More

  ಗುಂಬಳ್ಳಿ-ಯರಗಂಬಳ್ಳಿ ಮಾರ್ಗ ಸಂಪೂರ್ಣ ಗುಂಡಿಮಯ

  ಯಳಂದೂರು: ತಾಲೂಕಿನ ಗುಂಬಳ್ಳಿ ಗ್ರಾಮದಿಂದ ಯರಗಂಬಳ್ಳಿಗೆ ಸಂವರ್ಕ ಕಲ್ಪಿಸುವ ಮುಖ್ಯ ರಸ್ತೆ ಗುಂಡಿಮಯವಾಗಿದ್ದು, ಈ ಮಾರ್ಗದಲ್ಲಿ ಸಂಚಾರ ದುಸ್ತರವಾಗಿದೆ.

  ತಾಲೂಕಿನ ಕಟ್ಟಕಡೆಯ ಗ್ರಾಮ ಇದಾಗಿದ್ದು, ಮೂಲಸೌಕರ್ಯದಲ್ಲಿ ಸುಧಾರಣೆ ಕಂಡಿದೆಯಾದರೂ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ದುಸ್ಥಿತಿ ಮಾತ್ರ ಹೇಳತೀರದಾಗಿದೆ.

  ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ದಾಗಿರುವುದರಿಂದ ನಿತ್ಯ ಈ ಮಾರ್ಗದಲ್ಲಿ ಹತ್ತಾರು ಬಸ್‌ಗಳು, ಕಾರು, ಸರಕು ಸಾಗಣೆ ವಾಹನ, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಸುಮಾರು ಒಂದು ಕಿ.ಮೀ.ನಷ್ಟು ಡಾಂಬರು ರಸ್ತೆ ಜಲ್ಲಿ ರಸ್ತೆಯಾಗಿ ಮಾರ್ಪಾಡಾಗಿದ್ದು, ದಪ್ಪ ಜಲ್ಲಿಗಳು ಮೇಲೆದ್ದು ಅಲ್ಲಲ್ಲಿ ಗುಂಡಿ ಬಿದ್ದಿವೆ. ಸಣ್ಣ ಜಲ್ಲಿಗಳು ರಸ್ತೆ ತುಂಬೆಲ್ಲ ಹರಡಿರುವ ಪರಿಣಾಮ ವಾಹನಗಳು ಸಂಚರಿಸಿದಾಗ ಸವಾರರು ಮತ್ತು ಪ್ರಯಾಣಿಕರಿಗೆ ಧೂಳು ತುಂಬಿಕೊಳ್ಳಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವಾಗ ನರಕಯಾತನೆ ಅನುಭವಿಸುವಂತಾಗಿದೆ.

  ಸಾಕಷ್ಟು ವರ್ಷಗಳ ಹಿಂದೆ ಇಲ್ಲಿಗೆ ಡಾಂಬರು ಹಾಕಲಾಗಿದ್ದು, ಇದೀಗ ಗುರುತು ಸಿಗದಂತಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಕರಿಕಲ್ಲು ಸಾಗಿಸುವ ತೂಕದ ಲಾರಿಗಳು, ಟಿಪ್ಪರ್, ಟ್ರ್ಯಾಕ್ಟರ್ ಈ ಮಾರ್ಗದಲ್ಲೇ ಸಂಚರಿಸುವುದರಿಂದ ರಸ್ತೆ ಗುಂಡಿ ಬೀಳಲು ಕಾರಣವಾಗಿದೆ. ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದೆಯಾದರೂ ಆ ಹಣದಿಂದ ಇತರ ರಸ್ತೆಗಳು ದುರಸ್ತಿಯಾಗುತ್ತಿವೆಯೇ ಹೊರತು ಯರಂಗಬಳ್ಳಿ ಮುಖ್ಯ ರಸ್ತೆ ಮಾತ್ರ ಅಭಿವೃದ್ಧಿಗೊಂಡಿಲ್ಲ. ಇಷ್ಟೆಲ್ಲ ಸಮಸ್ಯೆ ಇದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಣ್ಣಿಗೆ ಈ ರಸ್ತೆ ಕಾಣದಿರುವುದು ದುರಂತ ಎಂಬುದು ಸ್ಥಳೀಯರ ದೂರು.

  ತಲೆಕೆಡಿಸಿಕೊಳ್ಳದ ಅಧಿಕಾರಿಗಳು, ಜನಪ್ರತಿನಿಧಿಗಳು: ಗುಂಡಿಮಯ ಮುಖ್ಯರಸ್ತೆ ಅಭಿವೃದ್ಧಿಗೊಳಿಸಲಾಗುವುದು ಎಂಬುದು ಭರವಸೆಯಾಗಿಯೇ ಉಳಿದಿದೆ. ನಾಲ್ಕು ವರ್ಷಗಳಿಂದ ರಸ್ತೆ, ದುಸ್ಥಿತಿಯಲ್ಲಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಪರಿಣಾಮ ಕೊಟ್ಟ ಭರವಸೆ ಈಡೇರಿಲ್ಲ. ಇನ್ನೆರಡು ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ತದ ನಂತರ ಮಳೆಯನ್ನೇ ನೆಪ ಮಾಡಿಕೊಂಡು ಎಲ್ಲರೂ ಸುಮ್ಮನಾಗುತ್ತಾರೆ. ಪ್ರಸ್ತುತ ರಸ್ತೆಗೆ ಕಾಯಕಲ್ಪ ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ಅನಾಹುತಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.ಹಾಗಾಗಿ ಅವಘಡ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತು ರಸ್ತೆಯನ್ನು ಸರಿಪಡಿಸಬೇಕಿದೆ. ರಸ್ತೆಯಲ್ಲಿನ ಹೊಂಡಗಳನ್ನು ಕೂಡಲೇ ಮುಚ್ಚಿ, ಡಾಂಬರಿಕರಣ ಮಾಡುವ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.

  ಮಕ್ಕಳು, ಗರ್ಭಿಣಿಯರಿಗೆ ಸಂಕಷ್ಟ: ಬಸ್‌ಗಳ ಸಂಚಾರದಲ್ಲೂ ವ್ಯತ್ಯಯವಾಗುತ್ತಿರುವುದರಿಂದ ಮಕ್ಕಳು ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ . ಅಲ್ಲದೇ, ಆಸ್ಪತ್ರೆಗೆ ತೆರಳುವವರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ. ಗರ್ಭಿಣಿಯರು ಆಸ್ಪತ್ರೆಗೆ ಹೊರಟಾಗ ಜೀವ ಬಿಗಿ ಹಿಡಿದು ಕೂರುವ ಸ್ಥಿತಿ ಇದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ವರ್ಷಗಳಿಂದ ಗುಂಡಿಬಿದ್ದಿದ್ದು, ಈಗ ಜಲ್ಲಿ ರಸ್ತೆಯಾಗಿ ಮಾರ್ಪಟ್ಟಿದೆ. ವಾಹನಗಳಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಊರಿನಿಂದ ಹೊರಗೆ ಹೋಗಬೇಕೆಂದರೆ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಸರಿ ಇಲ್ಲದಿರುವುದರಿಂದ ಬಾಡಿಗೆ ವಾಹನಗಳು ಇಲ್ಲಿಗೆ ಬರುತ್ತಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವವರು ಆಸ್ಪತ್ರೆಗೆ ಹೋಗಲೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

  ಹೆಚ್ಚು ಭಾರ ಇರುವ ವಾಹನಗಳ ಸಂಚಾರದಿಂದಾಗಿ ರಸ್ತೆ ಹಾಳಾಗಿದೆ. ರಸ್ತೆ ಗುಂಡಿ ಮುಚ್ಚಲು ಸಾಧ್ಯವಿಲ್ಲದಷ್ಟು ಹಾಳಾಗಿರುವುದರಿಂದ ಇಲ್ಲಿ ಸಂಚಾರ ಕಷ್ಟಸಾಧ್ಯವಾಗಿದೆ. ಸಣ್ಣ ವಾಹನಗಳೂ ಸಂಚರಿಸಲು ಸಾಧ್ಯವಿಲ್ಲ. ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿರುವುದು ಒಂದೆಡೆಯಾದರೆ, ಕಾರುಗಳು ಗುಜರಿ ಸೇರುತ್ತಿವೆ ಎಂಬುದು ಸವಾರರ ಆರೋಪ.

  ಗುಂಬಳ್ಳಿ ಗ್ರಾಮದಿಂದ ಯರಗಂಬಳ್ಳಿ ಗ್ರಾಮಕ್ಕೆ ಸಂಪರ್ಕ ಕಲಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಮಾರ್ಗ ದುಸ್ಥಿತಿ ತಲುಪಿ ಹಲವು ವರ್ಷಗಳೇ ಕಳೆದರೂ ರಸ್ತೆ ದುರಸ್ತಿಪಡಿಸುವ ಕಾರ್ಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪತಿನಿಧಿಗಳು ಮಾತ್ರ ಮುಂದಾಗಿಲ್ಲ. ಪರಿಣಾಮ ಹಳ್ಳ-ಕೊಳ್ಳದ ರಸ್ತೆಯಲ್ಲಿ ಸಂಚರಿಸುವವರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ರಸ್ತೆಗೆ ಕಾಯಕಲ್ಪ ನೀಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
  ಸಿದ್ದರಾಜು ಯರಗಂಬಳ್ಳಿ ನಿವಾಸಿ

  ತಾಲೂಕಿನ ಯರಗಂಬಳ್ಳಿ ಗ್ರಾಮದಿಂದ ಗುಂಬಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಹೊಸದಾಗಿ ಅಭಿವೃದ್ಧಿಪಡಿಸಲು ಅಂದಾಜು 75 ಲಕ್ಷ ರೂ. ವೆಚ್ಚದಲ್ಲಿ ಯೋಜನೆ ಸಿದ್ಧಗೊಂಡಿದೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಸ್ವಲ್ಪ ವಿಳಂಬವಾಗಿದೆ. ಚುನಾವಣೆ ಮುಗಿದ ಬಳಿಕ ರಸ್ತೆ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು.
  ಪುರುಷೋತ್ತಮ್ ಎಇಇ, ಲೋಕೋಪಯೋಗಿ ಇಲಾಖೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts