More

    ಬಂಡಾಯ ಅಭ್ಯರ್ಥಿ ಮನವೊಲಿಸುವ ವಿಶ್ವಾಸ: ಡಾ. ಸರ್ಜಿ

    ಶಿವಮೊಗ್ಗ: ಟಿಕೆಟ್ ಹಂಚಿಕೆ ವೇಳೆ ಅಸಮಾಧಾನ ಆಗುವುದು ಸಹಜ. ರಘುಪತಿ ಭಟ್ ಅವರು ಪಕ್ಷದ ಹಿರಿಯರು. ಅವರಿಗೆ ಅಸಮಾಧಾನ ಆಗಿರುವುದು ನಿಜ. ಆದರೆ ಟಿಕೆಟ್ ಒಬ್ಬರಿಗಷ್ಟೇ ನೀಡಲು ಸಾಧ್ಯ. ಈ ಬಾರಿ ಪಕ್ಷ ನನಗೆ ಅವಕಾಶ ಕೊಟ್ಟಿದ್ದು ರಘುಪತಿ ಭಟ್ ಅವರ ಮನವೊಲಿಸುವ ಕೆಲಸವನ್ನು ನಮ್ಮ ನಾಯಕರು ಮಾಡುವರು ಎಂದು ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ವಿಶ್ವಾಸ ವ್ಯಕ್ತಪಡಿಸಿದರು.

    ನೈಋತ್ಯ ಪದವೀಧರ ಕ್ಷೇತ್ರಕ್ಕೆ ಜೂ.3ರಂದು ಚುನಾವಣೆ ನಡೆಯಲಿದ್ದು, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ನನ್ನ ಗೆಲುವಿಗಾಗಿ ಶ್ರಮಿಸಲಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಹಣ ಅಥವಾ ಜಾತಿ ಬಲದಿಂದ ನನಗೆ ಟಿಕೆಟ್ ಸಿಕ್ಕಿಲ್ಲ. 10ನೇ ವಯಸ್ಸಿನಿಂದಲೇ ಆರ್‌ಎಸ್‌ಎಸ್ ಸಂಘಟನೆಯಲ್ಲಿದ್ದೇನೆ. ವಿಕಾಸ ಟ್ರಸ್ಟ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು ಐಟಿಸಿ, ಒಟಿಸಿ ಮುಗಿಸಿ ಮುಖ್ಯ ಶಿಕ್ಷಕನಾಗಿ ಸೇವೆ ಮಾಡಿದ್ದೇನೆ. ವೈದ್ಯ ವೃತ್ತಿಯೊಂದಿಗೆ ಸಂಘದ ಅನೇಕ ಜವಾಬ್ದಾರಿ ನಿರ್ವಹಿಸಿದ್ದೇನೆ. ವಿಕಾಸ ಟ್ರಸ್ಟ್‌ಗೆ ರಾಜೀನಾಮೆ ಸಲ್ಲಿಸಿ ಎರಡು ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲಾ ಉಪಾಧ್ಯಕ್ಷ ಸ್ಥಾನವನ್ನೂ ನನಗೆ ಕೊಟ್ಟಿದ್ದಾರೆ. ಪಕ್ಷದ ಹಿರಿಯರು ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ ಎಂದರು.
    ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುತ್ತಿರುವ ನನಗೆ ವಿದ್ಯಾವಂತ-ಪ್ರಜ್ಞಾವಂತ ಮತದಾರರು ಮತ ನೀಡಿ ಅಭೂತಪೂರ್ವ ಗೆಲುವಿಗೆ ಕಾರಣರಾಗಲಿದ್ದಾರೆ. ವೈದ್ಯ ಶಿಕ್ಷಣ ಮುಗಿದ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಂತರ ಚಿಕ್ಕದಾಗಿ ಕ್ಲಿನಿಕ್ ಆರಂಭಿಸಿದ್ದೆ. ಇದೀಗ 1,000 ಸಿಬ್ಬಂದಿ ಹಾಗೂ 100 ವೈದ್ಯರು ನಮ್ಮ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪದವೀಧರರ ಸಮಸ್ಯೆಗಳನ್ನು ಹತ್ತಿರದಿಂದ ಅರಿತುಕೊಂಡಿದ್ದೇನೆ ಎಂದು ಹೇಳಿದರು.
    ನೈಋತ್ಯ ಪದವೀಧರ ಕ್ಷೇತ್ರವು 14 ಮೆಡಿಕಲ್ ಕಾಲೇಜು, 30 ಇಂಜಿನಿಯರಿಂಗ್ ಕಾಲೇಜು, 100ಕ್ಕಿಂತ ಹೆಚ್ಚು ದೊಡ್ಡ ದೊಡ್ಡ ವಿದ್ಯಾ ಸಂಸ್ಥೆಗಳನ್ನು ಹೊಂದಿದ ಸುಶಿಕ್ಷಿತರ ಕ್ಷೇತ್ರ. ಕ್ಷೇತ್ರವು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ಮಂಗಳೂರು, ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲೂಕುಗಳನ್ನು ಒಳಗೊಂಡಿದೆ. 85 ಸಾವಿರ ಮತದಾರರಿದ್ದು, ಈ ಪೈಕಿ ಶಿವಮೊಗ್ಗ ಜಿಲ್ಲೆಯಲ್ಲೇ 27 ಸಾವಿರ ಮತದಾರರಿದ್ದಾರೆ ಎಂದು ತಿಳಿಸಿದರು.
    ಎಂಎಲ್‌ಸಿ ಡಿ.ಎಸ್.ಅರುಣ್, ಬಿಜೆಪಿ ಪ್ರಕೋಷ್ಠಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್, ನಗರ ಸಮಿತಿ ಅಧ್ಯಕ್ಷ ಮೋಹನ್ ರೆಡ್ಡಿ, ಸೂಡಾ ಮಾಜಿ ಅಧ್ಯಕ್ಷ ಎನ್.ಜೆ.ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts