More

    108 ಜತೆ ಖಾಸಗಿ ಆಂಬುಲೆನ್ಸ್: ರೋಗಿಗಳ ಅನುಕೂಲಕ್ಕಾಗಿ ಸರ್ಕಾರದ ಚಿಂತನೆ

    ಮಂಗಳೂರು: 108 ಆಂಬ್ಯುಲೆನ್ಸ್ ವ್ಯವಸ್ಥೆಯಿದ್ದರೂ ರೋಗಿಗಳನ್ನು ತ್ವರಿತವಾಗಿ ಆಸ್ಪತ್ರೆ ತಲುಪಿಸುವಾಗ ಹಲವೆಡೆ ವಿಳಂಬವಾಗುತ್ತಿರುವುದನ್ನು ಪರಿಗಣಿಸಿ ರಾಜ್ಯ ಸರ್ಕಾರ ಈ ವ್ಯವಸ್ಥೆಯಡಿಗೆ ಖಾಸಗಿ ಆಂಬುಲೆನ್ಸ್‌ಗಳನ್ನೂ ಸೇರಿಸುವ ಬಗ್ಗೆ ಯೋಜನೆ ರೂಪಿಸುತ್ತಿದೆ.
    ಅದರಂತೆ ಆರೋಗ್ಯ ಇಲಾಖೆ ಬೆಂಗಳೂರಿನಲ್ಲಿ ಸ್ಥಾಪಿಸಿರುವ ಕಂಟ್ರೋಲ್ ರೂಮ್‌ನಡಿಯಲ್ಲೇ ಈ ಖಾಸಗಿ ಆಂಬುಲೆನ್ಸ್‌ಗಳನ್ನು ಸೇರ್ಪಡೆಗೊಳಿಸಿ ವ್ಯವಸ್ಥೆ ಸುಧಾರಣೆಯೊಂದಿಗೆ ಪಾರದರ್ಶಕಗೊಳಿಸುವುದು, ಅದಕ್ಕಾಗಿ ಜಿಪಿಎಸ್ ಅಳವಡಿಸುವ ಯೋಜನೆ ಸಿದ್ಧಪಡಿಸುತ್ತಿದೆ.
    ಸರ್ಕಾರ ಈಗಾಗಲೇ ಆರೋಗ್ಯ ಇಲಾಖೆ ಹಾಗೂ ಸಾರಿಗೆ ಇಲಾಖೆ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೆ ಮುಂದಾಗಿದ್ದು, ಜಿಲ್ಲೆಗಳಿಂದ ಖಾಸಗಿ ಆಂಬುಲೆನ್ಸ್‌ಗಳ ವಿವರ (ಸಂಸ್ಥೆಯ ಹೆಸರು, ಫೋನ್ ನಂಬರ್) ಕೇಳಿದೆ.

    ಉಡುಪಿ ಜಿಲ್ಲೆಯ 140 ಹಾಗೂ ದಕ್ಷಿಣ ಕನ್ನಡ 200ರಷ್ಟು ಖಾಸಗಿ ಆಂಬುಲೆನ್ಸ್ ವಿವರಗಳನ್ನು ಈಗಾಗಲೇ ಸಂಗ್ರಹಿಸಿ ಆರೋಗ್ಯಾಧಿಕಾರಿಗಳಿಗೆ ನೀಡಲಾಗಿದೆ. ಇವುಗಳನ್ನು ಮ್ಯಾಪಿಂಗ್ ಮಾಡಿ, 108 ನೆಟ್‌ವರ್ಕ್ ಒಳಗೆ ತರುವ ಗುರಿ ಇದೆ ಎಂದು ಮಂಗಳೂರು ಪ್ರಭಾರ ಆರ್‌ಟಿಒ ರಾಮಕೃಷ್ಣ ರೈ ತಿಳಿಸುತ್ತಾರೆ.

    2016ರಿಂದೀಚೆಗೆ ಸರ್ಕಾರಿ ಆಂಬುಲೆನ್ಸ್‌ಗಳಿಗೆ ಜಿಪಿಎಸ್ ಅಳವಡಿಕೆ ಮಾಡಲಾಗಿದೆ. 108 ಕಂಟ್ರೋಲ್ ರೂಂ ಮೂಲಕ ಇವುಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಕರೆಗಳನ್ನು ಆಧರಿಸಿ ಸೂಕ್ತ ವಾಹನಗಳನ್ನು ಕರೆ ಬಂದ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಖಾಸಗಿ ಆಂಬುಲೆನ್ಸ್‌ಗಳನ್ನೂ ಇದರಲ್ಲಿ ಸೇರಿಸಿದರೆ ಹೆಚ್ಚಿನ ಆಯ್ಕೆ ಸಿಗುತ್ತದೆ ಎನ್ನುವುದು ಇದರ ಹಿಂದಿರುವ ಉದ್ದೇಶ.
    ರಾಜ್ಯದಲ್ಲಿ ಖಾಸಗಿ ಸೇರಿದಂತೆ 5000ದಷ್ಟು ಆಂಬುಲೆನ್ಸ್ ಇರಬಹುದು, ಇವುಗಳಿಗೆ ಜಿಪಿಎಸ್ ಟ್ರಾೃಕಿಂಗ್ ವ್ಯವಸ್ಥೆ ಅಳವಡಿಸುವುದಕ್ಕೆ ಕನಿಷ್ಠ್ಠ ಒಂದು ವರ್ಷ ಬೇಕು, ಹಂತ ಹಂತವಾಗಿ ಈ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಎಲ್ಲ ಆಂಬುಲೆನ್ಸ್‌ಗಳಿಗೆ ಏಕಕಾಲಕ್ಕೆ ಜಿಪಿಎಸ್ ಅಳವಡಿಕೆ ಕಷ್ಟ ಎಂದು ಅಧಿಕಾರಿಗಳು ತಿಳಿಸುತ್ತಾರೆ.

    ಖಾಸಗಿ ಆಂಬುಲೆನ್ಸ್‌ಗೆ ಜಿಪಿಎಸ್ ಅಳವಡಿಕೆ ಮೂಲಕ ಪ್ರತಿ 10 ಕಿ.ಮೀ.ಗೆ ಒಂದರಂತೆ ಆಂಬುಲೆನ್ಸ್ ರೋಗಿಗಳಿಗೆ ಲಭ್ಯವಾಗಬೇಕು ಎನ್ನುವುದು ಮುಖ್ಯ ಗುರಿಯಾದರೆ, ಈ ವ್ಯವಸ್ಥೆ ಮೇಲೆ ಹೆಚ್ಚಿನ ನಿಗಾ ಇರಿಸುವ ಉದ್ದೇಶವೂ ಇಲಾಖೆಗೆ ಇದೆ.

    ಕಾರ್ಯಸಾಧ್ಯವೇ?: ಸದ್ಯಕ್ಕೆ ಸರ್ಕಾರಿ, ಖಾಸಗಿ (ಯಾವ ಆಸ್ಪತ್ರೆಗೂ ಸೇರದ್ದು) ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸೇರಿದ ಆಂಬುಲೆನ್ಸ್‌ಗಳು ಕಾರ್ಯಾಚರಿಸುತ್ತಿವೆ. ಇದರಲ್ಲಿ ನ್ಯೂಟ್ರಲ್ ಆಂಬುಲೆನ್ಸ್‌ಗಳನ್ನು ಕಂಟ್ರೋಲ್ ರೂಮ್ ಅಡಿಗೆ ತರಬಹುದು, ಆದರೆ ಖಾಸಗಿ ಆಸ್ಪತ್ರೆಗಳ ಆಂಬುಲೆನ್ಸ್ ಹೇಗೆ ನಿಯಂತ್ರಣ ಮಾಡುವುದು ಎನ್ನುವುದರ ಬಗ್ಗೆ ಸ್ಪಷ್ಟನೆ ಅಧಿಕಾರಿಗಳಿಗೆ ಇಲ್ಲ.

    ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಮಗೆ ಸರ್ಕಾರದಿಂದ ಈ ಸೂಚನೆ ಬಂದಿದೆ, ಜಿಲ್ಲೆಯಲ್ಲಿನ ಖಾಸಗಿ ಆಂಬುಲೆನ್ಸ್ ವಿವರವನ್ನು ಕೇಳಿದ್ದಾರೆ, ಸಾರಿಗೆ ಅಧಿಕಾರಿಗಳಿಗೆ ಈ ಮಾಹಿತಿ ಸಂಗ್ರಹಿಸಿ ಪಟ್ಟಿ ಮಾಡುವಂತೆ ಸೂಚಿಸಿದ್ದೇನೆ.
    – ಸಿಂಧೂ ರೂಪೇಶ್, ದ.ಕ. ಜಿಲ್ಲಾಧಿಕಾರಿ

    ವೇಣುವಿನೋದ್ ಕೆ.ಎಸ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts