More

    ಮುಂಬೈಗೆ ಸತತ 5ನೇ ಪಂದ್ಯದಲ್ಲೂ ಸೋಲು, ಪಂಜಾಬ್‌ಗೆ 12 ರನ್ ಗೆಲುವು

    ಪುಣೆ: ಟೂರ್ನಿಯಲ್ಲಿ ಟಾಸ್ ಗೆದ್ದ ತಂಡಗಳೇ ಗೆಲುವು ದಾಖಲಿಸುತ್ತಿರುವ ನಡುವೆಯೂ ಮುಂಬೈ ಇಂಡಿಯನ್ಸ್ ತಂಡ ಟಾಸ್ ಗೆಲುವನ್ನು ವರದಾನವಾಗಿ ಪರಿವರ್ತಿಸಲು ವಿಲವಾಗುವುದರೊಂದಿಗೆ ಐಪಿಎಲ್-15ರಲ್ಲಿ ಸತತ 5ನೇ ಸೋಲು ಅನುಭವಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 12 ರನ್‌ಗಳಿಂದ ಶರಣಾಯಿತು. ಇದರಿಂದ ರೋಹಿತ್ ಶರ್ಮ ಬಳಗದ ಗೆಲುವಿನ ಬರ ಮುಂದುವರಿದಿದೆ.

    ಎಂಸಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಾದಾಟದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್‌ಗೆ ಇಳಿದ ಪಂಜಾಬ್‌ಗೆ ಅನುಭವಿ ಎಡಗೈ ಆರಂಭಿಕ ಶಿಖರ್ ಧವನ್ (70 ರನ್, 50 ಎಸೆತ, 5 ಬೌಂಡರಿ, 3 ಸಿಕ್ಸರ್) ಮತ್ತು ನಾಯಕ ಮಯಾಂಕ್ ಅಗರ್ವಾಲ್ (52 ರನ್, 32 ಎಸೆತ, 6 ಬೌಂಡರಿ, 2 ಸಿಕ್ಸರ್) ಜೋಡಿ ಮೊದಲ ವಿಕೆಟ್‌ಗೆ 57 ಎಸೆತಗಳಲ್ಲಿ 97 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟಿತು. ಈ ಮೂಲಕ ಪಂಜಾಬ್ ಕಿಂಗ್ಸ್ 5 ವಿಕೆಟ್‌ಗೆ 198 ರನ್ ಪೇರಿಸಿತು. ಪ್ರತಿಯಾಗಿ ಮುಂಬೈ 9 ವಿಕೆಟ್‌ಗೆ 186 ರನ್ ಗಳಿಸಿ ಸೋಲೊಪ್ಪಿಕೊಂಡಿತು.

    ಬ್ರೆವಿಸ್, ಸೂರ್ಯ ಪ್ರತಿರೋಧ
    ನಾಯಕ ರೋಹಿತ್ ಶರ್ಮ (28) ಮುಂಬೈಗೆ ಭರ್ಜರಿ ಆರಂಭ ಒದಗಿಸಲು ಯತ್ನಿಸಿದರೂ, ರಬಾಡ ಎಸೆದ ಇನಿಂಗ್ಸ್‌ನ 4ನೇ ಓವರ್‌ನಲ್ಲಿ ಔಟಾದರು. ಬೆನ್ನಲ್ಲೇ ಮತ್ತೋರ್ವ ಆರಂಭಿಕ ಇಶಾನ್ ಕಿಶನ್ (3) ಕೂಡ ನಿರ್ಗಮಿಸಿದರು. ಆಗ ಜತೆಗೂಡಿದ ಯುವ ಆಟಗಾರರಾದ ಡಿವಾಲ್ಡ್ ಬ್ರೆವಿಸ್ (49 ರನ್, 25 ಎಸೆತ, 4 ಬೌಂಡರಿ, 5 ಸಿಕ್ಸರ್) ಮತ್ತು ತಿಲಕ್ ವರ್ಮ (36) 3ನೇ ವಿಕೆಟ್‌ಗೆ 41 ಎಸೆತಗಳಲ್ಲಿ 84 ರನ್ ಸೇರಿಸಿ ಮುಂಬೈಗೆ ಚೇತರಿಕೆ ನೀಡಿದರು. ಅದರಲ್ಲೂ 18 ವರ್ಷದ ಬ್ರೆವಿಸ್, ರಾಹುಲ್ ಚಹರ್ ಎಸೆದ ಇನಿಂಗ್ಸ್‌ನ 9ನೇ ಓವರ್‌ನಲ್ಲಿ ಸತತ 4 ಸಿಕ್ಸರ್ ಸಹಿತ 5 ಎಸೆತಗಳಲ್ಲಿ 28 ರನ್ ಕಸಿದರು. ಬಳಿಕ ಸೂರ್ಯಕುಮಾರ್ ಯಾದವ್ (43) ಕೂಡ ಹೋರಾಟ ನಡೆಸಿದರೂ ಮುಂಬೈಯನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.

    ಪಂಜಾಬ್ ಬಿರುಸಿನ ಆರಂಭ
    ಕಳೆದ 3 ಪಂದ್ಯಗಳಲ್ಲಿ ಒಂದಂಕಿ ದಾಟಲು ವಿಲರಾಗಿದ್ದ ಮಯಾಂಕ್ ಅಗರ್ವಾಲ್ ಈ ಬಾರಿ ಬಿರುಸಿನ ಆರಂಭ ಕಂಡರು. ಇನಿಂಗ್ಸ್‌ನ ಮೊದಲ 3 ಎಸೆತಗಳಲ್ಲೇ 2 ಬೌಂಡರಿ ಬಾರಿಸಿದರು. ಜೈದೇವ್ ಉನಾದ್ಕತ್ ಎಸೆದ ಇನಿಂಗ್ಸ್‌ನ 2ನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಶಿಖರ್ ಧವನ್ ಕೂಡ ಬಿರುಸಿನ ಆಟಕ್ಕಿಳಿದರು. ಪವರ್‌ಪ್ಲೇನಲ್ಲಿ 65 ರನ್ ಪೇರಿಸುವ ಮೂಲಕ ಮಯಾಂಕ್-ಧವನ್ ಜೋಡಿ ಪಂಜಾಬ್‌ಗೆ ಭದ್ರ ಬುನಾದಿ ಹಾಕಿಕೊಟ್ಟಿತು. ನಂತರವೂ ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಈ ಜೋಡಿಯನ್ನು ಕೊನೆಗೂ 10ನೇ ಓವರ್‌ನಲ್ಲಿ ಬೇರ್ಪಡಿಸುವಲ್ಲಿ ಮುಂಬೈ ಯಶಸ್ವಿಯಾಯಿತು. 30 ಎಸೆತಗಳಲ್ಲಿ ಹಾಲಿ ಆವೃತ್ತಿಯ ಮೊದಲ ಅರ್ಧಶತಕ ಬಾರಿಸಿದ ಮಯಾಂಕ್, ಸ್ಪಿನ್ನರ್ ಎಂ. ಅಶ್ವಿನ್ ಎಸೆತದಲ್ಲಿ ಲಾಂಗ್ ಆ್ನಲ್ಲಿ ಸೂರ್ಯಕುಮಾರ್‌ಗೆ ಕ್ಯಾಚ್ ನೀಡಿದರು. ನಂತರ ಧವನ್ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ನಡುವೆ ವಿದೇಶಿ ಬ್ಯಾಟರ್‌ಗಳಾದ ಜಾನಿ ಬೇರ್‌ಸ್ಟೋ (12) ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್‌ಗೆ (2) ಕ್ರಮವಾಗಿ ಜೈದೇವ್ ಉನಾದ್ಕತ್ ಮತ್ತು ಜಸ್‌ಪ್ರೀತ್ ಬುಮ್ರಾ ಬೇಗನೆ ಡಗೌಟ್ ದಾರಿ ತೋರಿದರು. ಇದರಿಂದ ಮಧ್ಯಮ ಓವರ್‌ಗಳಲ್ಲಿ ಪಂಜಾಬ್ ರನ್‌ಗತಿ ತುಸು ಕುಸಿತ ಕಂಡಿತು. ಧವನ್ ಇನಿಂಗ್ಸ್‌ನ 17ನೇ ಓವರ್‌ನಲ್ಲಿ ಬಸಿಲ್ ಥಂಪಿಗೆ ವಿಕೆಟ್ ಒಪ್ಪಿಸಿದರು.

    ಮೊತ್ತ ಏರಿಸಿದ ಜಿತೇಶ್
    ಇಂಗ್ಲೆಂಡ್ ಆಟಗಾರರಾದ ಬೇರ್‌ಸ್ಟೋ, ಲಿವಿಂಗ್‌ಸ್ಟೋನ್ ಬಿರುಸಿನ ಆಟವಾಡುವ ನಿರೀಕ್ಷೆ ಹುಸಿಗೊಂಡ ಬಳಿಕ ದೇಶೀಯ ಆಟಗಾರ ಜಿತೇಶ್ ಶರ್ಮ (30*ರನ್, 15 ಎಸೆತ, 2 ಬೌಂಡರಿ, 2 ಸಿಕ್ಸರ್) ಪಂಜಾಬ್ ಮೊತ್ತ ಏರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಸ್ಲಾಗ್ ಓವರ್‌ಗಳಲ್ಲಿ ಅವರಿಗೆ ಮತ್ತೋರ್ವ ದೇಶೀಯ ಬ್ಯಾಟರ್ ಶಾರುಖ್ ಖಾನ್ (15 ರನ್, 6 ಎಸೆತ, 2 ಸಿಕ್ಸರ್) ಉತ್ತಮ ಸಾಥ್ ನೀಡಿದರು. ಇವರಿಬ್ಬರು 5ನೇ ವಿಕೆಟ್‌ಗೆ ಕೇವಲ 16 ಎಸೆತಗಳಲ್ಲಿ 46 ರನ್ ದೋಚಿದರು. ಇದರಿಂದ ಪಂಜಾಬ್ ಕೊನೇ 5 ಓವರ್‌ಗಳಲ್ಲಿ 66 ರನ್ ಗಳಿಸಿತು. ಉನಾದ್ಕತ್ ಎಸೆದ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಜಿತೇಶ್ 2 ಸಿಕ್ಸರ್, 2 ಬೌಂಡರಿ ಒಳಗೊಂಡ 23 ರನ್ ಕಸಿದರು. ಬಸಿಲ್ ಥಂಪಿ ಎಸೆದ ಕೊನೇ ಓವರ್‌ನಲ್ಲಿ ಶಾರುಖ್ ಖಾನ್ 2 ಸಿಕ್ಸರ್ ಸಿಡಿಸಿ ಔಟಾದರು.

    ಟೈಮಲ್ ಮಿಲ್ಸ್ ವಾಪಸ್
    ಪಂದ್ಯಕ್ಕೆ ಮುಂಬೈ ತಂಡ ಏಕೈಕ ಬದಲಾವಣೆ ಕಂಡಿತು. ಇಂಗ್ಲೆಂಡ್ ವೇಗಿ ಟೈಮಲ್ ಮಿಲ್ಸ್ ತಂಡಕ್ಕೆ ಮರಳಿದರೆ, ರಮಣದೀಪ್ ಸಿಂಗ್ ಮತ್ತೆ ಹೊರಗುಳಿದರು. ಪಂಜಾಬ್ಸ್ ಕಿಂಗ್ಸ್ ತಂಡ ಯಾವುದೇ ಬದಲಾವಣೆ ಕಾಣಲಿಲ್ಲ.

    ಆರ್‌ಸಿಬಿ ಪರ ದಿನೇಶ್ ಕಾರ್ತಿಕ್ ಶೈನಿಂಗ್; ಸ್ಕ್ವಾಷ್‌ನಲ್ಲಿ ಪತ್ನಿ ದೀಪಿಕಾ ಭರ್ಜರಿ ಯಶಸ್ಸು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts