ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಬಿಡಿಸಿ ಮಂಗಳೂರಿನಲ್ಲಿ ನಡೆದಿದ್ದ ರೋಡ್‌ಶೋ ವೇಳೆ ತಾನೇ ಮೋದಿಗೆ ಹಸ್ತಾಂತರಿಸಿದ್ದ ಕರಾವಳಿಯ ಕಲಾವಿದನಿಗೆ ಪ್ರಧಾನಿ ಕಚೇರಿಯಿಂದ ಮೆಚ್ಚುಗೆ ಪತ್ರದ ಜತೆಗೆ ಫೋನ್ ಕರೆಯೂ ಬಂದಿದೆ.
ಉಳ್ಳಾಲ ತಾಲೂಕಿನ ತೊಕ್ಕೊಟ್ಟು ನಿವಾಸಿ, ಕಲಾವಿದ ಕಿರಣ್, ಮೋದಿಯವರ ಚಿತ್ರ ಬಿಡಿಸಿ ಮಂಗಳೂರಿನಲ್ಲಿ ನಡೆದ ರೋಡ್‌ಶೋ ವೇಳೆ ಪ್ರದರ್ಶಿಸಿದ್ದರು. ಇದನ್ನು ಗಮನಿಸಿದ್ದ ಮೋದಿಯವರು ತಕ್ಷಣ ಎಸ್‌ಪಿಜಿ ಕಮಾಂಡೊ ಮೂಲಕ ಚಿತ್ರ ತರಿಸಿ ಸ್ಥಳದಲ್ಲೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬುಧವಾರ ಪ್ರಧಾನಿ ಕಚೇರಿಯಿಂದಲೇ ಕಿರಣ್‌ಗೆ ಕರೆಬಂದಿದ್ದು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಕೆಲಹೊತ್ತಿನ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಧಾನಿಯ ಪತ್ರ ಅವರಿಗೆ ಇ-ಮೇಲ್ ಮೂಲಕ ಬಂದಿದೆ.
‘ನೀವು ಉತ್ತಮ ಕೌಶಲದಿಂದ ಮಾಡಿದ ಚಿತ್ರಕಲೆ ನಮ್ಮ ಯುವಶಕ್ತಿಯ ಸಾರವನ್ನು ಬಿಂಬಿಸಿದೆ. ನಾವು ಪ್ರಗತಿಪರ ಭಾರತದ ನಿರ್ಮಾಣಕ್ಕೆ ಮತ್ತು ನಮ್ಮ ಯುವಕರಿಗೆ ಭರವಸೆಯ ನಾಳೆಯನ್ನು ಭದ್ರಪಡಿಸಲು ಶ್ರಮಿಸುತ್ತಿರುವಾಗ, ಇಂತಹ ಪ್ರೀತಿಯ ಸಂಕೇತ ರಾಷ್ಟ್ರ ಮತ್ತು ಜನ ಸೇವೆಯಲ್ಲಿ ಇನ್ನಷ್ಟು ಶ್ರಮಿಸಲು ನನಗೆ ಶಕ್ತಿ ಮತ್ತು ಉತ್ಸಾಹ ತುಂಬುತ್ತವೆ. 2047ರಲ್ಲಿ ನಾವು ನಮ್ಮ ಸ್ವಾತಂತ್ರೃದ ಶತಮಾನೋತ್ಸವ ಸಮೀಪಿಸುತ್ತಿರುವ ವೇಳೆ ಅಭಿವೃದ್ಧಿ ಹೊಂದಿದ ಭಾರತದ ಭವಿಷ್ಯವು ಸಮರ್ಥರ ಕೈಯಲ್ಲಿದೆ ಎಂದು ನಮ್ಮ ಯುವಶಕ್ತಿಯ ಹುರುಪು ನನಗೆ ಭರವಸೆ ನೀಡುತ್ತದೆ. ನಿಮ್ಮ ಸೃಜನಶೀಲ ಕೌಶಲಗಳಿಗೆ ಅಭಿವ್ಯಕ್ತಿ ನೀಡುವುದನ್ನು ನೀವು ಮುಂದುವರಿಸಿ. ಶುಭಾಶಯಗಳು’ ಎಂದು ಪತ್ರದಲ್ಲಿ ಬರೆಯಲಾಗಿದೆ.