More

    ದಾಖಲೆ ಸಿದ್ಧತೆಯಲ್ಲಿ ಆಕಾಂಕ್ಷಿ ಅಭ್ಯರ್ಥಿಗಳು

    ಗದಗ: ಹಳ್ಳಿಫೈಟ್​ಗೆ ದಿನಾಂಕ ಘೋಷಣೆಯಾಗಿದ್ದು, ಆಕಾಂಕ್ಷಿ ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮುಖ್ಯವಾಗಿ ಗ್ರಾಮ ಪಂಚಾಯಿತಿ ಪ್ರಮಾಣಪತ್ರ ಪಡೆಯಲು ತರಾತುರಿ ಶುರುವಾಗಿದೆ.

    ಮನೆಯ ಕರ, ನೀರಿನ ಕರ ಸೇರಿ ಗ್ರಾಪಂಗೆ ಕಟ್ಟಬೇಕಿರುವ ಬಾಕಿ ಹಣವನ್ನು ತುಂಬಿ ಪಿಡಿಒ ಅವರಿಂದ ಪ್ರಮಾಣಪತ್ರ ಪಡೆದು ನಾಮಪತ್ರದೊಂದಿಗೆ ಸಲ್ಲಿಸಬೇಕು. ಗ್ರಾಪಂಗೆ ಕಟ್ಟಬಾಕಿದಾರರಾಗಿದ್ದರೆ ಪ್ರಮಾಣ ಪತ್ರ ಸಿಗುವುದಿಲ್ಲ. ಪ್ರಮಾಣ ಪತ್ರ ಇಲ್ಲದಿದ್ದರೆ ನಾಮಪತ್ರ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹಳ್ಳಿ ಅಖಾಡದಲ್ಲಿ ಸ್ಪರ್ಧಿಸಲು ಮುಂದಾಗಿರುವ ಹಲವಾರು ಜನರು ಕಟ್ಟಬಾಕಿ ಪಾವತಿಸಿ ಪ್ರಮಾಣಪತ್ರ ಪಡೆಯಲು ಪಂಚಾಯಿತಿಗೆ ಲಗ್ಗೆ ಇಟ್ಟಿದ್ದಾರೆ.

    ಪಕ್ಷ ರಹಿತವಾಗಿ ನಡೆಯುವ ಚುನಾವಣೆ ಇದಾಗಿದ್ದರಿಂದ ಇಲ್ಲಿ ಪಕ್ಷಗಳು ಈತ ತಮ್ಮ ಅಭ್ಯರ್ಥಿ ಎಂದು ಬಿ ಫಾಮ್ರ್ ನೀಡುವ ಅವಶ್ಯಕತೆ ಇಲ್ಲ. ಸಾಮಾನ್ಯ ಅಭ್ಯರ್ಥಿಗಳು ನಾಮಪತ್ರದ ಜತೆ 200 ರೂ. ಠೇವಣಿಯನ್ನು ನಗದು ರೂಪದಲ್ಲಿ ಸಲ್ಲಿಸಬೇಕು. ಎಸ್​ಸಿ, ಎಸ್​ಟಿ, ಒಬಿಸಿ, ಮಹಿಳೆ ಹೀಗೆ ಯಾವುದೇ ಮೀಸಲಾತಿ ಇದ್ದರೂ ಅವರು 100 ರೂ. ಮಾತ್ರ ಠೇವಣಿ ಸಲ್ಲಿಸಿದರೆ ಸಾಕು.

    ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿ ಕಡ್ಡಾಯವಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಮತದಾರನಾಗಿರಬೇಕು. ಅದನ್ನು ಖಚಿತ ಪಡಿಸಲು ಅಭ್ಯರ್ಥಿ ಯಾವುದಾದರೊಂದು ಗುರುತಿನ ಚೀಟಿಯ ನಕಲು ಪ್ರತಿಯನ್ನು ನಾಮಪತ್ರದ ಜತೆಗೆ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿ ನಾಲ್ಕು ನಾಮಪತ್ರ ಸಲ್ಲಿಸಬಹುದು. ಆತನಿಗೆ ಒಬ್ಬ ಸೂಚಕ ಸಹಿ ಹಾಕಿದರೆ ಸಾಕು. ಸೂಚಕನೂ ಸಹ ಅದೇ ಗ್ರಾಮ ಪಂಚಾಯಿತಿ ಮತದಾರನಾಗಿರಬೇಕು.

    ರಾಜ್ಯ ಚುನಾವಣೆ ಆಯೋಗವು ಗ್ರಾಪಂ ಚುನಾವಣೆಗೆ ನಾಮಪತ್ರ ನಮೂನೆ ಸಿದ್ಧಪಡಿಸಿದೆ. ಚುನಾವಣೆ ಅಧಿಸೂಚನೆ ಹೊರಡಿಸಿದ ದಿನದಿಂದಲೇ ಸಂಬಂಧಿಸಿದ ಗ್ರಾಪಂನಿಂದ ನಾಮಪತ್ರ ನೀಡಲಾರಂಭಿಸುತ್ತಾರೆ. ಅದೇ ನಮೂನೆಯಲ್ಲಿ ನಾಮಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

    ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಯೂ ತನ್ನ ಸ್ವವಿವರ ಘೋಷಣೆ ಪತ್ರವನ್ನು ನೀಡಬೇಕು. ಅದರಲ್ಲಿ ಅಭ್ಯರ್ಥಿಯ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದಲ್ಲಿ ಅದರ ಮಾಹಿತಿ, ತನ್ನ ಹಾಗೂ ಕುಟುಂಬದ ಒಟ್ಟು ಆಸ್ತಿ ವಿವರ, ಶಿಕ್ಷಣ, ಉದ್ಯೋಗ ಕುರಿತು ಮಾಹಿತಿ ನೀಡಬೇಕು. ನಾಮಪತ್ರವನ್ನು ನೋಟರಿ ಮಾಡಿಸಿ ಸಲ್ಲಿಸಬಹುದು. ಇಲ್ಲವೇ ಎಲ್ಲವನ್ನೂ ಕೈಯಿಂದಲೇ ಬರೆದುಕೊಟ್ಟರೂ ಸ್ವೀಕರಿಸಬೇಕು ಎಂಬ ನಿಯಮವಿದೆ. ಆದರೆ, ನೋಟರಿಯವರು ಸಿದ್ಧಪಡಿಸುವ ಮಾದರಿಯಲ್ಲಿಯೇ ಎಲ್ಲ ಮಾಹಿತಿಗಳು ಇರಬೇಕಾಗುತ್ತದೆ.

    ಖರ್ಚಿಗಿಲ್ಲ ಮಿತಿ: ಎಂಎಲ್​ಎ, ಎಂಪಿ ಚುನಾವಣೆಯಲ್ಲಿ ಅಭ್ಯರ್ಥಿಯ ಚುನಾವಣೆ ಪ್ರಚಾರಕ್ಕಾಗಿ ಗರಿಷ್ಠ ಖರ್ಚಿನ ಮಿತಿಯನ್ನು ಚುನಾವಣೆ ಆಯೋಗ ನಿಗದಿಪಡಿಸುತ್ತದೆ. ಆಯೋಗ ನಿಗದಿಪಡಿಸಿದ ಮಿತಿಯೊಳಗೆ ಖರ್ಚು ಮಾಡಬೇಕು. ಆದರೆ, ಗ್ರಾಪಂ ಚುನಾವಣೆಯಲ್ಲಿ ಆ ಸಮಸ್ಯೆ ಇಲ್ಲ. ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಎಷ್ಟು ಬೇಕಾದರೂ ಖರ್ಚು ಮಾಡಬಹುದು.

    ಬೇಕಾದ ದಾಖಲೆಗಳು

    *ಅಧಿಕೃತ ನಮೂನೆಯಲ್ಲಿರುವ ನಾಮಪತ್ರ

    *ಮೀಸಲಾತಿಯಲ್ಲಿ ಅರ್ಜಿ ಸಲ್ಲಿಸಬೇಕಿದ್ದರೆ ಜಾತಿ ಪ್ರಮಾಣಪತ್ರ

    *ಗ್ರಾಪಂನಿಂದ ಪಡೆದ ಬೇಬಾಕಿ ಪ್ರಮಾಣಪತ್ರ

    *ಘೊಷಣಾ ಪತ್ರ

    *ಮೂರು ಪಾಸ್​ಪೋರ್ಟ್ ಅಳತೆಯ ಭಾವಚಿತ್ರಗಳು

    *ಗ್ರಾಪಂ ವ್ಯಾಪ್ತಿಯ ಮತದಾರ ಎಂದು ತಿಳಿಸಲು ಆಧಾರ್ ಅಥವಾ ಚುನಾವಣಾ ಗುರುತಿನ ಚೀಟಿ

    ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಬಯಸುವವರು ಕಡ್ಡಾಯವಾಗಿ ಗ್ರಾಮ ಪಂಚಾಯಿತಿಯಲ್ಲಿರುವ ತಮ್ಮ ಬೇಬಾಕಿ ಹಣವನ್ನು ಪಾವತಿಸಬೇಕು. ಗ್ರಾಪಂ ಚುನಾವಣೆಯ ಮಾರ್ಗಸೂಚಿಯಲ್ಲಿ ಚುನಾವಣೆ ಪ್ರಚಾರದ ಖರ್ಚಿನ ಮಿತಿ ನಿಗದಿಪಡಿಸಿಲ್ಲ. ಹಾಗಂತ ಮನಸೋ ಇಚ್ಛೆ ಖರ್ಚು ಮಾಡಲು ಅವಕಾಶವೂ ಇಲ್ಲ. ಈ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಎಂಸಿಸಿ ಸಮಿತಿ (ಮಾದರಿ ಚುನಾವಣೆ ನೀತಿ ಸಂಹಿತೆ ಸಮಿತಿ) ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚು ಖರ್ಚು ಮಾಡುವವರ ಮೇಲೂ ನಿಗಾ ಇರಿಸಲಾಗುತ್ತಿದೆ. ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡುವಂತಿಲ್ಲ.
    | ಯಲ್ಲಪ್ಪ ಗೋಣೆಣ್ಣವರ, ತಹಸೀಲ್ದಾರ್, ಶಿರಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts