More

    ಜ್ಞಾನ ವೃದ್ಧಿಗೆ ಆದ್ಯತೆ ನೀಡಿ – ಗುರುವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮ

    ಮಹಾಲಿಂಗಪುರ: ಇಂಥ ಅಭೂತಪೂರ್ವ ಕ್ಷಣದಿಂದ ಆಗುವ ಸಂತೋಷ ವರ್ಣಿಸಲು ಶಬ್ದಗಳು ಸಾಲವು. ನಿಮ್ಮೆಲ್ಲರ ಏಳಿಗೆ ಕಂಡು ಭಾವಪರವಶನಾಗಿರುವೆ ಎಂದು ನಿವೃತ್ತ ಪ್ರಾಚಾರ್ಯೆ ಎಂ.ಎಚ್.ಕುಂಟೋಜಿ ಹೇಳಿದರು.

    ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಎಸ್‌ಸಿಪಿ ಪ್ರೌಢಶಾಲೆಯ 1987-88 ನೇ ಸಾಲಿನ 10ನೇ ವರ್ಗದ ಸಹಪಾಠಿಗಳಿಂದ ಬುಧವಾರ ಹಮ್ಮಿಕೊಂಡ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರುವಿಗೆ ಸಿಗುವ ಈ ಗೌರವ ಜಗತ್ತಿನಲ್ಲಿ ಯಾವ ವೃತ್ತಿಯಲ್ಲಿದ್ದವರಿಗೂ ಸಿಗುವುದಿಲ್ಲ.ಈ ಬಾಂಧವ್ಯ ದೊಡ್ಡ ಶಕ್ತಿ,ಬಂಧನ. ಬೀಸುವ ಗಾಳಿ, ಹರಿಯುವ ನೀರು ನಿರ್ಮಲವಾಗಿರುವಂತೆ ನಿಮ್ಮಲ್ಲಿರುವ ಜ್ಞಾನ ದಿನದಿಂದ ದಿನಕ್ಕೆ ಹೆಚ್ಚಿಸುತ್ತ ಹೋದರೆ ಅದು ಪರಿಪಕ್ವವಾಗಿ ಉಳಿಯುತ್ತದೆ. ನನಗೆ ಎಲ್ಲವೂ ಗೊತ್ತಿದೆ ಎಂದು ಸುಮ್ಮನಿದ್ದರೆ ಇರುವ ಜ್ಞಾನವೂ ನಾಶವಾಗುತ್ತದೆ ಎಂದು ತಮ್ಮ ಶಿಷ್ಯರಿಗೆ ಸಲಹೆ ನೀಡಿದರು.

    ನಿವೃತ್ತ ಶಿಕ್ಷಕರಾದ ಜಿ.ಜಿ.ಹುಬ್ಬಳ್ಳಿ, ಎನ್.ಎಸ್.ಚಿಕ್ಕನರಗುಂದ, ಬಿ.ಜಿ.ಬಿರಾದಾರ, ಡಿ.ಬಿ.ಬಿಸ್ವಾಗರ, ಸಿ.ಎಚ್.ಹುಕ್ಕೇರಿ, ಶೋಭಾ ಕೋರಿಶೆಟ್ಟಿ, ಮಹಾಲಿಂಗಪ್ಪ ಬೀಳಗಿ ಮುಂತಾದವರು ಮಾತನಾಡಿ, ಈಗ ಮಕ್ಕಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ. ನಿಮ್ಮ ಹಾಗೆ ನಿಮ್ಮ ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತಿ. ತಂದೆ-ತಾಯಿಗಳು, ಗುರುಗಳಿಗೆ ಮರ್ಯಾದೆ ನೀಡುವುದನ್ನು ಕಲಿಸಿರಿ. ನೀವು ಮತ್ತು ನಿಮ್ಮ ಮುಂದಿನ ಪೀಳಿಗೆ ಸಂಸ್ಕಾರಯುತವಾಗಿ ಬಾಳಿದರೆ ಅದುವೇ ನಮಗೆ ನೀವು ಕೊಡುವ ಉಡುಗೊರೆ. ಅದನ್ನು ಬಿಟ್ಟು ನಾವು ಬೇರೇನನ್ನೂ ನಿಮ್ಮಿಂದ ಬಯಸುವುದಿಲ್ಲ ಎಂದರು.

    ನಿವೃತ್ತ ಹಿಂದಿ ಶಿಕ್ಷಕ ಅಣ್ಣಾಜಿ ಪಡತಾರೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕರಾದ ಎಂ.ಎಸ್.ಮಠಪತಿ, ವಿ.ಎಂ.ಮುಧೋಳ, ಎಸ್.ಎಂ.ಹಳ್ಳಿ ಮುಂತಾದವರು ವೇದಿಕೆಯಲ್ಲಿದ್ದರು.

    ಹಳೇ ವಿದ್ಯಾರ್ಥಿಗಳಾದ ಪಂಡಿತ ಪೂಜೇರಿ, ರಮೇಶ ಗೋಲಭಾವಿ, ಮೀರಾ ತಟಗಾರ ಇತರರು ತಮ್ಮ ಅನಿಸಿಕೆ ಹೇಳಿದರು. 34 ವರ್ಷಗಳ ನಂತರ ಒಂದು ಕಡೆ ಸೇರಿದ್ದ ನೂರಕ್ಕೂ ಹೆಚ್ಚು ಸಹಪಾಠಿಗಳು ಉಭಯ ಕುಶಲೋಪರಿ ನಡೆಸಿದರು. ಸಹಪಾಠಿಗಳಾದ ರಾಹುಲ ಅವರಾದಿ, ಸಂಜು ಅಂಬಿ, ರಾಜು ನಂದೆಪ್ಪನವರ, ಸದಾಶಿವ ಗೊಬ್ಬರದ, ಎನ್.ಡಿ.ರಾಜೂರ, ಮಹಾಲಿಂಗ ಹೂಗಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts