More

    ಸಕಾರಾತ್ಮಕ ಆಲೋಚನೆಗಳೇ ವ್ಯಕ್ತಿತ್ವ ನಿರ್ಮಾಣದ ಬುನಾದಿ

    ಬಸವಕಲ್ಯಾಣ: ಸಕಾರಾತ್ಮಕ ಆಲೋಚನೆಗಳೇ ವ್ಯಕ್ತಿತ್ವ ನಿರ್ಮಾಣದ ಬುನಾದಿ. ಹೀಗಾಗಿ ಗುಣಾತ್ಮಕ ಚಿಂತನೆಯೊಂದಿಗೆ ಸಾಗುವುದರ ಜತೆಗೆ ಶರಣರ ವಚನಗಳನ್ನು ಓದಿದರೆ ನಮ್ಮಲ್ಲಿರುವ ನಕಾರಾತ್ಮಕ ಭಾವನೆ ದೂರಾಗಿ ಸಕಾರಾತ್ಮಕ ಮನೋಭಾವದ ಶಕ್ತಿ ವೃದ್ಧಿಸುತ್ತದೆ ಎಂದು ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ನುಡಿದರು.

    ನಗರದ ಹರಳಯ್ಯ ಗವಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ಭಾನುವಾರ ಸಂಜೆ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ನಾವು ತೆಗೆದುಕೊಳ್ಳುವ ಆಹಾರದಂತೆ ವಿಚಾರಗಳು ಬರುತ್ತವೆ. ಆದ್ದರಿಂದ ಸಾತ್ವಿಕ ಆಹಾರವೇ ಸೇವಿಸಬೇಕು. ಸಜ್ಜನರ ಸಂಗ ಮಾಡಬೇಕು. ವಚನ ಸಾಹಿತ್ಯ ವ್ಯಕ್ತಿ ಕೇಂದ್ರಿತ ಅಧ್ಯಾತ್ಮ ಸಾಹಿತ್ಯವನ್ನು ಒಳಗೊಂಡ ಸಮಾಜ ಮತ್ತು ಅನುಭಾವದ ಸಾಹಿತ್ಯವಾಗಿದೆ. ಸೋಲಿನ ಭಯದಿಂದ ಉದ್ಭವಿಸುವ ಮನದ ಋಣಾತ್ಮಕತೆಯಿಂದ ಬಳಲುವವರಿಗೆ ವಚನ ಸಾಹಿತ್ಯದಲ್ಲಿ ಸಮಾಧಾನವಿದೆ ಎಂದರು.

    ಡಾ.ಅಮರನಾಥ ಸೋಲಪುರೆ ಬರೆದ ಶರಣರ ಸಕಾರಾತ್ಮಕ ಮನೋಭಾವದ ಶಕ್ತಿ ಕೃತಿಯನ್ನು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಹಾಗೂ ಬಸವ ಪೀಠದ ಸಂಯೋಜಕ ಡಾ.ಗಣಪತಿ ಬಿ.ಸಿನ್ನೂರ ಬಿಡುಗಡೆಗೊಳಿಸಿ ಮಾತನಾಡಿ, ಮನೋವಿಜ್ಞಾನದ ಕಲ್ಪನೆ ನೀಡಿದವರು ಶರಣರು. ವ್ಯಕ್ತಿಯ ವರ್ತನೆಗಳಲ್ಲಿ ಪರಿವರ್ತನೆ ತರುವಲ್ಲಿ ವಚನಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

    ಉದ್ಘಾಟನೆ ನೆರವೇರಿಸಿದ ಕಲಬುರಗಿ ಬಸವ ಸೇವಾ ಪ್ರತಿಷ್ಠಾನದ ಜಗನ್ನಾಥ ರಾಚೋಟಿ ಮಾತನಾಡಿ, ವ್ಯಕ್ತಿತ್ವ ಎಂಬುದು ಅನೇಕ ಶಕ್ತಿಗಳ ಸಂಗಮ. ಶರಣರ ವಚನಗಳು ವ್ಯಕ್ತಿತ್ವ ವಿಕಸನದ ಸೂತ್ರಗಳಾಗಿವೆ. ಇವು ದಿನನಿತ್ಯದ ಬದುಕಿನಲ್ಲಿ ಪಾರಮಾರ್ಥಿಕ ಶಕ್ತಿಯನ್ನು ತುಂಬುತ್ತವೆ ಎಂದರು.

    ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ನಿರ್ದೇಶಕ ರೇವಣಪ್ಪ ರಾಯವಾಡೆ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನ ವಿಶ್ವಸ್ಥ ಸಮಿತಿ ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಜೇಡರ ದಾಸಿಮಯ್ಯ ಸಮಾಜದ ಕಾರ್ಯದರ್ಶಿ ವಿಜಯಕುಮಾರ ಪೂಜಾರಿ ಇತರರಿದ್ದರು. ಹರಳಯ್ಯ ಸಮಾಜದ ಮನೋಜ ಕಾಂಬಳೆ ಧ್ವಜಾರೋಹಣ ನೆರವೇರಿಸಿದರು. ಪ್ರಾಧ್ಯಾಪಕಿ ಮೀನಾಕ್ಷಿ ಬಿರಾದಾರ ಸ್ವಾಗತಿಸಿದರು. ಸಂಗಮೇಶ ತೋಗರಖೇಡೆ ನಿರೂಪಣೆ ಮಾಡಿದರು. ಮಹಾ ಶಕ್ತಿಕೂಟ ಜೇಡರ ದಾಸಿಮಯ್ಯ ಶರಣೆಯರು ಗುರು ಪೂಜೆ, ಅರಿವಿನ ಮನೆ ಅಕ್ಕನ ಬಳಗದವರು ವಚನ ಪ್ರಾರ್ಥನೆ ನಡೆಸಿಕೊಟ್ಟರು.

    ಮನುಷ್ಯರಿಗೆ ತಮ್ಮ ಮತ್ತು ಹೊರಗಿನ ಆಗು-ಹೋಗುಗಳ ಪ್ರಜ್ಞೆಗೆ ಮನಸ್ಸೇ ಮೂಲ ಕಾರಣ ಎಂಬುದು ಶರಣರ ಅಭಿಮತ. ಆಚರಣೆ ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗುತ್ತದೆ. ಪರಿಶುದ್ಧ ಮನಸ್ಸು ಸ್ಥಿರವಾಗಿರುತ್ತದೆ. ವರ್ತನೆಗಳ ಬೀಗ ಮನದಲ್ಲಿರುತ್ತದೆ. ಸಕಾರಾತ್ಮಕ ವರ್ತನೆಗೆ ಸಕಾರಾತ್ಮಕ ಮನಸ್ಸು ಬೇಕು. ಸಕಾರಾತ್ಮಕ ಮನಸ್ಸು ಇದ್ದವರು ಸಕಾರಾತ್ಮಕ ಮನೋಭಾವದವರೇ ಆಗಿರುತ್ತಾರೆ.
    | ಡಾ.ಗಣಪತಿ ಬಿ.ಸಿನ್ನೂರ ಸಹ ಪ್ರಾಧ್ಯಾಪಕ, ಸಿಯುಕೆ ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts