More

    ಮುಷ್ಟೂರು, ನಿಟ್ಟೂರು ಗ್ರಾಮಸ್ಥರಿಂದ ಧರಣಿ

    ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ

    ಪಡೆದ ಸಾಲವನ್ನು ಸಂಪೂರ್ಣವಾಗಿ ತುಂಬಿದ್ದರೂ ಬ್ಯಾಂಕ್​ನವರು ಹಣ ತುಂಬಿದ ಬಗ್ಗೆ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ಮುಷ್ಟೂರು, ನಿಟ್ಟೂರು ಗ್ರಾಮದ ನಿವಾಸಿಗಳು ಶುಕ್ರವಾರ ನಗರದ ಎಕ್ಸಿಸ್ ಬ್ಯಾಂಕ್ ಎದುರು ಧರಣಿ ನಡೆಸಿದರು.

    ನೇತೃತ್ವ ವಹಿಸಿದ್ದ ಮುಷ್ಟೂರು ಗ್ರಾಮದ ಸಂತೋಷ ತಳವಾರ ಮಾತನಾಡಿ, 2018ರಲ್ಲಿ ಬ್ಯಾಂಕ್​ನವರಿಂದ ತಾಲೂಕಿನ ವಿವಿಧ ಗ್ರಾಮಗಳ ನೂರಕ್ಕೂ ಅಧಿಕ ಜನರು 18 ಸಾವಿರ ರೂ.ನಂತೆ ಗುಂಪು ಸಾಲ ತೆಗೆದುಕೊಂಡಿದ್ದೇವೆ. ಪ್ರತಿ ತಿಂಗಳು 1700 ರೂ. ನಂತೆ ಹಣ ವಾಪಸ್ ತುಂಬಿದ್ದೇವೆ. ಸಂಪೂರ್ಣ ಕಂತು ತುಂಬಿ ಒಂದೂವರೆ ವರ್ಷ ಮುಗಿದಿದೆ. ಆದರೆ, ಬ್ಯಾಂಕ್​ನವರು ಈವರೆಗೂ ಸಾಲ ಮುಟ್ಟಿರುವ ಬಗ್ಗೆ ಪ್ರಮಾಣ ಪತ್ರ ನೀಡುತ್ತಿಲ್ಲ. ಇದರಿಂದ ನಮಗೆ ಬೇರೆ ಯಾವ ಬ್ಯಾಂಕ್​ನಲ್ಲೂ ಸಾಲ ದೊರೆಯುತ್ತಿಲ್ಲ. ನಿತ್ಯದ ಕೂಲಿ ಮಾಡಿಕೊಂಡು ಜೀವನ ಮಾಡುತ್ತಿರುವ ನಮಗೆ ತೊಂದರೆಯಾಗಿದೆ ಎಂದರು.

    ಅ. 19ರಂದು ಬೆಳಗ್ಗೆ 10.30ರೊಳಗೆ ಪ್ರಮಾಣಪತ್ರ ನೀಡದಿದ್ದರೆ, ಬ್ಯಾಂಕ್ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಈ ಕುರಿತು ಮಾಹಿತಿ ನೀಡಿದ ಎಕ್ಸಿಸ್ ಬ್ಯಾಂಕ್​ನ ಗುಂಪು ಸಾಲದ ವ್ಯವಸ್ಥಾಪಕ ಮಧು ಎಚ್.ಎಲ್., ‘ಗ್ರಾಮೀಣ ಭಾಗದಲ್ಲಿ ಗುಂಪು ಸಾಲ ಪಡೆದ ಜನರಿಂದ ಹಣ ತುಂಬಿಸಿಕೊಳ್ಳುತ್ತಿದ್ದ ಸಿಬ್ಬಂದಿ ಮಂಜುನಾಥ ಎಂಬುವನು ಬ್ಯಾಂಕ್​ಗೆ ಹಣ ಕಟ್ಟಿಲ್ಲ. ಆದ್ದರಿಂದ ಗ್ರಾಹಕರಿಗೆ ಪ್ರಮಾಣಪತ್ರ ನೀಡಲು ಆಗುತ್ತಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿ, ಗ್ರಾಹಕರಿಗೆ ಪ್ರಮಾಣಪತ್ರ ನೀಡಲು ವ್ಯವಸ್ಥೆ ಮಾಡಲಾಗುವುದು’ ಎಂದರು.

    ಚಂದ್ರಪ್ಪ ಇಟಗಿ, ರೇಣುಕಾ ತಳವಾರ, ಮಧು ವಡ್ಡಮ್ಮನವರ, ರಮೇಶ ವಡ್ಡಮ್ಮನವರ, ಉಮೇಶ ತಳವಾರ, ಹನುಮಂತಪ್ಪ ಕಿರಗೇರಿ, ರಮೇಶ ಹೊನ್ನಜ್ಜಿ, ನಾಗರಾಜ ಕೂಲೇರ, ರಮೇಶ ಆರ್., ಶಾಂತಾ ತಳವಾರ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts