More

    ಸರ್ಕಾರದ ವಿರುದ್ಧ ರಸ್ತೆಗಿಳಿದ ಅನ್ನದಾತರು ; ಬೈಕ್ ರ‌್ಯಾಲಿಗೆ ಅನುಮತಿ ನೀಡದ ಪೊಲೀಸರು

    ತುಮಕೂರು: ನಗರದ ಬಿಜಿಎಸ್ ವೃತ್ತದಲ್ಲಿ ಸೋಮವಾರ ಬೆಳಗ್ಗೆ 9ಕ್ಕೆ ಸಮಾವೇಶಗೊಂಡ ರೈತ ಸಂ, ಹಸಿರು ಸೇನೆ, ದಲಿತ ಸಂಘಟನೆ, ಕಾರ್ಮಿಕ ಸಂಘಟನೆಗಳು, ಮಹಿಳಾ ಹಾಗೂ ವಿವಿಧ ಸಂಘಟನೆಗಳು, ರೈತರ ಪರವಾಗಿ ಘೋಷಣೆಗಳನ್ನು ಕೂಗಿದರು.

    ನಗರದ ವಿವಿಧ ಬೀದಿಗಳಲ್ಲಿ ಬೈಕ್ ರ‌್ಯಾಲಿ ನಡೆಸಲು ಮುಂದಾದ ಪ್ರತಿಭಟನಾನಿರತರನ್ನು ಕೊನೇ ಕ್ಷಣದಲ್ಲಿ ತಡೆಯಲಾಯಿತು, ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಜತೆ ಮಾತಿನ ಚಕಮಕಿಯೂ ನಡೆಯಿತು. ಈ ಸಂದರ್ಭದಲ್ಲಿ ಕೆಲವರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು, ಈ ವೇಳೆ ಪೊಲೀಸರ ಮನವೊಲಿಸಿದ ರೈತ ಮುಖಂಡರು ಪಾದಯಾತ್ರೆಯಲ್ಲಿಯೇ ನಗರದ ಬೀದಿಗಳಲ್ಲಿ ಸಂಚರಿಸಿ, ವರ್ತಕರು, ಅಂಗಡಿಗಳ ಮಾಲೀಕರ ಮನವೊಲಿಸಿ ಮುಷ್ಕರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.

    ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಹಲವು ದಶಕಗಳ ಹೋರಾಟದ ಫಲವಾಗಿ 1961ರಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ಬಂತು, ಇಂದು ಉಳ್ಳವರಿಗೆ ಭೂಮಿ ನೀಡಲಾಗುತ್ತಿದೆ ಎಂದರು. ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ಮಸೂದೆ ಜಾರಿಗೆ ತಂದು, ನಾವು ಯಾರ ಪರ ಎಂಬುದನ್ನು ಬಿಜೆಪಿ ಸರ್ಕಾರ ತೋರಿಸಿದೆ. ಕಾನೂನು ಜಾರಿಯಾದರೆ ಕೋಟ್ಯಂತರ ರೈತರು ಬೀದಿಗೆ ಬೀಳಲಿದ್ದಾರೆ, ಅನ್ನದ ಹಾಹಾಕಾರ ಉಂಟಾಗಲಿದೆ ಎಚ್ಚರಿಸಿದರು. ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಮಾತನಾಡಿ, ಕೇಂದ್ರ ಸರ್ಕಾರ ಕೇವಲ ರೈತರ ಮೇಲೆ ಗದಾಪ್ರಹಾರ ನಡೆಸಿಲ್ಲ. ಬದಲಿಗೆ 44 ಕಾರ್ಮಿಕ ಕಾಯ್ದೆಗಳನ್ನು 4ಕ್ಕೆ ಇಳಿಸಿ, ದುಡಿಯುವ ವರ್ಗಕ್ಕೆ ಭದ್ರತೆಯೇ ಇಲ್ಲದಂತೆ ಮಾಡಿದೆ ಎಂದರು.

    ಜಾಗತೀಕರಣದ ಫಲವಾಗಿ ಉದ್ಯೋಗ ಕಳೆದುಕೊಳ್ಳುತ್ತಿರುವ ಕಾರ್ಮಿಕ, ಹೊಸ ಕಾರ್ಮಿಕ ಸಂಹಿತೆಗಳಿಂದ ಬಂಡವಾಳಗಾರರ ಜೀತದಾಳಾಗಿ ದುಡಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಆದ್ದರಿಂದ ಸಿಐಟಿಯು ಸೇರಿ ಎಲ್ಲ ಕಾರ್ಮಿಕ ಸಂಘಟನೆಗಳು ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿ ಹೋರಾಟದಲ್ಲಿ ಪಾಲ್ಗೊಂಡಿವೆ ಎಂದರು. ರೈತ ಮುಖಂಡ ಆನಂದ ಪಾಟೀಲ್, ಕರವೇ ಜಿಲ್ಲಾಧ್ಯಕ್ಷ ಮಂಜುನಾಥ್, ಕಾರ್ಮಿಕ ಮುಖಂಡರಾದ ಎಸ್.ಎನ್.ಸ್ವಾಮಿ, ದಸಂಸ ಪಿ.ಎನ್.ರಾಮಯ್ಯ, ಪಂಡಿತ ಜವಾಹರ್, ಸಿಐಟಿಯುನ ಎನ್.ಕೆ.ಸುಬ್ರಹ್ಮಣ್ಯ, ಕಟ್ಟಡ ಕಾರ್ಮಿಕ ಸಂಘಟನೆಯ ಬಿ.ಉಮೇಶ್, ಎಐಟಿಯುಸಿನ ಗಿರೀಶ್, ಕಂಬೇಗೌಡ, ಎಐಡಿಎಸ್‌ಓನ ಕಲ್ಯಾಣಿ, ಮಂಜುಳಾ ಇದ್ದರು.

    ಅಡಿಯಾಳಾಗಿ ಬದುಕುವ ಸ್ಥಿತಿ: ವಿವಿಧ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದ್ ಬೆಂಬಲಿಸಿ ಕಾಂಗ್ರೆಸ್ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಬೆಂಬಲ ಸೂಚಿಸಿತು. ಜಿಲ್ಲಾ ಕಾರ್ಯಾಧ್ಯಕ್ಷ ಡಾ.ಸಾಸಲು ಸತೀಶ್ ನೇತೃತ್ವದಲ್ಲಿ ಸಮಾವೇಶಗೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

    ಡಾ.ಸಾಸಲು ಸತೀಶ್ ಮಾತನಾಡಿ, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ರೈತರು, ಕಾರ್ಮಿಕರು ಹಾಗೂ ಸಾಮಾನ್ಯರ ಜೀವನಕ್ಕೆ ಮಾರಕವಾಗಬಹುದಾದ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ, ಇದನ್ನು ಪ್ರತಿಭಟಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದರು. ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ಶಾಸನ ಸಭೆಗಳಲ್ಲಿ ಚರ್ಚಿಸಲು ಅವಕಾಶ ನೀಡದೇ ಸುಗ್ರೀವಾಜ್ಞೆಗಳ ಮೂಲಕ ಕಾಯ್ದೆ ಜಾರಿಗೊಳಿಸುವ ಮೂಲಕ ರೈತರು ಬಂಡವಾಳಶಾಹಿಗಳಿಗೆ ಅಡಿಯಾಳಾಗಿ ಬದುಕುವ ಸ್ಥಿತಿ ನಿರ್ಮಿಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದರು.

    ಮಾಜಿ ಶಾಸಕ ಡಾ.ರಫೀಕ್‌ ಅಹ್ಮದ್ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನರ ಹಿತ ಮರೆತು ಸ್ವಹಿತಾಸಕ್ತಿಗೆ ಕೆಲಸ ಮಾಡುತ್ತಿವೆ, ಬಂಡವಾಳಶಾಹಿ ಪರವಾದ ಕಾನೂನು ತರಾತುರಿಯಲ್ಲಿ ಜಾರಿಗೊಳಿಸುತ್ತಿವೆ ಎಂದು ದೂರಿದರು. ಮಾಜಿ ಶಾಸಕ ಷಫಿಅಹ್ಮದ್, ಮುಖಂಡರಾದ ರಾಯಸಂದ್ರ ರವಿಕುಮಾರ್, ಆಟೋರಾಜು, ನಯಾಜ್‌ಅಹ್ಮದ್ ನೇತೃತ್ವ ವಹಿಸಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts