More

    ಮಲ್ಲಾಪುರಕ್ಕೆ ಕೇಬಲ್​ನಿಂದ ವಿದ್ಯುತ್ ಪೂರೈಸಿ

    ಕಾರವಾರ: ಮಲ್ಲಾಪುರ ಗ್ರಾಮಕ್ಕೆ ಕೇಬಲ್ ಮೂಲಕ ವಿದ್ಯುತ್ ಒದಗಿಸುವ ಯೋಜನೆಯನ್ನು ಎನ್​ಪಿಸಿಐಎಲ್ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ಕೈಗೊಳ್ಳಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಕೈಗಾ ಸ್ಥಳ ನಿರ್ದೇಶಕ ರಾಜೇಂದ್ರಕುಮಾರ್ ಗುಪ್ತಾ ಅವರಿಗೆ ಸಲಹೆ ನೀಡಿದರು.

    ಸೋಮವಾರ ಕದ್ರಾ ಅಣೆಕಟ್ಟೆ ವೀಕ್ಷಿಸಿ ನಂತರ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ)ಹಾಗೂ ಕೈಗಾ ಅಣು ವಿದ್ಯುತ್ ನಿಗಮ (ಎನ್​ಪಿಸಿಐಎಲ್)ಅಧಿಕಾರಿಗಳ ಜತೆ ಸಭೆ ನಡೆಸಿ ಅವರು ಮಾತನಾಡಿದರು.

    ಕಾಳಿ ನದಿಯಲ್ಲಿ ಪ್ರವಾಹ ಉಂಟಾದಲ್ಲಿ ಗ್ರಾಮಗಳಲ್ಲಿ ಹಲವು ದಿನ ವಿದ್ಯುತ್ ಕಡಿತವಾಗುತ್ತದೆ. ಇದರಿಂದ ನೆಲದಲ್ಲಿ ಕೇಬಲ್ ಕೊಂಡೊಯ್ದು ವಿದ್ಯುತ್ ಪೂರೈಸಿದರೆ ಉತ್ತಮ ಎಂದರು. ಎನ್​ಪಿಸಿಐಎಲ್ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ಕದ್ರಾ-ಮಲ್ಲಾಪುರ ನಡುವೆ ಸೇತುವೆ ನಿರ್ವಿುಸಬೇಕು ಎಂದು ಅವರು ವಿನಂತಿಸಿದರು.

    2019ರಲ್ಲಿ ಸಂಭವಿಸಿದ ಪರಿಸ್ಥಿತಿ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಿ ಎಂದು ಕೆಪಿಸಿ ಅಧಿಕಾರಿಗಳಿಗೆ ಅವರು ಸೂಚಿಸಿದರು. ಕೆಪಿಸಿ ಕಾಳಿ ಜಲವಿದ್ಯುತ್ ಯೋಜನೆಯ ಮುಖ್ಯ ಇಂಜಿನಿಯರ್ ನಿಂಗಣ್ಣ, ತಹಸೀಲ್ದಾರ್ ನಿಶ್ಚಲ್ ನರೋನಾ, ಡಿವೈಎಸ್​ಪಿ ಅರವಿಂದ ಕಲಗುಜ್ಜಿ, ಕದ್ರಾ ಗ್ರಾಪಂ ಅಧ್ಯಕ್ಷ ಬಾಬು ನಾಯ್ಕ ಸಭೆಯಲ್ಲಿದ್ದರು.

    ಕಡಲ ಕೊರೆತ ಪ್ರದೇಶಕ್ಕೆ ಭೇಟಿ: ದೇವಬಾಗ ಕಡಲ ಕೊರೆತ ಪ್ರದೇಶಕ್ಕೆ ಶಾಸಕಿ ರೂಪಾಲಿ ನಾಯ್ಕ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಅಲೆ ತಡೆಗೋಡೆ ಕಾಮಗಾರಿ ಅಗತ್ಯವಿರುವ ಪ್ರದೇಶಗಳ ಸರ್ವೆಯನ್ನು ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ವರದಿ ಸಲ್ಲಿಸಬೇಕು. ಮಾಡಿದ ಕಾಮಗಾರಿ ಹೆಚ್ಚು ಬಾಳಿಕೆ ಬರುವಂತೆ ನೋಡಿಕೊಳ್ಳಬೇಕು ಎಂದು ಬಂದರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಪರಿಹಾರ ವಿತರಣೆ: ಮಳೆಯಿಂದ ಹಾನಿಯಾದ ಮನೆಗಳಿಗೆ ಸರ್ಕಾರದಿಂದ ನೀಡಲಾಗುವ ಪರಿಹಾರದ ಪತ್ರವನ್ನು ಶಾಸಕಿ ರೂಪಾಲಿ ನಾಯ್ಕ ಸೋಮವಾರ ಫಲಾನುಭವಿಗಳಿಗೆ ವಿತರಿಸಿದರು. ಮುಡಗೇರಿ ಗ್ರಾಪಂ ವ್ಯಾಪ್ತಿಯ ಅಂಗಡಿ ಗ್ರಾಮದ ಗಂಗಾ ದತ್ತಾ ಬಾನಾವಳಿ, ಕೆರವಡಿ ಕಾತರ ಗ್ರಾಮದ ಮಾಯಾ ರಘುನಾಥ ರೋಕಡೆ ಅವರಿಗೆ ಪ್ರಮಾಣಪತ್ರ ವಿತರಿಸಿದರು.

    ಚೆಂಡಿಯಾದಲ್ಲಿ ವಿದ್ಯುತ್ ಉಪ ಕೇಂದ್ರ: ಚೆಂಡಿಯಾ ಗ್ರಾಮದಲ್ಲಿ ವಿದ್ಯುತ್ ಉಪ ಕೇಂದ್ರ ಪ್ರಾರಂಭಕ್ಕೆ ಅಗತ್ಯ ಕ್ರಮ ವಹಿಸಿ ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋಣೆ ಫೀಡರ್​ನಿಂದ ಚೆಂಡಿಯಾ ಹಾಗೂ ಅಮದಳ್ಳಿವರೆಗೆ ವಿದ್ಯುತ್ ಒದಗಿಸಲಾಗುತ್ತದೆ. ಆದರೆ, ಮಳೆಗಾಲದಲ್ಲಿ ಹಲವು ಬಾರಿ ಕಂಬ ಮುರಿದು ಸಮಸ್ಯೆಯಾಗುತ್ತದೆ. ಇದರಿಂದ ಚೆಂಡಿಯಾದಲ್ಲೇ 110/33 ಕೆವಿ ವಿದ್ಯುತ್ ಉಪ ಕೇಂದ್ರ ಮಾಡಿದಲ್ಲಿ ಆ ಭಾಗದ ಸಮಸ್ಯೆ ಬಗೆಹರಿಯಲಿದೆ. ಅದಕ್ಕೆ ಅನುದಾನ ಮಂಜೂರು ಮಾಡುವಂತೆ ಸಿಎಂ ಅವರಲ್ಲಿ ಮನವಿ ಮಾಡಿದ್ದೆ. ಅದಕ್ಕೆ ಅವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ಬಾಸಗೋಡದಲ್ಲಿ ಪುನರ್ವಸತಿ ಇಲ್ಲ

    ಅಂಕೋಲಾ: ಅಲಗೇರಿಯಲ್ಲಿ ನಾಗರಿಕ ವಿಮಾನ ನಿರ್ವಣಕ್ಕಾಗಿ ಈಗಾಗಲೇ 93 ಎಕರೆ ಜಾಗ ಭೂಸ್ವಾಧೀನಪಡಿಸಿಕೊಳ್ಳಲಾಗಿದ್ದು, ಅವರಿಗೆ ತಾಲೂಕಿನ ಬಾಸಗೋಡದ ಸರ್ವೆ ನಂ. 8ರಲ್ಲಿ ಪುನರ್ವಸತಿಗಾಗಿ ಸ್ಥಳ ಗುರುತಿಸಲಾಗಿತ್ತು. ಇದು ಕ್ರೀಡಾಂಗಣವಾಗಿದ್ದು, ಯಾವುದೇ ಕಾರಣಕ್ಕೂ ನಾವು ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕಿ ರೂಪಾಲಿ ನಾಯ್ಕ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು.

    ಶಾಸಕಿ ರೂಪಾಲಿ ಮಾತನಾಡಿ, ಈಗಾಗಲೇ ನಾನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಬಾಸಗೋಡದಲ್ಲಿ ಯಾವುದೇ ಕಾರಣಕ್ಕೂ ಪುನರ್ವಸತಿಗೆ ಅವಕಾಶ ನೀಡದಂತೆ ಸೂಚಿಸಿದ್ದೇನೆ. ಇದು ಸ್ವಾತಂತ್ರ್ಯ ಹೋರಾಟಗಾರರ ಕರ್ಮಭೂಮಿ ಆಗಿರುವುದರಿಂದ ನಿರಾಶ್ರಿತರಿಗೆ ಬೇರೆಡೆ ಪುನರ್ವಸತಿ ಕಲ್ಪಿಸಲು ಸೂಚಿಸಿದ್ದೇನೆ ಎಂದರು.

    ಉಪ ವಿಭಾಗಾಧಿಕಾರಿ ಅಜಿತ ಎಂ. ಮಾತನಾಡಿ, ಇಲ್ಲಿನ ಐತಿಹಾಸಿಕ ಮಹತ್ವವನ್ನು ಮೇಲಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.

    ವಕೀಲ ನಾಗರಾಜ ನಾಯಕ ಅವರು ಸ್ಥಳದ ಐತಿಹಾಸಿಕ ದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು.

    ತಹಸೀಲ್ದಾರ್ ಉದಯ ಕುಂಬಾರ, ತಾಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ, ಮಾಜಿ ಸದಸ್ಯ ಶಾಂತಿ ಆಗೇರ, ಪ್ರಮುಖರಾದ ದೇವಾನಂದ ಗಾಂವಕರ, ರಾಜೀವ ಗಾಂವಕರ ಹಿರೇಗುತ್ತಿ, ವಿನೋದ ನಾಯಕ, ಲಕ್ಷ್ಮೀಧರ ನಾಯಕ, ವಿ.ಎನ್. ನಾಯಕ, ರಾಜೇಂದ್ರ ನಾಯಕ, ಮಾದೇವ ಗುನಗಾ, ಪಾಂಡುರಂಗ ಗೌಡ, ಹನುಮಂತ ಗೌಡ, ಯೋಗೇಶ ನಾಯಕ, ಗೋಪು ನಾಯಕ ಅಡ್ಲೂರು ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts