More

    ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕುತ್ತು

    ಹುಬ್ಬಳ್ಳಿ: ಕೋವಿಡ್​ನಿಂದಾಗಿ ಬಡ ಕುಟುಂಬದವರು ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಮಧ್ಯೆ ಸರ್ಕಾರಿ ಶಾಲೆಗಳಲ್ಲಿಯೂ ಸ್ಮಾರ್ಟ್ ಫೋನ್ ಮೂಲಕ ಮಕ್ಕಳಿಗೆ ಆನ್​ಲೈನ್ ತರಗತಿ ಬೋಧಿಸುತ್ತಿರುವುದು ಬಡ ಪಾಲಕರ ಸಂಕಟವನ್ನು ಮತ್ತಷ್ಟು ಹೆಚ್ಚಿಸಿದೆ.

    ಸರ್ಕಾರದ ಈ ನಿಲುವು ಬಡ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಬಹುದೆಂಬ ಆತಂಕ ಎದುರಾಗಿದೆ. ಕೂಲಿ ಮಾಡಿ ಕುಟುಂಬ ನಿರ್ವಹಿಸುವ ಬಡವರು ತಮ್ಮ ಮಕ್ಕಳ ಕಲಿಕೆಗಾಗಿ ಸ್ಮಾರ್ಟ್ ಫೋನ್ ಖರೀದಿಸುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

    ಸರ್ಕಾರಿ ಶಾಲೆಗಳನ್ನೇ ನೆಚ್ಚಿಕೊಂಡ ಬಡ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ಕೈಗೆಟುಕದ ನಕ್ಷತ್ರದಂತಾಗುವ ಭೀತಿ ಎದುರಾಗಿದೆ. ಕೋವಿಡ್ 3ನೇ ಅಲೆಯ ಮುನ್ನೆಚ್ಚರಿಕೆಯಿಂದಾಗಿ ಸರ್ಕಾರ ಜಾರಿಗೆ ತಂದಿರುವ ನಿಯಮಗಳು ಬಡ ವಿದ್ಯಾರ್ಥಿಗಳನ್ನು ಕಲಿಕೆಯಿಂದ ಹಿಂದೆ ಉಳಿಯುವಂತೆ ಮಾಡುವುದಷ್ಟೇ ಅಲ್ಲದೆ, ಅವರಿಂದ ಶಿಕ್ಷಣವನ್ನು ದೂರವಾಗಿಸುತ್ತಿವೆ.

    ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಸದ್ಯ ಆನ್​ಲೈನ್ ಮೂಲಕ ಶಿಕ್ಷಣ ಸಾಗಿದೆ. ಮೊಬೈಲ್​ಫೋನ್ ಮೂಲಕವೇ ಪಾಠಗಳನ್ನು ಬೋಧಿಸಲಾಗುತ್ತಿದೆ. ಜೂಮ್ ಮೀಟ್, ಗೂಗಲ್ ಮೀಟ್, ಟೀಚ್ ಮಿಂಟ್ ಮೊದಲಾದ ಆಪ್​ಗಳ ಮೂಲಕ ಆನ್​ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಆಪ್​ಗಳನ್ನು ಡೌನ್​ಲೋಡ್ ಮಾಡಿಕೊಂಡು ಕಲಿಕೆಗೆ ಮುಂದಾಗಬೇಕಾದರೆ ಸ್ಮಾರ್ಟ್​ಫೋನ್ ಬೇಕೇಬೇಕು. ಖಾಸಗಿ ಮಾತ್ರವಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಕೂಡ ಇದೇ ರೀತಿ ಬೋಧನೆ ಸಾಗಿದೆ. ಈ ಆಪ್​ಗಳನ್ನು ಡೌನ್​ಲೋಡ್ ಮಾಡಿಕೊಂಡು ಕಲಿಯುವುದನ್ನು ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸುತ್ತಿದ್ದಾರೆ. ಹೀಗಾಗಿ, ಮೊದಲೇ ಆರ್ಥಿಕ ತೊಂದರೆಯಲ್ಲಿರುವ ಪಾಲಕರಿಗೆ ಇದು ಸಂಕಷ್ಟ ತರುತ್ತಿದೆ. ಸ್ವಂತಕ್ಕೇ ಸ್ಮಾರ್ಟ್ ಫೋನ್ ಖರೀದಿಸಲು ತೊಂದರೆ ಎದುರಿಸುವವರು ತಮ್ಮ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಡಿಸಲಾಗದೆ ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮಕ್ಕಳನ್ನು ಶಾಲೆ ಬಿಡಿಸುವ ನಿಟ್ಟಿನಲ್ಲಿಯೂ ಪಾಲಕರು ಆಲೋಚಿಸುವಂತಾಗಿದೆ.

    ಇದಕ್ಕೆ ಪ್ರತಿಕ್ರಿಯಿಸುವ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸ್ಮಾರ್ಟ್ ಫೋನ್ ಕಡ್ಡಾಯವಲ್ಲ ಎನ್ನುತ್ತಿದ್ದಾರೆ. ಸ್ಮಾರ್ಟ್ ಫೋನ್ ಇಲ್ಲದವರು ದೂರದರ್ಶನ, ರೇಡಿಯೋ ಮೂಲಕವೂ ಶಿಕ್ಷಣ ಪಡೆಯಬಹುದೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

    ಆದರೆ, ಈ ರೀತಿ ಮಾಡುವುದು ತಾರತಮ್ಯಕ್ಕೆ ಅವಕಾಶ ಮಾಡಿಕೊಡುತ್ತದೆ. ಸ್ಮಾರ್ಟ್ ಫೋನ್ ಇದ್ದವರು ಅದರಲ್ಲಿ ಕಲಿಯಲಿ, ಇಲ್ಲದವರು ವಂಚಿತರಾಗಲಿ ಎಂಬ ಧೋರಣೆಯನ್ನು ಇದು ತೋರಿಸಿಕೊಡುತ್ತದೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುವವರು ಬಹುತೇಕವಾಗಿ ಬಡವರ ಮಕ್ಕಳಾಗಿದ್ದು, ಸ್ಮಾರ್ಟ್ ಫೋನ್ ಖರೀದಿಸಲೇಕೆಂಬ ಒತ್ತಡವೂ ಅವರ ಮೇಲೆ ಉಂಟಾಗುತ್ತದೆ ಎಂಬುದು ಪಾಲಕರ ದೂರಾಗಿದೆ.

    ಬಡ ವಿದ್ಯಾರ್ಥಿಗಳು ಅಕ್ಕಪಕ್ಕದ ಮನೆಗಳಿಗೆ ತೆರಳಿ ದೂರದರ್ಶನ ನೋಡಬಹುದು, ಸ್ಮಾರ್ಟ್​ಫೋನ್ ಇರುವವರ ಬಳಿ ಕೇಳಿ ಪಡೆಯಬಹುದು, ಮಕ್ಕಳು ಗುಂಪಾಗಿ ಸ್ಮಾರ್ಟ್​ಫೋನ್ ಪಡೆದು ನೋಡಬಹುದು ಎಂಬಂತಹ ಸಲಹೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡುತ್ತಿದ್ದಾರೆ. ಆದರೆ, ಪ್ರತಿನಿತ್ಯ ಬೇರೆ ಮನೆಯವರ ಮೇಲೆ ಅವಲಂಬಿಸಬೇಕಾದ ಇಂತಹ ಸಲಹೆಗಳು ಕಾರ್ಯರೂಪಕ್ಕೆ ಬರುವಂತಹವು ಅಲ್ಲ ಎಂಬುದು ಬಡ ಪಾಲಕರ ಗೋಳಾಗಿದೆ.

    ತರಗತಿಯಲ್ಲಿ ಶಿಕ್ಷಕರು ಕಲಿಸಿದ್ದನ್ನೇ ಮಕ್ಕಳು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಆನ್​ಲೈನ್​ನಲ್ಲಿ ಪಾಠ ಕೇಳಿದರೆ ಮಕ್ಕಳಿಗೆ ಹೇಗೆ ಅರ್ಥವಾಗಬೇಕು ? ಸುಮಾರು ಒಂದೂವರೆ ವರ್ಷದಿಂದ ಮಕ್ಕಳು ಬೋಧನೆಯಿಂದ ದೂರ ಇದ್ದಾರೆ. ಸರ್ಕಾಋ ಶೀಘ್ರ ಶಾಲೆಗಳನ್ನು ಆರಂಭಿಸಲಿ.

    | ಪ್ರದೀಪ ಲೋಕೂರ, ಪಾಲಕ

    ಕೋವಿಡ್​ನಿಂದಾಗಿ ಶಾಲೆಗಳು ಬಂದ್ ಆದಾಗಿನಿಂದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಇಲಾಖೆ ಅಧಿಕಾರಿಗಳು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆನ್​ಲೈನ್ ಬೋಧನೆಗೆ ಸಾಧಕ ಬಾಧಕಗಳಿದ್ದು, ಅನಿಶ್ಚಿತತೆ, ಸಂದಿಗ್ಧ ಸಂದರ್ಭದಲ್ಲಿ ಈ ವ್ಯವಸ್ಥೆ ಅನಿವಾರ್ಯ. ಗ್ರಾಮೀಣ ಪ್ರದೇಶದ ಪಾಲಕರು ಸಂಕಷ್ಟಗಳ ಮಧ್ಯೆಯೂ 5- 6 ಮಕ್ಕಳ ಗುಂಪು ಅಧ್ಯಯನಕ್ಕೆ ಆದ್ಯತೆ ನೀಡಬೇಕು. ಮೊಬೈಲ್ ಎಂಬ ಮಾಯಾವಸ್ತುವನ್ನು ಮಕ್ಕಳ ಕೈಗೆ ನೀಡುವ ಪಾಲಕರು ಅವರ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು.

    | ಡಾ. ಆನಂದ ಪಾಂಡುರಂಗಿ, ಖ್ಯಾತ ಮನೋವೈದ್ಯ

    ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವ ಕುಟುಂಬದವರು ಸಾಮಾನ್ಯವಾಗಿ ಬಡತನ ರೇಖೆಗಿಂತ ಕೆಳಗೆ ಇರುತ್ತಾರೆ. ಮನೆಯಲ್ಲಿ ಇಬ್ಬರು, ಮೂವರು ಮಕ್ಕಳು ಇರುತ್ತಾರೆ. ಅವರೆಲ್ಲರಿಗೂ ಸ್ಮಾರ್ಟ್ ಫೋನ್ ಕೊಡಿಸಲು ಆಗುವುದಿಲ್ಲ. ಕರೊನಾ ಸೋಂಕಿನಿಂದಾಗಿ ಇದ್ದ ಕೆಲಸವೂ ಹೋಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಡಿಸಲು ಸಾಧ್ಯವಿಲ್ಲ.

    | ಅಕ್ಬರಅಲಿ ಕುಂದಗೋಳ, ಎಸ್​ಡಿಎಂ ಸದಸ್ಯ, ಗಾರ್ಡನ್​ಪೇಟ ಗಂಡು ಮಕ್ಕಳ ಉರ್ದು ಶಾಲೆ

    ಆನ್​ಲೈನ್​ನಲ್ಲಿ ತರಗತಿಗಳನ್ನು ನಡೆಸುತ್ತಿಲ್ಲ. ಕೇವಲ ಬ್ರಿಜ್ ಕೋರ್ಸ್ ಮಾಡುತ್ತಿದ್ದೇವೆ. ಕಲಿಕೆಯಲ್ಲಿ ಹಿಂದುಳಿದ ಹಿಂದಿನ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದೇವೆ. ಪ್ರಸಕ್ತ ಸಾಲಿನ ತರಗತಿ ಬಗ್ಗೆ ಪಾಠ ಮಾಡುತ್ತಿಲ್ಲ.

    | ಮೋಹನಕುಮಾರ ಹಂಚಾಟೆ, ಡಿಡಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts