More

    ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಜ್ಜು ; ಕರೊನಾ ಆತಂಕದ ನಡುವೆ ವ್ಯವಸ್ಥೆ

    ತುಮಕೂರು: ಕರೊನಾ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ತುಮಕೂರು ಶೈಕ್ಷಣಿಕ ಜಿಲ್ಲೆಯ 23783 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 13523 ಸೇರಿ ಒಟ್ಟು 37306 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ.

    ಜೂ.25ರಿಂದ ಜುಲೈ 4ರವರೆಗೆ ಪರೀಕ್ಷೆ ನಡೆಯಲಿದ್ದು, 2 ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 144 ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. 20329 ಬಾಲಕರು ಹಾಗೂ 16977 ಬಾಲಕಿಯರು ಪರೀಕ್ಷೆಗೆ ನೋಂದಣಿಯಾಗಿದ್ದಾರೆ. ಇವರಲ್ಲಿ 2082 ಪುನರಾವರ್ತಿತ, 587 ಖಾಸಗಿ, 204 ಖಾಸಗಿ ಪುನರಾವರ್ತಿತ ಹಾಗೂ 67ಪುನರಾವರ್ತಿತ ಹಳೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಸುರಕ್ಷತೆಯೊಂದಿಗೆ ಪರೀಕ್ಷೆ ನಡೆಸಲು ಅಗತ್ಯಕ್ರಮ ಕೈಗೊಳ್ಳಲಾಗಿದೆ.

    ಸ್ಯಾನಿಟೈಸೇಷನ್: ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ತುಮಕೂರಿನ 85 ಹಾಗೂ ಮಧುಗಿರಿಯ 59 ಸೇರಿ ಒಟ್ಟು 144 ಪರೀಕ್ಷಾ ಕೇಂದ್ರಗಳಲ್ಲಿನ ಎಲ್ಲ ಕೊಠಡಿಗಳಿಗೆ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ಪ್ರತೀ ಪರೀಕ್ಷಾ ಕೇಂದ್ರದಲ್ಲಿಯೂ ದೈಹಿಕ ಶಿಕ್ಷಣ ಶಿಕ್ಷಕರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ವಯಂಸೇವಕರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಸಹಕರಿಸಲಿದ್ದಾರೆ. ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿಯೇ ಆರೋಗ್ಯ ತಪಾಸಣಾ ಕೇಂದ್ರ ತೆರೆದು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮಾಸ್ಕ್ ಧರಿಸಿರುವುದನ್ನು ಖಾತ್ರಿಪಡಿಸಿಕೊಂಡು ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು.

    ಸಾರಿಗೆ ಸೌಲಭ್ಯ: ಸಾರಿಗೆ ಬಸ್‌ನಲ್ಲಿ ಪರೀಕ್ಷಾ ಪ್ರವೇಶ ಪತ್ರ ತೋರಿಸಿದಲ್ಲಿ ಪ್ರಯಾಣ ಉಚಿತ. ರಾಜ್ಯ ರಸ್ತೆ ಸಾರಿಗೆ ಬಸ್ ಮಾರ್ಗ ಇಲ್ಲದ ಕಡೆಗಳಲ್ಲಿ ಪಾಲಕರ ಕೋರಿಕೆ ಮೇರೆಗೆ ಖಾಸಗಿ ಶಾಲಾ
    ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

    ಅಧ್ಯಯನಕ್ಕೆ ಅವಕಾಶ: ಪರೀಕ್ಷೆ ಬೆಳಗ್ಗೆ 10.30ಕ್ಕೆ ಆರಂಭವಾಗಲಿದ್ದು, ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ಬೆಳಗ್ಗೆ 8.30ರಿಂದಲೇ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಪಡೆಯಬಹುದು. ಹಾಗಾಗಿ, ಈ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿ 9.45ರವರೆಗೆ ಅಧ್ಯಯನ ಮಾಡಲು ಅವಕಾಶವಿದೆ.

    ಗೊಂದಲ ಬೇಡ, ನಿರಾಂತಕವಾಗಿರಿ: ಪಿಯುಸಿ ಇಂಗ್ಲಿಷ್ ಪರೀಕ್ಷೆ ಸಂದರ್ಭದಲ್ಲಿ ಉಂಟಾದ ಗೊಂದಲಕ್ಕೆ ತೆರೆಎಳೆಯಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಕೊಠಡಿ ಹಂಚಿಕೆ ಹಾಗೂ ಕಟ್ಟಡಗಳ ಮಾಹಿತಿಯನ್ನು ಸಂಬಂಧಿಸಿದ ಶಾಲೆಗಳ ಮೂಲಕ ಒಂದು ದಿನ ಮುಂಚಿತವಾಗಿ ತಿಳಿಸಲಾಗುವುದು. ಕೊಠಡಿ ಹಂಚಿಕೆಯ ಬಗ್ಗೆ ಜೂ.24ರಂದು ಮುಂಜಾಗ್ರತೆಯೊಂದಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ನೋಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.

    ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಿ: ಪರೀಕ್ಷೆ ಗೊಂದಲ, ಸಮಸ್ಯೆಗಳೇನಿದರೂ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ತಾಲೂಕು ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಬಹುದು. ತುಮಕೂರು-9480695360, ತಿಪಟೂರು-9480695359, ಚಿಕ್ಕನಾಯಕನಹಳ್ಳಿ-9480695352, ಗುಬ್ಬಿ-9480695353, ಕುಣಿಗಲ್- 9480695355, ತುರುವೇಕೆರೆ-9480695361 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆ ವಿದ್ಯಾರ್ಥಿಗಳು ಶಿರಾ-9480695358. ಕೊರಟಗೆರೆ-9480695354, ಮಧುಗಿರಿ-9480695356, ಪಾವಗಡ-9480695357 ಸಂಪರ್ಕಿಸಬಹುದು. ಅದೇ ರೀತಿ ಜಿಲ್ಲಾಮಟ್ಟದ ಅಧಿಕಾರಿಗಳಾದ ತುಮಕೂರು ಡಿಡಿಪಿಐ -9448999352, ಮಧುಗಿರಿ ಡಿಡಿಪಿಐ-9448999347, ತುಮಕೂರು ಶಿಕ್ಷಣಾಧಿಕಾರಿ-9449126869, ಮಧುಗಿರಿ ಶಿಕ್ಷಣಾಧಿಕಾರಿ-9880541556 ಸಂಪರ್ಕಿಸಬಹುದು.

    ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಲಾಗಿದೆ, ವಿದ್ಯಾರ್ಥಿಗಳು ಯಾವುದೇ ಆತಂಕ ಪಡದೆ, ಗೊಂದಲ ಮಾಡಿಕೊಳ್ಳದೆ ಪರಸ್ಪರ ಅಂತರ ಕಾಪಾಡಿಕೊಂಡು ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.
    ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts