More

    ಮಾಡಿದ್ದನ್ನು ಉಣ್ಣಲೇ ಬೇಕು ಮಹರಾಯ!

    ಒಂದು ಹಳ್ಳಿಯಲ್ಲಿ ಹಸುಗಳನ್ನು ಸಾಕುತ್ತಿದ್ದ ರೈತನೊಬ್ಬ ವಾರಕ್ಕೊಮ್ಮೆ ಪಟ್ಟಣದಲ್ಲಿರುವ ಕಿರಾಣಿ ಅಂಗಡಿ ಮಾಲೀಕನಿಗೆ ಶುದ್ಧವಾದ ತುಪ್ಪವನ್ನು ತಂದುಕೊಡುತ್ತಿದ್ದ. ಒಂದು ಬಾಟಲಲ್ಲಿ ತುಪ್ಪ ತುಂಬಿ ಅದರಲ್ಲಿ ಒಂದು ಕೆ.ಜಿ ತುಪ್ಪ ಇದೆ ಎಂದು ಹೇಳಿ ಅಂಗಡಿ ಮಾಲೀಕನಿಗೆ ಕೊಡುತ್ತಿದ್ದ. ಮಾಲೀಕ ರೈತನ ಮಾತನ್ನು ನಂಬಿ ಅದನ್ನು ತೂಕ ಮಾಡದೆಯೇ ಖರೀದಿಸುತ್ತಿದ್ದ. ಪ್ರತಿಯಾಗಿ ರೈತನಿಗೆ ಮಾಲೀಕ ಅಕ್ಕಿ, ಬೇಳೆಗಳನ್ನು ಕೊಡುತ್ತಿದ್ದ. ಹೀಗೆ ಇವರಿಬ್ಬರ ವ್ಯವಹಾರ ವರುಷಗಳ ಕಾಲ ನಡೆಯುತ್ತಿತ್ತು.

    ಮಾಡಿದ್ದನ್ನು ಉಣ್ಣಲೇ ಬೇಕು ಮಹರಾಯ!ಎಂದಿನಂತೆ ದಸರಾ ಹಬ್ಬಕ್ಕೂ ರೈತ ಇದರಲ್ಲಿ ಒಂದು ಕೆ.ಜಿ ತುಪ್ಪ ಇದೆ ಎಂದು ಹೇಳುತ್ತ ತುಪ್ಪದ ಬಾಟಲಿಯನ್ನು ಮಾಲೀಕನಿಗೆ ಕೊಟ್ಟು ಹೋದ. ಅಂದು ಯಾಕೋ ವ್ಯಾಪಾರಿಗೆ ರೈತನ ಮೇಲೆ ಅನುಮಾನ ಬಂದು ತುಪ್ಪದ ಬಾಟಲಿಯನ್ನು ತೂಗಿ ನೋಡಿದ. ನೋಡಿದರೆ ಬಾಟಲಿಯ ಒಳಗೆ ಒಂದು ಕೆ.ಜಿ ತುಪ್ಪ ಇರದೆ ಬರೇ 800 ಗ್ರಾಂ ತುಪ್ಪ ಮಾತ್ರ ಇತ್ತು. ‘ನನಗೇ ಮೋಸ ಮಾಡಿದನಲ್ಲ; ಅದೂ ಬಹಳ ದಿನಗಳಿಂದ! ಇವನನ್ನು ವಿಚಾರಿಸಿಕೊಳ್ಳಬೇಕು’ ಎನ್ನುತ್ತಾ ರೈತನನ್ನು ತನ್ನ ಅಂಗಡಿಗೆ ಕರೆಸಿ ಬೈದು ಹಿಗ್ಗಾಮುಗ್ಗಾ ಥಳಿಸಲು ಆರಂಭಿಸಿದ. ಅಷ್ಟರಲ್ಲಿ ರೈತ ಸಮಾಧಾನದಿಂದ ‘ಮಾಲಿಕರೇ ಒಮ್ಮೆ ನನ್ನ ಮಾತನ್ನು ಕೇಳಿ, ನನ್ನ ಮನೆಯಲ್ಲಿ ತುಪ್ಪ ತೂಗಲು ತಕ್ಕಡಿ ಮತ್ತು ಕಲ್ಲು ಇಲ್ಲ’ ಎಂದ. ‘ಮತ್ತೆ ಹೇಗೆ ಬಾಟಲಿಯೊಳಗೆ ಒಂದು ಕೆ.ಜಿ ತುಪ್ಪ ಇದೆ ಎಂದು ಹೇಳಿದೆ?’ ಎಂಬುದಾಗಿ ಮಾಲಿಕ ವಿಚಾರಿಸಲು ರೈತ ಹೇಳಿದ: ‘ಸ್ವಾಮಿ, ನಾನು ನಿಮ್ಮ ಅಂಗಡಿಯಿಂದ ನೀವು ಒಂದು ಕೆ.ಜಿ ಇದೆ ಎಂದು ಕೊಟ್ಟ ಸಕ್ಕರೆ ಅಥವಾ ಬೇಳೆಗೆ ಸರಿ ಸಮಾನವಾದ ತುಪ್ಪವನ್ನು ತೂಗಿ ನಿಮಗೆ ತಂದುಕೊಟ್ಟಿರುವೆ. ನಾನು ಯಾವ ಮೋಸ ವಂಚನೆಯನ್ನು ಮಾಡಲಿಲ್ಲ’. ಇದನ್ನು ಕೇಳಿದ ವ್ಯಾಪಾರಿ ಇಂಗು ತಿಂದ ಮಂಗನಂತಾದ. ತಲೆತಗ್ಗಿಸಿ ರೈತನನ್ನು ಕಳುಹಿಸಿಕೊಟ್ಟ. ಅವನು ಗ್ರಾಹಕನಿಗೆ ಮಾಡಿದ ವಂಚನೆ, ಅವನಿಗೇ ತಿರುಗು ಬಾಣವಾಯಿತು.

    ಸಂದೇಶವಿಷ್ಟೆ : ಸಮಾಜಕ್ಕೆ ನಾವು ಏನನ್ನು ಕೊಡುತ್ತೇವೆಯೋ, ಅದುವೇ ನಮಗೆ ತಿರುಗಿ ಬರುತ್ತದೆ. ಪ್ರೀತಿ ಕೊಟ್ಟರೆ ಪ್ರೀತಿ; ಗೌರವ ಕೊಟ್ಟರೆ ಗೌರವ, ಅಂತೆಯೇ ಮೋಸ ಮಾಡಿದರೆ ಮೋಸ, ನಾವು ಯಾರಿಗೂ ಮೋಸ ಮಾಡಬಾರದು, ಅಂತೆಯೇ ಯಾರಿಂದಲೂ ಮೋಸ ಹೋಗಬಾರದು. ಬೇವಿನ ಗಿಡವನ್ನು ನೆಟ್ಟು ಅದರಿಂದ ಮಾವಿನ ಹಣ್ಣನ್ನು ಬಯಸಲಾದೀತೆ? ಒಟ್ಟಿನಲ್ಲಿ ನಮ್ಮ ಆಹಾರ ಮಾತ್ರವಲ್ಲ; ವ್ಯವಹಾರವೂ ಪರಿಶುದ್ಧವಾಗಿರಬೇಕು; ಪಾರದರ್ಶಕವಾಗಿರಬೇಕು; ನ್ಯಾಯಸಮ್ಮತವಾಗಿರಬೇಕು. ಜೀವನದಲ್ಲಿ ಹಣ ಗಳಿಸುವುದು ಮುಖ್ಯ, ಆದರೆ, ಒಬ್ಬ ವ್ಯಕ್ತಿ ಎಷ್ಟು ಗಳಿಸಿದ ಅನ್ನುವುದಕ್ಕಿಂತ ಅಷ್ಟನ್ನೂ ಹೇಗೆ ಗಳಿಸಿದ ಅನ್ನವುದು ಮುಖ್ಯ. ಅಂದರೆ ಹಣ ಗಳಿಸುವ ವಿಧಾನವೂ ನ್ಯಾಯ ಸಮ್ಮತವಾಗಿರಬೇಕು. ಧರ್ಮಸಮ್ಮತವಾಗಿರಬೇಕು. ಅನ್ಯಾಯ ಅಧರ್ಮ ಮಾರ್ಗದಲ್ಲಿ ಸಂಪಾದಿಸಿದ ಸಂಪತ್ತು ಬಹಳ ಕಾಲ ಉಳಿಯದು. ಅದು ಭಗವಂತನಿಗೂ ಪ್ರಿಯವಾಗದು; ಅವನ ಸೇವೆಗೂ ಉಚಿತವೆನಿಸದು. ಈ ಸತ್ಯವನ್ನರಿತೇ ಬಸವಣ್ಣನವರು ಹೇಳಿದರು ‘ಪಾಪಿಯ ಧನ ಪ್ರಾಯಶ್ಚಿತ್ತಂಗಲ್ಲದೆ ಸತ್ಪ್ರಾತ್ರರಿಗೆ ಸಲ್ಲದಯ್ಯಾ’ ಎಂದು.

    ಈ ಸತ್ಯವನ್ನೇ ಡಿ.ವಿ.ಜಿಯವರು ಇನ್ನೊಂದು ರೀತಿಯಾಗಿ ಹೇಳಿದರು. ‘ಅನ್ನವನು ಉಣುವಾಗ ಹೇಳು ನೀ ಅದ ಬೇಯಿಸಿದ ನೀರು ನಿನ್ನ ದುಡಿಮೆಯ ಬೆವರೇ ಪರರ ಕಣ್ಣೀರೋ?…’ ಎಂದು. ತಿಂದವರೆ ತಿಂದರೆ, ಬೆಂದವರೆ ಬೆಂದರೆ, ಬಡವರು ಬಡವರಾಗಿಯೇ ಉಳಿದು ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿ ಬೆಳೆದರೆ, ಅದು ಸಾಮಾಜಿಕ ನ್ಯಾಯವೆನಿಸದು ಹಾಗೂ ಪ್ರಗತಿಯೆನಿಸದು. ಕೂಡಿ ಬಾಳೋಣ ಕೂಡಿ ಬೆಳೆಯೋಣ ಇದುವೇ ಸಾಮಾಜಿಕ ಸಾಮರಸ್ಯದ ಮೂಲ ಮಂತ್ರ. ಅಂತೆಯೇ ಬರೇ ಹಣ ಮಾತ್ರ ಇರುವವನಷ್ಟು ಬಡವ ಬೇರೊಬ್ಬನಿಲ್ಲ. ಕಾರಣ ಹಣ ಜನರನ್ನು ದೂರ ಮಾಡುತ್ತದೆ, ಆದರೆ ಗುಣ ಜನರನ್ನು ಹತ್ತಿರ ತರುತ್ತದೆ. ಹಣವಿದ್ದಲ್ಲಿ ಕಲಹ, ಮನಸ್ತಾಪ, ವ್ಯಾಜ್ಯ, ಚೋರಭಯ, ರಾಜಭಯ ಸರ್ವೆ ಸಾಮಾನ್ಯ. ಮಾತ್ರವೇ ಅಲ್ಲ ಅದರ ರಕ್ಷಣೆಯೂ ಒಂದು ತಲೆನೋವಾಗಿ ಬಿಡುತ್ತದೆ. ಹಣ ಸಂಬಂಧಗಳನ್ನು ಕೆಡಿಸುತ್ತದೆ. ಹಣಕ್ಕೆ ಇನ್ನೊಂದು ದುರ್ಗಣವಿದೆ. ಅದೇನೆಂದರೆ ಇಷ್ಟು ದೊರಕಿದರೆ ಇನ್ನಷ್ಟರ ಆಸೆ,

    ಲಕ್ಷಾಧೀಶನಿಗೆ ಕೋಟ್ಯಧೀಶನಾಗುವ ಆಸೆ, ಕೋಟ್ಯಧೀಶನಾದ ಮೇಲೆ ಇನ್ನಷ್ಟು ಕೋಟಿಗಳ ಆಸೆ, ಈ ಆಸೆಗೆ ಇತಿಮಿತಿಯೂ ಇಲ್ಲ, ಅಂತ್ಯವೂ ಇಲ್ಲ. ಇದರ ಹಿಂದೆ ಓಡುವವರಿಗೆ ಶಾಂತಿಯೂ ಇಲ್ಲ ನೆಮ್ಮದಿಯೂ ಇಲ್ಲ.

    ಇಷ್ಟಕ್ಕೂ ಎಷ್ಟು ಗಳಿಸಿದರೇನು? ಎಲ್ಲವನ್ನು ಬಿಟ್ಟು ಒಂದು ದಿನ ಹೊರಟು ಹೋಗಲೇ ಬೇಕಲ್ಲ! ಈ ಸತ್ಯವನ್ನೇ ದಾಸರು ಹೇಳಿದರು ಸಾಯುವ ವೇಳೆ ಮಂಚಬಾರದು, ಮಡದಿ ಬಾರದು,

    ಕಂಚು ಕನ್ನಡಿ ಹೊನ್ನು ಬಾರದು, ಸೊತ್ತು ಬಾರದು ಅತ್ತು ಕರೆಯುವ ಬಳಗ ಬಾರದು, ನೀನು ಮಾಡಿದ ಕರ್ಮವೇ. ಆದುದರಿಂದ ಹಣದ ಸಂಪಾದನೆಯು ಸನ್ಮಾರ್ಗದಲ್ಲಿ ಆಗಿರಬೇಕು.

    (ಪ್ರತಿಕ್ರಿಯಿಸಿ: [email protected], [email protected])

    ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ಸಿಂಧು ಮೆನನ್​ ಈಗ ಹೇಗಿದ್ದಾರೆ? ಇಲ್ಲಿವೆ ಫೋಟೋಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts