More

    ಪತಂಜಲಿ ಯೋಗದರ್ಶನದಿಂದ ಕಾಯ-ವಾಚ-ಮನ ಶುದ್ಧಿ

    Yogakshemaನಮ್ಮ ಪೂರ್ವಜರಾದ ಋಷಿಮುನಿಗಳ ಅಂತರಂಗದ ವಾಣಿ ಎಲ್ಲರೂ ಸುಖವಾಗಿರಲಿ, ನಿರೋಗಿಗಳಾಗಿರಲಿ, ಮಂಗಳವನ್ನು ಪಡೆಯಲಿ, ಯಾರಿಗೂ ದುಃಖ ಬಾರದಿರಲಿ. ‘ಸುಖಪ್ರಾಪ್ತಿ, ದುಃಖ ನಿವೃತ್ತಿಃ ಜೀವನಃ’ ಎಂಬುದು ಬದುಕಿನ ವ್ಯಾಖ್ಯೆ. ಜೀವನವು ಸುಖದುಃಖಗಳ ಸಮರಸ. ಆದರೂ ಇರುವ ಅವಕಾಶವನ್ನು ವಿವೇಕದಿಂದ ಬಳಸಿಕೊಂಡು ದುಃಖವು ಕಡಿಮೆಯಾಗಿ ಸುಖವೇ ಹೆಚ್ಚಾಗಿ ಸಿಗುವಂತೆ ಪ್ರಜ್ಞಾಪೂರ್ವಕವಾಗಿ ಬದುಕನ್ನು ರೂಢಿಸಲು ಪ್ರಾಜ್ಞರು ಆಯ್ದುಕೊಂಡ ದಾರಿ ಯೋಗ ದರ್ಶನ.

    ಭಾರತೀಯ ತತ್ತ್ವಶಾಸ್ತ್ರಗಳಿಗೆ ‘ದರ್ಶನ’ ಎಂಬ ಹೆಸರು ರೂಢಿಯಲ್ಲಿದೆ. ಪಾಶ್ಚಾತ್ಯ ತತ್ತ್ವಶಾಸ್ತ್ರಗಳಂತೆ ಕೇವಲ ಬುದ್ಧಿಯ ಅಥವಾ ತರ್ಕದ ಬಲವನ್ನು ಅವಲಂಬಿಸದೆ ತಪಸ್ಸಿನ ಮೂಲಕ ಮನಸ್ಸನ್ನು ಶುದ್ಧಮಾಡಿಕೊಂಡು ಈ ಶುದ್ಧಮನಸ್ಸಿನ ಮೂಲಕ ಜಗತ್ತಿನ ಹಿಂದಿರುವ ತತ್ತ್ವವನ್ನು ದರ್ಶಿಸಿ ನೋಡಿ ಸಾಕ್ಷಾತ್ಕರಿಸಿಕೊಂಡು ಅನಂತರ ಅವನ್ನು ವಿವರಿಸುವುದರಿಂದ ಇವುಗಳಿಗೆ ದರ್ಶನಗಳೆಂದು ಹೆಸರು ಬಂದಿದೆ. ಯೋಗವು ಆಸ್ತಿಕ ದರ್ಶನವಾಗಿದೆ. ಯೋಗದಲ್ಲಿ ಸಾಧನೆಯೇ ಪ್ರದಾನ. ಇದು ಸಾಧನಾ ಪ್ರಧಾನವಾದ ಶಾಸ್ತ್ರವಾದುದರಿಂದಲೇ ‘ಅಥಾತೋ ಯೋಗ ಜಿಜ್ಞಾಸ’ ಅಥವಾ ‘ ಅಥ ಯೋಗ ಮೀಮಾಂಸಾ’ ಎಂಬುದರ ಬದಲು ‘ ಅಥಯೋಗಾನುಶಾಸನಮ್ ಎಂದು ಪ್ರಾರಂಭವಾಗಿದೆ. ಈ ಯೋಗ ದರ್ಶನವನ್ನೇ ರಾಜಯೋಗ, ಅಷ್ಟಾಂಗ ಯೋಗವೆಂದು ಕರೆಯಲಾಗಿದೆ. ಈ ಅಷ್ಟಾಂಗ ಯೋಗದ ಪ್ರವರ್ತಕ, ಪ್ರಸಾರಕ ಪತಂಜಲಿ ಮಹರ್ಷಿಗಳಾಗಿದ್ದಾರೆ.

    ಪತಂಜಲಿ ಮಹರ್ಷಿ ಪ್ರಾಚೀನ ಭಾರತದ ಪ್ರಮುಖ ಚಿಂತನಶೀಲ ವ್ಯಕ್ತಿಗಳಲ್ಲಿ ಒಬ್ಬ. ತನ್ನ ತಾಯಿಯ ಅಂಜಲಿಯಿಂದ ಬಿದ್ದವನೆಂದು ಇವನಿಗೆ ಪತಂಜಲಿ ಎಂಬ ಹೆಸರು. ಪತಂಜಲಿ ತಾಯಿ ಗೋಣಿಕಾ. ಅದ್ದರಿಂದ ಇವನನ್ನು ಗೋಣಿಕಾ ಪುತ್ರನೆಂದೂ ಕರೆಯುತ್ತಾರೆ. ಪತಂಜಲಿ ಯೋಗದರ್ಶನಕ್ಕೆ ರೂಪಕೊಟ್ಟ ತತ್ತ್ವಜ್ಞಾನಿ. ಪತಂಜಲಿ ಮಹರ್ಷಿಯು ಈ ಯೋಗದರ್ಶನದ ಪ್ರಣೀತರಲ್ಲ. ಹಿಂದಿನಿಂದಲೂ ಇದ್ದ ಸಾಧನಾ ವಿಧಾನಗಳನ್ನು ಸಂಗ್ರಹಿಸಿ ಅವುಗಳ ಮೇಲೆ ಸೂತ್ರಗಳನ್ನು ರಚಿಸಿ ಅವುಗಳಿಗೆ ಒಂದು ವ್ಯವಸ್ಥಿತ ರೂಪವನ್ನು ನೀಡಿದವರು. ಈ ಯೋಗ ದರ್ಶನದ ಪ್ರಾಚೀನತೆಯನ್ನು ನಿರ್ದಿಷ್ಟವಾಗಿ ಹೇಳುವುದು ಅಷ್ಟು ಸುಲಭವಾಗಿಲ್ಲ. ಪತಂಜಲಿಯು ವಿಧಿಸಿರುವ ಪ್ರಯೋಗ ತಂತ್ರವನ್ನು ಮೈತ್ರೀ ಉಪನಿಷತ್ತಿನಲ್ಲಿ ನೋಡಬಹುದು. ಇದರ ಮೂಲ ಪ್ರವರ್ತಕನು ಹಿರಣ್ಯಗರ್ಭನೆಂದು ಯೋಗ ಶಾಸ್ತ್ರದಲ್ಲಿ ತಿಳಿದುಬರುತ್ತದೆ. ಇವನ ಸಂಪ್ರದಾಯವನ್ನು ಅನುಸರಿಸಿ ಪತಂಜಲಿಯು ಯೋಗ ದರ್ಶನವನ್ನು ಪ್ರಸಾರ ಮಾಡಿದರು. ಆದುದರಿಂದ ಇದಕ್ಕೆ ಪಾತಂಜಲಿ ದರ್ಶನವೆಂಬ ಹೆಸರು ಬಂದಿದೆ.

    ಹಿಂದೂ ಧರ್ಮದ ಪ್ರಾಚೀನ ಗ್ರಂಥಗಳ ಕಾಲನಿರ್ಣಯ ಬಹು ತೊಡಕಿನದು. ಆ ಕಷ್ಟ ಇಲ್ಲಿಯೂ ಎದುರಾಗುತ್ತದೆ. ಭಾರತೀಯ ಸಂಪ್ರದಾಯದ ಪ್ರಕಾರ ಮಹಾಭಾಷ್ಯದ ಗ್ರಂಥಕರ್ತನಾದ ಪತಂಜಲಿಯೂ 196 ಯೋಗ ಸೂತ್ರಗಳನ್ನು ರಚಿಸಿದ ಪತಂಜಲಿಯು ಬೇರೆ ಬೇರೆ ವ್ಯಕ್ತಿಗಳಲ್ಲ್ಲ ಇವರಿಬ್ಬರ ಅನನ್ಯತೆಯನ್ನು ಭೋಜದೇವನು ತಾನು ಯೋಗ ಸೂತ್ರಗಳ ಮೇಲೆ ಬರೆದ ಭಾಷ್ಯದಲ್ಲಿ ಸೂಚಿಸಿರುತ್ತಾನೆ. ಶಿವರಾಮನೆಂಬುವನು ತಾನು ವಾಸವದತ್ತದ ಮೇಲೆ ಬರೆದ ಟೀಕೆಯಲ್ಲಿ ಒಂದು ಶ್ಲೋಕವನ್ನು ಉದಾಹರಿಸಿರುತ್ತಾನೆ.

    ‘ಯೋಗೇನ ಚಿತ್ತಸ್ಯ ಪದೇನ ವಾಚಾಂ| ಮಲಂ ಶರೀರಸ್ಯ ಚ ವೈದ್ಯಕೇನ | ಯೋ ಪಾಕರೋತ್ತಂ ಪ್ರವರಂ ಮುನೀನಾಂ ಪತಂಜಲಿಂ ಪ್ರಾಂಜಲಿರಾನತೋಸ್ಮಿ ||’ ತ್ರಿಕರಣ ಶುದ್ಧಿ ಹಾಗೂ ಏಕತೆಗೆ ಪತಂಜಲಿ ಮಹರ್ಷಿಯು ಹೆಚ್ಚು ಒತ್ತು ನೀಡಿದರು. ಕಾಯ ಶುದ್ಧಿಗೆ ಆಯುರ್ವೆದ – ವೈದ್ಯಕೀಯ ಶಾಸ್ತ್ರ, ವಾಕ್ ಶುದ್ಧಿಗೆ ವ್ಯಾಕರಣ ಹಾಗೂ ಮನ ಶುದ್ಧಿಗೆ ಯೋಗಶಾಸ್ತ್ರ. ಈ ಮೂರು ಶಾಸ್ತ್ರಗಳ ಪತಂಜಲಿಗಳ ಅಥವಾ ಎರಡು ಪತಂಜಲಿಗಳ ಅನನ್ಯತೆಯನ್ನು ಪಾಶ್ಚಾತ್ಯ ವಿದ್ವಾಂಸರು ಒಪ್ಪದಿದ್ದರೂ ಈ ಅಭಿಪ್ರಾಯವು ಅಬದ್ಧವೆಂದು ಸಾಧಿಸಲು ಅವರು ಶಕ್ತರಾಗಿಲ್ಲ. ಮಹಾಭಾಷ್ಯದ ಪತಂಜಲಿಯ ಕಾಲವು ಕ್ರಿ.ಪೂ. ಎರಡನೆಯ ಶತಮಾನ ಎಂದು ಎಲ್ಲರೂ ಒಪ್ಪಿಕೊಂಡರೂ ಅವನ ಕಾಲದ ಕೆಳಗಿನ ಎಲ್ಲೆ ಕ್ರಿ.ಶ. ಇನ್ನೂರು ಎಂದು ನಿರ್ಣಯಿಸಬೇಕಾಗುವುದು. ಈ ಪತಂಜಲಿಯು ಆದಿಶೇಷನಅವತಾರವೆಂದೂ ಸಹ ನಂಬಿಕೆಯಿದೆ.

    ಗುತ್ತಿಗೆ ಪಟ್ಟಿಯಿಂದ ಕೊಕ್ ಕೊಟ್ಟ ಬೆನ್ನಲ್ಲೇ ಶ್ರೇಯಸ್​-ಇಶಾನ್​ಗೆ ಮತ್ತೊಂದು ಶಾಕ್!

    ಅಭಿಮಾನಿಗಳಿಗೆ ಶಾಕ್​ ಕೊಟ್ಟು ಹಸೆಮಣೆ ಏರಿದ ನಮ್ರತಾ-ಕಾರ್ತಿಕ್; ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts