More

    ವಿಸ್ಮಯಾ ಸಾವು ಪ್ರಕರಣ: ತಿಂಗಳಿಗೆ 50 ಸಾವಿರ ಸಂಬಳ ಪಡೆಯುತ್ತಿದ್ದವನಿಗೆ ಈಗ 63 ರೂ. ದಿನಗೂಲಿ!

    ತಿರುವನಂತಪುರಂ: ಇಡೀ ಕೇರಳ ರಾಜ್ಯವೇ ಕಂಬನಿ ಮಿಡಿದಿದ್ದ ಯುವ ವೈದ್ಯೆ ವಿಸ್ಮಯಾ ಸಾವಿನ ಪ್ರಕರಣದಲ್ಲಿ ಕಳೆದ ಮೇ 23ರಂದು ಮಹತ್ವದ ತೀರ್ಪು ಹೊರಡಿಸಿರುವ ಕೊಲ್ಲಂನ ಹೆಚ್ಚುವರಿ ಸೆಷನ್ಸ್​ ಕೋರ್ಟ್​, ಆರೋಪಿ ಪತಿ ಕಿರಣ್​ ಕುಮಾರ್​ಗೆ 10 ವರ್ಷ ಜೈಲು ಶಿಕ್ಷೆ ಹಾಗೂ 12.5 ಲಕ್ಷ ದಂಡವನ್ನು ವಿಧಿಸಿದೆ. ಇದೀಗ ಸೆರೆಮನೆವಾಸ ಅನುಭವಿಸುತ್ತಿರುವ ಕಿರಣ್​ಗೆ ಜೈಲಿನಲ್ಲಿ ದಿನವೊಂದಕ್ಕೆ 63 ರೂಪಾಯಿ ದಿನಗೂಲಿ ನೀಡಲಾಗುತ್ತಿದೆ.

    ಸದ್ಯ 63 ರೂಪಾಯಿ ಪಡೆಯುತ್ತಿರುವ ಕಿರಣ್​ಗೆ ಒಂದು ವರ್ಷಗಳ ಬಳಿಕ 127 ರೂಪಾಯಿ ದಿನಗೂಲಿ ನೀಡಲಾಗುತ್ತದೆ. ಅಂದಹಾಗೆ ಕಿರಣ್​ ಯಾವ ಜೈಲಿನಲ್ಲಿದ್ದಾರೆ? ಮತ್ತು ಯಾವ ಕೆಲಸ ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಕಿರಣ್​ ಪೂಜಾಪ್ಪುರಾ ಕೇಂದ್ರೀಯ ಕಾರಾಗೃಹದಲ್ಲಿ ಗಾರ್ಡನರ್​(ಮಾಲಿ ಅಥವಾ ತೋಟಗಾರ) ಆಗಿ ಕೆಲಸ ಮಾಡುತ್ತಿದ್ದಾನೆ.

    ಪ್ರತಿದಿನ ಬೆಳಗ್ಗೆ 7 ಗಂಟೆಗೆ ಸೆಂಟ್ರಲ್​ ಜೈಲಿನ ತೋಟದಲ್ಲಿ ಕೆಲಸ ಮಾಡುತ್ತಾರೆ. ಜೈಲು ಪಾಲಾಗುವ ಮುನ್ನ ಕಿರಣ್​ ಕೇರಳ ಮೋಟಾರು ವಾಹನ ಇಲಾಖೆಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ತಿಂಗಳಿಗೆ 50 ಸಾವಿರಕ್ಕೂ ಅಧಿಕ ಸಂಬಳ ಪಡೆಯುತ್ತಿದ್ದ ಕಿರಣ್​, ಇಂದು ಜೈಲಿನಲ್ಲಿ 63 ರೂಪಾಯಿ ದಿನಗೂಲಿಯನ್ನು ಪಡೆಯುತ್ತಿದ್ದಾರೆ.

    ಕಿರಣ್ ಕೇಂದ್ರ ಕಾರಾಗೃಹದ ಐದನೇ ಬ್ಲಾಕ್​ನ ಕೈದಿಯಾಗಿದ್ದಾನೆ. ಉಪಾಹಾರ ಮತ್ತು ಊಟಕ್ಕೆ ಮಧ್ಯಂತರ ಬಿಡುವುಗಳನ್ನು ಪಡೆಯುತ್ತಾರೆ. ಸಂಜೆ ಟೀ ಕೂಡ ಸಿಗುತ್ತದೆ. ಕಿರಣ್ ಸೇರಿದಂತೆ ಕೈದಿಗಳು ಕಾಂಪೌಂಡ್ ಒಳಗೆ ಕೃಷಿ ಮತ್ತು ಅಲಂಕಾರಿಕ ಗಿಡಗಳನ್ನು ನೋಡಿಕೊಳ್ಳಬೇಕಿದೆ.

    ಒಂದು ಕಾಲದಲ್ಲಿ ಕೈತುಂಬ ಸಂಪಾದನೆಯ ಜತೆಗೆ ಗೌರವವನ್ನು ಹೊಂದಿದ್ದ ಕಿರಣ್​, ಇಂದು ಗೌರವ ಕಳೆದುಕೊಂಡಿದ್ದಲ್ಲದೆ, ಕಡಿಮೆ ಹಣಕ್ಕಾಗಿ ದುಡಿಯುತ್ತಾ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ. ಹಣದಾಹಕ್ಕಾಗಿ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದ ಕಿರಣ್​, ಇಂದು ಕಡಿಮೆ ಹಣಕ್ಕಾಗಿ ಮೈ ಬಗ್ಗಿಸಿ ದುಡಿಯುವಂತಾಗಿದೆ.

    ಕಿರಣ್​ಗೆ ಮೂರು ಸೆಕ್ಷನ್‌ (ಐಪಿಸಿ 304-ಹತ್ತು ವರ್ಷ, 306-ಆರು ವರ್ಷ, 498-ಎರಡು ವರ್ಷ) ಅಡಿಯಲ್ಲಿ 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಎಲ್ಲ ಪ್ರಕರಣಗಳಲ್ಲಿ ಕಿರಣ್​ ಒಟ್ಟಿಗೆ ಶಿಕ್ಷೆಯನ್ನು ಅನುಭವಿಸಬೇಕಾಗಿದೆ. ಇದಲ್ಲದೆ 12.5 ಲಕ್ಷ ದಂಡ ಪಾವತಿಸಬೇಕಿದೆ.

    ಪ್ರಕರಣ ಹಿನ್ನೆಲೆ ಏನು?
    ವಿಸ್ಮಯಾ ಆತ್ಮಹತ್ಯೆ ಪ್ರಕರಣ ಇಡೀ ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಗಂಡ ಕಿರಣ್​ ಕುಮಾರ್​ ಹಣ ದಾಹಕ್ಕೆ ಯುವ ವೈದ್ಯೆ ಸಾವಿನ ಹಾದಿ ಹಿಡಿದಳು. ಅದಕ್ಕೂ ಮುಂಚೆ ಗಂಡನ ಅಸಲಿ ಮುಖವಾಡವನ್ನು ಮೃತ ವೈದ್ಯೆ ಬಿಚ್ಚಿಟ್ಟಿದ್ದಳು. ಅಷ್ಟಕ್ಕೂ ಆಕೆಯ ಗಂಡ ಅನಾಗರಿಕನೇನಲ್ಲ. ಆದರೆ, ಆತ ಮಾಡಿದ ಕೆಲಸ ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು, ವೃತ್ತಿಯಲ್ಲಿ ಕೇರಳದ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ. ಒಳ್ಳೆಯ ಉದ್ಯೋಗ, ಕೈತುಂಬ ಸಂಬಳ ಪಡೆಯುತ್ತಿದ್ದರೂ ಆತನ ಅತಿಯಾದ ದುರಾಸೆ ಯುವ ವೈದ್ಯೆಯ ಪ್ರಾಣವನ್ನೇ ಕಸಿದುಕೊಂಡಿತು. ಅದಕ್ಕೆ ಶಿಕ್ಷೆಯಾಗಿ ಕೇರಳ ಸರ್ಕಾರ ಆರೋಪಿಯ ಸರ್ಕಾರಿ ಕೆಲಸವನ್ನೇ ಕಸಿದುಕೊಂಡು ಕಂಬಿ ಹಿಂದೆ ತಳ್ಳಿತ್ತು.

    2020ರ ಮೇ ತಿಂಗಳಲ್ಲಿ ವಿಸ್ಮಯಾ ಮತ್ತು ಕಿರಣ್​ ಇಬ್ಬರು ಮದುವೆ ಆಗಿದ್ದರು. ವಿಸ್ಮಯಳ ಮದುವೆಯನ್ನ ಕುಟುಂಬಸ್ಥರು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ದಂಪತಿ ಇಬ್ಬರೂ ಕೇರಳದ ಕೊಲ್ಲಂನಲ್ಲಿ ವಾಸವಿದ್ದರು. ಆದರೆ, ಗಂಡನ ಹಣದಾಹ ಮತ್ತು ಕಿರುಕುಳ ಸಹಿಸದೇ 2021 ಜೂನ್​ 21ರ ಸೋಮವಾರ ಬೆಳಗ್ಗೆ ಗಂಡನ ಮನೆಯಲ್ಲಿಯೇ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ದೇಹದ ಮೇಲೆ ಗಾಯದ ಗುರುತುಗಳಾಗಿತ್ತು. ಗಂಡನ ಹಣದಾಹಕ್ಕೆ ವಿಸ್ಮಯ ಬಲಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಸಾವಿಗೂ ಮುನ್ನ ಅಂದರೆ ಭಾನುವಾರ ರಾತ್ರಿ ವಾಟ್ಸ್ಆ್ಯಪ್​ ಮತ್ತು ಫೇಸ್​ಬುಕ್​ನಲ್ಲಿಯೂ ಸೋದರ ಸಂಬಂಧಿ ಜತೆ ಚಾಟ್​ ಮಾಡಿದ್ದ ವಿಸ್ಮಯ, ಬಹುಶಃ ಇದೇ ನನ್ನ ಕೊನೇ ಮೆಸೇಜ್​ ಆಗಬಹುದು. ಗಂಡನ ಕಿರುಕುಳ ಸಹಿಸಲಾಗ್ತಿಲ್ಲ ಎಂದು ಹೇಳಿದ್ದರು. ಗಂಡ ಹಿಂಸೆ ನೀಡಿರುವ ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು. (ಏಜೆನ್ಸೀಸ್​)

    ಬಾಲಿವುಡ್​ ಬ್ಯೂಟಿಯ ಜತೆ ನಾಗಚೈತನ್ಯ ಡೇಟಿಂಗ್​! ನಟಿಯ ಹೆಸರು ಬಹಿರಂಗ, ಶುರುವಾಯ್ತು ಬಿಸಿ ಬಿಸಿ ಚರ್ಚೆ

    ಯೋಗಕ್ಕೆ ಧರ್ಮದ ಪಟ್ಟಿ ಕಟ್ಟಿರುವುದು ಬೇಸರ: ನಟಿ ಅದಿತಿ ಪ್ರಭುದೇವ ವಿಷಾದ

    ರಾಜ ವಂಶಸ್ಥರ ಜತೆ ಉಪಾಹಾರ ಸೇವಿಸಿದ ಪ್ರಧಾನಿ ಮೋದಿ: ಸ್ಪೆಷಲ್​ ಮೈಸೂರು​ ಪಾಕ್ ಸೇರಿ 10 ಬಗೆಯ ಖಾದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts