More

    ಜಗದಗಲ ಅಂಕಣ: ಹೀಗೇ ಒಂದಿಷ್ಟು ರಾಜ ರಾಣಿಯರ ಕಥೆಗಳು

    ರಾಷ್ಟ್ರಕವಿ ಕುವೆಂಪು ಅವರ ‘ಹೇಮಿಗಂಡ’ ಎಂಬ ಪುಟ್ಟ, ಸುಂದರ ಕವನ ನಿಮಗೆ ಗೊತ್ತೇ ಇರುತ್ತದೆ. ಕವಿಗಳು ಸ್ವರ್ಗದ ಬಾಗಿಲಿಗೆ ತಲುಪಿದಾಗ ಅಲ್ಲಿನ ದ್ವಾರಪಾಲಕ ನೀವ್ಯಾರೆಂದು ಅವರನ್ನು ಪ್ರಶ್ನಿಸುತ್ತಾನೆ. ಆಗ ಕವಿಗಳು ತಾವು, ರಾಷ್ಟ್ರಕವಿ ಕುವೆಂಪು ಅನ್ನುತ್ತಾರೆ, ವೈಸ್ ಛಾನ್ಸಲರ್ ಡಾ. ಕೆ.ವಿ. ಪುಟ್ಟಪ್ಪ ಅನ್ನುತ್ತಾರೆ, ಜ್ಞಾನಪೀಠ ಪುರಸ್ಕೃತ ಎಂದೆಲ್ಲಾ ಪರಿಚಯ ಮಾಡಿಕೊಳ್ಳುತ್ತಾರೆ. ಆದರೆ ಸ್ವರ್ಗದ ದ್ವಾರಪಾಲಕ ಅದಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಅವನ ದೃಷ್ಟಿಯಲ್ಲಿ ಅವಾವುವೂ ಕುವೆಂಪುರವರ ನಿಜವಾದ ಗುರುತುಗಳಲ್ಲ. ಕೊನೆಗೆ ಕುವೆಂಪು ಹೇಳುತ್ತಾರೆ- ‘ನಾನು ಹೇಮಿಗಂಡ.’ ದ್ವಾರಪಾಲಕ ತಕ್ಷಣ ಬಾಗಿಲು ತೆರೆಯುತ್ತಾನೆ!

    ಕುವೆಂಪುರ ಶ್ರೀಮತಿಯವರ ಹೆಸರು ಹೇಮಾವತಿ ಅಂತ ನಿಮಗೆ ಗೊತ್ತೇ ಇದೆ ಅಲ್ಲವೇ? ಹೇಮಾವತಿ ಎಂಬ ಹೆಸರು ರಾಷ್ಟ್ರಕವಿಗಳ ಬಾಯಲ್ಲಿ ಮುದ್ದಾಗಿ ‘ಹೇಮಿ’ ಆಗಿದೆ, ತಮ್ಮನ್ನವರು ಹೇಮಿಗಂಡ ಅಂದರೆ ಹೇಮಾವತಿಯ ಗಂಡ ಎಂದು ಕರೆದುಕೊಳ್ಳುತ್ತಾರೆ, ತಮ್ಮ ನಿಜವಾದ ಗುರುತೆಂದರೆ ಅದು ಮಾತ್ರ ಎಂದವರು ಅರಿತು ಅದನ್ನು ಘೊಷಿಸಿದ್ದು ಸ್ವರ್ಗದ ದ್ವಾರಪಾಲಕನಿಗೆ ಸಮ್ಮತವಾಗುತ್ತದೆ. ಬದುಕಿನಲ್ಲಿ ನಾವು ಗಳಿಸುವ ಪದವಿಪುರಸ್ಕಾರ, ಹಾರತುರಾಯಿಗಳಿಗಿಂತಲೂ ಒಂದು ಪ್ರೀತಿಪಾತ್ರ ಜೀವದ ಸಂಗಾತಿ ಎಂದು ಹೇಳಿಕೊಳ್ಳುವುದು ನಮ್ಮ ನಿಜವಾದ ಗುರುತಿನ ಚೀಟಿ ಎಂದು ಹೇಳುವ; ಆ ಮೂಲಕ ಬದುಕಿನಲ್ಲಿ ಪ್ರೇಮಕ್ಕೆ, ದಾಂಪತ್ಯಕ್ಕೆ ರಾಷ್ಟ್ರಕವಿಗಳು ನೀಡುವ ಅತ್ಯುನ್ನತ ಸ್ಥಾನಕ್ಕೆ ಈ ಕವನ ಸಾಕ್ಷಿಯಾಗಿದೆ.

    ಈಗ ನೀವು ನಿಮ್ಮನಿಮ್ಮ ಗಂಡ ಅಥವಾ ಹೆಂಡತಿಯ ಹೆಸರನ್ನು ಅಪರೂಪಕ್ಕೊಮ್ಮೆ ಉಕ್ಕುವ ಪ್ರೇಮದಲ್ಲಾದರೂ ಚಿಕ್ಕದಾಗಿಸಿ, ಮುದ್ದಾಗಿಸಿ ಕರೆಯುವುದನ್ನು ನೆನಪಿಸಿಕೊಳ್ಳಿ. ಅಷ್ಟರಲ್ಲಿ ನಾನು ಇನ್ನೊಂದು ಕಥೆ ಹೇಳುತ್ತೇನೆ. ರಾಷ್ಟ್ರಕವಿಗಳ ಆ ಮುದ್ದಾದ ಕವನದ ಹಿಂದಿನ ಕಥೆ ಅದು.

    ‘ಹೇಮಿಗಂಡ’ ಕವನಕ್ಕೆ ಪ್ರೇರಣೆ ಒದಗಿದ್ದು 19ನೇ ಶತಮಾನದ ಮಧ್ಯಭಾಗದಲ್ಲಿ ಸೃಷ್ಟಿಯಾಗಿ, ಕುವೆಂಪು ಕಾಲದಲ್ಲಿ ಸಾಕಷ್ಟು ಪ್ರಚಾರವಾದ, ಬ್ರಿಟಿಷ್ ರಾಜಮನೆತನಕ್ಕೆ ಸಂಬಂಧಿಸಿದ ಒಂದು ಕಥೆ. ಮಹಾರಾಣಿ ವಿಕ್ಟೋರಿಯಾ 1837ರಿಂದ 1901ರವರೆಗೆ ಅರವತ್ತಮೂರು ವರ್ಷಗಳು ಮತ್ತು ಏಳು ತಿಂಗಳುಗಳಷ್ಟು ದೀರ್ಘಕಾಲ ಬ್ರಿಟನ್​ನ ಮಹಾರಾಣಿಯಾಗಿದ್ದಳು. ಬ್ರಿಟನ್ ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಕಟ್ಟಿದ್ದು ಆಕೆಯ ಕಾಲದಲ್ಲಿ. ಅಲ್ಲಿಯ ಸಂಪ್ರದಾಯದ ಪ್ರಕಾರ ರಾಜ ಅಥವಾ ರಾಣಿಯ ಬದುಕುಳಿದ ಮೊದಲ ಸಂತಾನ ಮಾತ್ರ ಸಿಂಹಾಸನಕ್ಕೆ ಹಕ್ಕುದಾರ ಆಗುತ್ತದೆ. ಗಂಡುಸಂತಾನ ರಾಜನಾದರೆ ಗೊಂದಲವೇನೂ ಇಲ್ಲ. ಅವನಿಗೊಬ್ಬಳು ರಾಣಿ ಬರುತ್ತಾಳೆ ಮತ್ತವಳು ಯಾವುದೇ ತಕರಾರಿಲ್ಲದೇ ಅಂತಃಪುರದಲ್ಲೇ ಆರಾಮವಾಗಿ ಇರುತ್ತಾಳೆ. ಹೆಣ್ಣುಸಂತಾನ ರಾಣಿಯಾದರೆ ಆಕೆಯನ್ನು ಮದುವೆಯಾದವ ತಾನೇ ರಾಜ ಅಂತ ಹೇಳಿಕೊಂಡು ಸಿಂಹಾಸನದ ಮೇಲೆ ಕೂರಲು ಹೋಗುವಂತಿಲ್ಲ. ವಾಸ್ತವವಾಗಿ ಆತನಿಗೆ ಹೆಸರಿಗಾದರೂ ‘ರಾಜ’ ಎಂಬ ಪದವಿಯೇ ಸಿಗುವುದಿಲ್ಲ. ಸಿಂಹಾಸನದ ಮೇಲಿರುವ ರಾಣಿಗೆ ಗಂಡನಾದರೂ ಆತ ‘ಅಮ್ಮಾವ್ರ ಗಂಡ’ ಅಷ್ಟೇ. ಅವನಿಗೆ ಸಿಗುವ ಪದವಿ ಕೇವಲ ರಾಜಕುಮಾರ ಅಂತ. ವಿಕ್ಟೋರಿಯಾ ರಾಣಿಯಾಗಿ ಸಿಂಹಾಸನವೇರಿದ ಮೂರು ವರ್ಷಗಳ ನಂತರ ಅವಳ ಗಂಡನಾದ ಫ್ರಾನ್ಸಿಸ್ ಆಲ್ಬರ್ಟ್ ಆಗಸ್ಟಸ್ ಚಾರ್ಲಸ್ ಇಮಾನ್ಯುಯೇಲ್​ನದೂ ಅದೇ ಹಣೇಬರಹ. ಅವನಿಗೆ ಸಿಕ್ಕಿದ ಸಾಂವಿಧಾನಿಕ ಹೆಸರು ಪ್ರಿನ್ಸ್ ಆಲ್ಬರ್ಟ್ ಅಷ್ಟೇ. ಇರಲಿ, ಒಮ್ಮೆ ಮಹಾರಾಣಿಯ ಮೇಲೆ ರಾಜಕುಮಾರನಿಗೆ ಅದೇಕೋ ಕೋಪವುಂಟಾಯಿತು. ಆದರೇನು, ‘ಹೋಗು ನಿಮ್ಮಪ್ಪನ ಮನೆಗೆ’ ಅಂತ ಹೆಂಡತಿಯ ಮುಂದೆ ಅಬ್ಬರಿಸುವಂತಿಲ್ಲ. ಅವನಿರುವುದೇ ಅವಳ ಮನೆಯಲ್ಲಿ! ಮುನಿದ ಹೆಂಡತಿಯರು ಮಾಡುವಂತೆ ಈ ರಾಜಕುಮಾರ ಕೋಣೆಯೊಂದರೊಳಗೆ ನುಗ್ಗಿ ಬಾಗಿಲು ಹಾಕಿಕೊಂಡು ಕೂತುಬಿಟ್ಟ. ಮಹಾರಾಣಿ ಸುಮ್ಮನಿರುತ್ತಾಳೆಯೇ? ಬಾಗಿಲಲ್ಲಿ ನಿಂತು ಅದೇ ಹೇಳಿದಳು- ‘ನಾನು ಮಹಾರಾಣಿ ವಿಕ್ಟೋರಿಯಾ ಹೇಳ್ತಿದೀನಿ, ಬಾಗಿಲು ತೆರೆ.’ ಬಾಗಿಲು ಅಲುಗಲಿಲ್ಲ. ‘ನಾನು ಚಕ್ರವರ್ತಿನಿ ವಿಕ್ಟೋರಿಯಾ ಆರ್ಡರ್ ಮಾಡ್ತಿದೀನಿ, ತೆರೆ ಬಾಗಿಲನ್ನ.’ ಉಹ್ಞುಂ, ಆಲ್ಬರ್ಟ್ ಜಪ್ಪಯ್ಯ ಅನ್ನಲಿಲ್ಲ. ನಂತರ ಅದೇನೇನೋ ಅಂದಳು, ಬಾಗಿಲು ಮಾತ್ರ ಹಾಗೇ ಇತ್ತು. ಕೊನೆಗೆ ದಾರಿಗೆ ಬಂದಳು. ‘ಆಲ್ಬರ್ಟ್, ನಾನು ನಿನ್ ಹೆಂಡ್ತಿ ವಿಕ್ಟೋರಿಯಾ ಇಲ್ಲಿ ನಿಂತಿದೀನಿ. ಬಾಗಿಲು ತೆರೆ.’ ಮ್ಯಾಜಿಕ್! ಆಲ್ಬರ್ಟ್ ಛಕ್ಕನೆ ಬಾಗಿಲು ತೆರೆದು ಹೆಂಡತಿಯನ್ನು ಅಪ್ಪಿಕೊಂಡರು. ಮುಂದೆ ಅವರು ಬಹುಕಾಲ ಸುಖವಾಗಿ ಬಾಳಿದರು ಅಂತ ಈ ಕಥೆಯನ್ನು ಅಂತ್ಯಗೊಳಿಸ ಲಾಗುವುದಿಲ್ಲ. ಪಾಪ, ಆಲ್ಬರ್ಟ್, ವಿವಾಹಜೀವನದ ನಂತರ, 21 ವರ್ಷಗಳಲ್ಲಿ, ತಮ್ಮ 42ನೇ ವಯಸ್ಸಿನಲ್ಲಿ ತೀರಿಕೊಂಡರು. ಇರಲಿ, ಅದು ಬೇರೆಯೇ ಕಥೆ.

    ಮತ್ತೊಬ್ಬ ‘ಅಮ್ಮಾವ್ರ ಗಂಡ’, ಈಗಿನ ಎರಡನೆಯ ಎಲಿಜಬೆತ್ ರಾಣಿಯ ಪತಿ ಪ್ರಿನ್ಸ್ ಫಿಲಿಪ್ ಇದೇ ಏಪ್ರಿಲ್ 9ರಂದು, ನೂರು ವರ್ಷ ಪೂರೈಸಲು ಇನ್ನೆರಡೇ ತಿಂಗಳಿರುವಾಗ ತೀರಿಕೊಂಡಾಗ ಇದೆಲ್ಲ ನೆನಪಾಯಿತು. ಈ ನೆಪದಲ್ಲಿ ಹಲವು ರಾಜಮನೆತನಗಳ ಬಗ್ಗೆ ನಿಮಗೊಂದಿಷ್ಟು ಹೇಳುವ ಆಲೋಚನೆ ಬಂತು.

    ಬ್ರಿಟಿಷ್ ರಾಜಮನೆತನಕ್ಕೆ ಸಾವಿರ ವರ್ಷಗಳಿಗೂ ಮಿಕ್ಕಿದ ಇತಿಹಾಸವಿದೆ. ಮೊದಲಿಗೆ ಗ್ರೇಟ್ ಬ್ರಿಟನ್ ದ್ವೀಪದಲ್ಲಿ ತಲೆಯೆತ್ತಿದ ಸಣ್ಣಪುಟ್ಟ ರಾಜ್ಯಗಳು ಹತ್ತನೆಯ ಶತಮಾನದಲ್ಲಿ ಇಂಗ್ಲೆಂಡ್ ಮತ್ತು ಸ್ಕಾಟ್​ಲೆಂಡ್ ಎಂಬ ಎರಡೇ ರಾಜ್ಯಗಳಲ್ಲಿ ಒಗ್ಗೂಡಿ ಆ ಪ್ರಕಾರ ಎರಡೇ ರಾಜಮನೆತನಗಳು ಅಸ್ತಿತ್ವಕ್ಕೆ ಬಂದವು. ಎಂಟು ಶತಮಾನಗಳ ನಂತರ 1707ರಲ್ಲಿ ಇಂಗ್ಲೆಂಡ್ ಮತ್ತು ಸ್ಕಾಟ್​ಲೆಂಡ್​ಗಳೆರಡೂ ಒಗ್ಗೂಡಿ ಕಿಂಗ್​ಡಂ ಆಫ್ ಗ್ರೇಟ್ ಬ್ರಿಟನ್ ಅನ್ನು ಸ್ಥಾಪಿಸಿಕೊಂಡಾಗ ಇಡೀ ಬ್ರಿಟಿಷ್ ದ್ವೀಪ ಒಂದೇ ರಾಜಮನೆತನವನ್ನು ಪಡೆದುಕೊಂಡಿತು ಮತ್ತು ಇಂಗ್ಲೆಂಡ್​ನಲ್ಲಿ ಚಾಲ್ತಿಯಲ್ಲಿದ್ದ ಸಾಂವಿಧಾನಿಕ ರಾಜಸತ್ತಾ ವ್ಯವಸ್ಥೆ ಇಡೀ ದ್ವೀಪಕ್ಕೆ ಅನ್ವಯವಾಗತೊಡಗಿತು. ಮುಂದೆ 1801ರಲ್ಲಿ ಪಕ್ಕದ ಐರ್​ಲೆಂಡ್ ಸಹ ಒಕ್ಕೂಟಕ್ಕೆ ಸೇರಿದಾಗ ಯುನೈಟೆಡ್ ಕಿಂಗ್​ಡಂ ಆಫ್ ಗ್ರೇಟ್ ಬ್ರಿಟನ್ ಆಂಡ್ ಐರ್​ಲೆಂಡ್ ಅಸ್ತಿತ್ವಕ್ಕೆ ಬಂತು. ಆದರೆ 1921ರಲ್ಲಿ ದಕ್ಷಿಣ ಐರ್​ಲೆಂಡ್ ಸ್ವತಂತ್ರಗೊಂಡು, ರಾಜಪ್ರಭುತ್ವವನ್ನು ತಿರಸ್ಕರಿಸಿ, ಐರಿಷ್ ರಿಪಬ್ಲಿಕ್ ಆದ ನಂತರದ ಈ ಒಂದು ಶತಮಾನದಲ್ಲಿ ಬ್ರಿಟಿಷ್ ಸಾಂವಿಧಾನಿಕ ರಾಜಸತ್ತೆ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್​ಲೆಂಡ್​ಗಳಿಗಷ್ಟೇ ಸೀಮಿತವಾಗಿದೆ. ಹಾಗೆಯೇ, ಒಂದುಕಾಲದಲ್ಲಿ ಬ್ರಿಟಿಷ್ ವಸಾಹತುಶಾಹಿ ಸಾಮ್ರಾಜ್ಯದ ಭಾಗಗಳಾಗಿ ಈಗ ಸ್ವತಂತ್ರಗೊಂಡಿರುವ ದೇಶಗಳು ಹಾಗೂ ಇನ್ನೂ ವಸಾಹತುಗಳಾಗಿಯೇ ಉಳಿದು ಕೊಂಡಿರುವ ಕೆಲವು ಸಣ್ಣಪುಟ್ಟ ದ್ವೀಪಗಳು ನಿರ್ವಿುಸಿಕೊಂಡಿರುವ ಬ್ರಿಟಿಷ್ ಕಾಮನ್​ವೆಲ್ತ್​ನ ವಿಧ್ಯುಕ್ತ ನಾಯಕ/ನಾಯಕಿ ಈ ಬ್ರಿಟಿಷ್ ರಾಜ/ರಾಣಿ.

    ಬ್ರಿಟಿಷ್ ಸಂವಿಧಾನಾತ್ಮಕ ರಾಜಸತ್ತೆಗೆ 800 ನೂರು ವರ್ಷಗಳ ಇತಿಹಾಸವಿದೆ. 1215ರ ಮ್ಯಾಗ್ನಾ ಕಾರ್ಟಾದಿಂದ ಹಂತಹಂತವಾಗಿ ವಿಕಾಸಗೊಳ್ಳುತ್ತಾ ಬಂದ ಬ್ರಿಟಿಷ್ ಸಂವಿಧಾನ ಪ್ರಜಾಪ್ರಭುತ್ವದ ಜತೆಗೆ ರಾಜಸತ್ತೆಯನ್ನೂ ಉಳಿಸಿಕೊಂಡಿದೆ. ಹೀಗಾಗಿ ಬ್ರಿಟನ್​ನಲ್ಲಿ ಏಕಕಾಲದಲ್ಲಿ ಮೂರು ವ್ಯವಸ್ಥೆಗಳು ಒಟ್ಟಿಗೆ ಕಾರ್ಯನಿರ್ವಹಿಸುತ್ತವೆ. ರಾಜ/ರಾಣಿ ಪ್ರತಿನಿಧಿಸುವ ರಾಜಸತ್ತೆ ಮತ್ತು ಶ್ರೀಮಂತಸತ್ತೆಯ ಪ್ರತೀಕವಾದ ಹೌಸ್ ಆಫ್ ಲಾರ್ಡ್್ಸ ಜತೆಗೇ ಅಪ್ಪಟ ಪ್ರಜಾಪ್ರಭುತ್ವದ ಪ್ರತೀಕವಾದ ಜನಪ್ರತಿನಿಧಿಗಳಿಂದ ಕೂಡಿದ ಹೌಸ್ ಆಫ್ ಕಾಮನ್ಸ್ ಏಕಕಾಲದಲ್ಲಿ ಅಸ್ತಿತ್ವದಲ್ಲಿರುವುದು ಬ್ರಿಟಿಷ್ ಸಂವಿಧಾನವ್ಯವಸ್ಥೆಯ ವೈಶಿಷ್ಟ್ಯ. ಆದರೆ ಯಾವುದೇ ವಿಷಯದಲ್ಲಿ ಸಂಸತ್ತಿನ ತೀರ್ವನವೇ ಅಂತಿಮವಾಗಿದ್ದು ರಾಷ್ಟ್ರದ ನಾಯಕರಾದ ರಾಜ ಅಥವಾ ರಾಣಿ ಅದಕ್ಕೆ ಅಂಗೀಕಾರ ನೀಡಲೇಬೇಕಾಗಿರುತ್ತದೆ. ಅಂದರೆ ರಾಜ/ರಾಣಿ ಹೆಸರಿಗೆ ಮಾತ್ರ ರಾಷ್ಟ್ರದ ನಾಯಕ/ಕಿ ಅಷ್ಟೇ. ಬ್ರಿಟಿಷ್ ಸರ್ಕಾರ ವನ್ನು ಹಿಸ್/ಹರ್ ಮೆಜೆಸ್ಟೀಸ್ ಗವರ್ನ್​ವೆುಂಟ್ ಎಂದು ವಿಧ್ಯುಕ್ತವಾಗಿ ಕರೆದರೂ ಸಂಸತ್ತು ಮತ್ತದರ ನಾಯಕನಾದ ಪ್ರಧಾನಮಂತ್ರಿ ನೇತೃತ್ವದ ಮಂತ್ರಿಮಂಡಲ ತೆಗೆದುಕೊಳ್ಳುವ ನಿರ್ಧಾರಗಳನ್ನು ರಾಜ/ರಾಣಿಯ ಹೆಸರಿನಲ್ಲಿ ಜಾರಿಗೆ ತರಲಾಗುತ್ತದೆ.

    ಬ್ರಿಟನ್​ನಂತಹದೇ ಸಾಂವಿಧಾನಿಕ ರಾಜಸತ್ತೆಗಳನ್ನು ಸ್ವೀಡನ್, ಡೆನ್​ವಾರ್ಕ್, ನೆದರ್​ಲ್ಯಾಂಡ್ ಹಾಗೂ ಬೆಲ್ಜಿಯಂಗಳೂ ಉಳಿಸಿಕೊಂಡಿವೆ.

    ಫ್ರಾನ್ಸ್​ನ ಬೊಬೋನ್ ಮತ್ತು ರಶಿಯಾದ ರೋಮನೋವ್ ರಾಜಮನೆಗಳಿಗೆ ಈ ಅದೃಷ್ಟವಿರಲಿಲ್ಲ. ಫ್ರೆಂಚ್ ಜನತೆ 1789ರಲ್ಲಿ ಕ್ರಾಂತಿ ನಡೆಸಿ ಅರಸ ಹದಿನಾರನೆಯ ಲೂಯಿ ಮತ್ತವನ ರಾಣಿ ಮೇರಿ ಆಂತಾಯ್ನೆತ್​ಳನ್ನು ಕತ್ತು ಕತ್ತರಿಸುವ ಗಿಲೋಟಿನ್ ಯಂತ್ರಕ್ಕೊಡ್ಡಿದರು. ನಂತರ ನೆಪೋಲಿಯನ್ ಬೊನಪಾರ್ತ್ ಮತ್ತವನ ಸೋದರಳಿಯ ಲೂಯಿ ನೆಪೋಲಿಯನ್ ಚಕ್ರವರ್ತಿಗಳೆಂದು ಕರೆದು ಕೊಂಡು ಬೊನಪಾರ್ತ್ ರಾಜಮನೆತನವನ್ನು ಸ್ಥಾಪಿಸಹೊರಟರೂ, ಇಬ್ಬರೂ ಯುದ್ಧಗಳಲ್ಲಿ ಸೋತು, ಒಬ್ಬಾತ ಇಂಗ್ಲಿಷರಿಗೆ ಸೆರೆಸಿಕ್ಕಿ ದೂರದ ಸೇಂಟ್ ಹೆಲೆನಾದಲ್ಲಿ ನಿಧಾನವಿಷಪ್ರಾಶನಕ್ಕೆ ಬಲಿಯಾದರೆ ಇನ್ನೊಬ್ಬ ಇಂಗ್ಲೆಂಡ್​ನಲ್ಲಿ ದೇಶಾಂತರವಾಸಿಯಾಗಿ ತೀರಿಕೊಂಡ. ಅಲ್ಲಿಗೆ ಫ್ರೆಂಚ್ ರಾಜಮನೆಗಳ ಇತಿಹಾಸ ಅಂತ್ಯಗೊಂಡು ಕಳೆದ ಒಂದೂವರೆ ಶತಮಾನದಿಂದಲೂ ಫ್ರಾನ್ಸ್ ಒಂದು ಗಣರಾಜ್ಯವಾಗಿದೆ.

    ರಶಿಯಾದ ರೋಮನೋವ್ ರಾಜಮನೆತನದ್ದು ಇನ್ನೂ ದೊಡ್ಡ ದುರಂತ. ಮೂರು ಶತಮಾನಗಳ ಕಾಲ ರಶಿಯಾವನ್ನಾಳಿದ ರೋಮ ನೋವ್ ರಾಜವಂಶ ಫೆಬ್ರವರಿ 1917ರ ಕ್ರಾಂತಿಯಲ್ಲಿ ಧೂಳೀಪಟವಾಯಿತು. ಆಗ ಸೆರೆಗೊಳಗಾದ ಅರಸ ಎರಡನೆಯ ನಿಕೋಲಾಸ್, ರಾಣಿ ಅಲೆಕ್ಸಾಂದ್ರಾ ಮತ್ತವರ ಮೂವರು ಮಕ್ಕಳನ್ನು ಅಕ್ಟೋಬರ್ ಕ್ರಾಂತಿಯ ರೂವಾರಿ ವಿ.ಐ. ಲೆನಿನ್​ನ ಆಜ್ಞೆಯ ಮೇರೆಗೆ ರಹಸ್ಯವಾಗಿ ಕೊಂದು ದೂರದ ಎಕಾತೆರೀನ್​ಬರ್ಗ್​ನಲ್ಲಿ ಹೂಳಲಾಯಿತು. 3 ದಶಕಗಳ ಹಿಂದೆ ಕಮ್ಯೂನಿಸ್ಟ್ ವ್ಯವಸ್ಥೆ ಕುಸಿದುಬಿದ್ದಾಗ ಆರಸುಮನೆತನದವರ ಶವಗಳನ್ನು ಹುಡುಕಿ ತೆಗೆದು ವಿಧಿಪೂರ್ವಕವಾಗಿ ಸಂಸ್ಕಾರ ಮಾಡಲಾಯಿತು.

    ಇನ್ನು ಪೂರ್ವಕ್ಕೆ ಹೊರಳುವುದಾದರೆ ಪಶ್ಚಿಮ ಏಶಿಯಾದಲ್ಲಿ ಮತ್ತು ಪೂರ್ವ ಏಶಿಯಾಗಳಲ್ಲೂ ಕೆಲವು ರಾಜಮನೆತನಗಳು ಈಗಲೂ ಉಳಿದುಕೊಂಡಿವೆ. ಸೌದಿ ಅರೇಬಿಯಾ ಮತ್ತು ಜೋರ್ಡಾನ್​ಗಳ ರಾಜಮನೆತನಗಳು ಸಂಪೂರ್ಣ ಆಡಳಿತಾತ್ಮಕ ಅಧಿಕಾರಗಳನ್ನು ಹೊಂದಿ, ನಿರಂಕುಶಾಧಿಕಾರ ಚಲಾಯಿಸುತ್ತಿದ್ದರೆ ಪೂರ್ವ ಏಶಿಯಾದ ರಾಜಮನೆತನಗಳು ಪ್ರಜಾಪ್ರಭುತ್ವೀಯ ಸಂವಿಧಾನಗಳಿಗೆ ತಲೆಬಾಗಿವೆ. ಇವುಗಳಲ್ಲಿ ಪ್ರಮುಖವಾದುದು ಜಪಾನೀ ರಾಜವಂಶ. ಇದು ಜಗತ್ತಿನ ಅತ್ಯಂತ ಹಳೆಯ ರಾಜವಂಶ. ಇದರ ಆರಂಭವನ್ನು ಇತಿಹಾಸಕಾರರು ಕ್ರಿ.ಶ. 3-6ನೆಯ ಶತಮಾನಗಳಲ್ಲಿ ಹುಡುಕಹೋದರೂ ಸ್ಥಳೀಯ ಐತಿಹ್ಯಗಳ ಪ್ರಕಾರ ಜಪಾನೀ ರಾಜವಂಶವನ್ನು ಸ್ಥಾಪಿಸಿದ್ದು ಸಾಮ್ರಾಟ ಜಿಮ್ಮು ಕ್ರಿ.ಪೂ. 660ರಲ್ಲಿ. ಆತ ಸೂರ್ಯದೇವಿ ಅಮಾತೆರಾಸು-ಓಮಿಕಾಮಿಯ ನೇರ ಸಂತಾನ ಎಂಬ ನಂಬಿಕೆ ಇದೆ, ಆ ಪ್ರಕಾರ ಇಂದಿನ ಸಾಮ್ರಾಟ ನರುಹಿತೋ ಸಹ ಅಮಾತೆರಾಸುಳ ಇಂದಿನ ತಲೆಮಾರು! ಜಪಾನೀಯರು ತಮ್ಮ ಅರಸನನ್ನು ‘ತೆನ್ನೊ’ ಅಂದರೆ ‘ದೇವ ಸಾಮ್ರಾಟ’ ಎಂದು ಕರೆಯುತ್ತಾರೆ. ಇಂದಿನ ಜಗತ್ತಿನಲ್ಲಿ ‘ಚಕ್ರವರ್ತಿ’ ಎಂಬ ಬಿರುದನ್ನು ಇನ್ನೂ ಉಳಿಸಿಕೊಂಡಿರುವ ಏಕೈಕ ಅರಸುಮನೆತನ ಜಪಾನ್​ನದು. ಮಲೇಶಿಯಾ ಮತ್ತು ಥಾಯ್ಲೆಂಡ್​ಗಳಲ್ಲೂ ಸಾಂವಿಧಾನಾತ್ಮಕ ರಾಜಸತ್ತೆ ಅಸ್ತಿತ್ವದಲ್ಲಿವೆ. ಥಾಯ್ಲೆಂಡ್​ನ ಚಕ್ರಿ ಅರಸುಮನೆತನದ ಅರಸರ ಉಪಾಧಿ ‘ರಾಮ’ ಎನ್ನುವುದು ಉಲ್ಲೇಖಾರ್ಹ. ಈಗಿನ ಅರಸ ಮಹಾವಜಿರಲೊಂಗ್

    ಕೊರ್ನ್​ರ ಉಪಾಧಿ ‘ಹತ್ತನೆಯ ರಾಮ’ ಎಂದು.

    ಇರಾನ್​ನ ಪಹ್ಲವಿ ರಾಜವಂಶದ ರೆಜಾ ಶಾ 1979ರ ಇಸ್ಲಾಮಿಕ್ ಕ್ರಾಂತಿಯಲ್ಲಿ ಸಿಂಹಾಸನ ಕಳೆದುಕೊಂಡು ಮರಣದಂಡನೆ ತಪ್ಪಿಸಿಕೊಳ್ಳಲೆಂದು ಹದಿನೇಳು ತಿಂಗಳುಗಳು ದೂರದ ಪನಾಮಾದಲ್ಲೆಲ್ಲಾ ಅಲೆದು ಕೊನೆಗೆ ಈಜಿಪ್ಟ್​ನ ಕೈರೋದಲ್ಲಿ ಕ್ಯಾನ್ಸರ್​ಗೆ ಬಲಿಯಾಗಿ ತೀರಿಕೊಂಡರು. ಆಧುನಿಕ ನೇಪಾಳದ ನಿರ್ವತೃ ಪೃಥ್ವಿನಾರಾಯಣ ಷಾ 1768ರಲ್ಲಿ ನೇಪಾಳವನ್ನು ಒಗ್ಗೂಡಿಸಿ ಷಾ ರಾಜವಂಶವನ್ನು ಸ್ಥಾಪಿಸಿದಾಗ ‘ನಿನ್ನ ವಂಶದ ಹತ್ತು ತಲೆಮಾರುಗಳು ಈ ನಾಡನ್ನಾಳುತ್ತವೆ’ ಎಂದು ಗುರು ಗೋರಕ್​ನಾಥ್ ಆಶೀರ್ವದಿಸಿದರಂತೆ. ಅದರಂತೆ ಹತ್ತನೆಯ ತಲೆಮಾರಿಗೇ ಷಾ ರಾಜವಂಶ ಕೊನೆಗೊಂಡಿತು. ಜೂನ್ 1, 2001ರಂದು ರಾಜಕುಮಾರ ದೀಪೇಂದ್ರ ಅರಸ ಬೀರೇಂದ್ರ, ರಾಣಿ ಐಶ್ವರ್ಯಾ ಸೇರಿದಂತೆ ಅರಸುಮನೆತನದ ಎಲ್ಲರನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡರು. ತಾನು ಮೆಚ್ಚಿದ ಕನ್ಯೆ ದೇವಯಾನಿ ರಾಣಾಳನ್ನು ಮದುವೆಯಾಗಲು ಅರಮನೆಯಲ್ಲಿ ಇದ್ದ ವಿರೋಧವೇ ದೀಪೇಂದ್ರರ ಕೃತ್ಯಕ್ಕೆ ಕಾರಣ ಎಂಬ ಸುದ್ದಿ ಬಂದರೂ ಈ ದುರಂತದಲ್ಲಿ ಬೀರೇಂದ್ರರ ತಮ್ಮ ಗ್ಯಾನೇಂದ್ರ ಮತ್ತು ಅವರ ಉಡಾಳ ಮಗ ಪಾರಸ್​ನ ಕೈವಾಡವನ್ನು ಜನತೆ ಶಂಕಿಸಿತು. ಹೀಗಾಗಿ ಅಣ್ಣನ ಸ್ಥಾನದಲ್ಲಿ ಸಿಂಹಾಸನವೇರಿದ ಗ್ಯಾನೇಂದ್ರರಿಗೆ ಜನತೆ ಗೌರವವನ್ನೇ ಕೊಡಲಿಲ್ಲ.

    ಇದು ಸಾಲದು ಎಂಬಂತೆ ಸರ್ಕಾರದ ವಿವಿಧ ಸಾರ್ವಜನಿಕ ಸೇವಾ ಇಲಾಖೆಗಳು ‘ಕಾಸು ಬಿಚ್ಚಯ್ಯಾ’ ಎಂದು ಗ್ಯಾನೇಂದ್ರರನ್ನು ಗೋಳಾಡಿಸತೊಡಗಿದವು. 2007ರಲ್ಲಿ ಅವು ಎಬ್ಬಿಸಿರುವ ಪತ್ರಿಕಾ ಪ್ರಚಾರಗಳ ಪ್ರಕಾರ ರಾಜ ಗ್ಯಾನೇಂದ್ರ ಹಾಗೂ ರಾಜಪರಿವಾರ 83 ಲಕ್ಷ ರೂಪಾಯಿಗಳ ಎಲೆಕ್ಟ್ರಿಸಿಟಿ ಬಿಲ್, 56 ಲಕ್ಷ ರೂಪಾಯಿಗಳ ವಾಟರ್ ಬಿಲ್ ಹಾಗೂ 26 ಲಕ್ಷ ರೂಪಾಯಿಗಳ ಟೆಲಿಫೋನ್ ಬಿಲ್​ಗಳನ್ನು ಪಾವತಿಸಬೇಕಾಗಿತ್ತು! ಕೊನೆಗೆ ನಮ್ಮ ಯುಪಿಎ ಸರ್ಕಾರದ ಸಕ್ರಿಯ ಸಹಕಾರದಿಂದಲೇ ನೇಪಾಳಿ ರಾಜಕೀಯ ಪಕ್ಷಗಳು ಷಾ ವಂಶದ ಹತ್ತನೆಯ ತಲೆಮಾರಾದ ಗ್ಯಾನೇಂದ್ರರನ್ನು ಕೆಳಗಿಳಿಸಿ, ರಾಜಪ್ರಭುತ್ವವನ್ನು ರದ್ದುಗೊಳಿಸಿ, ನೇಪಾಳವನ್ನು ಗಣರಾಜ್ಯವಾಗಿ ಸಾಂವಿಧಾನಿಕವಾಗಿ ಘೊಷಿಸಿದವು. ಅದರ ಜತೆಗೇ ನೇಪಾಳಕ್ಕಿದ್ದ ‘ಹಿಂದೂ ರಾಷ್ಟ್ರ’ ಎಂಬ ಹೆಸರೂ ಹೊರಟುಹೋಯಿತು. ನಂತರ ಅಲ್ಲಿ ಭದ್ರವಾಗಿ ತಳವೂರಿದ ಕಮ್ಯೂನಿಸ್ಟರು ಚೀನಾದ ಜತೆಗೂಡಿ ಭಾರತಕ್ಕೇ ತಲೆನೋವು ತರುತ್ತಿರುವುದನ್ನು ನೀವೆಲ್ಲಾ ನೋಡುತ್ತಲೇ ಇದ್ದೀರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts