More

    ಶುಚಿ, ರುಚಿ ಆಹಾರ ತಯಾರಿಕೆಗೆ ಆದ್ಯತೆ ನೀಡಿ

    ಎನ್.ಆರ್.ಪುರ: ಬಿಸಿಯೂಟ ಅಡುಗೆ ಸಿಬ್ಬಂದಿ ಶುಚಿ ಮತ್ತು ರುಚಿ ಆಹಾರ ತಯಾರಿಕೆಗೆ ಆದ್ಯತೆ ನೀಡಬೇಕು ಎಂದು ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಹೇಳಿದರು.

    ಗುರುಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಆಶ್ರಯದಲ್ಲಿ ಅಕ್ಷರದಾಸೋಹ ಅಡುಗೆ ಸಿಬ್ಬಂದಿಗೆ ಭಾನುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಹಾಗೂ ಆಹಾರ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಮಧ್ಯಾಹ್ನದ ಬಿಸಯೂಟ ಯೋಜನೆ ಜಾರಿಗೆ ತಂದರು. ನಂತರ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮವನ್ನು ಸರ್ಕಾರ ಜಾರಿಗೆ ತರಲಾಯಿತು ಎಂದರು.
    ಬಿಸಿಯೂಟ ಅಡುಗೆ ಸಿಬ್ಬಂದಿಗೆ ಸರ್ಕಾರ ಗೌರವಧನ ನೀಡುತ್ತಿದ್ದು ಸರ್ಕಾರಿ ಶಾಲೆಗಳಲ್ಲಿ ಓದುವ ಬಡವರ್ಗದ ಮಕ್ಕಳಿಗೆ ಬಿಸಿಯೂಟ ಸಿಬ್ಬಂದಿ ಉತ್ತಮ ಆಹಾರ ತಯಾರಿಸಿ ಬಡಿಸುವ ಮೂಲಕ ಮನೆಯಲ್ಲಿ ತಾಯಿ ಮಾಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
    ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದಿರುವ ನಾಲ್ಕು ಯೋಜನೆಗಳ ಪ್ರಯೋಜನ ಬಿಸಿಯೂಟ ಅಡುಗೆ ಸಿಬ್ಬಂದಿಗೂ ಲಭಿಸುತ್ತಿದೆ. ಅಡುಗೆ ಸಿಬ್ಬಂದಿ ಗೌರವಧನ ಹೆಚ್ಚಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದರು.
    ಪಪಂ ಸದಸ್ಯೆ ಜುಬೇದಾ ಮಾತನಾಡಿ, ಬಿಸಿಯೂಟ ಅಡುಗೆ ಸಿಬ್ಬಂದಿ ಕಡಿಮೆ ಗೌರವಧನ ಪಡೆದರೂ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅಡುಗೆ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಎಸ್ಸೆಸ್ಸೆಲ್ಸಿ ಶಿಕ್ಷಣ ಕಡ್ಡಾಯ ಮಾಡಿದೆ. ಆದರೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಯಾವುದೇ ಸಮಸ್ಯೆಯಾಗದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಗಮನಹರಿಸಬೇಕು ಎಂದು ಹೇಳಿದರು.
    ಬಿಇಒ ಕೆ.ಆರ್.ಪುಷ್ಪಾ ಮಾತನಾಡಿ, ಸರ್ಕಾರದ ಆದೇಶದ ಪ್ರಕಾರ ಶಿಕ್ಷಣ ಇಲಾಖೆಯಲ್ಲಿ ಬಿಸಿಯೂಟ ಕಾರ್ಯಕ್ರಮದಡಿ ಅಳವಡಿಸಿಕೊಳ್ಳುವ ಹೊಸ ವಿಚಾರಗಳ ಬಗ್ಗೆ ಅರಿವು ಮೂಡಿಸಲು 5 ಹಂತಗಳಲ್ಲಿ ತರಬೇತಿ ನೀಡಲಾಗುತ್ತದೆ. ಕೊನೆಯ ತರಬೇತಿ ನೀಡುವಾಗ ಅಡುಗೆ ಸಿಬ್ಬಂದಿ ನಡುವೆ ಸ್ಪರ್ಧೆಗಾಗಿ ಆಹಾರ ಮೇಳ ಆಯೋಜಿಸಲಾಗುತ್ತದೆ ಎಂದರು.
    ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ ಮಾತನಾಡಿ, ಮಕ್ಕಳ ಸಂಖ್ಯೆ ಹೆಚ್ಚು ಇರುವ ಶಾಲೆಗಳಲ್ಲಿ ಅಡುಗೆ ಸಿಬ್ಬಂದಿ ಕಾರ್ಯನಿರ್ವಹಿಸುವುದು ಕಷ್ಟಕರ. ವಿದ್ಯಾದಾನ ಮತ್ತು ಅನ್ನದಾನ ಶ್ರೇಷ್ಠ ಕೆಲಸ. ಕಡಿಮೆ ಗೌರವಧನದಲ್ಲೂ ಮಕ್ಕಳಿಗೆ ಸೇವೆ ಸಲ್ಲಿಸುವ ಮೂಲಕ ತೃಪ್ತಿ ಕಾಣುತ್ತಿದ್ದಾರೆ. ಅಡುಗೆ ಸಿಬ್ಬಂದಿಗೆ ಆಹಾರ ತಯಾರಿಕೆಗೆ ಸಂಬಂಧಿಸಿದಂತೆ ಸ್ಪರ್ಧೆ ಆಯೋಜಿಸುವಾಗ ಪೂರಕ ವಸ್ತುಗಳನ್ನು ಶಾಲೆಯಿಂದ ನೀಡಬೇಕು ಎಂದು ಹೇಳಿದರು.
    ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಾಲತೇಶ್ ತರಬೇತಿ ನೀಡಿದರು. ಆಹಾರ ಸ್ಪರ್ಧೆಯಲ್ಲಿ ಬಸ್ತಿಮಠದ ಸರ್ಕಾರಿ ಶಾಲೆ ರೂಪಾ, ಲತಾ, ಲಕ್ಷ್ಮೀ ಪ್ರಥಮ. ಕಲ್ಲುಗುಡ್ಡೆ ಶಾಲೆ ಸುಜಾತಾ, ಮಂಜುಳಾ ದ್ವಿತೀಯ. ಪೇಟೆ ಶಾಲೆ ರೆಹಮತ್ ಮತ್ತು ತಂಡ ತೃತೀಯ ಬಹುಮಾನ ಪಡೆದರು. ನಾಲ್ಕು ಶಾಲೆ ಸಿಬ್ಬಂದಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಆಹಾರ ಮೇಳದಲ್ಲಿ ಮನೆಯಲ್ಲಿ ತಯಾರಿಸಿದ ಬಗೆ ಬಗೆಯ ತಿಂಡಿ, ತಿನಿಸುಗಳನ್ನು ಪ್ರದರ್ಶಿಸಲಾಯಿತು.
    ಪಪಂ ಸದಸ್ಯೆ ಸುರಯ್ಯಬಾನು, ಅಕ್ಷರದಾಸೋದ ತಾಲೂಕು ನೋಡಲ್ ಅಧಿಕಾರಿ ಪರಶುರಾಮಪ್ಪ, ಕ್ಷೇತ್ರ ಸಮನ್ವಯ ಅಧಿಕಾರಿ ಸೇವಾನಾಯಕ್, ಶಿಕ್ಷಣ ಸಂಯೋಜಕರಾದ ರಂಗಪ್ಪ, ಸಂಗೀತಾ, ಅನ್ನಪೂರ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts