More

    ಜಾನುವಾರು, ಕುರಿಗಳೊಂದಿಗೆ ಧರಣಿ

    ಬ್ಯಾಡಗಿ: ಪಟ್ಟಣದ ಬೆಟ್ಟದ ಮಲ್ಲೇಶ್ವರ ಪ್ರದೇಶದ ಗೋಮಾಳ ಜಮೀನನ್ನು ನಿವೇಶನಕ್ಕಾಗಿ ಮಂಜೂರಾತಿ ನೀಡಲು ಮುಂದಾಗಿರುವ ಕಂದಾಯ ಇಲಾಖೆ ಹಾಗೂ ಶಾಸಕರ ಕ್ರಮ ಖಂಡಿಸಿ ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಕಾರ್ಯಾಲಯ ಎದುರು ನೂರಾರು ಜಾನುವಾರು, ಕುರಿಗಳೊಂದಿಗೆ ಸೋಮವಾರ ಪ್ರತಿಭಟನೆ ನಡೆಸಿದರು.

    ರೈತ ಸಂಘದ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಪಟ್ಟಣದ ಸ.ನಂ. 171ರಲ್ಲಿ ವಿವಿಧ ಉದ್ದೇಶಗಳಿಗೆ ಜಮೀನು ಮಂಜೂರಾಗಿ ರೈತರಿಗೆ ತೊಂದರೆಯಾಗಿದೆ. 2017ರಲ್ಲಿ ನಿವೇಶನಕ್ಕೆ ಮಂಜೂರು ಮಾಡಲು ಕಂದಾಯ ಇಲಾಖೆ ಯತ್ನಿಸಿತ್ತು. ಆಗ ರೈತರು ಖಂಡಿಸಿದ ಬಳಿಕ ಪುರಸಭೆ ಬೇರೆ ಜಮೀನು ಖರೀದಿಸಿದೆ. ಆದರೆ ಈಗ 9.31 ಎಕರೆ ಜಮೀನನ್ನು ನಿವೇಶನಕ್ಕೆ ನೀಡಲು ಹೊರಟ ಕ್ರಮ ಸರಿಯಲ್ಲ. ಜಾನುವಾರುಗಳಿಗೆ ಈ ಜಾಗ ಬಿಟ್ಟರೆ ಬೇರೆಲ್ಲೂ ಗೋಮಾಳವಿಲ್ಲ. ಸ್ಥಳೀಯ ಶಾಸಕರು ಹಾಗೂ ಕಂದಾಯ ಇಲಾಖೆಯು ಪ್ರಕ್ರಿಯೆಯನ್ನು ಕೂಡಲೆ ಕೈಬಿಟ್ಟು ಖಾಸಗಿ ಜಮೀನು ಖರೀದಿಸಿ ಬಡವರಿಗೆ ನಿವೇಶನ ವಿತರಿಸಬೇಕು ಎಂದು ಆಗ್ರಹಿಸಿದರು.

    ರೈತ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜೀವನ ನಿರ್ವಹಣೆ ಬಗ್ಗೆ ರೈತರು ಚಿಂತಿಸುತ್ತಿದ್ದಾರೆ. ಸರ್ಕಾರ ಪರಿಹಾರ ವಿತರಣೆ ಕಾರ್ಯ ಬಿಟ್ಟು, ಜಂಟಿ ಪರಿಶೀಲನೆ, ಆನ್​ಲೈನ್, ಸಿಬ್ಬಂದಿ ಕೊರತೆ ನೆಪ ಹೇಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕಿರಣಕುಮಾರ ಗಡಿಗೋಳ, ಗ್ರಾಪಂ ಸದಸ್ಯ ಕರಬಸಪ್ಪ ಶಿರಗಂಬಿ, ಪುರಸಭೆ ಮಾಜಿ ಅಧ್ಯಕ್ಷ ಶಂಭಣ್ಣ ಬಿದರಿ, ಸದಸ್ಯ ಬಸವರಾಜ ಸಂಕಣ್ಣನವರ, ಮುಖಂಡರಾದ ಶೇಖಪ್ಪ ಕಾಶಿ, ಅಶೋಕ ಮಾಳೇನಹಳ್ಳಿ, ನಿಂಗಪ್ಪ ಮಾಸಣಗಿ, ಕಾಶಪ್ಪ ಮೌನೇಶ ಬಡಿಗೇರ, ಮಂಜುನಾಥ ಪೂಜಾರ, ಪಾಂಡುರಂಗ ಸುತಾರ ಇತರರಿದ್ದರು.

    ಪಟ್ಟಣದ 5 ಸಾವಿರ ಜಾನುವಾರುಗಳಿಗೆ ಮೇಯಲು ಎಲ್ಲಿಯೂ ಜಾಗವಿಲ್ಲ. ಕೇವಲ 150 ಎಕರೆ ಜಮೀನು ಗೋಮಾಳಕ್ಕೆ ಮೀಸಲಿದೆ. ಯಾವುದೇ ಕಾರಣಕ್ಕೂ ಈ ಜಾಗ ಬಿಡುವುದಿಲ್ಲ. ನಮಗೆ ಸ್ಪಷ್ಟೀಕರಣ ನೀಡದಿದ್ದಲ್ಲಿ ಆ. 15ರಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡುವ ಕುರಿತು ರೈತ ಸಂಘ ನಿರ್ಧರಿಸಲಿದೆ.

    | ಚಿಕ್ಕಪ್ಪ ಛತ್ರದ, ರೈತ ಸಂಘದ ಶಹರ ಘಟಕ ಅಧ್ಯಕ್ಷ ಬ್ಯಾಡಗಿ

    ಸ.ನಂ. 171ರಲ್ಲಿ ನಿವೇಶನಕ್ಕೆ ಜಮೀನು ನೀಡದಂತೆ ರೈತರು ಮನವಿ ಸಲ್ಲಿಸಿದ್ದು, ಪ್ರತಿಭಟನೆ ಕುರಿತು ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಲಾಗುವುದು. ವಾಸ್ತವ ಪರಿಸ್ಥಿತಿಯನ್ನು ರ್ಚಚಿಸಿ ಆ. 12ರೊಳಗಾಗಿ ಗೋಮಾಳ ಭೂಮಿ ಕುರಿತು ಸ್ಪಷ್ಟೀಕರಣ ನೀಡಲಾಗುವುದು. ರೈತರು ಆ. 15 ಸ್ವಾತಂತ್ರೋತ್ಸವ ಯಶಸ್ವಿಗೊಳಿಸಿ ಸಹಕರಿಸಬೇಕು.

    | ವೈ. ತಿಪ್ಪೇಸ್ವಾಮಿ, ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts