More

    ಪಿಎಚ್‌ಸಿ ಮೇಲ್ದರ್ಜೆಗೇರಿಸಲು ಆದ್ಯತೆ

    ಬಾಳೆಹೊನ್ನೂರು: ಪಟ್ಟಣದಲ್ಲಿ ಪ್ರಮುಖವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವುದು, ಕ್ರೀಡಾಂಗಣ ನಿರ್ಮಾಣ, ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

    ಬಿ.ಕಣಬೂರು ಗ್ರಾಪಂನಲ್ಲಿ ಶನಿವಾರ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಹಲವಾರು ವರ್ಷಗಳ ಹಿಂದಿನಿಂದ ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸವಿರುವವರಿಗೆ ಹಕ್ಕುಪತ್ರ ನೀಡಲು ಅರಣ್ಯ ಇಲಾಖೆಯ ಮನವೊಲಿಸ ಲಾಗುವುದು ಎಂದರು.
    ಒಬ್ಬ ಸದಸ್ಯ ಇರುವ ಪಡಿತರ ಚೀಟಿದಾರರನ್ನು ಎಪಿಎಲ್‌ಗೆ ಸೇರ್ಪಡೆ ಮಾಡುತ್ತಿರುವ ದೂರು ಬಂದಿದ್ದು, ಇದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡು ಹಣ ಬರದಿದ್ದರೆ ಇದರ ಸ್ಥಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕೇಳಿ ತಿಳಿದುಕೊಳ್ಳಬೇಕು. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
    ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿಕೊಂಡವರಿಗೆ ಗ್ರಾಪಂನಲ್ಲಿ ಇ-ಸ್ವತ್ತು ಲಭಿಸುತ್ತಿಲ್ಲ ಎಂಬ ದೂರು ಬಂದಿದೆ. ಸ್ಥಳೀಯ ಗ್ರಾಪಂನಿಂದ ಪತ್ರ ಬರೆದು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದೂರು ನೋಂದಾಯಿಸಿ ಅರ್ಜಿದಾರರಿಗೆ ಇ-ಸ್ವತ್ತು ಲಭಿಸುವಂತೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
    ಜನತಾ ದರ್ಶನದಲ್ಲಿ ಪ್ರಸ್ತಾಪವಾದ ಅಂಗನವಾಡಿ ಸಮಸ್ಯೆಗಳ ಬಗ್ಗೆ ಗಮನಹರಿಸಿ ತಾಲೂಕಿನ ಎಲ್ಲ ಕಡೆಗಳಲ್ಲಿ ಅಂಗನವಾಡಿಗಳ ದುಸ್ಥಿತಿ ಪಟ್ಟಿ ಮಾಡಲಾಗುವುದು. ಬಾಳೆಹೊನ್ನೂರಿನಲ್ಲಿ ಬಿಡಾಡಿ ದನಗಳು ಹೆಚ್ಚಿದ್ದು, ಕೆಲವೇ ದಿನಗಳಲ್ಲಿ ಪೊಲೀಸರ ಸಹಾಯ ಪಡೆದು ಬಿಡಾಡಿ ದನಗಳನ್ನು ಗೋಶಾಲೆಗೆ ಬಿಡಲಾಗುವುದು. ಬೀದಿ ನಾಯಿಗಳ ಹಾವಳಿಯೂ ಹೆಚ್ಚಿದ್ದು, ಪಶು ಇಲಾಖೆ, ಗ್ರಾಪಂ ಒಗ್ಗೂಡಿ ಇದರ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
    ಜನತಾ ದರ್ಶನದಲ್ಲಿ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರು 41 ಅರ್ಜಿಗಳನ್ನು ಶಾಸಕರ ಮೂಲಕ ವಿವಿಧ ಇಲಾಖೆಗಳಿಗೆ ಸಲ್ಲಿಸಿದರು.
    ಎನ್.ಆರ್.ಪುರ ತಾಪಂ ಇಒ ನವೀನ್‌ಕುಮಾರ್, ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ಉಪಾಧ್ಯಕ್ಷೆ ರಂಜಿತಾ, ತಾಪಂ ಉಪ ನಿರ್ದೇಶಕ ಮನೀಶ್, ಉಪ ತಹಸೀಲ್ದಾರ್ ನಾಗೇಂದ್ರ, ಆರ್‌ಎ್ಒ ಸಂದೀಪ್, ಬಿಇಒ ಮಂಜುನಾಥ್, ಸಿಡಿಪಿಒ ದಾಕ್ಷಾಯಣಮ್ಮ, ವಿಎ ಸಮೀಕ್ಷಾ, ಸರಿತಾ, ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್, ಡಾ. ರಾಕೇಶ್, ಡಾ. ಪ್ರವೀಣ್, ಧನಂಜಯ ಮೇಧೂರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts