More

    ಸಂಚಾರಿ ಪಶು ಚಿಕಿತ್ಸಾಲಯದ ನೆರವು ಪಡೆಯಿರಿ

    ಪಿರಿಯಾಪಟ್ಟಣ: ಜಾನುವಾರುಗಳ ತುರ್ತು ಚಿಕಿತ್ಸೆಗೆ ಸಂಚಾರಿ ಪಶು ಚಿಕಿತ್ಸಾಲಯದ ನೆರವು ಪಡೆಯುವಂತೆ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

    ತಾಲೂಕಿನ ಕಿರಂಗೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಸಾರ್ವಜನಿಕ ಕುಂದು ಕೊರತೆ ವಿಚಾರಣಾ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಯಾವುದೇ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆಯ ಅಗತ್ಯವಿದ್ದಲ್ಲಿ 1962 ಗೆ ಕರೆ ಮಾಡುವ ಮೂಲಕ ಸಂಚಾರಿ ಪಶು ಚಿಕಿತ್ಸಾ ಘಟಕದ ನೆರವು ಪಡೆಯಬಹುದು ಎಂದರು.

    ಈ ವಾಹನಗಳಲ್ಲಿ ತುರ್ತು ಚಿಕಿತ್ಸೆಗೆ ಬೇಕಾದ ಔಷದ, ಇಂಜೆಕ್ಷನ್ ಸೇರಿದಂತೆ ಎಲ್ಲ ವ್ಯವಸ್ಥೆ ಇರಲಿದೆ. ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಪಶು ಸಖಿ ವ್ಯವಸ್ಥೆಯಡಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಬ್ಬರು ಪಶು ಸಖಿಯಾಗಿ ಕರ್ತವ್ಯ ನಿರ್ವಹಿಸಲಿದ್ದು, ಇಲಾಖೆಯ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಸಮರ್ಪಕವಾದ ಮಾಹಿತಿ ನೀಡಲಿದ್ದಾರೆ ಎಂದರು.

    ಕಿರಂಗೂರು ಗ್ರಾಮದಲ್ಲಿ ಹಾಲಿ ಇರುವ ಸರ್ಕಾರಿ ಶಾಲೆ ಖಾಸಗಿ ಜಾಗದಲ್ಲಿ ಇದ್ದು, ಅದನ್ನು ಗ್ರಾಮ ಠಾಣಾ ಎಂದು ಗುರುತಿಸಿರುವ 1.15 ಎಕರೆ ಪ್ರದೇಶದ ಸರ್ಕಾರಿ ಜಾಗಕ್ಕೆ ಸ್ಥಳಾಂತರ ಗೊಳಿಸುವಂತೆ ಸಾರ್ವಜನಿಕರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಗ್ರಾಮ ಠಾಣಾ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಿ ಸರ್ಕಾರಿ ಶಾಲೆಯನ್ನು ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

    ಗ್ರಾಮದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕುಟುಂಬದ ಮನೆಗಳಿಗೆ ಮೂಲ ಸೌಲಭ್ಯಗಳ ಕೊರತೆ ಇದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಸಚಿವರು, ಈ ಮನೆಗಳಿಗೆ ಸಮರ್ಪಕವಾಗಿ ವಿದ್ಯುತ್ ಸೌಲಭ್ಯ, ಕುಡಿಯುವ ನೀರು ಪೂರೈಕೆ ಮತ್ತು ರಸ್ತೆ ಚರಂಡಿ ನಿರ್ಮಾಣಕ್ಕೆ ಪ್ರಮುಖ ಆದ್ಯತೆ ನೀಡುವಂತೆ ತಹಸೀಲ್ದಾರ್ ಮತ್ತು ತಾಪಂ ಇಒಗೆ ಸೂಚಿಸಿದರು.

    ಕಿರಂಗೂರು ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಿಕೊಡಬೇಕು. ಸಾರ್ವಜನಿಕ ಸ್ಮಶಾನಕ್ಕೆ ಸೂಕ್ತ ಜಾಗ ಕಲ್ಪಿಸಬೇಕು. ಗ್ರಾಮದಿಂದ ಮುತ್ತೂರು -ಸಿದ್ದಾಪುರ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಕೃಷಿ ಚಟುವಟಿಕೆಗೆ ಅಗತ್ಯವಾದ ವಿದ್ಯುತ್ ಪೂರೈಕೆ ಕಲ್ಪಿಸುವಂತೆ ಸಾರ್ವಜನಿಕರು ಸಚಿವರಿಗೆ ಮನವಿ ಸಲ್ಲಿಸಿದರು.

    ತಹಸೀಲ್ದಾರ್ ಕುಂಇ ಅಹಮದ್, ತಾಪಂ ಇಒ ಸುನಿಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಹುಣಸವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ್, ಮುಖಂಡರಾದ ಬಿ.ಜೆ.ಬಸವರಾಜ್, ಪಿ.ಎನ್.ಚಂದ್ರಶೇಖರ್, ಎಚ್.ಕೆ.ಮಂಜುನಾಥ್, ಪ್ರಭುದೇವ್, ವಿರೂಪಾಕ್ಷ, ಪುಟ್ಟರಾಜು, ಕೆಲ್ಲೂರು ನಾಗರಾಜ್, ಕೆ.ಪಿ.ಮಂಜುನಾಥ್, ಮಲ್ಲಿಕಾರ್ಜುನ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts