ಬೆಂಗಳೂರು-ಕರ್ನಾಟಕ ಬಂದ್ ಬಳಿಕವೂ ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ: ಕೆಆರ್​ಎಸ್ ಡ್ಯಾಮ್​ಗೇ ಮುತ್ತಿಗೆ ಯತ್ನ

Protest (1)
Published on

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿರುವುದನ್ನು ವಿರೋಧಿಸಿ ಒಂದರ ಮೇಲೊಂದರಂತೆ ಬೆಂಗಳೂರು ಹಾಗೂ ಕರ್ನಾಟಕ ಬಂದ್​ ನಡೆಸಿದ್ದರೂ ಕಾವೇರಿ ನೀರು ತಮಿಳುನಾಡಿಗೆ ಹರಿದುಹೋಗುತ್ತಿರುವುದು ನಿಂತಿಲ್ಲ. ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಇಂದು ಕೆಆರ್​​ಎಸ್​ ಡ್ಯಾಮ್​ಗೇ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ರಾಷ್ಟ್ರೀಯ ಪ್ರಜಾಪ್ರಭುತ್ವ ಸೇನೆ ನೇತೃತ್ವದಲ್ಲಿ ಇಂದು ಮಂಡ್ಯಕ್ಕೆ ಬಂದಿದ್ದ ಹೋರಾಟಗಾರರು, ಕೆಆರ್​ಎಸ್ ಡ್ಯಾಮ್ ಎದುರು ಪ್ರತಿಭಟನೆ ನಡೆಸಿದರು. ಬೆಂಗಳೂರಿನಿಂದ ಬಂದಿದ್ದ ಈ ಹೋರಾಟಗಾರರು ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕನ್ನಡ ಬಾವುಟ ಹಿಡಿದು ಬಂದಿದ್ದ ಈ ಹೋರಾಟಗಾರರು ಬಳಿಕ ಕೆಆರ್​ಎಸ್​ ಡ್ಯಾಮ್​ನ ಮುಖ್ಯದ್ವಾರದ ಬಳಿ ತೆರಳಲು ನುಗ್ಗಿದರು. ಆ ಮೂಲಕ ಕೆಆರ್​ಎಸ್​ ಡ್ಯಾಮ್​ಗೇ ಮುತ್ತಿಗೆ ಹಾಕುವ ಪ್ರಯತ್ನ ಅವರದ್ದಾಗಿತ್ತು. ಆದರೆ ಕೂಡಲೇ ಎಚ್ಚೆತ್ತ ಪೊಲೀಸರು ಅವರನ್ನು ಗೇಟ್​ ಬಳಿಯೇ ತಡೆದು, ಬಂಧಿಸಿದರು. ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸುತ್ತಿದ್ದ ಅವರನ್ನು ಪೊಲೀಸ್ ವಾಹನದಲ್ಲಿ ತುಂಬಿ ಕರೆದೊಯ್ಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net