More

    ಸಾಮಾಜಿಕ ಸಮಸ್ಯೆ ಅರಿತು ಪ್ರಣಾಳಿಕೆ ಬಿಡುಗಡೆ : ಡಾ.ಜಿ.ಪರಮೇಶ್ವರ ಹೇಳಿಕೆ

    ಕೊರಟಗೆರೆ: ಕ್ಷೇತ್ರದ ಜನರ ಸಾಮಾಜಿಕ ಸಮಸ್ಯೆಗಳು, ಅವರ ಕೂಗಿನ ಆಧಾರದ ಹಿನ್ನೆಲೆಯಲ್ಲಿ ಉತ್ತಮವಾದ ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಗೊಳಿಸಲು ಸಾಧ್ಯವಾಯಿತು ಎಂದು ಮಾಜಿ ಡಿಸಿಎಂ, ಚುನಾವಣಾ ಪ್ರಣಾಳಿಕೆ ಸಮಿತಿ ಸಂಚಾಲಕ ಡಾ.ಜಿ.ಪರಮೇಶ್ವರ ಹೇಳಿದರು.

    ಕೋಳಾಲ, ಚಿನ್ನಹಳ್ಳಿ, ಮಾವತ್ತೂರು ಹಾಗೂ ವಜ್ಜನಕುರಿಕೆ ಗ್ರಾಪಂ ಕೇಂದ್ರಗಳಲ್ಲಿ ಗುರುವಾರ ಬಿರುಸಿನ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಗೃಹಲಕ್ಷ್ಮೀ ಅಡಿ ಪ್ರತೀ ಮನೆ ಯಜಮಾನಿಗೆ 2 ಸಾವಿರ ರೂ., ಪ್ರತೀ ಮನೆಗೆ 200 ಯುನಿಟ್ ವಿದ್ಯುತ್, 10 ಕೆಜಿ ಅಕ್ಕಿ, ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರೂ., ಮಹಿಳೆಯರಿಗೆ ಸಾರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಹೀಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆಗಳನ್ನು ನೀಡಲಾಗಿದೆ ಎಂದರು.

    ಕರೊನಾ ಸಂಕಷ್ಟದ ಸಮಯ ಸೇರಿ ಕಳೆದ 5 ವರ್ಷಗಳಲ್ಲಿ ಕ್ಷೇತ್ರದ ಮೂಲೆಮೂಲೆಯಲ್ಲಿ ಸುತ್ತಾಡಿ ಜನರ ನೋವಿಗೆ, ಕೂಗಿಗೆ ಸ್ಪಂದಿಸಿದ್ದೇನೆ. ಯಾವುದೇ ವೈಯಕ್ತಿಕ ಹಿತಾಸಕ್ತಿಗೆ ಜನರನ್ನು ಬಳಸಿಕೊಳ್ಳದೆ ಕಾಯಕ ಮಾಡಿದ್ದೇನೆ. ಅದಕ್ಕೆ ಕೂಲಿ ರೂಪದಲ್ಲಿ ತಮ್ಮ ಮತಗಳನ್ನು ನೀಡಿ ಎಂದು ಮನವಿ ಮಾಡಿದರು.

    ಮೆಟ್ರೋ ಯೋಜನೆ ಪ್ರಸ್ತಾಪ: ಎತ್ತಿಹೊಳೆ ಯೋಜನೆ ನಮ್ಮ ತಾಲೂಕಿನ ಮೂಲಕವೇ ಹಾದು ಹೋಗುತ್ತದೆ. ಈ ಯೋಜನೆಯಿಂದ 109 ಕೆರೆಗಳಿಗೆ ನೀರು ತುಂಬಿಸಲು ಅನುಕೂಲವಾಗಲಿದೆ. ತುಮಕೂರು ನಗರಕ್ಕೆ ಹೊಂದಿಕೊಂಡಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇನ್ನೂ ಪ್ರಗತಿ ತರಲು ಮೆಟ್ರೋ ಸೇವೆಯನ್ನು ಈ ಪ್ರದೇಶಕ್ಕೆ ವಿಸ್ತರಣೆ ಮಾಡುವ ಅಂಶಗಳನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಂದಿರುವುದು ಕ್ಷೇತ್ರದ ಅಭಿವೃದ್ಧಿಯ ಪೂರಕವಲ್ಲವೇ ಎಂದು ವಿರೋಧ ಪಕ್ಷಗಳ ಊಹಾಪೋಹ ಹೇಳಿಕೆಗಳಿಗೆ ತಿರುಗೇಟು ನೀಡಿದರು.

    ಪ್ರತ್ಯೇಕ ತಂಡಗಳ ಬಿರುಸಿನ ಪ್ರಚಾರ: ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ 6 ಹೋಬಳಿಗಳಲ್ಲಿ ಗುರುವಾರ ಪ್ರತ್ಯೇಕ ತಂಡಗಳಾಗಿ ಪರಮೇಶ್ವರ ಪರ ಏಕಕಾಲಕ್ಕೆ ಚುನಾವಣಾ ಪ್ರಚಾರ ನಡೆಸಿವೆ.

    ಬಿರುಕು ಮೂಡಿಸಲು ಹುನ್ನಾರ

    ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಚುನಾವಣೆ ಸಮಯದಲ್ಲಿ ಬಿರುಕು- ಭಿನ್ನಾಭಿಪ್ರಾಯಗಳನ್ನು ಉಂಟು ಮಾಡುವ ಕೆಲಸ ಮಾಡುತ್ತಾರೆ. ಇದು ಕಿಡಿಗೇಡಿಗಳ ಕೃತ್ಯ. ನಮ್ಮಿಬ್ಬರ ನಡುವೆ ಯಾವತ್ತೂ ಆ ತರಹದ ಭಾವನೆ ಇಲ್ಲ. ಈ ಬಗ್ಗೆ ಕೊರಟಗೆರೆಯ ಚುನಾವಣಾ ರ‌್ಯಾಲಿಯಲ್ಲಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದು, ಗಾಳಿ ಸುದ್ದಿಗಳ ಪ್ರಚಾರಕ್ಕೆ ತೆರೆ ಬಿದ್ದಿದೆ ಎಂದು ಪರಮೇಶ್ವರ ತಿಳಿಸಿದರು.

    ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ರಾಜ್ಯಕ್ಕೆ ಅಲ್ಲದೆ ಕೊರಟಗೆರೆಯ ಧ್ವನಿಗೂ ಆದ್ಯತೆ ನೀಡಿದಂತೆ ಆಗಿದೆ. ಅಭಿವೃದ್ಧಿಗೆ ಒತ್ತು, ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಮುಕ್ತ ಆಡಳಿತ ನಡೆಸುವುದಕ್ಕೆ ಆದ್ಯತೆ ನೀಡಲಾಗುವುದು. | ಡಾ.ಜಿ.ಪರಮೇಶ್ವರ, ಕಾಂಗ್ರೆಸ್ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts