More

    50 ಕೋಟಿ ಮೌಲ್ಯದ ಆಸ್ತಿ ದಾಖಲೆ ವಶ

    ಕೋಲಾರ: ಮಾಲೂರು ಶಾಸಕ ಹಾಗೂ ಕೋಚಿಮುಲ್​ ಅಧ್ಯಕ್ಷರು ಆಗಿರುವ ಕೆ.ವೈ.ನಂಜೇಗೌಡ ಅವರ ಮನೆ ಸೇರಿದಂತೆ 14 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡ ಸತತ 40 ತಾಸು ನಡೆಸಿರುವ ಶೋಧ ಸಂದರ್ಭದಲ್ಲಿ 25 ಲಕ್ಷ ರೂ ನಗದು, 50 ಕೋಟಿ ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿ ಸಂಬಂಧ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

    ಮಾಲೂರು ತಾಲೂಕು ವ್ಯಾಪ್ತಿಯಲ್ಲಿ ಸುಮಾರು 150 ಕೋಟಿ ರೂ. ಮೌಲ್ಯದ 80 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಲಾಗಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ&2002 ಪ್ರಕಾರ ನಂಜೇಗೌಡ ಹಾಗೂ ಅವರ ಸಂಪರ್ಕದಲ್ಲಿರುವ ವ್ಯಕ್ತಿಗಳ ಮನೆಗಳಲ್ಲಿ ಶೋಧ ನಡೆಸಿ ಜಪ್ತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
    ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ, ನಕಲಿ ಫಲಾನುಭವಿಗಳಿಗೆ ಮಂಜೂರು ಮಾಡಿ ಅಧಿಕಾರ ದುರುಪಯೋಗಿಸಿಕೊಂಡಿದ್ದಾರೆ. ಪ್ರಾದೇಶಿಕ ಆಯುಕ್ತರ ಪರಿಶೀಲನಾ ವರದಿ ಆಧಾರದ ಮೇಲೆ ಆ ಮಂಜೂರಾತಿ ರದ್ದಾಗಿದೆ. ಮಾರ್ಗಸೂಚಿ ಉಲ್ಲಂಘಿಸಿ ದಾಖಲೆಗಳನ್ನು ತಿರುಚಿ ಅಕ್ರಮವಾಗಿ ಜಮೀನನ್ನು ಮಂಜೂರು ಮಾಡಿರುವುದು ಶೋಧದ ವೇಳೆ ಪತ್ತೆಯಾಗಿದೆ. ಎಲ್ಲ ವಿಚಾರಗಳಲ್ಲಿ ತನಿಖೆ ಮುಂದುವರಿದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಅಕ್ರಮ ಭೂ ಮಂಜೂರಾತಿ ಪ್ರಕರಣ ಸಂಬಂಧ ಮಾಲೂರು ಠಾಣೆಯಲ್ಲಿ ಶಾಸಕ ನಂಜೇಗೌಡ ಹಾಗೂ ಇತರರ ವಿರುದ್ಧ ದಾಖಲಾಗಿರುವ ಎಫ್​ಐಆರ್​ ಆಧರಿಸಿ ತನಿಖೆ ನಡೆಸಲಾಗುತ್ತಿದೆ.
    ಸದ್ದು ಮಾಡಿದ್ದ ನೇಮಕಾತಿ ಪ್ರಕರಣ
    ಕೋಚಿಮುಲ್​ ಮೇಲೂ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ನೇಮಕಾತಿ ಪ್ರಕ್ರಿಯೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಜತೆಗೆ ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. 75 ಹುದ್ದೆಗಳ ನೇಮಕಾತಿಯಲ್ಲಿ ಪ್ರತಿ ಹುದ್ದೆ 20 ಲಕ್ಷದಿಂದ 30 ಲಕ್ಷಕ್ಕೆ ಮಾರಾಟವಾಗಿರುವ ಕುರಿತು ಒಕ್ಕೂಟದ ನಿರ್ದೇಶಕರು ಮತ್ತು ನೇಮಕಾತಿ ಸಮಿತಿಯ ಸದಸ್ಯರು ಶೋಧ ಹಾಗೂ ಜಪ್ತಿ ಪ್ರಕ್ರಿಯೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
    ಹಂತಹಂತವಾಗಿ ನಿರ್ದೇಶಕರ ವಿಚಾರಣೆ
    ಕೋಚಿಮುಲ್​ ಒಕ್ಕೂಟದ 75 ಹುದ್ದೆಗಳ ಭರ್ತಿಗೆ ನಡೆದ ನೇಮಕಾತಿ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಹರಿದಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಡಿ ಅಧಿಕಾರಿಗಳು ಒಕ್ಕೂಟದ ನಿರ್ದೇಶಕರಾದ ಚಿಂತಾಮಣಿ ವೈ.ಬಿ.ಅಶ್ವತ್ಥನಾರಾಯಣ, ಗುಡಿಬಂಡೆ ನಾರಾಯಣರೆಡ್ಡಿ, ಬಾಗೇಪಲ್ಲಿ ಮಂಜುನಾಥ್​ ರೆಡ್ಡಿ ಹಾಗೂ ಚಿಕ್ಕಬಳ್ಳಾಪುರ ಭರಣಿ ವೆಂಕಟೇಶ್​ ಅವರನ್ನು ವಿಚಾರಣೆಗೆ ಒಳಪಡಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅಧ್ಯಕ್ಷರು ಸೇರಿದಂತೆ 4 ಮಂದಿ ನಿರ್ದೇಶಕರ ವಿಚಾರಣೆ ನಡೆದಿದ್ದು ಅಗತ್ಯವಿದ್ದಲ್ಲಿ ಮತ್ತೆ ವಿಚಾರಣೆಗೆ ಕರೆದಾಗ ಬರಬೇಕು ಎಂದು ಸೂಚಿಸಿದ್ದಾರೆ. ನಿರ್ದೇಶಕರನ್ನು ಹಂತಹಂತವಾಗಿ ವಿಚಾರಣೆಗೆ ಒಳಪಡಿಸುತ್ತಿರುವುದರಿಂದ ಇತರ ನಿರ್ದೇಶಕರಲ್ಲಿ ಆತಂಕ ಮನೆ ಮಾಡಿದ್ದು, ನೇಮಕಾತಿಯಲ್ಲಿ ಎಲ್ಲ ನಿರ್ದೇಶಕರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ನೇಮಕಾತಿಯಲ್ಲಿ ಆಗಿರುವ ಅಕ್ರಮ ವಿಚಾರಣೆಯಲ್ಲಿ ಸಾಬೀತಾಗಿದ್ದು, 75 ಮಂದಿ ಅಭ್ಯರ್ಥಿಗಳನ್ನೂ ಇಡಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ಈ ಸಂಬಂಧ ಅಭ್ಯರ್ಥಿಗಳು ತಮ್ಮ ಕುಟುಂಬದ ಸದಸ್ಯರ ಒಂದು ವರ್ಷದ ಬ್ಯಾಂಕ್​ ವಹಿವಾಟಿನ ಮಾಹಿತಿ ಸಲ್ಲಿಸುವಂತೆ ಇಡಿ ಸೂಚಿಸಿದ್ದಾರೆ.
    ಸ್ವ&ಇಚ್ಚೆಯಿಂದ ರಾಜೀನಾಮೆ ನೀಡುವರೆ..?
    ನೇಮಕಾತಿ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಪಟ್ಟಿಗೂ ಒಕ್ಕೂಟಕ್ಕೂ ಸಂಬಂಧವಿಲ್ಲ, ಇದು ಸಾಬೀತಾದರೆ ಆಡಳಿತ ಮಂಡಳಿಯವರು ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದರು. ಈ ಸಂಬಂಧ ಆಡಳಿತ ಮಂಡಳಿಯವರು ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಯಾವುದೇ ಅವ್ಯಹಾರ ನಡೆದಿಲ್ಲ, ಪಾರದರ್ಶಕವಾಗಿ ನಡೆದಿದೆ ಎಂದು ಹೇಳಿದ್ದರು. ಇಡಿ ತನಿಖೆಯಲ್ಲಿ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಾಬೀತು ಆಗಿರುವುದರಿಂದ ಆಡಳಿತ ಮಂಡಳಿಯವರು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡುವರೆ ಎಂಬುದನ್ನು ಕಾದು ನೋಡಬೇಕಾಗಿದೆ.

    50 ಕೋಟಿ ಮೌಲ್ಯದ ಆಸ್ತಿ ದಾಖಲೆ ವಶ
    ಕೆ.ವೈ.ನಂಜೇಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts