More

    ಟ್ರಂಪ್ ತಲೆದಂಡಕ್ಕೆ ಒತ್ತಡ; ಡೊನಾಲ್ಡ್ ರಾಜೀನಾಮೆ ಕೊಡದಿದ್ರೆ ಪದಚ್ಯುತಗೊಳಿಸುವ ಎಚ್ಚರಿಕೆ

    ವಾಷಿಂಗ್ಟನ್: ಕ್ಯಾಪಿಟಲ್ ಹಿಲ್ ಹಿಂಸಾಚಾರ ಪ್ರಕರಣ ನಂತರದ ರಾಜಕೀಯ ಬೆಳವಣಿಗೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದಚ್ಯುತಿ ವಿಚಾರ ತೀವ್ರ ಚರ್ಚೆಗೆ ಒಳಗಾಗಿದೆ. ಟ್ರಂಪ್ ಕೂಡಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಪದಚ್ಯುತಿ ಪ್ರಕ್ರಿಯೆ ಮುಂದುವರಿಸುವುದಾಗಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಎಚ್ಚರಿಸಿದ್ದಾರೆ.

    ಅಧ್ಯಕ್ಷರು ರಾಜೀನಾಮೆ ನೀಡುತ್ತಾರೆ ಎಂಬ ಆಶಾವಾದ ಎಲ್ಲ ಸದಸ್ಯರಲ್ಲೂ ಇದೆ. ಇಲ್ಲದಿದ್ದರೆ ಕಾಂಗ್ರೆಸ್​ವುನ್ ಜ್ಯಾಮಿ ರಸ್ಕಿನ್ ಸಲ್ಲಿಸಿರುವ 25ನೇ ತಿದ್ದುಪಡಿ ಪ್ರಸ್ತಾವನೆ ಪ್ರಕಾರ ಪದಚ್ಯುತಿಗೆ ಕ್ರಮ ತೆಗೆದುಕೊಳ್ಳುವಂತೆ ರೂಲ್ಸ್ ಕಮಿಟಿಗೆ ನಿರ್ದೇಶನ ನೀಡಿದ್ದೇನೆ. 25ನೇ ತಿದ್ದುಪಡಿ, ಪದಚ್ಯುತಿ ಪ್ರಕ್ರಿಯೆ ಅಥವಾ ಪದಚ್ಯುತಿಗೆ ಗೌರವಯುತ ನಿರ್ಣಯ ತೆಗೆದುಕೊಳ್ಳುವುದು ಸೇರಿ ಎಲ್ಲ ಆಯ್ಕೆಗಳು ಮುಕ್ತವಾಗಿವೆ ಎಂದು ಪೆಲೋಸಿ ಎಚ್ಚರಿಸಿದ್ದಾರೆ.

    ಅಮೆರಿಕದ ಸಂವಿಧಾನದ ಪ್ರಕಾರ ನಾವೆಲ್ಲರೂ ಸದನದ ಸದಸ್ಯರು. ಅಮೆರಿಕಕ್ಕಿಂತ ದೊಡ್ಡವರು ಯಾರೂ ಇಲ್ಲ. ನಮ್ಮ ದೇಶದ ಸುರಕ್ಷತೆ, ಪ್ರಜಾಪ್ರಭುತ್ವವನ್ನು ಕಾಪಾಡುವುದಕ್ಕೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನ ಸದಸ್ಯರಾಗಿ ಅಧ್ಯಕ್ಷರನ್ನು ಹೊಣೆಗಾರರನ್ನಾಗಿಸಬೇಕು. ವೈಟ್ ಹೌಸ್​ನಲ್ಲಿ ಟ್ರಂಪ್ ಇದ್ದಷ್ಟೂ ಕಾಲ ಅಮರಿಕ ಸುರಕ್ಷಿತವಲ್ಲ. ಅವರನ್ನು ಈ ಕೂಡಲೇ ಪದಚ್ಯುತಿಗೊಳಿಸಬೇಕು ಎಂದು ಸ್ಪೀಕರ್ ಪೆಲೋಸಿಗೆ ಬರೆದ ಪತ್ರದಲ್ಲಿ ಹಲವು ಸದಸ್ಯರು ಆಗ್ರಹಿಸಿದ್ದಾರೆ.

    ಪದಚ್ಯುತಿ ಪ್ರಸ್ತಾವನೆ ಸಲ್ಲಿಕೆ: ಟ್ರಂಪ್ ಅವರಿಂದ ಅಧಿಕಾರ ದುರ್ಬಳಕೆ ಆಗಿದೆ ಎಂದು ಆರೋಪಿಸಿ ಸದಸ್ಯರಾದ ಜ್ಯಾಮಿ ರಸ್ಕಿನ್, ಡೇವಿಡ್ ಸಿಸಿಲಿನ್, ಟೆಡ್ ಲ್ಯೂ, ಕಹೆಲೆ ಇನ್ನಿತರರು ಒಂದು ಪದಚ್ಯುತಿ ನಿರ್ಣಯ ಪ್ರಸ್ತಾವನೆ ಸಲ್ಲಿಸಿದ್ದಾರೆ. ಟ್ರಂಪ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಚುನಾವಣಾ ಫಲಿತಾಂಶ ತಿರುಚಲು ಪ್ರಯತ್ನಿಸಿದ್ದರು. ಈಗ ದಂಗೆಗೆ ಪ್ರೇರಣೆ ನೀಡಿ ಹಿಂಸಾಚಾರಕ್ಕೆ ಕಾರಣವಾಗಿದ್ದು, ಅವರು ಪದಚ್ಯುತಿಗೆ ಅರ್ಹರಾಗಿದ್ದಾರೆ ಎಂದು ಕಾಂಗ್ರೆಸ್​ವುಮನ್ ಇಲ್ಹಾನ್ ಒಮರ್ ಪ್ರಸ್ತಾವನೆ ಸಲ್ಲಿಸಿದ್ದಾರೆ.

    ರಿಪಬ್ಲಿಕನ್ ಸೆನೆಟರ್ ಎಚ್ಚರಿಕೆ!: ಅಧ್ಯಕ್ಷ ಟ್ರಂಪ್ ರಾಜೀನಾಮೆ ನೀಡದೇ ಇದ್ದರೆ ನಾನು ಪಕ್ಷ ತ್ಯಜಿಸುವೆ. ಅಧಿಕಾರಾವಧಿ ಶುರುವಾಗುವ ಮೊದಲೇ ಸೆನೆಟ್​ನಲ್ಲಿ ಡೆಮಾಕ್ರಟರಿಗೆ ಬಹುಮತ ಒದಗಿಸುವ ಕೆಲಸ ರಿಪಬ್ಲಿಕನ್ನರೇ ಮಾಡ್ತಾರೆ ಎಂದು ಅಲಾಸ್ಕಾ ಸೆನೆಟರ್ ಲಿಸಾ ಮುರ್​ಕೋವಸ್ಕಿ ಎಚ್ಚರಿಸಿದ್ದಾರೆ.

    ಅಣ್ವಸ್ತ್ರ ದಾಳಿ ಆದೇಶದ ಭೀತಿ

    ಟ್ರಂಪ್ ಅವರ ಮಾನಸಿಕ ಸ್ಥಿತಿ ಕಾರಣ ಅಣ್ವಸ್ತ್ರ ದಾಳಿಯ ಅಧಿಕಾರ ದುರುಪಯೋಗವಾದೀತೆಂಬ ಭೀತಿಯೂ ವ್ಯಕ್ತವಾಗಿದೆ. ಹಿಂಸಾಚಾರದ ಬಳಿಕ ಸ್ಪೀಕರ್ ಪೆಲೋಸಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯರ ಜತೆಗೆ ಹೇಳಿಕೊಂಡ ವಿಚಾರ ಈಗ ಗಮನಸೆಳೆದಿದೆ. ‘ಅಧ್ಯಕ್ಷರಿಗೆ ಸಂವಿಧಾನದಲ್ಲಿ ನೀಡಲಾಗಿರುವ ಅಣ್ವಸ್ತ್ರ ಪ್ರಯೋಗದ ರಹಸ್ಯ ಅಧಿಕಾರವನ್ನು ತಡೆಯುವುದು ಹೇಗೆ ಎಂದು ತಿಳಿದುಕೊಳ್ಳಲು ಪೆಂಟಗನ್​ನ ಟಾಪ್ ಜನರಲ್ ಮಾರ್ಕ್​ವಿುಲ್ಲಿ ಅವರ ಜತೆಗೆ ಮಾತನಾಡಿದ್ದೆ. ಅಮೆರಿಕದ ಸಂವಿಧಾನದ ಪ್ರಕಾರ ಈ ಪರಮಾಧಿಕಾರವನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಕೂಡ ಇದರಲ್ಲಿ ಮಧ್ಯಪ್ರವೇಶಿಸಲಾಗದು. ಅಧ್ಯಕ್ಷರು ಎಲ್ಲೇ ಹೋದರೂ, ಅವರ ಆಪ್ತರೊಬ್ಬರು ಆ ಆದೇಶವನ್ನು ಅವರ ಜತೆಗೆ ಕೊಂಡೊಯ್ಯುತ್ತಾರೆ. ಆದರೆ ಪ್ರಯೋಗಕ್ಕೆ ಮೊದಲು ಅವರು ರಕ್ಷಣಾ ಮುಖ್ಯಸ್ಥರ ಜತೆಗೆ ಸಮಾಲೋಚನೆ ನಡೆಸಬೇಕಾದ್ದು ವಾಡಿಕೆ. ಆದರೆ, ಒಮ್ಮೆ ಅಧ್ಯಕ್ಷರು ನಿರ್ಧಾರ ತೆಗೆದುಕೊಂಡರೆ ಅದನ್ನು ಹಿಂಪಡೆಯಲಾಗದು. ಆದರೆ ನಿರ್ಧಾರ ಕಾನೂನು ಬದ್ಧವಾಗಿರಬೇಕು ಎಂಬ ನಿಯಮವಿದೆ ಎಂದು ಮಾರ್ಕ್​ವಿುಲ್ಲಿ ವಿವರಿಸಿದ್ದರು ಎಂದು ಪೆಲೋಸಿ ಹೇಳಿದ್ದಾರೆ.

    ಸಂಭ್ರಮಿಸಿದ್ದ ಟ್ರಂಪ್ ಬಳಗ: ಕ್ಯಾಪಿಟಲ್ ಹಿಲ್​ಗೆ ಟ್ರಂಪ್ ಬೆಂಬಲಿಗರು ಮುತ್ತಿಗೆ ಹಾಕುತ್ತಿದ್ದ ವೇಳೆ ಅದರ ವಿಡಿಯೋವನ್ನು ಸಿಸಿಟಿವಿ ಮೂಲಕ ನೋಡುತ್ತ, ಪಾಪ್ ಸಾಂಗ್ ಕೇಳುತ್ತ ಟ್ರಂಪ್ ಬಳಗ ಕುಣಿದಾಡಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ದೃಶ್ಯದಲ್ಲಿ ಅಧ್ಯಕ್ಷ ಟ್ರಂಪ್, ಮಗಳು ಇವಾಂಕಾ, ಪುತ್ರ ಡಾನ್ ಜ್ಯೂನಿಯರ್ ಮತ್ತು ಇತರರು ಕಾಣಿಸಿಕೊಂಡಿದ್ದಾರೆ. ದೃಶ್ಯ ಅಸ್ಪಷ್ಟವಾಗಿದ್ದರೂ, ಗುರುತು ಸಿಗುವಂತಿರುವ ಕಾರಣ ಅವರ ಹೊಣೆಗೇಡಿತನ ವ್ಯಾಪಕ ಟೀಕೆಗೆ ಒಳಗಾಗಿದೆ.

    ಸಂಸದ ತೇಜಸ್ವಿ ಸೂರ್ಯ ಟೀಕೆ: ಪ್ರಜಾಪ್ರಭುತ್ವ ವ್ಯವಸ್ಥೆಗೊಂದು ಎಚ್ಚರಿಕೆಯ ಘಂಟೆ ಇದು. ಇಂದು ಟ್ರಂಪ್ ಖಾತೆ ಬಂದ್ ಆಗಿದೆ. ದೊಡ್ಡ ದೊಡ್ಡ ಟೆಕ್ ಕಂಪನಿಗಳ ಮೇಲೆ ನಿಯಂತ್ರಣ, ನಿಬಂಧನೆಗಳು ಇಲ್ಲದೇ ಹೋದರೆ ನಾಳೆ ಯಾರ ಖಾತೆ ಬೇಕಾದರೂ ಬಂದ್ ಮಾಡಬಹುದು. ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆದರಿಕೆಯಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಒಳಿತಿಗಾಗಿ ಭಾರತ ಸರ್ಕಾರ ಮಧ್ಯಂತರ ನಿಯಂತ್ರಣ, ನಿಬಂಧನೆಗಳ ಪರಾಮರ್ಶೆ ನಡೆಸಬೇಕಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿ ನೀತಿ ವಿಚಾರವಾಗಿ ಗಮನಸೆಳೆದಿದ್ದಾರೆ.

    ಟ್ವಿಟರ್ ಖಾತೆ ಬಂದ್: ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದ ಟ್ವಿಟರ್, ಪರಿಸ್ಥಿತಿ ಸುಧಾರಿಸಿಲ್ಲ ಎಂಬ ಕಾರಣಕ್ಕೆ ಅವರ ಖಾತೆಯನ್ನು ಕಾಯಂ ಬಂದ್ ಮಾಡಿದೆ. ಇದು ವ್ಯಾಪಕ ಚರ್ಚೆಗೆ ಒಳಗಾಗಿದೆ. ಇದರ ಬೆನ್ನಿಗೆ, ಟ್ವಿಟರ್ ಮಾದರಿ ಯಲ್ಲಿ ತನ್ನದೇ ವೇದಿಕೆ ಸೃಷ್ಟಿಸಿಕೊಳ್ಳಲು ಅಧ್ಯಕ್ಷ ಟ್ರಂಪ್ ಮುಂದಾಗಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾವುದೇ ಕಂಪನಿ ತಡೆಯೋಕಾ ಗಲ್ಲ. ಅಭಿವ್ಯಕ್ತಿಗೆಂದೇ ಮೀಸಲಾದ ವೇದಿಕೆಯಲ್ಲಿ ಏಕಾಕಿಯಾಗಿ ಖಾತೆಯನ್ನೇ ಕ್ಲೋಸ್ ಮಾಡಿದ್ದು ಸರಿಯಲ್ಲ ಎಂಬ ಚರ್ಚೆ ಜಗತ್ತಿನಾದ್ಯಂತ ನಡೆದಿದೆ.

    ಅಮೆರಿಕ ಅಧ್ಯಕ್ಷರ ಪದಚ್ಯುತಿ ಹೇಗೆ?

    • ಆರು ಹೌಸ್ ಕಮಿಟಿಗಳು ಟ್ರಂಪ್ ವಿಚಾರಣೆ ನಡೆಸುವ ನಿರೀಕ್ಷೆ ಇದೆ. ಬಲವಾದ ಕೇಸ್​ಗಳನ್ನು ನ್ಯಾಯಾಂಗ ಕಮಿಟಿಗೆ ರವಾನಿಸಲಿವೆ.
    • ಬಲವಾದ ಕಾರಣಗಳಿರುವ ಪದಚ್ಯುತಿ ಪ್ರಸ್ತಾವನೆ ಇದ್ದರೆ, ಆಗ ಅದನ್ನು ಫ್ಲೋರ್ ವೋಟ್​ಗಾಗಿ ಹೌಸ್​ಗೆ ರವಾನಿಸಲಾಗುತ್ತದೆ.
    • ಪದಚ್ಯುತಿ ಪರವಾಗಿ ಅಧಿಕ ಮತಗಳು ಬಿದ್ದರೆ ಆಗ ಪದಚ್ಯುತಿ ಪ್ರಕ್ರಿಯೆ ಶುರುವಾಗುತ್ತದೆ.
    • ಪದಚ್ಯುತಿ ಪ್ರಸ್ತಾವನೆ ಸೆನೆಟ್​ಗೆ ರವಾನೆಯಾಗಿ ಅಲ್ಲಿ ವಿಚಾರಣೆ ನಡೆಯುತ್ತದೆ.
    • ವಿಚಾರಣೆ ನಂತರ ಸೆನೆಟ್​ನಲ್ಲಿ ಅಧ್ಯಕ್ಷರನ್ನು ದೋಷಿಯನ್ನಾಗಿಸುವ ಪ್ರಸ್ತಾವನೆ ಮತಕ್ಕೆ ಇರಿಸಲಾಗುತ್ತದೆ.
    • ಮೂರನೇ ಎರಡಂಶ ಅಥವಾ ಅದಕ್ಕೂ ಹೆಚ್ಚಿನ ಸದಸ್ಯರು ಪ್ರಸ್ತಾವನೆ ಪರವಾಗಿ ಮತ ಚಲಾಯಿಸಿದರೆ ಪದಚ್ಯುತಿ ನಡೆಯುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts