More

    ಹಾಡಿ ಜನರಿಗೆ ಮೂಲ ಸೌಲಭ್ಯ ಒದಗಿಸಿ


    ಮೈಸೂರು : ಸರಗೂರು ಹಾಡಿ ಜನರಿಗೆ ಮೂಲ ಸೌಲಭ್ಯ ಒದಗಿಸಿ, ಅವರ ಶ್ರೇಯೋಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು ಎಂದು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್‌ಪಿ ಬಿ.ಟಿ.ಕವಿತಾ ಸೂಚಿಸಿದರು.


    ತಾಲೂಕಿನ ದಡದಹಳ್ಳಿ, ನಡಾಡಿ ಹಾಡಿಗಳಿಗೆ ಇತ್ತೀಚೆಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಹಾಡಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಿಬೇಕು. ಚರಂಡಿ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿಬೇಕು. ವಿದ್ಯುತ್ ಸಮಸ್ಯೆ ಸರಿಪಡಿಸಬೇಕು. ಬದಲಿಗೆ ಸೋಲಾರ್ ದೀಪಗಳನ್ನು ವಿತರಿಸಬೇಕು. ಜತೆಗೆ ಮೂಲಸೌಲಭ್ಯ ಒದಗಿಸುವಲ್ಲಿ ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


    ನಡಾಡಿ ಗ್ರಾಮದಲ್ಲಿ 72ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಸ್ಮಶಾನಕ್ಕೆ ಜಾಗವಿಲ್ಲ. ಗ್ರಾಮದಲ್ಲಿ ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಮನೆ ಕಟ್ಟಿಕೊಡಲು ಪಂಚಾಯಿತಿ ಅಧಿಕಾರಿಗಳು, ಗುತ್ತಿಗೆದಾರರು ಶಾಮೀಲಾಗಿ ವಿಳಂಬ ಮಾಡುತ್ತಿದ್ದಾರೆ. ಹೀಗಾಗಿ ಸಮರ್ಪಕವಾದ ಮನೆ ನಿರ್ಮಾಣವೂ ಆಗಿಲ್ಲ. ಇದಲ್ಲದೆ ಗಿರಿಜನರು ತಮ್ಮ ಜೀವನ ನಿರ್ವಹಣೆಗಾಗಿ ಕಾಡಿನ ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


    ಸರ್ಕಾರ ಹಲವು ಸೌಲಭ್ಯಗಳನ್ನು ನೀಡಿದ್ದರೂ ಅದು ಸಮರ್ಪಕವಾಗಿ ನಿಜವಾದ ಫಲಾನುಭವಿಗಳಿಗೆ ದೊರಕುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಅವರಿಗೆ ಸರ್ಕಾರದ ವಿವಿಧ ಸೌಲಭ್ಯಗಳು ನೇರವಾಗಿ ಸಿಗುವಂತೆ ನೋಡಿಕೊಳ್ಳಬೇಕು. ಗಿರಿಜನರ ಸ್ಥಿತಿಗತಿ ಇನ್ನೂ ಶೋಚನೀಯವಾಗಿದ್ದು, ಅವರು ಸಮಾಜದ ಮುಖ್ಯವಾಹಿನಿಗೆ ತರಬೇಕು. ಉತ್ತಮ ಶಿಕ್ಷಣ ನೀಡುವ ಮೂಲಕ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು.


    ಇದಕ್ಕೂ ಮುನ್ನ ಕಾಡಾನೆ ದಾಳಿಗೆ ಬಲಿಯಾದ ದಡದಹಳ್ಳಿ ಹಾಡಿ ಬೊಮ್ಮ ಅವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಬಿ.ಮಟಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಜಿ.ಅಜಿತ್‌ಕುಮಾರ್, ಪಿಡಿಒ ಬಿ.ಭಾಗ್ಯಾ, ಸದಸ್ಯರಾದ ನಾಗೇಶ್, ಸುನೀತಾಬಾಯಿ, ರಾಣಿಬಾಯಿ, ಹಂಚೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮೀಣಿಪುಟ್ಟಯ್ಯ, ಪಿಡಿಒ ಚೆನ್ನಪ್ಪ, ಸಮುದಾಯ ಆರೋಗ್ಯಾಧಿಕಾರಿ ಕಾರ್ತಿಕ್, ಎಸ್‌ಪಿ ಬಿ.ಟಿ.ಕವಿತಾ ಅವರ ಪಿಎ ಶಶಿಕಲಾ, ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts