More

    ಪಿಡಬ್ಲ್ಯುಡಿ ಇಲಾಖೆಯಿಂದ ದಂಡ ಪ್ರಯೋಗ! ಚರಂಡಿ ಮುಚ್ಚಿ ಕೃತಕ ನೆರೆ ಸೃಷ್ಟಿಸಿದರೆ ಕ್ರಮ



    |ಶ್ರವಣ್ ಕುಮಾರ್ ನಾಳ ಪುತ್ತೂರು
    ಮಳೆಗಾಲ ಬಂತೆಂದರೆ ಪುತ್ತೂರು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಚರಂಡಿಯಿಂದ ಧುಮುಕುವ ನೀರು ರಸ್ತೆಯಲ್ಲೇ ಹರಿಯುತ್ತದೆ. ಇದನ್ನು ತಡೆಯಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದು, ರಸ್ತೆಗೆ ನೀರು ಹರಿಯಲು ಕಾರಣರಾದವರ ವಿರುದ್ಧ ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ.

    ರಸ್ತೆಗಳಲ್ಲಿ ಚರಂಡಿ ನಿರ್ವಹಣೆ ಕಾರ್ಯ ಪ್ರಾರಂಭಿಸಿದ್ದು, ಹಲವೆಡೆ ಖಾಸಗಿಯವರು ಮನೆಗಳಿಗೆ ಸಂಪರ್ಕ ರಸ್ತೆ ನಿರ್ಮಿಸಿ ಚರಂಡಿ ಮುಚ್ಚಿರುವುದರಿಂದ ಕೃತಕ ನೆರೆ ಸಮಸ್ಯೆ ಉಂಟಾಗುತ್ತಿದೆ. ಲೋಕೋಪಯೋಗಿ ಇಲಾಖೆ ನಿರ್ವಹಣೆ ಮಾಡುತ್ತಿರುವ ಚರಂಡಿಗಳಲ್ಲಿ ನೀರಿನ ಹರಿಯುವಿಕೆಗೆ ತಡೆಯಾಗಿ ಜನರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಚರಂಡಿ ಮುಚ್ಚಿದವರೇ ಸ್ವಇಚ್ಛೆಯಿಂದ ಸರಿಪಡಿಸಲು ತಿಳಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತವಾಗದಿರುವುದರಿಂದ ಲೋಕೋಪಯೋಗಿ ಇಲಾಖಾ ಅಧಿಕಾರಿಗಳೇ ಕಾರ್ಯಾಚರಣೆಗಿಳಿದು ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ.

    ರಾಜ್ಯ ಹೆದ್ದಾರಿ ಅಧಿನಿಯಮದಂತೆ ಕ್ರಮ: ಪುತ್ತೂರು ಹಾಗೂ ಕಡಬ ತಾಲೂಕು ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ರಸ್ತೆಯಲ್ಲೇ ನೀರು ಹರಿಯುತ್ತಿದೆ. ಕೆಲವೆಡೆ ಸಂಪರ್ಕ ರಸ್ತೆ ನಿರ್ಮಾಣ ಸಂದರ್ಭ ಆರ್‌ಸಿಸಿ ಕೊಳವೆ ಅಳವಡಿಸಿದ್ದರೂ ಅದು ಸಮರ್ಪಕ ವ್ಯಾಸ ಹೊಂದದೆ ನೀರಿನ ಹರಿವಿಗೆ ಅಡ್ಡಿಯಾಗಿ ಕೃತಕ ನೆರೆಯುಂಟಾಗುತ್ತಿದೆ. ನೀರು ನೇರವಾಗಿ ರಸ್ತೆಗೆ ಹರಿದು ಲೋಕೋಪಯೋಗಿ ಇಲಾಖೆ ನಿರ್ವಹಣೆ ಮಾಡುವ ರಸ್ತೆಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ತಪ್ಪಿತಸ್ಥ ವ್ಯಕ್ತಿ/ಸಂಸ್ಥೆಯ ಮುಖ್ಯಸ್ಥರ ಮೇಲೆ ರಾಜ್ಯ ಹೆದ್ದಾರಿ ಅಧಿನಿಯಮ 1964ರಂತೆ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ನಿರ್ದೇಶಿಸಿದೆ.

    ಗ್ಯಾಂಗ್‌ಮನ್‌ಗಳಿಂದ ನಿರ್ವಹಣೆ ಕಷ್ಟ: ಉಪ್ಪಿನಂಗಡಿ -ಪುತ್ತೂರು ನಡುವಿನ 13 ಕಿ.ಮೀ ಉದ್ದದ ರಸ್ತೆಯ ಎರಡೂ ಬದಿ ಚರಂಡಿ ಸಮರ್ಪಕವಾಗಿಲ್ಲದೆ ರಸ್ತೆಯಲ್ಲೇ ಮಳೆ ನೀರು ಹರಿಯುತ್ತದೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಗ್ಯಾಂಗ್‌ಮನ್‌ಗಳು ಇಲ್ಲ. ಹೊರಗುತ್ತಿಗೆ ಆಧಾರದಲ್ಲಾದರೂ ಗ್ಯಾಂಗ್‌ಮನ್‌ಗಳ ನೇಮಕಾತಿಗೆ ಇಲಾಖೆ ಮುಂದಾಗಿಲ್ಲ. ಪುತ್ತೂರು ಉಪವಿಭಾಗದ ಪಿಡಬ್ಲ್ಯುಡಿ ಇಲಾಖೆಯಲ್ಲಿ ಕೇವಲ ಇಬ್ಬರು ಗ್ಯಾಂಗ್‌ಮನ್‌ಗಳು ಮಾತ್ರ ಕರ್ತವ್ಯದಲ್ಲಿರುವುದರಿಂದ ಮಳೆಗಾಲದಲ್ಲಿ ಚರಂಡಿ ನಿರ್ವಹಣೆ ಕಷ್ಟ.

    ಉಪ್ಪಿನಂಗಡಿ ರಸ್ತೆಯ ಕೆಲವು ಭಾಗದಲ್ಲಿ ಚರಂಡಿ ಸಮರ್ಪಕಗೊಳಿಸುವ ಕೆಲಸ ಮಾಡಲಾಗಿದೆ. ಕೆಲವು ಭಾಗಗಳಲ್ಲಿ ಖಾಸಗಿಯವರು ರಸ್ತೆ ನಿರ್ಮಿಸಿರುವುದರಿಂದ ಚರಂಡಿ ಮುಚ್ಚಿ ಕೃತಕ ನೆರೆ ಸೃಷ್ಟಿಯಾಗಿದೆ. ತಕ್ಷಣ ಖಾಸಗಿಯವರು ಚರಂಡಿ ದುರಸ್ತಿ ಮಾಡುವ ಕೆಲಸ ಮಾಡಬೇಕು, ತಪ್ಪಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    |ಪ್ರಮೋದ್ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಪುತ್ತೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts