More

    ಕ್ರಷರ್ ಲಾರಿ ತಡೆದು ಪ್ರತಿಭಟನೆ

    ಬೆಟ್ಟದಪುರ : ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರ ಬೈಲಕುಪ್ಪೆ ಗ್ರಾಮದಲ್ಲಿ ಗುರುವಾರ ಸ್ಥಳೀಯ ನಿವಾಸಿಗಳು ಕ್ರಷರ್ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.


    ಸಮೀಪದ ಹುಣಸೇಕೊಪ್ಪಲು ಹೊರವಲಯದಲ್ಲಿ ಇರುವ ಕ್ರಷರ್‌ಗಳಿಂದ ಡಸ್ಟ್, ಜಲ್ಲಿಕಲ್ಲು ಹಾಗೂ ಎಂ- ಸ್ಯಾಂಡ್ ತುಂಬಿಕೊಂಡು ಓಡಾಡುವಂತ ಲಾರಿಗಳು ಗ್ರಾಮದ ಪರಿಮಿತಿಯಲ್ಲಿಯೂ ಕೂಡ ಅತಿ ವೇಗವಾಗಿ ಸಂಚಾರ ಮಾಡುತ್ತವೆ. ಲಾರಿ ಚಾಲಕರು ಬೈಕ್, ಕಾರು ಸೇರಿದಂತೆ ಎದುರು ಬದಿ ಹಾಗೂ ಹಿಂಬದಿಯಿಂದ ಬರುವಂತಹ ವಾಹನಗಳಿಗೆ ಜಾಗ ಬಿಡದೇ ಬೇಕಾಬಿಟ್ಟಿ ಓಡಿಸುತ್ತಾರೆ. ಇದನ್ನು ಪ್ರಶ್ನೆ ಮಾಡಿ ಜಾಗ ಕೊಡಿ ಎಂದರೆ, ಏಕವಚನದಲ್ಲಿ ಉಡಾಫೆಯಿಂದ ಮಾತನಾಡುವ ಮೂಲಕ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಇದಲ್ಲದೆ ರಸ್ತೆಯಲ್ಲಿ ಅತಿ ವೇಗವಾಗಿ ಸಂಚಾರ ಮಾಡುವಾಗ ಧೂಳಿನ ಸಮಸ್ಯೆ ಉಂಟಾಗುತ್ತಿದೆ ಎಂದು ಕಿಡಿಕಾರಿದರು.


    ನಿತ್ಯ ಲಾರಿಗಳು ಓಡಾಡುವ ಮೊದಲು, ರಸ್ತೆಗೆ ನೀರು ಹಾಕಿ ಓಡಾಡಬೇಕು. ಗ್ರಾಮದ ಪರಿಮಿತಿಯಲ್ಲಿ ಸಂಚರಿಸುವ ಸಂದರ್ಭ ನಿಧಾನಗತಿಯಲ್ಲಿ ಸಂಚಾರ ಮಾಡಬೇಕು ಎಂದು ಹಲವು ಬಾರಿ ತಿಳಿವಳಿಕೆ ನೀಡಿದರೂ ಏನು ಪ್ರಯೋಜನವಾಗಿಲ್ಲ. ಇನ್ನು ಮುಂದೆ ಲಾರಿಗಳು ನಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಓಡಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.


    ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾರನಹಳ್ಳಿ ಹೋಬಳಿಯ ಉಪತಹಸೀಲ್ದಾರ್ ಆರ್.ಮಹೇಶ್, ಗ್ರಾಮ ಆಡಳಿತಾಧಿಕಾರಿಗಳಾದ ಪ್ರದೀಪ್, ದೀಪಕ್ ಹಾಗೂ ಬೆಟ್ಟದಪುರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ನಿವಾಸಿಗಳಿಂದ ಮಾಹಿತಿಯನ್ನು ಪಡೆದರು. ಬಳಿಕ ಸ್ಥಳಕ್ಕೆ ಬಂದಂತಹ ಕ್ರಷರ್ ಮ್ಯಾನೇಜರ್‌ಗೆ ಗ್ರಾಮದ ಪರಿಮಿತಿಯಲ್ಲಿ ಮಿತಿ ವೇಗದಲ್ಲಿ ಸಂಚಾರ ಮಾಡಬೇಕು, ಗ್ರಾಮದ ವ್ಯಾಪ್ತಿಯಲ್ಲಿ ಓಡಾಡುವಾಗ ರಸ್ತೆಗೆ ನೀರು ಹಾಕಿ ಸಂಚಾರ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.


    ಸ್ಥಳೀಯ ಗ್ರಾಮದ ನಿವಾಸಿಗಳಾದ ಆನಂದ್, ಸೋಮಶೇಖರ್, ಸ್ವಾಮಿ, ಪಾಪಣ್ಣ, ರಾಜಣ್ಣ, ಚಂದ್ರಶೇಖರ್, ಕುಮಾರ, ಪುಟ್ಟರಾಮು ಬಾಲಕೃಷ್ಣ, ಲೋಕೇಶ್, ಆನಂದ, ಸ್ವಾಮಿಭೋವಿ, ನಂಜುಂಡಭೋವಿ ಸೇರಿದಂತೆ ಗ್ರಾಮದ ಮಹಿಳೆಯರು ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts