More

    108 ಸಿಬ್ಬಂದಿ ವೇತನ ಬಾಕಿ ಉಳಿಸಿಕೊಂಡಿಲ್ಲ: ಆರೋಗ್ಯ ಸಚಿವ ಸ್ಪಷ್ಟನೆ

    ಬೆಂಗಳೂರು: ಆಂಬುಲೆನ್ಸ್ (108) ಚಾಲಕರಿಗೆ ಸರ್ಕಾರದ ಕಡೆಯಿಂದ ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

    ಯೋಜನೆಯನ್ನು ಸುಗಮವಾಗಿ ನಡೆಸಲು 2023-24ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಆರೋಗ್ಯ ಇಲಾಖೆಗೆ 210.33 ಕೋಟಿ ರೂ.ಅನುದಾನಕ್ಕೆ ಅನುಮೋದನೆ ನೀಡಿದೆ. ಈಗಾಗಲೇ ಒಡಂಬಡಿಕೆ ಅನ್ವಯ ನಿಗದಿಯಾದ 162.40 ಕೋಟಿ ರೂ. ಸೇವಾದಾರರಿಗೆ ನೀಡಲಾಗಿದ್ದು, ಏಜೆನ್ಸಿ-ಚಾಲಕರ ನಡುವಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    2024-25ನೇ ಸಾಲಿನ ಬಜೆಟ್‌ನಲ್ಲಿ ಇಲಾಖೆಗೆ ರೂ. 260.33 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಒಡಂಬಡಿಕೆ ಅನ್ವಯ ಪ್ರಸ್ತಕ ಸಾಲಿಗೆ 162.40 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಬೇಕಿದೆ. ಆರೋಗ್ಯ ಇಲಾಖೆ ಹಾಗೂ ಇಎಂಆರ್‌ಐ ಗ್ರೀನ್ ಹೆಲ್ತ್ ಸಂಸ್ಥೆಯವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಅನ್ವಯ 711 ಆಂಬುಲೆನ್ಸ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಸೇವೆ ಒದಗಿಸಿದಲ್ಲಿ ಪ್ರತಿ ತ್ರೈಮಾಸಿಕಕ್ಕೆ 40.60 ಕೋಟಿ ರೂ. ನಂತೆ ವಾರ್ಷಿಕ 162.40 ಕೋಟಿ ರೂ. ಅನುದಾನ ಬಿಡುಗಡೆಗೊಳಿಸುವುದಾಗಿ ಹೇಳಿದ್ದಾರೆ.

    ನಿಯಮಬಾಹಿರ ಬೇಡಿಕೆ:
    ಹಿಂದಿನ ಸರ್ಕಾರದ ಅವಧಿಯಲ್ಲಿ 108 ಸಿಬ್ಬಂದಿಗೆ ನಿಯಮಬಾಹಿರವಾಗಿ ಶೇ.45 ವೇತನ ಹೆಚ್ಚಳ ಮಾಡಲಾಗಿತ್ತು. ಇದೀಗ ಸಿಬ್ಬಂದಿ ಆ ವೇತನ ಕಡಿತಗೊಳಿಸದಂತೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ನಿಯಮಾನುಸಾರ ವೇತನ ನೀಡುತ್ತಿದ್ದು, ಪ್ರತಿ ಚಾಲಕರಿಗೆ 35 ಸಾವಿರಕ್ಕೂ ಹೆಚ್ಚು ದೊರೆಯುತ್ತಿದೆ. ಇದರ ಮೇಲೂ ಶೇ. 45 ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ. ಈ ಬಗ್ಗೆ ಸಿಬ್ಬಂದಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

    ಕೋಟ್ . . .
    ಆಂಬುಲೆನ್ಸ್ ನೌಕರರ ಸಮಸ್ಯೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಲೋಪ. ಟೆಂಡರ್ ಕರೆಯದೆ ಜಿವಿಕೆ ಇಎಂಆರ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮುಂದುವರಿಸಿಕೊಂಡು ಬರಲಾಗಿದೆ. ನಮ್ಮ ಸರ್ಕಾರ ನಿಯಮಾನುಸಾರ ಟೆಂಡರ್ ಕರೆಯಲು ಸಿದ್ಧತೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಲೋಪ ಸರಿಪಡಿಸಲಾಗುವುದು.
    – ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts