More

    ಖಾಸಗಿತನದ ರಕ್ಷಣೆ ಮುಖ್ಯ: ಅನುಮಾನ-ಗೊಂದಲಕ್ಕೆ ಆಸ್ಪದ ಬೇಡ

    ಸಾಮಾಜಿಕ ಮಾಧ್ಯಮದ ದೈತ್ಯಸಂಸ್ಥೆ ವಾಟ್ಸ್​ಆ್ಯಪ್​ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ. ವಾಟ್ಸ್​ಆ್ಯಪ್​ನ ಹೊಸ ನೀತಿಯಿಂದ ಬಳಕೆದಾರರ ಖಾಸಗಿತನ ಮತ್ತು ದತ್ತಾಂಶ ಸುರಕ್ಷತೆ ಕುರಿತು ಈಗಾಗಲೇ ಆತಂಕ ಸೃಷ್ಟಿಯಾಗಿದ್ದು, ಲಕ್ಷಾಂತರ ಜನರು ಈ ಆ್ಯಪ್​ಅನ್ನು ತೊರೆದಿದ್ದಾರೆ. ‘ಹೊಸ ನೀತಿಯನ್ನು ಒಪ್ಪಿ ಇಲ್ಲವೆ ಹೊರನಡೆಯಿರಿ’ ಎಂಬರ್ಥದ ನೇರಸಂದೇಶ ನೀಡಿದ ಪರಿಣಾಮ ವಾಟ್ಸ್​ಆ್ಯಪ್​ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಬಳಕೆದಾರರ ಮಾಹಿತಿಗಳನ್ನು ಫೇಸ್​ಬುಕ್ ಜತೆಗೆ ಹಂಚಿಕೊಳ್ಳಲಾಗುವುದು ಎಂದು ಅದು ಹೇಳಿದ್ದೇ ತಡ, ಜನರು ಇತರ ಆಪ್​ಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಬೆಳವಣಿಗೆಯಿಂದ ತೀವ್ರ ಇರಿಸುಮುರಿಸು ಅನುಭವಿಸಿದ ಸಂಸ್ಥೆ ಹೊಸ ನೀತಿಯ ಜಾರಿಯನ್ನು ಫೆಬ್ರವರಿ 8ರಿಂದ ಮೇ 15ಕ್ಕೆ ಮುಂದೂಡಿದೆ. ಫೆಬ್ರವರಿ 8ರಂದು ಯಾವುದೇ ಖಾತೆ ರದ್ದು ಅಥವಾ ಅಮಾನತು ಮಾಡುವುದಿಲ್ಲ ಎಂದು ತಿಳಿಸಿದೆ. ಈ ಮಧ್ಯೆ, ವಾಟ್ಸ್​ಆಪ್ ವೆಬ್ ಆವೃತ್ತಿಯ ಸಂದೇಶ ಮತ್ತು ಬಳಕೆದಾರರ ಮೊಬೈಲ್ ಸಂಪರ್ಕ ಸಂಖ್ಯೆಗಳು ಸೋರಿಕೆ ಆಗಿವೆ ಎನ್ನಲಾಗಿದ್ದು, ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ. ವಾಟ್ಸ್ ಆಪ್ ಬಳಕೆದಾರರ ದೂರವಾಣಿ ಸಂಖ್ಯೆಗಳು ಸಾರ್ವಜನಿಕ ಸರ್ಚ್​ನಲ್ಲಿ ಪ್ರಾಪ್ತವಾಗುತ್ತಿವೆ. ಗ್ರೂಪ್ ಲಿಂಕ್​ಗಳು ಗೂಗಲ್​ನಲ್ಲಿ ಸಿಗುತ್ತಿವೆ. ಇದರಿಂದ ಬಳಕೆದಾರರ ಸಂಪರ್ಕದಲ್ಲಿರುವ ಫೋನ್ ನಂಬರ್​ಗಳನ್ನು ಯಾರು ಬೇಕಾದರೂ ಪಡೆಯಬಹುದಾಗಿದ್ದು, ಸೈಬರ್ ಹ್ಯಾಕರ್​ಗಳ ಕೈಗೆ ಸಿಕ್ಕರೆ ಏನು ಗತಿ ಎಂಬ ಆತಂಕ ಸ್ವರ ಗಟ್ಟಿದನಿಯಲ್ಲಿ ಕೇಳಿಬರುತ್ತಿದೆ. ಕಳೆದ 24 ಗಂಟೆಗಳಲ್ಲಿ ಅನೇಕ ಬಳಕೆದಾರರಿಗೆ ಅಪರಿಚಿತ ಲಾಗಿನ್ ಒಟಿಪಿಗಳು ಬಂದಿವೆ. ಅಂದರೆ, ಅಪರಿಚಿತ ವ್ಯಕ್ತಿಗಳು ವಾಟ್ಸ್ ಆಪ್ ಚಾಟ್ ಖಾತೆಗಳ ಮಾಹಿತಿಯನ್ನು ಪಡೆಯಲು ಯತ್ನಿಸುತ್ತಿರುವುದು ಸ್ಪಷ್ಟ ಎಂಬುದು ಕೆಲ ಸೈಬರ್ ತಜ್ಞರ ಅಂಬೋಣ.

    ಮಾಹಿತಿ-ತಂತ್ರಜ್ಞಾನದ ಭರಾಟೆಯಲ್ಲಿ ಸಿಲುಕಿರುವ ಇಂದಿನ ದಿನಗಳಲ್ಲಿ ಬಹುತೇಕರು ತಾವಾಗಿಯೇ ವಿವಿಧ ಆಪ್​ಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವುದು ಹೌದಾದರೂ, ಖಾಸಗಿತನದ ರಕ್ಷಣೆ ಆಗಲೇಬೇಕು. ಮಾತುಕತೆ (ಚಾಟ್) ವಿವರಗಳಾಗಲಿ, ಸಂಪರ್ಕಸಂಖ್ಯೆಗಳಾಗಲಿ ಸೋರಿಕೆ ಆಗುವುದು ಅಕ್ಷಮ್ಯವೇ ಸರಿ. ವಾಟ್ಸ್​ಆಪ್ ಅಥವಾ ಫೇಸ್​ಬುಕ್ ಬಳಕೆದಾರರ ಮಾಹಿತಿಯನ್ನು ಏನು ಮಾಡುತ್ತವೆ, ಅದರಿಂದ ಏನೆಲ್ಲ ಪ್ರಯೋಜನ ಪಡೆಯುತ್ತವೆ ಎಂಬ ಸಂಗತಿ ಬಗ್ಗೆ ತುಂಬ ಸ್ಪಷ್ಟತೆ ಇನ್ನೂ ಮೂಡಿಲ್ಲ. ಆದರೆ, ಬದಲಾಗಿರುವ ಕಾಲಘಟ್ಟದಲ್ಲಿ ಜನರು ತಿಂಡಿ, ಊಟ ತರಿಸುವುದರಿಂದ ಹಿಡಿದು, ಬ್ಯಾಂಕಿಂಗ್ ವ್ಯವಹಾರಗಳವರೆಗೆ ಆಪ್​ಗಳನ್ನು ಅವಲಂಬಿಸಿದ್ದಾರೆ. ಅಲ್ಲದೆ, ದಿನದಿಂದ ದಿನಕ್ಕೆ ಇಂಥ ಆಪ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಕ್ಷೀಣಿಸುತ್ತಿಲ್ಲ.

    ಹಾಗಾಗಿ, ವಾಟ್ಸ್​ಆಪ್ ಸಂಸ್ಥೆ ಹೆಚ್ಚು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಾದ ಸಮಯವಿದು. ಬಳಕೆದಾರರಲ್ಲಿ ಸುರಕ್ಷತೆ ಅಥವಾ ಖಾಸಗಿತನ ಕುರಿತಂತೆ ಯಾವುದೇ ಅನುಮಾನಗಳು ಮೂಡದಂತೆ ಸೂಕ್ತ ಮಾಹಿತಿ, ತಿಳಿವಳಿಕೆ ನೀಡುವ ಕೆಲಸ ಸಂಸ್ಥೆಯಿಂದ ಆಗಬೇಕು. ಒಂದು ವೇಳೆ ಅದು ಸಮರ್ಪಕವಾಗಿ ಸ್ಪಂದಿಸದಿದ್ದಲ್ಲಿ ಸರ್ಕಾರವೇ ಮಧ್ಯಪ್ರವೇಶಿಸಿ ವಿವರಣೆ ಕೇಳಬೇಕು ಮತ್ತು ಲೋಪಗಳು ಸಂಭವಿಸಿದಲ್ಲಿ ಕ್ರಮಕ್ಕೆ ಮುಂದಾಗಬೇಕು. ಒಟ್ಟಾರೆ, ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಬಳಕೆದಾರರ ಖಾಸಗಿತನವನ್ನು ಗೌರವಿಸುವ ಬದ್ಧತೆ ಬಳಸಿಕೊಂಡರೆ ಬಹುತೇಕ ಸಮಸ್ಯೆ ಬಗೆಹರಿದಂತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts