More

    ಆರ್​ಟಿಒ ಅಲೆದಾಟ ಸಂಕಟ: 6 ತಿಂಗಳು ಅಲೆದರೂ ಡಿಎಲ್ ಸಿಗಲ್ಲ; ದಂಡ ಪಾವತಿಯಲ್ಲೂ ಕಳ್ಳಾಟ..

    ಕೀರ್ತಿನಾರಾಯಣ ಸಿ. ಬೆಂಗಳೂರು/ ನವೀನ್ ಬಿಲ್ಗುಣಿ ಶಿವಮೊಗ್ಗ

    ಸರ್ಕಾರ ವಿವಿಧ ಸಾರ್ವಜನಿಕ ಸೇವೆಗಳ ಲಭ್ಯತೆಯನ್ನು ಸರಳಗೊಳಿಸಲು ಎಷ್ಟೇ ತಂತ್ರಜ್ಞಾನ, ತಂತ್ರಾಂಶಗಳ ಮೊರೆ ಹೋಗಿದ್ದರೂ, ಜನರು ತಮ್ಮ ಅಗತ್ಯ ಕೆಲಸಕಾರ್ಯಗಳಿಗಾಗಿ ಚಪ್ಪಲಿ ಸವೆಸುವ ಅಲೆದಾಟಕ್ಕೆ ಮುಕ್ತಿ ಸಿಗುತ್ತಿಲ್ಲ. ಆರ್​ಟಿಒಗಳಲ್ಲಂತೂ ಈ ಪಡಿಪಾಟಲು ಅಕ್ಷರಶಃ ನಿಜ. ಕೆಲವೇ ದಿನಗಳಲ್ಲಿ ಸಿಗಬೇಕಾದ ಕಲಿಕಾ ಚಾಲನಾ ಪರವಾನಗಿ (ಎಲ್​ಎಲ್) ಮತ್ತು ಚಾಲನಾ ಪರವಾನಗಿ (ಡಿಎಲ್) ಪಡೆಯುವುದಕ್ಕೂ ಆರು ತಿಂಗಳ ಕಾಲ ಕಾಯುವಂಥ ಪರಿಸ್ಥಿತಿ ವಾಸ್ತವ. ಇನ್ನೊಂದೆಡೆ ಸಂಚಾರ ನಿಯಮ ಉಲ್ಲಂಘಿಸುವವರ ಜತೆ ಅಧಿಕಾರಿಗಳು ಶಾಮೀಲಾಗುತ್ತಿರುವ ಕಾರಣ ಸಾರಿಗೆ ಇಲಾಖೆಗೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ.

    ಆರ್​ಟಿಒ ಅಲೆದಾಟ ಸಂಕಟ: 6 ತಿಂಗಳು ಅಲೆದರೂ ಡಿಎಲ್ ಸಿಗಲ್ಲ; ದಂಡ ಪಾವತಿಯಲ್ಲೂ ಕಳ್ಳಾಟ..ಪರವಾನಗಿ ರಗಳೆ: ಸಿಬ್ಬಂದಿ ಕೊರತೆ, ಸರ್ವರ್ ಸಮಸ್ಯೆ ಹಾಗೂ ಸ್ಲಾಟ್ ವಿಳಂಬದಿಂದಾಗಿ ರಾಜ್ಯದ ಬಹುತೇಕ ಆರ್​ಟಿಒಗಳಲ್ಲಿ ಎಲ್​ಎಲ್ ಪಡೆಯುವುದಕ್ಕೆ ಒಂದೂವರೆ ತಿಂಗಳು ಹಾಗೂ ಡಿಎಲ್​ಗೆ ಕನಿಷ್ಠ 6 ತಿಂಗಳು ಕಾಯುವ ಪರಿಸ್ಥಿತಿ ಇದೆ. ಚಾಲನಾ ಪರೀಕ್ಷೆಯಲ್ಲಿ ವಿಫಲರಾದರೆ ಮತ್ತೆರಡು ತಿಂಗಳು ಕಾಯುವುದು ಅನಿವಾರ್ಯ. ನಿಯಮದ ಪ್ರಕಾರ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿದ ಕನಿಷ್ಠ 40 ದಿನದೊಳಗೆ ಚಾಲನಾ ಪರವಾನಗಿ ನೀಡಬೇಕು. ಆದರೆ ಬಹಳಷ್ಟು ಆರ್​ಟಿಒ ಕಚೇರಿಗಳಲ್ಲಿ ಡಿಎಲ್ ಪಡೆಯಲು ಕನಿಷ್ಠ 6 ತಿಂಗಳು ತಗುಲುತ್ತಿದೆ. ಅಷ್ಟೇ ಅಲ್ಲ ಕಲಿಕಾ ಪರವಾನಗಿ ಪರೀಕ್ಷೆ ಹಾಗೂ ಚಾಲನಾ ಪರವಾನಗಿ ಪರೀಕ್ಷೆಗೆ ಸ್ಲಾಟ್ ಪಡೆಯುವುದಕ್ಕೂ ತಲಾ 50-60 ದಿನಗಳು ತಗುಲುತ್ತಿವೆ.

    ಸಾರ್ವಜನಿಕರು ಎಲ್​ಎಲ್ ಪರೀಕ್ಷೆಗೆ ಆನ್​ಲೈನ್​ನಲ್ಲಿ ಸಮಯ ನಿಗದಿ ಪಡಿಸಿಕೊಳ್ಳಬೇಕು. ಇದಕ್ಕೆ 2 ರಿಂದ 7 ದಿನದಲ್ಲಿ ಸ್ಲಾಟ್ ಸಿಗಬೇಕು. ಆದರೆ, 50-60 ದಿನ ಬೇಕಾಗುತ್ತಿದೆ. ಎಲ್​ಎಲ್ ಪರೀಕ್ಷೆ ಉತ್ತೀರ್ಣರಾದ 1 ತಿಂಗಳ ಬಳಿಕ ಡಿಎಲ್​ಗೆ ಸ್ಲಾಟ್ ಪಡೆಯಬೇಕು. ಆದರೆ, ಅನೇಕ ತಿಂಗಳು ಕಾಯಬೇಕಾದ ಪರಿಸ್ಥಿತಿ ಇದೆ. ಮೂಲಸೌಕರ್ಯ, ಸಿಬ್ಬಂದಿ ಕೊರತೆಯ ಜತೆಗೆ ಡ್ರೖೆವಿಂಗ್ ಸ್ಕೂಲ್​ಗಳ ಲಾಬಿಯಿಂದಾಗಿ ಸ್ಲಾಟ್ ಸಿಗುತ್ತಿಲ್ಲ. ಕರೊನಾ ಸಂದರ್ಭದಲ್ಲಿ ಕಚೇರಿಗಳು ಬಂದ್ ಆಗಿದ್ದರಿಂದ ಈಗ ಡಿಎಲ್, ಎಲ್​ಎಲ್​ಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. 2021ರ ಫೆಬ್ರವರಿವರೆಗೂ ಈಗಾಗಲೇ ಹಲವು ಆರ್​ಟಿಒ ಕಚೇರಿಗಳಲ್ಲಿ ಡಿಎಲ್​ಗೆ ಸ್ಲಾಟ್ ಬುಕ್ ಆಗಿದೆ. ಹಾಗಾಗಿ 2-3 ತಿಂಗಳ ಹಿಂದೆ ಅರ್ಜಿ ಸಲ್ಲಿಸಿ ಎಲ್​ಎಲ್​ಆರ್ ಪಡೆದವರು ಫೆಬ್ರವರಿವರೆಗೂ ಡಿಎಲ್​ಗೆ ಕಾಯುವಂತಾಗಿದೆ.

    ಕನಿಷ್ಠ 30 ನಿಮಿಷ ಬೇಕು: ಒಂದು ಆರ್​ಟಿಒದಲ್ಲಿ ಇಬ್ಬರು ಇನ್​ಸ್ಪೆಕ್ಟರ್​ಗಳಿರುತ್ತಾರೆ. ಪ್ರತಿನಿತ್ಯ 30ರಿಂದ 50 ಜನರಿಗಷ್ಟೇ ಎಲ್​ಎಲ್ ಅಥವಾ ಡಿಎಲ್ ಮಾಡಿಕೊಡಲಾಗುತ್ತಿದೆ. ಒಂದು ಡಿಎಲ್ ಪರೀಕ್ಷೆಗೆ (ಕಾರು/ಬೈಕ್) ಕನಿಷ್ಠ 20ರಿಂದ30 ನಿಮಿಷ ಬೇಕಾಗುತ್ತದೆ. ಹೆಚ್ಚುವರಿ ಜವಾಬ್ದಾರಿಗಳ ಜತೆಗೆ ಓರ್ವ ಇನ್​ಸ್ಪೆಕ್ಟರ್ ಎಷ್ಟು ಮಂದಿಗೆ ಪರೀಕ್ಷೆ ನಡೆಸಲು ಸಾಧ್ಯ? ಇದು ವಿಳಂಬಕ್ಕೆ ಮುಖ್ಯ ಕಾರಣ.

    ದಂಧೆಯಾಗಿದೆ ದಂಡ ಪಾವತಿ

    ರಾಜ್ಯ ಹಾಗೂ ಹೊರರಾಜ್ಯಗಳ ವಾಹನಗಳ ಬಾಕಿ ತೆರಿಗೆ ಹಾಗೂ ಪರ್ವಿುಟ್ (ರಹದಾರಿ) ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಯಲ್ಲೂ ಕಳ್ಳಾಟ ನಡೆಯುತ್ತಿದೆ. ಇದರಿಂದಾಗಿ ಸಾರಿಗೆ ಇಲಾಖೆಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುವುದರ ಜತೆಗೆ ಆರ್​ಟಿಒ ಅಧಿಕಾರಿಗಳು ಹಾಗೂ ರಾಜ್ಯ ರಸ್ತೆ ಸಾರಿಗೆ ಪ್ರಾಧಿ ಕಾರದ (ಎಸ್​ಟಿಎ) ಅಧಿಕಾರಿಗಳ ನಡುವೆ ಮನಃಸ್ತಾಪಕ್ಕೂ ಕಾರಣ ವಾಗಿದೆ. ಬಾಕಿ ತೆರಿಗೆ ಹಾಗೂ ನಿಯಮ ಉಲ್ಲಂಘನೆಗೆ ಬ್ರೇಕ್ ಇನ್​ಸ್ಪೆಕ್ಟರ್​ಗಳು ವಿಧಿಸಿರುವ ದಂಡದ ಮೊತ್ತವನ್ನು ವಾಹನ್ -4 ತಂತ್ರಾಂಶದ ಮುಖಾಂತರ ರಾಜ್ಯದ ಯಾವುದೇ ಕಚೇರಿಗಳಿಗೆ ತೆರಳಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

    ವಾಹನ ಮಾಲೀಕರು ತಮಗೆ ಪರಿಚಿತ ಅಧಿಕಾರಿಗಳಿರುವ ಕಚೇರಿಗೆ ತೆರಳಿ ವಿಧಿಸಿರುವ ದಂಡದ ಮೊತ್ತಕ್ಕಿಂತ ಕಡಿಮೆ ಮೊತ್ತ ಪಾವತಿಸಿ ಚಲನ್ ಪಡೆಯುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಪರ್ವಿುಟ್ ಉಲ್ಲಂಘನೆ, ಯೂನಿಫಾಮ್ರ್ ಹಾಕದಿರುವುದು, ರಿಫ್ಲೆಕ್ಟರ್ ಅಳವಡಿಸದಿರುವುದು, ಎಲೆಕ್ಟ್ರಿಕ್ ಹಾರ್ನ್ ಇಲ್ಲದಿರುವುದು ಸೇರಿ ಹೀಗೆ ಬೇರೆಬೇರೆ ನಿಯಮ ಉಲ್ಲಂಘನೆಗಳಿಗೆ -ಠಿ;500ದಿಂದ -ಠಿ;1 ಲಕ್ಷವರೆಗೆ ದಂಡ ವಿಧಿಸುವ ಬ್ರೇಕ್ ಇನ್​ಸ್ಪೆಕ್ಟರ್​ಗಳು, ನೋಂದಣಿ ಸಂಖ್ಯೆ ಬ್ಲಾಕ್​ಲೀಸ್ಟ್​ಗೆ ಸೇರಿಸುತ್ತಾರೆ. ಆದರೆ, ಮಾಲೀಕರು ಸಾರಿಗೆ ಪ್ರಾಧಿಕಾರಕ್ಕೆ ಹೋಗಿ ಡೀಲ್ ಕುದುರಿಸಿಕೊಳ್ಳುತ್ತಾರೆ.

    ಅಧಿಕಾರಿಗಳಿಗೆ ಇಕ್ಕಟ್ಟು: ಜ್ಞಾನಭಾರತಿ ಆರ್​ಟಿಒ ಅಧಿಕಾರಿಗಳು, ನಿಯಮ ಉಲ್ಲಂಘಿಸಿದ ಬಸ್​ಗೆ 10 ಸಾವಿರ ರೂ.ವರೆಗೆ ದಂಡ ವಿಧಿಸಿದ್ದರು. ಆದರೆ, ಸಾರಿಗೆ ಪ್ರಾಧಿಕಾರ ಕಚೇರಿಯಲ್ಲಿ ಬರೀ 500, 1000 ರೂ. ಕಟ್ಟಿಸಿಕೊಂಡು ಚಲನ್ ಕೊಟ್ಟಿದ್ದಾರೆ. ಬಸ್ ಮಾಲೀಕ ಚಲನ್ ತಂದು ಬ್ಲಾಕ್​ಲಿಸ್ಟ್​ನಿಂದ ತೆಗೆಯುವಂತೆ ಆರ್​ಟಿಒಗೆ ಕೇಳಿದ್ದಾರೆ. ಆದರೆ, ಪರಿಶೀಲಿಸಿದಾಗ ಅವರು ವಿಧಿಸಿರುವ ದಂಡದ ಮೊತ್ತಕ್ಕೂ ಕಟ್ಟಿಸಿಕೊಂಡಿರುವ ದಂಡದ ಮೊತ್ತಕ್ಕೂ ಸಂಬಂಧವೇ ಇಲ್ಲ. ಪೂರ್ತಿ ದಂಡ ಕಟ್ಟದೆ ಬ್ಲಾಕ್​ಲಿಸ್ಟ್​ನಿಂದ ತೆಗೆಯಲಾಗಲ್ಲ. ಏನು ಮಾಡಬೇಕೆಂಬ ಗೊಂದಲದಲ್ಲಿ ಆರ್​ಟಿಒ ಅಧಿಕಾರಿಗಳಿದ್ದಾರೆ.

    ಡೀಲ್ ಹೇಗೆ?: ಕೇಸ್ ಹಾಕಿರುವ ಕಚೇರಿಗೇ ಹೋದರೆ ಚೆಕ್​ಲೀಸ್ಟ್ ಪರಿಶೀಲಿಸಿ ನಿಯಮ ಉಲ್ಲಂಘನೆಗೆ ತಕ್ಕ ದಂಡ ಕಟ್ಟಿಸಿಕೊಳ್ಳಲಾಗುತ್ತೆ. ರಸ್ತೆ ಸಾರಿಗೆ ಪ್ರಾಧಿಕಾರ ಅಥವಾ ಇನ್ನಾವುದೇ ಬೇರೆ ಕಚೇರಿಗೆ ಹೋದರೆ ಅಲ್ಲಿನ ಅಧಿಕಾರಿಗಳಿಗೆ ಒಂದಷ್ಟು ಲಂಚ ಕೊಟ್ಟು, 1 ಲಕ್ಷ ದಂಡವಿದ್ದರೆ 5 ಸಾವಿರ ಅಥವಾ 10 ಸಾವಿರ ಪಾವತಿಸಿ ಚಲನ್ ಪಡೆದು ಬ್ಲಾಕ್​ಲೀಸ್ಟ್ ತೆಗೆಸಿಕೊಳ್ಳುತ್ತಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

    900 ರೂ.ಗೆ ಖುಲಾಸೆ: ಇತ್ತೀಚೆಗೆ ಕೋಲಾರ ಆರ್​ಟಿಒ ಇನ್​ಸ್ಪೆಕ್ಟರ್, ಪರ್ವಿುಟ್ ಉಲ್ಲಂಘನೆ, ಎಲೆಕ್ಟ್ರಿಕ್ ಹಾರ್ನ್ ಇಲ್ಲದ್ದಕ್ಕೆ ಬಸ್ ವಿರುದ್ಧ ಕೇಸ್ ದಾಖಲಿಸಿ ಚೆಕ್​ಲೀಸ್ಟ್ ಬರೆದಿದ್ದರು. 8000 ರೂ. ವರೆಗೆ ದಂಡ ಕಟ್ಟಬೇಕಿತ್ತು. ಆದರೆ, ರಸ್ತೆ ಸಾರಿಗೆ ಪ್ರಾಧಿಕಾರದಲ್ಲಿ 900 ರೂ. ಕಟ್ಟಿಸಿಕೊಳ್ಳಲಾಗಿದೆ. 900 ರೂ. ದಂಡ ವಿಧಿಸುವಂಥ ಪ್ರಕರಣವೇ ಇಲ್ಲ. ಎಲೆಕ್ಟ್ರಿಕ್ ಹಾರ್ನ್ ಇಲ್ಲದ್ದಕ್ಕೆ ಕನಿಷ್ಠ 2 ಸಾವಿರ ರೂ. ದಂಡವಿದೆ. 900 ರೂ. ಕಟ್ಟಿಸಿಕೊಂಡು ಬ್ಲಾಕ್​ಲಿಸ್ಟ್​ ತೆಗೆದಿದ್ದಾರೆ.

    ವಾಟ್ಸ್​ಆ್ಯಪ್​ಗೆ ಬಾಯ್​ ಬಾಯ್​, ಟೆಲಿಗ್ರಾಮ್​ಗೆ ಹಾಯ್​ ಹಾಯ್​: ಯಾಕೆ, ಏನಾಯಿತು?

    ಕರೊನಾ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಸತ್ತ!; ಸಾವಿಗೆ ಕಾರಣ ವಿಷ ಎಂದಿತ್ತು ಮರಣೋತ್ತರ ಪರೀಕ್ಷೆಯಲ್ಲಿ…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts