More

    ಜನರ ಸಮಸ್ಯೆಗಳ ನಿವಾರಣೆಗೆ ಆದ್ಯತೆ


    ಯಳಂದೂರು: ಜನರ ಕಷ್ಟಗಳಿಗೆ ಸ್ಪಂದಿಸಲು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಈ ಸಭೆಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈವರೆಗೆ ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ ತಾಲೂಕು ವ್ಯಾಪ್ತಿಯಲ್ಲಿ 15 ಜನಸಂಪರ್ಕ ಸಭೆಗಳನ್ನು ಮಾಡಲಾಗಿದ್ದು, ಸಾರ್ವಜನಿಕರ ಅನೇಕ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.

    ಸಮೀಪದ ಇರಸವಾಡಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇರಸವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೂದಂಬಳ್ಳಿ ರಸ್ತೆ ಹದಗೆಟ್ಟಿದೆ. ಕಳೆದ 30 ವರ್ಷಗಳಿಂದಲೂ ಇದು ದುರಸ್ತಿಯಾಗಿಲ್ಲ. ಮುಂದಿನ ಅನುದಾನದಲ್ಲಿ ಇದರ ದುರಸ್ತಿಗೆ ಕ್ರಮ ವಹಿಸಲಾಗುವುದು, ವಿವಿಧ ಜನಾಂಗಗಳ ಸಮುದಾಯ ಭವನಕ್ಕೆ ಬೇಡಿಕೆ ಇದ್ದು ಆದ್ಯತಾನುಸಾರ ಇದರ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಗ್ರಾಮದಲ್ಲಿ ಗ್ರಂಥಾಲಯ ಕಟ್ಟಡ ಇಲ್ಲ. ಹಾಗಾಗಿ ಗ್ರಾಮದಲ್ಲಿ ನಿರುಪಯುಕ್ತವಾಗಿರುವ ಶಾಲಾ ಕಟ್ಟಡಗಳು 2 ಕಡೆ ಇದ್ದು, ಸಂಬಂಧಪಟ್ಟ ಇಲಾಖೆಯೊಂದಿಗೆ ಸಂವಹನ ನಡೆಸಿ ಇದನ್ನು ಕೊಡಿಸುವ ಭರವಸೆ ನೀಡಿದರು.ಗಂಗವಾಡಿ ಗ್ರಾಮದಲ್ಲಿ ಜಲಜೀವನ ಮಿಷನ್ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ ಎಂಬ ದೂರು ಬಂದಿರುವ ಹಿನ್ನೆಲೆಯಲ್ಲಿ ಇದನ್ನು ಶೀಘ್ರದಲ್ಲೇ ಆರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸುತ್ತೂರು, ಇರಸವಾಡಿ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದು, ಇದನ್ನು ಫೆಬ್ರವರಿಯೊಳಗೆ ಮುಗಿಸುವಂತೆ ಸಲಹೆ ನೀಡಿದರು.

    ಅರಣ್ಯ ಇಲಾಖೆಗೆ ರೈತರ ಸಾಗುವಳಿ ಜಮೀನು ಸೇರಿಕೊಂಡಿದೆ. ಈ ಗ್ರಾಮದಲ್ಲಿ 60 ರಿಂದ 70 ಎಕರೆ ಅರಣ್ಯಕ್ಕೆ ಸೇರಿದೆ. ಈಗ ಇಡೀ ಜಿಲ್ಲೆಯಲ್ಲಿ ಇಂತಹ ಸಮಸ್ಯೆ ಇದ್ದು ಇದನ್ನು ಎಲ್ಲ ಕಡೆಗಳಲ್ಲೂ ಸರ್ವೇ ಮಾಡಿಸಲಾಗುತ್ತಿದೆ. ಆದಷ್ಟು ಬೇಗ ಇದು ಪೂರ್ಣಗೊಳ್ಳಲಿದ್ದು, ಈ ಭಾಗದ ರೈತರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.

    ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಗಳ ಬಿಲ್ ಇನ್ನೂ ಪಾವತಿಯಾಗಿಲ್ಲ, ಶೌಚಗೃಹ ನಿರ್ಮಾಣ ಮಾಡಿದ್ದರೂ ಇನ್ನೂ ಹಣ ನೀಡಿಲ್ಲ ಎಂದು ಕೆಲವರು ದೂರಿದರು. ಈ ಬಗ್ಗೆ ಶೀಘ್ರದಲ್ಲೇ ಕ್ರಮ ವಹಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು. ಅನೇಕರು ತಮ್ಮ ಗ್ರಾಮ ಬೀದಿಗಳಲ್ಲಿ ರಸ್ತೆ, ಚರಂಡಿ, ಸಮುದಾಯಭವನ ನಿರ್ಮಾಣ ಸೇರಿದಂತೆ ವಿವಿಧ ಸಮಸ್ಯೆಗಳ ನಿವಾರಿಸುವಂತೆ ಅರ್ಜಿ ಸಲ್ಲಿಸಿದರು. ಈ ಬಗ್ಗೆ ಆದಷ್ಟು ಬೇಗ ಕ್ರಮ ವಹಿಸುವ ಭರವಸೆಯನ್ನು ಶಾಸಕರು ನೀಡಿದರು.

    ಗ್ರಾಪಂ ಅಧ್ಯಕ್ಷೆ ಚಿನ್ನಮ್ಮ, ಉಪಾಧ್ಯಕ್ಷೆ ಮಾದಲಾಂಬಿಕ, ಸದಸ್ಯರಾದ ರಂಗಸ್ವಾಮಿ, ಸುರೇಶ, ವಸಂತ, ರಾಮಚಂದ್ರ, ರವಿ, ಚಿಕ್ಕತಾಯಮ್ಮ, ಇಒ ಪೂರ್ಣಿಮಾ, ಪಿಡಿಒ ನಾಗರಾಜು, ಕಾರ್ಯದರ್ಶಿ ಬಲ್ಲಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts