More

    ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಹಿಳಾ ಕಾರ್ಮಿಕರ ಪ್ರತಿಭಟನೆ

    ತುಮಕೂರು: ಕೆಲಸ ಕಾಯಂ, ಜಿಡಿಪಿ ಲೆಕ್ಕಕ್ಕೆ ಸೇರಿಸಬೇಕು, ಸಮಾನ ವೇತನ, ಸ್ಕೀಮ್ ಕೆಲಸಗಾರರನ್ನು ಕಾರ್ಮಿಕರಾಗಿ ಪರಿಗಣನೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಹಿಳೆಯರು ಪ್ರತಿಭಟನೆ ನಡೆಸಿದರು.

    ಸಿಐಟಿಯು ಮತ್ತು ದುಡಿಯುವ ಮಹಿಳೆಯರ ಸಮನ್ವಯ ಸಮತಿ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತುಮಕೂರಿನ ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದರು.

    ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಮುಂದಾದ ನೂರಾರು ಮಹಿಳಾ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಸಂಜೆ ಬಿಡುಗಡೆ ಮಾಡಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಕಮಲಾ ಮಾತನಾಡಿ, ಸಮಾಜದ ಅರ್ಧದಷ್ಟು ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆತಿಲ್ಲ. ಸ್ವಾತಂತ್ರ್ಯ ಬಂದು ಏಳು ದಶಕಗಳು ಪೂರೈಸಿದರೂ ಮಹಿಳೆಯ ಮೇಲಿನ ಅತ್ಯಾಚಾರ, ದೌರ್ಜನ್ಯಗಳು ನಿಂತಿಲ್ಲ ಎಂದು ದೂರಿದರು.

    ಕೇಂದ್ರ ಸರ್ಕಾರ ಕಾರ್ಮಿಕ ಕಾನೂನು ಬದಲಿಸಿ 8 ಗಂಟೆಯ ಕೆಲಸ ಮತ್ತು ಮೂಲ ವೇತನದ ಹಕ್ಕುಗಳನ್ನು ನಿರಾಕರಿಸುತ್ತಿದೆ. ದುಡಿಯುವ ಮಹಿಳೆಯರ ಸಂಖ್ಯೆ ಕುಸಿಯುತ್ತಿದೆ ಜತೆಗೆ ವೇತನ ಇಲ್ಲದೆ ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಪಿಸಿದರು.

    ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಭಾನು ಮಾತನಾಡಿ, ದೇಶದಲ್ಲಿ ಸರ್ಕಾರವೇ ಮಹಿಳೆಯರನ್ನು ಶಿಶುಪಾಲನೆ ಇತ್ಯಾದಿ ಕೆಲಸಗಳಲ್ಲಿ ಉಪಯೋಗಿಸಿಕೊಂಡು ಶೋಷಣೆಗೆ ಒಳಪಡಿಸುತ್ತದೆ ಎಂದರು. ಅಗತ್ಯ ಸೇವೆಗಳನ್ನು ಮಾಡುತ್ತಿರುವ ಸ್ಕೀಮ್ ಕೆಲಸಗಾರರಾದ ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಗುರುತಿಸುತ್ತಿಲ್ಲ. ಕನಿಷ್ಠ ಕೂಲಿ ನೀಡುತ್ತಿಲ್ಲ ಮತ್ತು ಕೆಲಸ ಸ್ಥಳದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ದಬ್ಬಾಳಿಕೆಗಳು ನಡೆಯುತ್ತಿವೆ ಎಂದು ದೂರಿದರು.

    ಅಂಗನವಾಡಿ ನೌಕರರ ಸಂಘಟನೆಯ ಖಜಾಂಚಿ ಅನಸೂಯ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಹಿಂಪಡೆಯಬೇಕು. ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಅನುಷ್ಠಾನಗೊಳಿಸಬಾರದು ಎಂದು ಆಗ್ರಹಿಸಿದರು. ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎ.ನರಸಿಂಹಮೂರ್ತಿ, ಸಿಐಟಿಯು ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಮನವಿ ಸ್ವೀಕರಿಸಿದರು. ಹೋರಾಟದಲ್ಲಿ ತುಮಕೂರುಗಂಗಾ, ಗೌರಮ್ಮ, ಜಬೀನಾ, ಅನಸೂಯ, ವನಜಾಕ್ಷಿ, ಪದ್ಮ ಮಂಜುಳ, ಶಾಂತಮ್ಮ ನಾಗರತ್ನ, ಶೈಲಾ ಮತ್ತಿತರರು ನೇತೃತ್ವ ವಹಿಸಿದ್ದರು.

    ಸರ್ಕಾರತೇರ ಸಮಿತಿ ರಚಿಸಿ: ಎಲ್ಲ ಇಲಾಖೆ ಮತ್ತು ರಂಗದಲ್ಲಿ ಮಹಿಳೆಯರಿಗೆ ಹೇಳಿಕೊಳ್ಳಲಾರದ ಸಂಕಟಗಳು ಹೆಚ್ಚುತ್ತಿರುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಸಮ ಸಮಾಜದ ನಿರ್ಮಾಣದತ್ತ ಮುಂದಾಗುವಂತೆ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಒತ್ತಾಯಿಸಿದರು. ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ದಬ್ಬಾಳಿಕೆ ಲೈಂಗಿಕ ಕಿರುಕುಳಗಳ ಬಗ್ಗೆ ವಿಚಾರಣೆ ಕಾರ್ಮಿಕರ ಸಂಘಟನೆಗಳು ಹಾಗೂ ಸರ್ಕಾರತೇರ ಸಮಿತಿಗಳನ್ನು ಒಳಗೊಂಡಂತೆ ಸಮಿತಿ ರಚಿಸ ಬೇಕು. ಹಾಗೂ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕೆಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts