬರೇ ಬನ್ನಿ ಎಂದು ಹೇಳಿದ್ದರಂತೆ.

ನಿರ್ದೇಶಕರು ಹೇಳಿದ್ದನ್ನು ಅರ್ಥ ಮಾಡಿಕೊಂಡ ಅಪ್ಸರಾ ಅಲ್ಲಿಂದ ವಾಪಸ್​ ತಮ್ಮ ಮನೆಗೆ ಹಿಂದಿರುಗಿದರಂತೆ. ಆದರೆ, ಆ ನಿರ್ದೇಶಕ ಯಾರೆಂಬುದನ್ನು ಆಕೆ ಬಹಿರಂಗಪಡಿಸಿಲ್ಲ. ಇಷ್ಟೇ ಆಗಿದ್ದರೆ ಏನಾಗುತ್ತಿರಲಿಲ್ಲ. ಆದರೆ, ಯಾರೋ ಒಬ್ಬ ಮಾಡಿದ ತಪ್ಪಿಗೆ ಇಡೀ ಕನ್ನಡ ಇಂಡಸ್ಟ್ರಿಯ ವಿರುದ್ಧ ಅಪ್ಸರಾ ಗಂಭೀರ ಆರೋಪ ಮಾಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಎಂದಿಗೂ ಇಂತಹ ಕಹಿ ಅನುಭವವನ್ನು ನಾನು ಹೊಂದಿಲ್ಲ. ಇಲ್ಲಿ ಪ್ರತಿಭೆ ಇದ್ದವರಿಗೆ ಮಾತ್ರ ಅವಕಾಶ ಸಿಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಕನ್ನಡ ಚಿತ್ರರಂಗವನ್ನು ದೂರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net