More

    ಪೂರ್ಣ ಶಾಲಾರಂಭಕ್ಕೆ ಸಿದ್ಧತೆ, ಪಾಲಕರಿಗೆ ಸಂದೇಶ ಕಳುಹಿಸುತ್ತಿರುವ ಖಾಸಗಿ ಶಾಲೆಗಳು

    ಮಂಗಳೂರು/ಉಡುಪಿ: ಒಂದನೇ ತರಗತಿಯಿಂದಲೇ ಶಾಲೆಗಳ ಮರು ಆರಂಭಿಸಲು ಕೆಲವು ಶಿಕ್ಷಣ ತಜ್ಞರು ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಮತ್ತು ಪಾಲಕರ ಒತ್ತಾಯದ ಹಿನ್ನೆಲೆಯಲ್ಲಿ ಸರ್ಕಾರವೂ ಈ ಕುರಿತು ಗಂಭೀರ ಚಿಂತನೆ ನಡೆಸುತ್ತಿರುವಾಗಲೇ ಶಾಲೆಗಳೂ ಸಜ್ಜಾಗುತ್ತಿವೆ.

    ಪ್ರಸ್ತುತ 6ನೇ ತರಗತಿಯಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಮತ್ತು 9 ಮತ್ತು 10ಕ್ಕೆ ರೆಗ್ಯುಲರ್ ತರಗತಿ ನಡೆಯುತ್ತಿದೆ. ಫೆ.15ರಿಂದ 1ನೇ ತರಗತಿಯಿಂದ 8ನೇ ತರಗತಿವರೆಗೆ ರೆಗ್ಯುಲರ್ ತರಗತಿಗಳನ್ನು ನಡೆಸುವ ಸಾಧ್ಯತೆಗಳಿದ್ದು, ಈ ಸಂಬಂಧ ಕೆಲವು ಖಾಸಗಿ ಶಾಲೆಗಳು ಮಕ್ಕಳ ಪಾಲಕರಿಗೆ ಮೊಬೈಲ್ ಮೂಲಕ ಸಂದೇಶವನ್ನೂ ನೀಡುತ್ತಿದ್ದಾರೆ.

    ‘ನಾವು 15ರಿಂದ ಆಫ್‌ಲೈನ್ ತರಗತಿ ಆರಂಭಿಸುವ ಬಗ್ಗೆ ಯೋಜಿಸುತ್ತಿದ್ದೇವೆ, ಮಕ್ಕಳ ಹಾಗೂ ಸಿಬ್ಬಂದಿ ಸುರಕ್ಷತೆಯನ್ನು ಕಾಯ್ದುಕೊಳ್ಳಲಾಗುವುದು. ಸಾಮಾನ್ಯ ತರಗತಿ ಪ್ರಾರಂಭವಾದ ಬಳಿಕ ಆನ್‌ಲೈನ್ ತರಗತಿ ಇರುವುದಿಲ್ಲ, ಹಾಗಾಗಿ ವಿದ್ಯಾರ್ಥಿಗಳು ಸನ್ನದ್ಧರಾಗಿರಬೇಕು’ ಎಂಬ ಅರ್ಥದ ಮೆಸೇಜುಗಳು ಬರುತ್ತಿವೆ.

    ಸರ್ಕಾರ, ಸಚಿವರೂ 1ರಿಂದ 8ನೇ ತರಗತಿ ವರೆಗೆ ಶಾಲೆ ಪುನರಾರಂಭಿಸುವ ಸಾಧ್ಯತೆಗಳ ಬಗ್ಗೆ ಮಾತನಾಡುತ್ತಿರುವುದರಿಂದ ಕೆಲವು ಶಾಲೆಗಳು ಸಿದ್ಧತೆ ಮಾಡುತ್ತಿರಬಹುದು, ಆದರೆ ಅಧಿಕೃತವಾಗಿ ನಮಗೆ ಯಾವುದೇ ಆದೇಶ, ಸುತ್ತೋಲೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರ ಆದೇಶಿಸಿದರೆ ಕೂಡಲೇ ಶಾಲೆಗಳನ್ನು ಆರಂಭಿಸುವುದಕ್ಕೆ ನಾವು ಸಿದ್ಧರಿದ್ದೇವೆ, ಹೆಚ್ಚುವರಿ ಸಿದ್ಧತೆಯೇನೂ ಅಗತ್ಯವಿಲ್ಲ ಎಂದು ಡಿಡಿಪಿಐ ಮಲ್ಲೇಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

    ಹಾಜರಾತಿಯಲ್ಲಿ ದಕ್ಷಿಣ ಕನ್ನಡ ಫಸ್ಟ್: ಆರನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ದಕ್ಷಿಣ ಕನ್ನಡ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.

    ರಾಜ್ಯಮಟ್ಟದ ಹಾಜರಾತಿ ಅಂಕಿಅಂಶ ಗಮನಿಸಿದಾಗ ಬಹುತೇಕ ಮಕ್ಕಳು ಶಾಲೆ ಕಡೆಗೆ ಹೆಜ್ಜೆ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಅಂದಾಜು ಶೇ.56.19, ಒಂಬತ್ತನೇ ತರಗತಿಯಲ್ಲಿ ಶೇ.49.90 ಮತ್ತು ವಿದ್ಯಾಗಮದಲ್ಲಿ ಶೇ.41.83ರಷ್ಟು ವಿದ್ಯಾರ್ಥಿಗಳು ಮಾತ್ರ ತರಗತಿಗೆ ಬರುತ್ತಿದ್ದಾರೆ.

    ಹತ್ತನೇ ತರಗತಿಗೆ ಸರಾಸರಿ 2,77,341 ಮತ್ತು 9ನೇ ತರಗತಿಗೆ 2,61,169 ವಿದ್ಯಾರ್ಥಿಗಳು ಪ್ರತಿದಿನ ಹಾಜರಾಗಿದ್ದಾರೆ. ಇದು ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು. ಇನ್ನು ವಿದ್ಯಾಗಮದಲ್ಲಿ ಸರಾಸರಿ 6,18,313 ವಿದ್ಯಾರ್ಥಿಗಳು ಹಾಜರಾಗಿದ್ದು, ಇದು ಶೇ.41.83 ಮಾತ್ರ ಎನ್ನುತ್ತದೆ ಇಲಾಖೆ ಅಂಕಿ ಅಂಶ.

    ಸೋಮವಾರದ(ಫೆ.8) ಹಾಜರಾತಿ ಮಾಹಿತಿಯಂತೆ ದ.ಕ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ 33,446 ನೋಂದಾಯಿತ ವಿದ್ಯಾರ್ಥಿಗಳಲ್ಲಿ 25,235(ಶೇ.75.45) ಮಂದಿ ತರಗತಿಗೆ ಹಾಜರಾಗಿದ್ದಾರೆ. 9ನೇ ತರಗತಿಯ 33,812ರಲ್ಲಿ 23,403 ವಿದ್ಯಾರ್ಥಿಗಳು (ಶೇ.69.22) ಹಾಗೂ ವಿದ್ಯಾಗಮದ 97,183ರಲ್ಲಿ 59,487 ವಿದ್ಯಾರ್ಥಿಗಳು (ಶೇ.61.21)ಹಾಜರಾಗುತ್ತಿದ್ದಾರೆ. ಜಿಲ್ಲೆ ಶಾಲಾ ಆರಂಭದ ದಿನದಿಂದಲೇ ಹಾಜರಾತಿಯಲ್ಲಿ ಮೊದಲ ಸ್ಥಾನ ಬಿಟ್ಟು ಕೊಟ್ಟಿಲ್ಲ.

    ಇನ್ನು ದ.ಕ ಜಿಲ್ಲೆಗೆ ಸ್ಪರ್ಧೆ ನೀಡುವ ಉಡುಪಿ ಜಿಲ್ಲೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.56.47ರಷ್ಟು ಹಾಜರಾತಿಯೊಂದಿಗೆ 6ನೇ ಸ್ಥಾನದಲ್ಲಿದೆ. 9ನೇ ತರಗತಿಯಲ್ಲಿ ಶೇ.53.68ಹಾಜರಾತಿ ದಾಖಲಿಸಿ 5ನೇ ಸ್ಥಾನದಲ್ಲಿದೆ. ವಿದ್ಯಾಗಮದಲ್ಲಿ ಜಿಲ್ಲೆ 15 ಸ್ಥಾನದಲ್ಲಿದ್ದು, ಶೇ.34.82 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದಾರೆ.

    ರಾಯಚೂರಿಗೆ ಕೊನೇ ಸ್ಥಾನ: ಎಸ್ಸೆಸ್ಸೆಲ್ಸಿಯಲ್ಲಿ ಎರಡನೇ ಸ್ಥಾನದಲ್ಲಿರುವ ಉತ್ತರ ಕನ್ನಡದ ಶಿರಸಿ ಶೈಕ್ಷಣಿಕ ಜಿಲ್ಲೆ ಶೇ.68.07 ಮತ್ತು ಮೂರನೇ ಸ್ಥಾನದಲ್ಲಿ ಬೆಂಗಳೂರು ನಗರ ದಕ್ಷಿಣ 65.75 ಹಾಜರಾತಿ ಪಡೆದಿದೆ. ರಾಯಚೂರು ಜಿಲ್ಲೆ ಕೊನೇ ಸ್ಥಾನದಲ್ಲಿ ಶೇ.25.29ರಷ್ಟು ಮಾತ್ರ ಹಾಜರಾತಿಯಿದೆ.

    9ನೇ ತರಗತಿಯಲ್ಲಿ ಶೇ.59.69 ಹಾಜರಾತಿಯೊಂದಿಗೆ ಬೆಂಗಳೂರು ನಗರ ದಕ್ಷಿಣ ಎರಡನೇ ಸ್ಥಾನದಲ್ಲಿದ್ದು, ಉ.ಕ. ಶೇ.58.17ರಷ್ಟು ಹಾಜರಾತಿಯೊಂದಿಗೆ ಮೂರನೇ ಸ್ಥಾನ ಪಡೆದಿದೆ. ರಾಯಚೂರು (ಶೇ.21.90) ಕೊನೇ ಸ್ಥಾನದಲ್ಲಿದೆ.

    ವಿದ್ಯಾಗಮದಲ್ಲಿ ಶಿರಸಿ ಎರಡನೇ ಸ್ಥಾನದಲ್ಲಿದ್ದು, ಶೇ.56.47ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬೆಂಗಳೂರು ನಗರ ದಕ್ಷಿಣ ಜಿಲ್ಲೆಯಲ್ಲಿ ಶೇ.50.25ರಷ್ಟು ಹಾಜರಾತಿ ಇದೆ. ರಾಯಚೂರು ಜಿಲ್ಲೆ ಶೇ.17.47 ಹಾಜರಾತಿಯೊಂದಿಗೆ ಕೊನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಹೊರತುಪಡಿಸಿ, ಎರಡನೇ ಮೂರನೇ ಸ್ಥಾನಕ್ಕೆ ಪ್ರತಿನಿತ್ಯ ವಿವಿಧ ಜಿಲ್ಲೆಗಳಿಂದ ಪೈಪೋಟಿ ನಡೆಯುತ್ತಿದೆ.

    ಅಧಿಕಾರಿಗಳಿಂದ ಪ್ರೇರಣೆ: ದ.ಕ ಜಿಲ್ಲೆಯ ವಿದ್ಯಾಂಗ ಉಪನಿರ್ದೇಶಕರ ಸಹಿತ ಶಿಕ್ಷಣ ಇಲಾಖೆ ಅಧಿಕಾರಿಗಳು ಎಲ್ಲ ಶಾಲೆಗಳಿಗೆ ಭೇಟಿ ನೀಡುತ್ತಿದ್ದು, ಮಕ್ಕಳು, ಹೆತ್ತವರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳ ಜತೆ ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ವಿದಾರ್ಥಿಗಳು ಶಾಲೆಗೆ ಬರುವಂತೆ ಪ್ರೇರಣೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲೂ ಆನ್‌ಲೈನ್ ಕ್ಲಾಸ್‌ಗಿಂತ ರೆಗ್ಯುಲರ್ ತರಗತಿಗಳು ಉತ್ತಮ ಎನ್ನುವ ಭಾವನೆ ಮೂಡಿದ್ದು, ಶಾಲೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುತ್ತಿರುವುದು ಪಬ್ಲಿಕ್ ಪರೀಕ್ಷೆ ಫಲಿತಾಂಶ ದೃಷ್ಟಿಯಿಂದಲೂ ಉತ್ತಮ ಎನ್ನುತ್ತಾರೆ ಅಧಿಕಾರಿಗಳು. ಶೇ.100ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವಂತೆ ಪ್ರೇರೇಪಿಸುವ ಕೆಲಸ ಅಧಿಕಾರಿಗಳಿಂದ ನಡೆಯುತ್ತಿದೆ.

    ದ.ಕ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಇಲಾಖೆ ಅಧಿಕಾರಿಗಳು ಪ್ರತಿ ಶಾಲೆಗೆ ಭೇಟಿ ನೀಡಿ, ಮಕ್ಕಳು, ಹೆತ್ತವರಿಗೆ ಉತ್ತೇಜನ ನೀಡುತ್ತಿದ್ದಾರೆ. ಇದರಿಂದ ಮಕ್ಕಳಲ್ಲೂ ಶಾಲೆಗೆ ಹಾಜರಾಗಬೇಕು ಎನ್ನುವ ಉತ್ಸಾಹ ಬಂದಿದೆ. ಮುಂದಿನ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದ ಮೇಲೂ ಉತ್ತಮ ಪರಿಣಾಮ ಬೀರುವ ನಿರೀಕ್ಷೆಯಿದೆ.

    ಮಲ್ಲೇಸ್ವಾಮಿ, ಡಿಡಿಪಿಐ, ದ.ಕ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts