More

    ಭರವಸೆಯ ಬೆಳವಣಿಗೆ; ಶಾಂತಿಯತ್ತ ಜಮ್ಮು-ಕಾಶ್ಮೀರ

    ಜಮ್ಮು-ಕಾಶ್ಮೀರ ಎಂದಾಕ್ಷಣ ಭಯೋತ್ಪಾದಕರ ಹಾವಳಿ, ಹಿಂಸೆ, ಪ್ರಕ್ಷುಬ್ಧ ಸ್ಥಿತಿ, ಪ್ರತ್ಯೇಕತಾವಾದಿಗಳ ರಾಷ್ಟ್ರವಿರೋಧಿ ಕೃತ್ಯಗಳೇ ಸುದ್ದಿಯಲ್ಲಿ ಇರುತ್ತಿದ್ದವು. ಕಳೆದ ಏಳು ದಶಕಗಳಲ್ಲಿ ಈ ಭಾಗ ಎದುರಿಸಿದ ಭಯೋತ್ಪಾದಕ ದಾಳಿಗಳು, ಸಾವುನೋವುಗಳು ಅಸಂಖ್ಯ. ಈ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಸಾಮಾನ್ಯ ಸಂಗತಿ ಆಗಿರಲಿಲ್ಲ. ಬದಲಾವಣೆಯ ನಿಟ್ಟಿನಲ್ಲಿ ಸಾಹಸದ ಒಂದೊಂದೇ ಹೆಜ್ಜೆಗಳನ್ನು ಇರಿಸಬೇಕಿತ್ತು. ಆ ಕೆಲಸವನ್ನು ಕೇಂದ್ರ ಸರ್ಕಾರ ಬಹು ತಾಳ್ಮೆ ಮತ್ತು ವಿವೇಚನೆಯಿಂದ ಮಾಡಿತು, ಪರಿಣಾಮ, ಜಮ್ಮು-ಕಾಶ್ಮೀರದ ಸ್ಥಿತಿ ಬದಲಾಗುತ್ತಿದೆ. ಗುಂಡಿನ ಆರ್ಭಟ ಕಡಿಮೆಯಾಗುತ್ತಿದೆ. 2020ರ ಮೊದಲ ಮೂರು ತಿಂಗಳಿಗೆ ಹೋಲಿಸಿದರೆ ಜಮ್ಮು-ಕಾಶ್ಮೀರದಲ್ಲಿ ಈ ವರ್ಷ ಶೇಕಡ 25ರಷ್ಟು ಭಯೋತ್ಪಾದನಾ ಕೃತ್ಯಗಳು ಕಡಿಮೆ ಆಗಿವೆ. ಅಷ್ಟೇ ಅಲ್ಲ, ಉಗ್ರ ಸಂಘಟನೆಗಳಿಗೆ ಸೇರುವವರ ಸಂಖ್ಯೆಯೂ ತಗ್ಗಿದ್ದು, ಈ ವರ್ಷದಲ್ಲಿ ಈವರೆಗೆ 20 ಯುವಕರು ಉಗ್ರ ಸಂಘಟನೆಗಳಿಗೆ ಸೇರಿದ್ದಾರೆ. 2018ರಲ್ಲಿ 201, 2019ರಲ್ಲಿ 140, 2020ರಲ್ಲಿ 167 ಮಂದಿ ಭಯೋತ್ಪಾದನಾ ಗುಂಪುಗಳಿಗೆ ಸೇರಿದ್ದರು.

    ಶೇಕಡ 25ರಷ್ಟು ಭಯೋತ್ಪಾದನಾ ಕೃತ್ಯಗಳು ಕಡಿಮೆ ಆಗಿರುವುದರಿಂದ ಬರಲಿರುವ ನಾಳೆಗಳು ಕ್ರಮೇಣ ಶಾಂತಿಯಿಂದ ಕೂಡಿರಲಿವೆ ಎಂಬ ಆಶಾವಾದವನ್ನು ಮೂಡಿಸಿವೆ. ಯುವಕರು ಭಯೋತ್ಪಾದನೆ ಸಂಘಟನೆಗಳನ್ನು ಸೇರದಂತೆ, ಈಗಾಗಲೇ ಸೇರಿರುವ ಉಗ್ರರ ಮನಪರಿವರ್ತನೆ ಮಾಡಿ ಮುಖ್ಯವಾಹಿನಿಗೆ ತರುವ, ಅವರಿಗೆ ಪುನರ್ವಸತಿ ಕಲ್ಪಿಸುವ ಪ್ರಯತ್ನಗಳು ತುಂಬ ವ್ಯವಸ್ಥಿತವಾಗಿ ನಡೆಯುತ್ತಿವೆ. ಹಲವು ಉಗ್ರ ಸಂಘಟನೆಗಳು ಯುವಕರನ್ನು ಪ್ರಚೋದಿಸಿ, ಹಿಂಸಾಕೃತ್ಯಗಳಲ್ಲಿ ತೊಡಗಿಸುತ್ತವೆ. ಹಾಗಾಗಿ, ಉಗ್ರರ ಕುಟುಂಬಸದಸ್ಯರ ಮೂಲಕವೇ ಅಂಥ ಯುವಕರ ಮನವೊಲಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಶರಣಾದ ಉಗ್ರರಿಗೆ ಉದ್ಯೋಗ ಅಥವಾ ಸ್ವಉದ್ಯೋಗ ಕೈಗೊಳ್ಳಲು ನೆರವು ಕಲ್ಪಿಸುತ್ತಿದೆ.

    ಕಾಶ್ಮೀರವನ್ನು ಭಾರತದ ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ಪ್ರಮುಖ ಅಡ್ಡಿಯಾಗಿದ್ದು ‘ವಿಶೇಷ ಸ್ಥಾನಮಾನ’ (370ನೇ ವಿಧಿ). ಆದರೆ, ಕೇಂದ್ರ ಸರ್ಕಾರ 2019ರ ಆಗಸ್ಟ್​ನಲ್ಲಿ ವಿಶೇಷ ಸ್ಥಾನಮಾನ ಹಿಂಪಡೆಯುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿತು. ಅದು ಪ್ರತ್ಯೇಕತಾವಾದಿಗಳಿಗೆ ನೀಡಿದ ಭಾರಿ ಆಘಾತವಾಗಿತ್ತು. ಕಾಶ್ಮೀರ ಮತ್ತು ಲಡಾಖ್ ಎರಡನ್ನೂ ಕೇಂದ್ರಾಡಳಿತ ಪ್ರದೇಶವಾಗಿಸಲಾಗಿದೆ. ಕಾಶ್ಮೀರ ರಾಜಧಾನಿ ದೆಹಲಿಯಂತೆ ವಿಧಾನಸಭೆಯನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಿದೆ. ಈ ಕ್ರಮಗಳು ಬದಲಾವಣೆ ನಿಟ್ಟಿನಲ್ಲಿ ಇರಿಸಿದ ಮಹತ್ವದ ಹೆಜ್ಜೆಗಳಾದವು.

    ಭಯೋತ್ಪಾದನೆ ಅಂತ್ಯಗೊಂಡರೆ ಅಭಿವೃದ್ಧಿಯ ಹೊಸ ಅಧ್ಯಾಯವೂ ತೆರೆದುಕೊಳ್ಳುತ್ತದೆ. ಕಾಶ್ಮೀರ ಅಂಥ ಸರ್ವಾಂಗೀಣ ಅಭಿವೃದ್ಧಿಗಾಗಿ ಏಳು ದಶಕಗಳಿಂದಲೂ ಕಾಯುತ್ತಿದೆ. ಅಲ್ಲಿ ಶಾಂತಿ ನೆಲೆಸಲು ಸಾಧ್ಯವಾದರೆ ಭಾರತ ದೀರ್ಘಾವಧಿಯ ಸಮಸ್ಯೆಯ ವಿರುದ್ಧ ವಿಜಯ ಸಾಧಿಸಿದಂತೆಯೇ.

    ಅಷ್ಟೇ ಅಲ್ಲ, ಭಯೋತ್ಪಾದನೆ ವಿರೋಧಿ ಹೋರಾಟಕ್ಕೂ ಮತ್ತಷ್ಟು ಬಲ ಬಂದು, ಭಾರತದ ಶಕ್ತಿ ಮತ್ತಷ್ಟು ಹೆಚ್ಚಲಿದೆ. ಆದರೆ, ಕಾಶ್ಮೀರದಲ್ಲಿ ಉಗ್ರರ ಹೆಡೆಮುರಿ ಕಟ್ಟಲು ಇನ್ನಷ್ಟು ಕಾಲ ಹೋರಾಡಬೇಕಿದ್ದು, ಅಂತಿಮ ಗೆಲುವು ಶಾಂತಿ ಮತ್ತು ಅಭಿವೃದ್ಧಿಗೆ ಎಂಬ ವಿಶ್ವಾಸ ಮುಖ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts