More

    ಪಂಚಾಯಿತಿಗೆ ಪವರ್: 29 ಇಲಾಖೆಗಳ ಜವಾಬ್ದಾರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ..

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ಸೇವೆಗಳು ಮನೆ ಬಾಗಿಲಲ್ಲೇ ಸಿಗುವಂತೆ ಮಾಡುವ ಮೂಲಕ ಮತ್ತಷ್ಟು ಸಬಲೀಕರಣ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಆ ಮೂಲಕ ನಿಜವಾದ ಗ್ರಾಮ ಸ್ವರಾಜ್ಯಕ್ಕೆ ಡಿಜಿಟಲ್ ವೇದಿಕೆ ಕಲ್ಪಿಸಲು ಮುನ್ನುಡಿ ಬರೆಯುತ್ತಿದೆ.

    ಅಧಿಕಾರ ವಿಕೇಂದ್ರೀಕರಣದ ನಾನಾ ಹಂತದ ಬಳಿಕ ಈಗ ಮಾಹಿತಿ ವಿಕೇಂದ್ರೀಕರಣದ ಕಡೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸರ್ಕಾರ ತೆಗೆದುಕೊಂಡು ಹೋಗುತ್ತಿದೆ. ರಾಜ್ಯದ 6000 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಇದರಿಂದ ಅನುಕೂಲವಾಗಲಿದೆ.

    ಯೋಜನೆ ರೂಪಿಸುವುದು, ಅವುಗಳ ಅನುಷ್ಠಾನ, ಸ್ವಂತ ಸಂಪನ್ಮೂಲದ ಬಲದ ಮೇಲೆ ಪಂಚಾಯಿತಿಗಳು ನಿಲ್ಲುವಂತಾಗುವುದು ಪಂಚಾಯತ್ ರಾಜ್ ವ್ಯವಸ್ಥೆಯ ಉದ್ದೇಶ. ಆದರೆ ಈ ಉದ್ದೇಶ ಈಡೇರುತ್ತಿಲ್ಲ. ಆದ್ದರಿಂದ ಪಂಚಾಯಿತಿಗಳಿಗೆ ಬಲ ತುಂಬುವ ಉದ್ದೇಶದಿಂದ ವಿಕೇಂದ್ರೀಕರಣ, ಯೋಜನೆ ಮತ್ತು ಅಭಿವೃದ್ಧಿ ಎಂಬ ಸಮಿತಿಯನ್ನು ರಚನೆ ಮಾಡಲಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಗ್ರಾಮೀಣಾಭಿವೃದ್ಧಿ ಕ್ಷೇತ್ರದ ತಜ್ಞರು ಸದಸ್ಯರಾಗಿದ್ದಾರೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಪಂಚಾಯಿತಿಗಳು ನಿರ್ವಹಣೆ ಮಾಡುವ ಕಾರ್ಯ ಶೇ.17 ಇದ್ದರೆ, ಶೇ.83ರಷ್ಟು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದೆ. ಅದನ್ನು ಈಗ ಗ್ರಾಮ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಶಾಸಕಾಂಗದ ಕೆಲಸ ಶಾಸನಗಳನ್ನು ರೂಪಿಸುವುದೇ ಹೊರತು ಯೋಜನೆಗಳ ಅನುಷ್ಠಾನವಲ್ಲ. ಯೋಜನೆಗಳನ್ನು ರೂಪಿಸುವುದು ಹಾಗೂ ಅನುಷ್ಠಾನ ಮಾಡುವುದು ಸ್ಥಳೀಯ ಆಡಳಿತಗಳ ಕರ್ತವ್ಯವಾಗಿರುತ್ತದೆ. ವಾರ್ಷಿಕ, ಪಂಚವಾರ್ಷಿಕ ಹಾಗೂ ಪೂರಕ ಯೋಜನೆಗಳನ್ನು ರೂಪಿಸಬೇಕಾಗುತ್ತದೆ.

    ವಿಕೇಂದ್ರೀಕರಣದ ಹೆಜ್ಜೆಗಳು: ನೆಹರು ಆಡಳಿತ ಅವಧಿಯಲ್ಲಿ ಪಂಚಾಯಿತಿ ಬೋರ್ಡ್ ವ್ಯವಸ್ಥೆ ಬಂದು 40 ವರ್ಷ ಜಾರಿಯಲ್ಲಿತ್ತು. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ, ಅಬ್ದುಲ್ ನಜೀರ್​ಸಾಬ್ ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿ ಮೂರು ಹಂತದ ವ್ಯವಸ್ಥೆ ಜಾರಿಗೆ ತಂದರು. ಅದು ಅಧಿಕಾರ ವಿಕೇಂದ್ರೀಕರಣದ ಮೊದಲ ಹೆಜ್ಜೆ. 1993ರಲ್ಲಿ ವೀರಪ್ಪ ಮೊಯಿಲಿ ಅವರು ಸಿಎಂ ಆಗಿ ಎಂ.ವೈ. ಘೋರ್ಪಡೆ ಅವರು ಆರ್​ಡಿಪಿಆರ್ ಮಂತ್ರಿಯಾಗಿದ್ದಾಗ ಮೀಸಲಾತಿ ತಂದು ಸಾಮಾಜಿಕ ವಿಕೇಂದ್ರೀಕರಣಕ್ಕೆ ಕಾರಣವಾದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್.ಕೆ. ಪಾಟೀಲ್ 1993ರ ಕಾಯ್ದೆಗೆ ತಿದ್ದುಪಡಿ ತಂದು ಪಂಚಾಯತ್ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿ ಮಾಡಿದರು. ಅದು ಯೋಜನೆಗಳ ವಿಕೇಂದ್ರೀಕರಣವಾಯಿತು. ಇದೀಗ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಿ ಈಶ್ವರಪ್ಪ ಮಾಹಿತಿ ಮತ್ತು ಆಡಳಿತ ವಿಕೇಂದ್ರೀಕರಣಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ.

    ಏನು ಉಪಯೋಗ?

    1. ಸ್ಥಳೀಯವಾಗಿ ಯೋಜನೆ ರೂಪಿಸುವುದು
    2. ಮನೆ ಬಾಗಿಲಿನಲ್ಲಿಯೇ ಸೇವೆ
    3. ತೆರಿಗೆ ಪಾವತಿಗೆ ಇ-ವ್ಯವಸ್ಥೆ
    4. ಗ್ರಾಮೀಣ ಜನರಿಗೆ ಅಲೆದಾಟ ತಪ್ಪಲಿದೆ
    5. ಕೆಳಹಂತದ ಆಡಳಿತಕ್ಕೆ ಮಾನ್ಯತೆ
    6. ಎಲ್ಲ ಪಂಚಾಯಿತಿಗಳು ಇ-ಕಚೇರಿ
    7. ಯೋಜನೆಗಳು ಪ್ರಭಾವಿಗಳ ಪಾಲಾಗುವುದು ತಪು್ಪತ್ತದೆ
    8. ಪಂಚಾಯಿತಿಯಲ್ಲಿ ಪಾರದರ್ಶಕತೆ ಬರುತ್ತದೆ
    9. ಪಂಚಾಯಿತಿ ಸದಸ್ಯರಿಗೆ ಹೆಚ್ಚಿನ ಅಧಿಕಾರ
    10. ಮಾನವ ಸಂಪನ್ಮೂಲದ ಬಗ್ಗೆ ಡೇಟಾ ಸಂಗ್ರಹ
    11. ನಾಗರಿಕ ಸೇವೆಗಳ ನಿರ್ವಹಣೆಯ ನಿಗಾ
    12. ಹೆಚ್ಚಿನ ತೆರಿಗೆ ಸಂಗ್ರಹಕ್ಕೆ ಅವಕಾಶ

    ಪಂಚಾಯಿತಿ ವ್ಯವಸ್ಥೆಯನ್ನು ಜನರಿಗೆ ಇನ್ನಷ್ಟು ಹತ್ತಿರ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ವಿವಿಧ ಇಲಾಖೆಗಳ ಸೇವೆಗಳು ಸ್ಥಳೀಯವಾಗಿಯೇ ಲಭ್ಯವಾಗುವಂತೆ ಗಮನ ಹರಿಸಲಾಗುತ್ತಿದೆ. ಗ್ರಾಮೀಣರಿಗೆ ಏನು ಬೇಕು ಎಂಬುದು ಸ್ಥಳೀಯವಾಗಿಯೇ ನಿರ್ಧಾರವಾಗುತ್ತದೆ. ಆ ಮೂಲಕ ವಿಕೇಂದ್ರೀಕರಣ ವ್ಯವಸ್ಥೆಯನ್ನು ಸಬಲೀಕರಣ ಮಾಡಲಾಗುತ್ತದೆ.

    | ಪ್ರಮೋದ್ ಹೆಗಡೆ ಉಪಾಧ್ಯಕ್ಷರು, ವಿಕೇಂದ್ರೀಕರಣ, ಯೋಜನೆ ಮತ್ತು ಅಭಿವೃದ್ಧಿ ಸಮಿತಿ

    ಏನಾಗಲಿದೆ ವ್ಯವಸ್ಥೆ?: ಗ್ರಾಮೀಣ ಭಾಗದ ಜನರು ಯಾವುದೇ ಇಲಾಖೆಯ ಯೋಜನೆಗಳ ಫಲಕ್ಕಾಗಿ ಜಿಲ್ಲಾ ಅಥವಾ ತಾಲೂಕು ಕೇಂದ್ರಕ್ಕೆ ಅಲೆಯುವಂತಾಗಬಾರದು. ಎಲ್ಲವೂ ಮನೆ ಬಾಗಿಲಿನಲ್ಲಿಯೇ ಸಿಗುವಂತಾಗಬೇಕು. ಹೆಚ್ಚಿನ ಸೇವೆಯ ಅವಕಾಶವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿ, ಸದಸ್ಯರಲ್ಲೂ ಕೆಲಸ ಮಾಡುವ ವಿಶ್ವಾಸವನ್ನು ಹೆಚ್ಚಿಸಬೇಕು ಎಂಬುದು ಒಟ್ಟಾರೆ ಉದ್ದೇಶವಾಗಿದೆ. ತಾಲೂಕು ಕೇಂದ್ರಕ್ಕೆ ಹೋಗಬೇಕಾಗಿದ್ದ 29 ಇಲಾಖೆಯ ಕೆಲವೊಂದು ಸೇವೆಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಸಿಗುವಂತೆ ಮಾಡಲಾಗುತ್ತದೆ. ಈಗಾಗಲೇ 13 ಇಲಾಖೆಗಳ ಸೇವೆಗಳನ್ನು ಗ್ರಾಪಂಗಳಿಗೆ ವರ್ಗಾವಣೆ ಮಾಡಲಾಗಿದೆ.

    ಪಂಚಾಯಿತಿ ವ್ಯಾಪ್ತಿಗೆ ಯಾವ ಯೋಜನೆಗಳು

    • ವಿವಾಹ ನೋಂದಣಿ. ಇದರಿಂದ ಬಾಲ್ಯವಿವಾಹಕ್ಕೆ ತಡೆ ಹಾಕುವ ಉದ್ದೇಶ
    • ಆರ್​ಟಿಸಿ ಪಡೆಯುವುದು
    • ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ನೀಡುವುದು
    • ಜನನ, ಮರಣ ಪ್ರಮಾಣಪತ್ರಗಳನ್ನು ನೀಡುವುದು
    • ವಾಸ ಪ್ರಮಾಣಪತ್ರ
    • ಆದಾಯ ಮತ್ತು ಜಾತಿ ಪ್ರಮಾಣಪತ್ರ
    • ಅಗ್ನಿಶಾಮಕ ಸೇವೆಗಳು
    • 15 ನೇ ಹಣಕಾಸು ಯೋಜನೆಯಲ್ಲಿ ಲಭ್ಯ ಅನುದಾನದ ಸಮರ್ಪಕ ಬಳಕೆ
    • ವಿವಿಧ ಮೂಲಗಳಿಂದ ಲಭ್ಯವಾಗುವ ಅನುದಾನ ಬಳಕೆಗೆ ಯೋಜನೆ ರೂಪಿಸುವುದು
    • ಆಯವ್ಯಯ ಬೇರೆ ಉದ್ದೇಶಕ್ಕೆ ಬಳಸದಂತೆ ಎಚ್ಚರಿಕೆ

    ಪ್ರಮುಖ ಸೇವೆಗಳು

    • ಗ್ರಂಥಾಲಯಗಳು ಮಾಹಿತಿ ಕೇಂದ್ರಗಳಾಗಿ ಪರಿವರ್ತನೆ
    • ಅಂಗನವಾಡಿಗಳ ನಿರ್ವಹಣೆ
    • ಪಶು ಸಂಗೋಪನೆ ಇಲಾಖೆಯ ಸೇವೆಗಳು
    • ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜವಾಬ್ದಾರಿ
    • ಆಶ್ರಮ ಮತ್ತು ವಸತಿ ಶಾಲೆಗಳ ಮೇಲ್ವಿಚಾರಣೆ
    • ಮಹಿಳಾ ಸಬಲೀಕರಣದ ಯೋಜನೆಗಳು
    • ಪರಿಶಿಷ್ಟ ಜಾತಿ ಮತ್ತು ವರ್ಗದ ಏಳ್ಗೆಗಾಗಿ ರೂಪಿಸಿರುವ ಯೋಜನೆಗಳ ಅನುಷ್ಠಾನ
    • ರಾಜ್ಯದ 28 ಸಾವಿರ ಕೆರೆಗಳು ಪಂಚಾಯಿತಿ ವ್ಯಾಪ್ತಿಗೆ ಬಂದಿದ್ದು ಅವುಗಳ ನಿರ್ವಹಣೆ
    • ಅಂಗವಿಕಲರ ಅಭ್ಯುದಯಕ್ಕಾಗಿರುವ ಯೋಜನೆಗಳು

    ಪಂಚತಂತ್ರ-2ರ ಜತೆಗೆ ಅನೇಕ ಯೋಜನೆಗಳಲ್ಲಿ ಪಂಚಾಯಿತಿಗಳಿಗೆ ಅಧಿಕಾರ ನೀಡಲಾಗುತ್ತದೆ. ಜನಪ್ರತಿನಿಧಿ ಗಳಿಗೆ ಹೆಚ್ಚಿನ ಅಧಿಕಾರ ಸಿಕ್ಕರೆ, ಸಾಮಾನ್ಯ ಜನರಿಗೆ ಮನೆ ಬಾಗಿಲಿನಲ್ಲಿ ಸವಲತ್ತು ಸಿಗುವಂತಾಗುತ್ತದೆ. ಇದರಿಂದ ಪಂಚಾಯಿತಿ ವ್ಯವಸ್ಥೆಯ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚುತ್ತದೆ. ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.

    | ಕೆ.ಎಸ್. ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ

    ದೂರದೃಷ್ಟಿ ಏನಿದೆ?: ಪಂಚಾಯಿತಿಗಳಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ವರ್ಗ, ವಿಕಲಚೇತನರಿಗೆ ಪ್ರತ್ಯೇಕ ಬಜೆಟ್ ರೂಪಿಸಿ ಶೋಷಿತ ವರ್ಗಗಳಿಗೆ ನ್ಯಾಯ ಕೊಡುವ ವ್ಯವಸ್ಥೆಯನ್ನು ರೂಪಿಸುವ ದೂರದೃಷ್ಟಿಯ ಉದ್ದೇಶವೂ ಇದೆ.

    ಬರಲಿದೆ ಪಂಚತಂತ್ರ ಎರಡು: ಪಂಚಾಯಿತಿಗಳನ್ನು ಸಬಲೀಕರಣ ಮಾಡುವ ಮೂಲಕ ಇ-ಗ್ರಾಮ ಸ್ವರಾಜ್ ವ್ಯವಸ್ಥೆ ತರಲು ಪಂಚತಂತ್ರ-2 ಸಾಫ್ಟ್ ವೇರ್ ಸಿದ್ಧವಾಗುತ್ತಿದೆ. ಅದರ ಮೂಲಕ ಪಂಚಾಯಿತಿಗೆ ಸಮಗ್ರ ಡಿಜಿಟಲ್ ವೇದಿಕೆ ಒದಗಿಸಲಾಗುತ್ತದೆ.ಈ ಮೂಲಕ ವೇ ಯೋಜನೆಗಳನ್ನು ರೂಪಿಸುವುದಕ್ಕೆ ಪೂರಕವಾದ ಜನವಸತಿ ಸಭೆ, ವಾರ್ಡ್ ಸಭೆ, ಗ್ರಾಮ ಸಭೆ ನಡೆಸಲಾಗುತ್ತದೆ. ಯೋಜನೆಗಳನ್ನು ಜಾರಿ ಮಾಡಲು ಫಲಾನುಭವಿಗಳ ಆಯ್ಕೆ, ಸೇವೆಗಳ ಅನುಷ್ಠಾನ, ಕಂದಾಯ ಸಂಗ್ರಹ ಇನ್ನಿತರ ಸವಾಲಿನ ಕೆಲಸಗಳನ್ನು ಪಾರದರ್ಶಕ ವ್ಯವಸ್ಥೆಯ ಮೂಲಕ ಸುಲಭ ಮಾಡಿಕೊಳ್ಳುವ ಉದ್ದೇಶವಿದೆ. ತೆರಿಗೆ ಸಂಗ್ರಹಣೆಗೆ ಇ-ಪಾವತಿ ವ್ಯವಸ್ಥೆಗಳನ್ನು ಪಂಚಾಯಿತಿ ಮಟ್ಟದಲ್ಲಿಯೇ ಒದಗಿಸುವ ಉದ್ದೇಶ ಹೊಂದಲಾಗಿದೆ. ಜೀ ಪೇ, ಗೂಗಲ್ ಪೇ, ಪೇಟಿಎಂ ಮೂಲಕವೂ ಪಾವತಿಸಬಹುದು.

    ತಪ್ಪಿಸಿಕೊಳ್ಳುವ ಭರದಲ್ಲಿ ಬಾವಿಗೆ ಬಿದ್ದ ಕಳ್ಳ; ಪ್ರಾಣಾಪಾಯಕ್ಕೆ ಸಿಲುಕಿದ ಆರೋಪಿಯನ್ನು ಬಚಾವ್ ಮಾಡಿದ ಕಾನ್​ಸ್ಟೇಬಲ್​!

    ಮೂತ್ರ ವಿಸರ್ಜನೆಗೆ ಹೋಗಿ ಪ್ರಾಣ ಕಳೆದುಕೊಂಡ ಯುವಕ; ಕ್ಷಣಮಾತ್ರದಲ್ಲಿ ಸ್ಥಳದಲ್ಲೇ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts