More

    ಸರ್ಕಾರಿ ಪಾಲಿಟೆಕ್ನಿಕ್‌ನಿಂದ ವಿದ್ಯುತ್ ಸ್ವಾವಲಂಬನೆ

    ಸಂದೀಪ್ ಸಾಲ್ಯಾನ್ ಬಂಟ್ವಾಳ

    ಇಲ್ಲಿನ ಬಿ.ಕಸ್ಬಾ ಗ್ರಾಮದ ಅರ್ಬಿಗುಡ್ಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡದ ಮೇಲ್ಛಾವಣಿ ಮೇಲೆ ಸೋಲಾರ್ ವ್ಯವಸ್ಥೆ ಅಳವಡಿಸಿಕೊಂಡಿದೆ. ವಿದ್ಯಾಸಂಸ್ಥೆಗೆ ಬೇಕಾಗುವಷ್ಟು ವಿದ್ಯುತ್ ಉತ್ಪಾದಿಸುವುದರ ಜತೆಗೆ ಹೆಚ್ಚುವರಿಯಾದುದನ್ನು ಮೆಸ್ಕಾಂಗೆ ನೀಡುತ್ತಿದೆ. ಈ ಮೂಲಕ ವಿದ್ಯುತ್ ಉತ್ಪಾದನೆಯೊಂದಿಗೆ ಆದಾಯ ಕೂಡ ಗಳಿಸುತ್ತಿದೆ.

    2015ರಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ನ ಕಟ್ಟಡದಲ್ಲಿ 33 ಕೆ.ವಿ. ಸಾಮರ್ಥ್ಯದ ಸೋಲಾರ್ ಘಟಕ ಅನುಷ್ಠಾನಿಸಲಾಗಿದೆ. ಆಗ ಈ ಫ್ಯಾನಲ್‌ಗೆ ಒಟ್ಟು 20 ಲಕ್ಷ ರೂ. ಖರ್ಚಾಗಿದೆ. ಅಂದಿನ ಪ್ರಾಂಶುಪಾಲ ಡಾ.ಚೆನ್ನಗಿರಿ ಗೌಡ ನೇತೃತ್ವದಲ್ಲಿ ಈ ಕಾರ್ಯ ನಡೆದಿದ್ದು, ಪ್ರಸ್ತುತ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ದೇವರಾಜ್ ನಾಯಕ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

    ವಿದ್ಯುತ್ ಸ್ವಾವಲಂಬನೆ: ಪಾಲಿಟೆಕ್ನಿಕ್ ಕಾಲೇಜಿನ ಮೇಲ್ಭಾಗದ ಛಾವಣಿಯನ್ನು ಸಂಸ್ಥೆ ವಿದ್ಯುತ್ ಗಳಿಕೆ ಹಾಗೂ ಆದಾಯದ ಮೂಲವಾಗಿ ಬಳಸಿಕೊಂಡು ಸದುಪಯೋಗಪಡಿಸಿಕೊಂಡಿದೆ. ಸೋಲಾರ್ ಸಿಸ್ಟಂ ಅಳವಡಿಸಿಕೊಂಡ ಬಳಿಕ ಮಾಸಿಕವಾಗಿ ಖರ್ಚಾಗುತ್ತಿದ್ದ 40 ಸಾವಿರ ರೂ. ವಿದ್ಯುತ್ ಬಿಲ್ ಈಗ ಉಳಿಕೆಯಾಗುತ್ತಿದೆ. ಈ ಮೊತ್ತ ಕಳೆದು ಸೋಲಾರ್ ಘಟಕದಿಂದ ಉತ್ಪಾದನೆಯಾದ ಹೆಚ್ಚುವರಿ ವಿದ್ಯುತ್ತನ್ನು ಮೆಸ್ಕಾಂಗೆ ನೀಡುವುದರಿಂದ ತಿಂಗಳಿಗೆ 3ರಿಂದ 4 ಸಾವಿರ ರೂ. ಮೆಸ್ಕಾಂ ನೀಡುತ್ತಿದ್ದು, ಕಳೆದ ವರ್ಷ ಒಟ್ಟು 31 ಸಾವಿರ ರೂ. ಆದಾಯ ಪಾಲಿಟೆಕ್ನಿಕ್‌ನ ಖಾತೆಗೆ ಜಮಾ ಆಗಿದೆ.

    ಸರಾಸರಿ 40 ಸಾವಿರ ರೂ. ವಿದ್ಯುತ್ ಶುಲ್ಕದಂತೆ ವಾರ್ಷಿಕವಾಗಿ 4.80 ಲಕ್ಷ ರೂ. ಉಳಿತಾಯ ಮಾಡಲಾಗುತ್ತಿದ್ದು, ಇದರ ಜತೆಗೆ ಹೆಚ್ಚುವರಿ ವಿದ್ಯುತ್ ಮಾರಾಟದ ಮೊತ್ತ ಸೇರಿ ವಾರ್ಷಿಕ ಉಳಿಕೆ 5 ಲಕ್ಷ ರೂ. ದಾಟುತ್ತದೆ. ಹೀಗಾಗಿ ಆರಂಭಿಕ ಅನುಷ್ಠಾನ ವೆಚ್ಚ ಹಾಗೂ ವಾರ್ಷಿಕ ಆದಾಯ ಲೆಕ್ಕ ಹಾಕಿದರೆ, ಅನುಷ್ಠಾನದ ಮೊತ್ತ ಈಗಾಗಲೇ ಬಂದಿರುವ ಸಾಧ್ಯತೆ ಇದೆ. ಇದರ 25 ವರ್ಷಗಳ ನಿರ್ವಹಣೆಯೂ ಉಚಿತವಾಗಿದೆ. ಮಳೆಗಾಲದ ಕೆಲಡ್ಠ ತಿಂಗಳು ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ. ರಜಾ ಅವಧಿಯಲ್ಲಿ ವಿದ್ಯುತ್ ಬಳಕೆಯಾಗದಿದ್ದಾಗ ಅವೆಲ್ಲವೂ ಮೆಸ್ಕಾಂನ ವಿದ್ಯುತ್ ಗ್ರಿಡ್‌ಗೆ ಸರಬರಾಜಾಗುತ್ತದೆ.

    ಸೋಲಾರ್ ವ್ಯವಸ್ಥೆ ಅಳವಡಿಸಿದ ಬಳಿಕ ಸಂಸ್ಥೆಯ ದೊಡ್ಡ ಮೊತ್ತದ ವಿದ್ಯುತ್ ಬಿಲ್ ಉಳಿಕೆಯಾಗುತ್ತಿದೆ. ಹೆಚ್ಚುವರಿಯಾಗಿ ಉತ್ಪಾದನೆಯಾದ ವಿದ್ಯುತ್ತನ್ನು ಮರಳಿ ಮೆಸ್ಕಾಂಗೆ ನೀಡುವುದರಿಂದ ಸಂಸ್ಥೆಗೆ ಆದಾಯವೂ ಸಿಗುತ್ತಿದೆ.
    ಸಿ.ಜೆ.ಪ್ರಕಾಶ್, ಪ್ರಾಂಶುಪಾಲರು,
    ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts