ವಿಶಾಖಪಟ್ಟಣಂ: ಭಾರಿ ಗಾತ್ರದ ಬಂಡೆಯೊಂದು ಉರುಳಿ ಮನೆಗೆ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಮತ್ತು ಆಕೆಯ ಮೂರು ವರ್ಷದ ಮಗ ದಾರುಣವಾಗಿ ಸಾವಿಗೀಡಾಗಿರುವ ಘಟನೆ ವಿಶಾಖಪಟ್ಟಣಂ ನಗರದ ಗಣಪತಿನಗರದಲ್ಲಿ ನಡೆದಿದೆ.
ಮೃತರನ್ನು ಕೆ. ರಾಮಲಕ್ಷ್ಮಿ ಮತ್ತು ಮಗ ಜ್ಞಾನೇಶ್ವರ ಬಾಬು ಎಂದು ಗುರುತಿಸಲಾಗಿದೆ. ಬೆಟ್ಟದ ಹತ್ತಿರವಿರುವ ನಿವಾಸದಲ್ಲಿ ಭಾನುವಾರ ರಾತ್ರಿ ಮಲಗಿದ್ದಾಗ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ: ಕೆ.ಕಲ್ಯಾಣ್ ಕುಟುಂಬಸ್ಥರಿಂದ ಆಸ್ತಿ ಕಬಳಿಕೆ: ವಾಲಿಯ ಆರು ಕೋಟಿ ರೂ ಆಸ್ತಿ ಜಪ್ತಿ
ಬೆಟ್ಟದಿಂದ ಉರುಳಿದ ಬೃಹತ್ ಬಂಡೆ ಮನೆಗೆ ಡಿಕ್ಕಿ ಹೊಡೆದು ಅದರ ಮೇಲೆಯೇ ಹಾದು ಹೋಯಿತು. ಮನೆಯ ಮೇಲ್ಛಾವಣಿ ಮತ್ತು ಗೋಡೆ ಕುಸಿದ ಪರಿಣಾಮ ಸ್ಥಳದಲ್ಲೇ ತಾಯಿ ಮತ್ತು ಮಗ ಮೃತಪಟ್ಟರು. ರಾಮಲಕ್ಷ್ಮಿ ಪತಿ ಮತ್ತು ತಾಯಿ ಗಂಭೀರವಾಗಿ ಗಾಯಗೊಂಡರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿ, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಭಾನುವಾರದಿಂದ ವೈಜಾಗ್ನ ಹಲವೆಡೆ ಭಾರಿ ಮಳೆ ಸುರಿದಿದ್ದು, ಮುನ್ನೆಚ್ಛರಿಕಾ ಕ್ರಮವಾಗಿ ಅನೇಕರನ್ನು ಸ್ಥಳಾಂತರಿಸಲಾಗಿದೆ. (ಏಜೆನ್ಸೀಸ್)