More

    ಮಾರುಕಟ್ಟೆಯಾದ ಕೊರಟಗೆರೆ ಮುಖ್ಯ ರಸ್ತೆ ; ವಾಹನ ಸಂಚಾರಕ್ಕೆ ತೊಡಕು ; ವ್ಯಾಪಾರ ನಡೆಸದಂತೆ ಸಂತೆ ಮೈದಾನಕ್ಕೆ ನಾಕಾಬಂಧಿ

    ಕೊರಟಗೆರೆ : ಕರೊನಾ ಕಾರಣಕ್ಕೆ ಸಂತೆಗೆ ನಿರ್ಬಂಧ ಹೇರಿರುವುದರಿಂದ ಪಟ್ಟಣದ ಕರ್ನಾಟಕ ಬ್ಯಾಂಕ್ ಮುಂಭಾಗದ ಬಸ್ ನಿಲ್ದಾಣವನ್ನೇ ನಿತ್ಯದ ಮಾರುಕಟ್ಟೆಯಾಗಿ ಪರಿವರ್ತಿಸಿಕೊಂಡಿರುವ ವ್ಯಾಪಾರಿಗಳು ರಸ್ತೆಯ ಇಕ್ಕೆಲಗಳಲ್ಲೇ ವಹಿವಾಟು ನಡೆಸುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ಪಟ್ಟಣದ ಮಧುಗಿರಿ-ತುಮಕೂರು ಮುಖ್ಯರಸ್ತೆ ನಿತ್ಯವೂ ಜನಜಂಗುಳಿ ಇರುವುದರಿಂದ ವಾಹನ ಸವಾರರು ಹೈರಾಣಾಗುತ್ತಾರೆ.

    ರಸ್ತೆಯಲ್ಲಿ ನಿತ್ಯ ವಹಿವಾಟ ನಡೆಸಬಾರದು ಎಂದು ಹಲವು ಬಾರಿ ವ್ಯಾಪಾಸ್ಥರನ್ನು ತೆರವು ಮಾಡಿದರೂ ವ್ಯಾಪಾರಿಗಳು ಮತ್ತೆ ಬಂದು ವಹಿವಾಟು ನಡೆಸುತ್ತಿದ್ದಾರೆ. ಪಟ್ಟಣದಲ್ಲಿ ಸಂತೇ ಮೈದಾನವಿದೆ. ಅಲ್ಲಿ ಸೋಮವಾರ ಸಂತೆ ನಡೆಯುತ್ತದೆ. ಕರೊನಾ ಬಂದಾಗಿನಿಂದ ಸಂತೆ ನಡೆಸದಂತೆ ಸಂತೆ ಮೈದಾನಕ್ಕೆ ನಾಕಾಬಂದಿ ವಿಧಿಸಲಾಗಿದೆ. ಒಂದೆಡೆ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಒಂದೇ ಬದಿಯ ರಸ್ತೆಯಲ್ಲಿಯೇ ಗ್ರಾಹಕರು ಮತ್ತು ವ್ಯಾಪಾರಸ್ಥರು ವಹಿವಾಟು ನಡೆಸುತ್ತಿದ್ದು, ಪಾದಚಾರಿಗಳೂ ವ್ಯಥೆಪಡುವಂತಾಗಿದೆ. ಅಲ್ಲದೇ ವಾಹನ ಸವಾರರು ಇಲ್ಲಿ ನಡೆಯುವ ವಹಿವಾಟಿನ ಅರಿವಿಲ್ಲದೇ ಒಮ್ಮೆಲೇ ವೇಗ ನಿಯಂತ್ರಣಕ್ಕೆ ತಡವರಿಸುವ ಸ್ಥಿತಿ ನಿರ್ಮಾಣವಾಗಿ ಹಲವು ಬಾರಿ ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಪಪಂಗೆ ಮಾಹಿತಿಯಿದ್ದರೂ ಯಾರೊಬ್ಬರೂ ಸಮಸ್ಯೆ ಬಗೆಹರಿಸಿಲ್ಲ.

    ನಿತ್ಯದ ಮಾರುಕಟ್ಟೆ ನಡೆಸಲು ಬಸ್ ನಿಲ್ದಾಣಕ್ಕೆ ಸನಿಹವೇ ಹಲವು ಜಾಗಗಳನ್ನು ಪಪಂ ಈ ಹಿಂದೆ ಗುರುತು ಮಾಡಿದ್ದರೂ ಇಲ್ಲಿಯವರೆಗೂ ಯಾವೊಂದು ಜಾಗವೂ ಅಂತಿಮವಾಗಿಲ್ಲ. ಪಪಂನ ಹಲವು ಜಾಗಗಳು ಇದ್ದರೂ ಜಾಗಗಳ ಮೇಲೆ ಇರುವ ನ್ಯಾಯಾಲಯ ದಾವೆಗಳನ್ನು ಇತ್ಯರ್ಥಪಡಿಸಿಕೊಂಡಿಲ್ಲ. ಶಾಸಕ ಡಾ.ಜಿ.ಪರಮೇಶ್ವರ್ ಅವರು ಮಾರುಕಟ್ಟೆಗೆ ಸೂಕ್ತ ಜಾಗ ನೋಡಲು ತಿಳಿಸಿದ್ದರೂ ಗಮನಹರಿಸಿಲ್ಲ. ನಿತ್ಯ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ನಡೆಯುವ ನಿತ್ಯದ ಅನಧಿಕೃತ ಮಾರುಕಟ್ಟೆಗೆ ಬ್ರೇಕ್ ಹಾಕಬೇಕಿದೆ.

    ಸಮಸ್ಯೆ ಬಗ್ಗೆ ಮಾಹಿತಿ ಇದೆ. ಹಲವು ಪಪಂ ಸದಸ್ಯರೊಂದಿಗೆ ಚರ್ಚಿಸಿದ್ದು, ಸಾರ್ವಜನಿಕರಿಗೆ ಹತ್ತಿರವಾಗುವ 2-3 ಜಾಗಗಳ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗೊಂದಿಗೆ ಚರ್ಚಿಸಿ ಶೀಘ್ರವಾಗಿ ಕ್ರಮ ಕೈಗೊಳ್ಳುತ್ತೇನೆ.
    ಲಕ್ಷ್ಮಣ್ ಕುಮಾರ್, ಮುಖ್ಯಾಧಿಕಾರಿ ಪಪಂ ಕೊರಟಗೆರೆ

    ಯಾವುದೇ ಅವಘಡ ಸಂಭವಿದಂತೆ ಎಚ್ಚರ ವಹಿಸುತ್ತೇವೆ, ನಿತ್ಯದ ಮಾರುಕಟ್ಟೆ ನಡೆಯುವ ಸ್ಥಳಕ್ಕೆ ಖುದ್ದು ನಾನೇ ಸಿಬ್ಬಂದಿಯೊಂದಿಗೆ ಹೋಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
    ಸಿದ್ದರಾಮೇಶ್ವರ, ಸಿಪಿಐ ಕೊರಟಗೆರೆ

    ನಮ್ಮಿಂದ ವಹಿವಾಟು ನಡೆಸಲು ಪಪಂ ಕರ ವಸೂಲಿ ಮಾಡುತ್ತಾರೆ. ನಮಗೆ ಇದೇ ಜಾಗದಲ್ಲಿ ವಹಿವಾಟು ಮಾಡಿ ಎಂದು ಜಾಗ ಸೂಚಿಸಿಲ್ಲ. ಹೆಚ್ಚು ಗ್ರಾಹಕರು ಎಲ್ಲಿ ಹೆಚ್ಚಿನ ವ್ಯಾಪಾರಸ್ಥರು ಇರುತ್ತಾರೋ ಅಲ್ಲಿಗೆ ಬರುತ್ತಾರೆ. ಆದ್ದರಿಂದ ನಾವೂ ಇಲ್ಲೇ ಅಂಗಡಿ ಇಟ್ಟುಕೊಳ್ಳುತ್ತೇವೆ.
    ಗಂಗಮ್ಮ, ಹೂವಿನ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts