More

    ಗಣೇಶ ಹಬ್ಬಕ್ಕೆ ಸಿದ್ಧತೆ ಜೋರು

    ಹಾವೇರಿ: ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿರುವ ಗಣೇಶೋತ್ಸವಕ್ಕೆ ಜಿಲ್ಲೆ ಸಜ್ಜಾಗಿದೆ. ಕಳೆದ ಎರಡು ವರ್ಷ ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೇವಲ ಚಿಕ್ಕ ಮೂರ್ತಿ ಪ್ರತಿಷ್ಠಾಪನೆಗೆ ಸೀಮಿತಗೊಂಡಿದ್ದ ಗಣೇಶೋತ್ಸವ ಆಚರಣೆ, ಇದೀಗ ಮತ್ತೊಮ್ಮೆ ಹಿಂದಿನ ವೈಭವ ಪ್ರದರ್ಶನಕ್ಕೆ ವೇದಿಕೆ ಸಿದ್ಧಗೊಂಡಿದೆ.

    ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಒಂದು ದಿನ ಬಾಕಿ ಇರುವಾಗಲೇ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಹಾಗೂ ವೈಭವದ ಅಲಂಕಾರ, ಮಂಟಪಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

    ಈಗಾಗಲೇ ಎಲ್ಲೆಡೆ ಗಣೇಶನ ಮೂರ್ತಿ ಮಾರಾಟ ಭರದಿಂದ ಸಾಗಿದ್ದು, ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ನಗರದ ವಿವಿಧ ದೇವಸ್ಥಾನ, ಶಾಪಿಂಗ್ ಕಾಂಪ್ಲೆಕ್ಸ್ ಸೇರಿ ಗಣೇಶ ಮೂರ್ತಿ ತಯಾರಿಸುವ ಸ್ಥಳಕ್ಕೆ ಸಾರ್ವಜನಿಕರು ತೆರಳಿ ಮೂರ್ತಿಗಳನ್ನು ಗುರುತಿಸಿ ಮುಂಗಡ ಹಣ ಪಾವತಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

    ಮಣ್ಣಿನ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ: ಗಣೇಶ ಮೂರ್ತಿಗಳು ಅಂತಿಮ ರೂಪ ಪಡೆದಿದ್ದು, ಜನರನ್ನು ಆಕರ್ಷಿಸುತ್ತಿವೆ. ಪಂಚಮುಖಿ, ಸಿಂಹಾರೂಢ, ಪದ್ಮಾಸನ ರೂಪಿ, ಶಿವರೂಪಿ, ಸಾಯಿರೂಪಿ, ಸೂರ್ಯನಾರಾಯಣ ರೂಪಿ, ನವಿಲಿನ ಮೇಲೆ ನರ್ತಿಸುತ್ತಿರುವ, ನಂದಿ ಮೇಲೆ ಕುಳಿತಿರುವ, ಸನಾತನ, ಕೃಷ್ಣರೂಪಿ, ರಥ-ಕಮಲದ ಮೇಲೆ ಆಸೀನವಾಗಿರುವ ಗಣೇಶ ಸೇರಿದಂತೆ ತರಹೇವಾರಿ ಮೂರ್ತಿಗಳು ಮಾರುಕಟ್ಟೆಯಲ್ಲಿ ಆಕರ್ಷಿಸುತ್ತಿವೆ.

    ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಗಣೇಶ ಮೂರ್ತಿಗಳ ಬೆಲೆಯಲ್ಲಿ ಏರಿಕೆ ಕಂಡಿದೆ. ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕಿಡಲಾಗಿದ್ದು, ಗಾತ್ರಗಳಿಗೆ ಅನುಗುಣವಾಗಿ ಬೆಲೆ ನಿಗದಿಗೊಳಿಸಲಾಗಿದೆ. ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳು 350ರೂ.ಗಳಿಂದ 3ಸಾವಿರ ರೂ.ವರೆಗೆ ಮಾರಾಟವಾಗುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ 5ರಿಂದ 10 ಅಡಿ ಗಣೇಶ ಮೂರ್ತಿಗಳು 5ಸಾವಿರದಿಂದ 20ಸಾವಿರ ರೂ.ವರೆಗೆ ಮಾರಾಟವಾಗುತ್ತಿವೆ.

    ಜಿಲ್ಲೆಯಲ್ಲಿ ಗಣೇಶನ ಮೂರ್ತಿ ತಯಾರಿಸುವ ಪಾರಂಪರಿಕ ಕುಟುಂಬಗಳು ಸಾಕಷ್ಟಿವೆ. ಕಳೆದ ಎರಡು ವರ್ಷ ಮಾಡಿದ ಮೂರ್ತಿಯೂ ಮಾರಾಟವಾಗದೇ ನಷ್ಟ ಅನುಭವಿಸಿದ್ದ ಕಲಾವಿದರಿಗೆ ಈ ಸಲ ಕೈತುಂಬ ಕೆಲಸ ಸಿಕ್ಕಿದೆ. ಕಳೆದ ಎರಡು ತಿಂಗಳಿಂದಲೇ ಮೂರ್ತಿ ತಯಾರಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದ ಕಲಾವಿದರು, ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ. ಚಿಕ್ಕ ಹಾಗೂ ಪರಿಸರ ಸ್ನೇಹಿ ಬಣ್ಣದಿಂದ ತಯಾರಿಸಿದ ಮೂರ್ತಿಗಳಿಗೂ ಹೆಚ್ಚಿನ ಬೇಡಿಕೆ ಬರುತ್ತಿದೆ ಎಂದು ಕಲಾವಿದರು ಹೇಳುತ್ತಿದ್ದಾರೆ.

    ಪಿಒಪಿ ಮೂರ್ತಿ ಬ್ಯಾನ್

    ಪಿಒಪಿ ಮೂರ್ತಿಗಳ ಹಾವಳಿ ಹೆಚ್ಚಾಗಿದ್ದರಿಂದ ಜಿಲ್ಲಾಡಳಿತ ಮುಂಜಾಗ್ರತೆ ಕ್ರಮ ಕೈಗೊಂಡು ಗಣೇಶ ಮೂರ್ತಿ ತಯಾರಕರಲ್ಲಿ ಜಾಗೃತಿ ಮೂಡಿಸಿತ್ತು. ಕಳೆದ ಕೆಲವು ವರ್ಷಗಳಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಜಾಗೃತಿ ಪರಿಣಾಮವಾಗಿ ಪಿಒಪಿ ಮೂರ್ತಿಗಳು ಸಂಪೂರ್ಣವಾಗಿ ಕಣ್ಮರೆಯಾಗಿವೆ. ಇದರಿಂದಾಗಿ ಸಾರ್ವಜನಿಕರು ಸಹಜವಾಗಿ ಮಣ್ಣಿನ ಗಣೇಶ ಮೂರ್ತಿಗಳ ಕಡೆ ಮುಖ ಮಾಡುತ್ತಿದ್ದು, ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.

    ಗಣೇಶನ ಹಬ್ಬಕ್ಕೆ ಒಂದು ದಿನ ಬಾಕಿಯಿದೆ. ಈಗಾಗಲೇ ಅನೇಕರು ಮುಂಗಡವಾಗಿ ಹಣ ಕೊಟ್ಟು ಮೂರ್ತಿ ಬುಕ್ ಮಾಡಿದ್ದಾರೆ. ಚಿಕ್ಕ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದರಿಂದ ವಿಸರ್ಜನೆಗೂ ಅನುಕೂಲವಾಗಲಿದೆ. ಸಾಂಪ್ರದಾಯಿಕ ಮಣ್ಣಿನ ಮೂರ್ತಿ ತಯಾರಿಕೆ ಕಲಾವಿದರಿಗೆ ಬೇಡಿಕೆ ಬಂದಿರುವುದು ಆಶಾದಾಯಕ ಬೆಳವಣಿಗೆ.

    | ಶಂಕ್ರಾಚಾರ್ಯ ಕಮ್ಮಾರ, ಮೂರ್ತಿ ತಯಾರಕ, ದೇವಗಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts