More

    ಪಾಂಡವಪುರದಲ್ಲಿ ರೈತರ ಪ್ರತಿಭಟನೆ

    ಪಾಂಡವಪುರ: ಖರೀದಿ ಕೇಂದ್ರದ ಅಧಿಕಾರಿಗಳು ರೈತರ ರಾಗಿಯನ್ನು ಮೂರು ದಿನಗಳಿಂದಲೂ ಖರೀದಿಸದೆ ಇಲ್ಲದ ಸಬೂಬು ಹೇಳಿ ಸತಾಯಿಸುತ್ತಿದ್ದಾರೆ. ಇದರಿಂದ ರೈತರು ತುಂಬ ನಷ್ಟ ಅನುಭವಿಸಬೇಕಾಗಿದೆ ಎಂದು ಆರೋಪಿಸಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

    ಪಟ್ಟಣದ ಎಪಿಎಂಎಸ್ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ವತಿಯಿಂದ ರಾಗಿ ಖರೀದಿ ಕೇಂದ್ರ ತೆರೆಯಲಾಗಿದ್ದು, ಇಲ್ಲಿಗೆ ರೈತರು ತಾವು ಬೆಳೆದಿರುವ ಉತ್ತಮ ಗುಣಮಟ್ಟದ ರಾಗಿ ತಂದಿದ್ದರೂ ಖರೀದಿ ಕೇಂದ್ರದ ಅಧಿಕಾರಿ ರಾಗಿ ಖರೀದಿಸುತ್ತಿಲ್ಲ. ರೈತರು ಬಾಡಿಗೆ ವಾಹನದಲ್ಲಿ ರಾಗಿ ತುಂಬಿಕೊಂಡು 2-3 ದಿನಗಳವರೆಗೂ ಕಾದು ಕುಳಿತರು ರಾಗಿ ಖರೀದಿಸುತ್ತಾರೆ ಎಂಬ ಖಾತ್ರಿ ರೈತರಿಗೆ ಸಿಗುತ್ತಿಲ್ಲ. ಯಾವ ಕಾರಣಕ್ಕೆ ರಾಗಿ ಖರೀದಿಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಳಿದರೆ ಒಂದೊಂದು ಕಾರಣ ನೀಡಿ ರಾಗಿ ತಿರಸ್ಕರಿಸಲಾಗುತ್ತಿದೆ. ಈ ಹಿಂದಿನ ಅಧಿಕಾರಿಗಳು ಗ್ರೇಡರ್ ಮೂಲಕ ರಾಗಿ ಗುಣಮಟ್ಟ ಪರೀಕ್ಷಿಸಿ ಸರ್ಕಾರದ ನಿರ್ದೇಶನದಂತೆ ತೀರಾ ಕಳಪೆ ರಾಗಿಯನ್ನು ಮಾತ್ರ ರಿಜೆಕ್ಟ್ ಮಾಡುತ್ತಿದ್ದರು. ಈಗಿನ ಅಧಿಕಾರಿ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.

    ತೂಕದಲ್ಲಿ ಮೋಸ: ರಾಗಿ ಗುಣಮಟ್ಟ ಪರೀಕ್ಷಿಸಲು ಅಗತ್ಯವಿರುವ ಯಂತ್ರೋಪಕರಣವನ್ನು ಇದುವರೆಗೂ ಖರೀದಿ ಕೇಂದ್ರಕ್ಕೆ ತಂದಿಲ್ಲ. ರೈತರ ರಾಗಿಯನ್ನು ಎರಡು ತಕ್ಕಡಿಗಳ ಮೂಲಕ ತೂಕ ಮಾಡಲಾಗುತ್ತಿದೆ. ಒಂದು ತಕ್ಕಡಿಗೂ ಮತ್ತೊಂದು ತಕ್ಕಡಿಗೂ 6 ಕೆಜಿಗಳಷ್ಟು ವ್ಯತ್ಯಾಸ ಬರುತ್ತಿದೆ. ತೂಕಕ್ಕೆ ಇಟ್ಟ ರಾಗಿ ಮೂಟೆಯ ದಿಕ್ಕು ಬದಲಾಯಿಸದಂತೆಲ್ಲ ತೂಕದಲ್ಲಿ ಕೆ.ಜಿ ಗಟ್ಟಲೇ ವ್ಯತ್ಯಾಸ ಕಂಡು ಬರುತ್ತಿದೆ. ಸರ್ಕಾರದ ನಿರ್ದೇಶನದಂತೆ 75 ಸಾವಿರ ಕ್ವಿಂಟಾಲ್ ರಾಗಿ ಖರೀದಿಸಲಾಗುತ್ತದೆ. ಇಷ್ಟು ಕ್ವಿಂಟಾಲ್ ರಾಗಿಯಲ್ಲಿ ತೂಕದಲ್ಲಿ ಒಂದು ತೂಕಕ್ಕೆ ಐದಾರು ಕೆಜಿ ಎಂದರು ನೂರಾರು ಕ್ವಿಂಟಾಲ್ ರಾಗಿ ಮೋಸ ಮಾಡಲಾಗುತ್ತಿದೆ. ರಾಗಿ ಖರೀದಿಸಲು ಯೋಗ್ಯವಾಗಿಲ್ಲ ಎಂದು ಲಿಖಿತವಾಗಿ ಬರೆದುಕೊಡಿ ಎಂದು ಮನವಿ ಮಾಡಿಕೊಂಡರು ಖರೀದಿ ಕೇಂದ್ರದ ಅಧಿಕಾರಿ ರೈತರ ಬಳಿ ಉದ್ದಟತನದಿಂದ ವರ್ತಿಸುತ್ತಾರೆ ಎಂದು ರೈತರು ದೂರಿದರು.

    ರಾಗಿ ಖರೀದಿಗೆ ಸೂಚನೆ : ರೈತರ ತಂದಿರುವ ರಾಗಿ ಸಾಕಷ್ಟು ಗುಣಮಟ್ಟದಿಂದ ಕೂಡಿದೆ. ತೀರಾ ಕಳಪೆಯಾಗಿರುವ ರಾಗಿಯನ್ನು ತಿರಸ್ಕರಿಸಿ. ಉಳಿದಂತೆ ಪ್ರತಿ ಚೀಲವನ್ನು ಪರೀಕ್ಷಿಸಿ ಗುಣಮಟ್ಟದ ರಾಗಿ ಖರೀದಿಸಿ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯಾ ಅವರು ಸೂಚನೆ ನೀಡಿದರೂ ಖರೀದಿ ಕೇಂದ್ರದ ಅಧಿಕಾರಿ ಶೀಲಾ ಅವರ ಮಾತಿಗೆ ಮನ್ನಣೆ ನೀಡದೆ ಸ್ಥಳದಿಂದ ತೆರಳಿದರು.

    ಖರೀದಿ ಕೇಂದ್ರದ ಅಧಿಕಾರಿ ಶೀಲಾ ಮಾತನಾಡಿ, ರೈತರು ಕಪ್ಪು ಮಿಶ್ರಿತ ರಾಗಿ ತರುತ್ತಿದ್ದು ಇದನ್ನು ನಾವು ತಿರಸ್ಕರಿಸುತ್ತಿದ್ದೇವೆ. ಆದರೆ ರೈತರು ಒಂದೊಂದು ಭೂಮಿಯಲ್ಲಿ ಒಂದೊಂದು ತಳಿಯ ರಾಗಿ ಬೆಳೆಯಲಾಗುತ್ತದೆ ಎನ್ನುತ್ತಿದ್ದಾರೆ. ಗುಣಮಟ್ಟದ ರಾಗಿ ತಂದರೆ ನಾವು ಯಾವುದನ್ನು ತಿರಸ್ಕರಿಸುವುದಿಲ್ಲ. ರಾಗಿ ಗುಣಮಟ್ಟ ಪರೀಕ್ಷೆಯ ಯಂತ್ರೋಪಕರಣ ಇರಲಿಲ್ಲ. ಈಗ ತರುತ್ತಿದ್ದೇವೆ. ಈವರೆಗೂ 1078 ಕ್ಷಿಂಟಾಲ್ ರಾಗಿ ಖರೀದಿಸಲಾಗಿದ್ದು, ಸಾವಿರ ಕ್ವಿಂಟಾಲ್ ರಾಗಿ ರಿಜೆಕ್ಟ್ ಆಗಿದೆ ಎಂದು ಮಾಹಿತಿ ನೀಡಿದರು. ಪ್ರತಿಭಟನೆಯಲ್ಲಿ ತಿಮ್ಮೇಗೌಡ, ಕೃಷ್ಣೇಗೌಡ, ಅಭೀಷೇಕ್, ಕಡಬ ಮಹೇಶ್, ನವೀನ್, ಪುಟ್ಟರಾಜು ಇತರರು ಇದ್ದರು.

    ಫೋಟೋ : 1-ಪಿಎನ್‌ಪಿ 2
    ಪಾಂಡವಪುರ ಪಟ್ಟಣದ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ರೈತರ ರಾಗಿ ಖರೀದಿಸುತ್ತಿಲ್ಲ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.

    ಫೋಟೋ : 1-ಪಿಎನ್‌ಪಿ 2ಎ
    ರೈತರು ತಂದಿರುವ ಗುಣಮಟ್ಟದ ರಾಗಿಯನ್ನು ಖರೀದಿಸುವಂತೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯಾ ಖರೀದಿ ಕೇಂದ್ರದ ಅಧಿಕಾರಿಗೆ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts