

ನವದೆಹಲಿ: ಕೇಂದ್ರವು ಈ ಯೋಜನೆಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸುತ್ತದೆ, ಇದರಿಂದ 81 ಕೋಟಿ ಭಾರತೀಯರು ಪ್ರಯೋಜನ ಪಡೆಯುತ್ತಾರೆ. ಇದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ. 2024ರ ಜನವರಿ 1ರಿಂದ 5 ವರ್ಷಗಳವರೆಗೆ ಇದನ್ನು ವಿಸ್ತರಿಸುವುದಾಗಿ ನರೇಂದ್ರ ಮೋದಿ ಸರ್ಕಾರ ಬುಧವಾರ ಘೋಷಿಸಿದೆ.
ಬಡ ಕುಟುಂಬಗಳ ಪ್ರತಿ ಸದಸ್ಯರಿಗೆ ತಿಂಗಳಿಗೆ 5 ಕೆಜಿ ಉಚಿತ ಆಹಾರ ಧಾನ್ಯಗಳನ್ನು ಪಡಿತರದ ಮೂಲಕ ಈ ಯೋಜನೆಯಡಿ ನೀಡಲಾಗುತ್ತದೆ. ಅಂತ್ಯೋದಯ ಕುಟುಂಬಗಳು ತಿಂಗಳಿಗೆ 35 ಕೆಜಿ ಉಚಿತ ಆಹಾರ ಧಾನ್ಯಗಳನ್ನು ಪಡೆಯುತ್ತವೆ, ದೇಶದ ಅಂದಾಜು 81 ಕೋಟಿ ಜನರು ಈ ಯೋಜನೆಯ ಪ್ರಯೋಜನ ಪಡೆಯುತ್ತಾರೆ. ಮುಂದಿನ ಐದು ವರ್ಷಗಳಲ್ಲಿ ಸರ್ಕಾರ ಒಟ್ಟು 11.80 ಲಕ್ಷ ಕೋಟಿ ರೂ.ಗಳನ್ನು ಈ ಯೋಜನೆಗೆ ಖರ್ಚು ಮಾಡಲಿದೆ.
ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ವಿವರಗಳನ್ನು ನೀಡಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಹರಡಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು 2020ರಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆಯಲ್ಲಿ ಪ್ರತಿ ಫಲಾನುಭವಿಗೆ ತಿಂಗಳಿಗೆ 5 ಕೆಜಿ ಉಚಿತ ಆಹಾರ ಧಾನ್ಯಗಳನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ ನೀಡಲಾಗುತ್ತದೆ. ಅನೇಕ ಬಾರಿ ವಿಸ್ತರಣೆ ಮಾಡಿದ ನಂತರ ಈ ಯೋಜನೆಯು 2022ರ ಡಿಸೆಂಬರ್ನಲ್ಲಿ ಕೊನೆಗೊಂಡಿತ್ತು.
15,000 ಮಹಿಳಾ ಸ್ವಸಹಾಯ ಗುಂಪುಗಳಿಗೆ (ಎಸ್‌ಎಚ್‌ಜಿ) ಡ್ರೋನ್‌ಗಳನ್ನು ಒದಗಿಸುವ ಯೋಜನೆಗೂ ಕೇಂದ್ರ ಸಂಪುಟ ಅನುಮೋದನೆ ನೀಡಿದೆ, 2024-25ರ ಹಣಕಾಸು ವರ್ಷದಿಂದ ಎರಡು ವರ್ಷಗಳವರೆಗೆ 1,261 ಕೋಟಿ ರೂ.ಗಳನ್ನು ಇದಕ್ಕಾಗಿ ವ್ಯಯಿಸಲಾಗುತ್ತಿದೆ.
"ಈ ಯೋಜನೆಯು 2024-25 ರಿಂದ 2025-2026 ರ ಅವಧಿಯಲ್ಲಿ 15,000 ಆಯ್ದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಕೃಷಿ ಉದ್ದೇಶಕ್ಕಾಗಿ ರೈತರಿಗೆ ಬಾಡಿಗೆ ಸೇವೆಗಳನ್ನು ಒದಗಿಸಲು ಡ್ರೋನ್‌ಗಳನ್ನು ಒದಗಿಸುವ ಉದ್ದೇಶ ಹೊಂದಿದೆ" ಎಂದು ಸಚಿವ ಠಾಕೂರ್ ತಿಳಿಸಿದರು.