More

    ಅಂಚೆ ಕಚೇರಿಗೆ ಬಾಡಿಗೆ ಭಾರ!

    ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿನ ಅಂಚೆ ಕಚೇರಿ ಪ್ರಾರಂಭವಾಗಿ ಅರ್ಧ ಶತಮಾನ ಕಳೆದರೂ, ಇಂದಿಗೂ ಸ್ವಂತ ಸೂರಿಲ್ಲದೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಂಚೆ ಕಚೇರಿ ಕಟ್ಟಡಕ್ಕೆಂದೇ ಜಾಗ ಮೀಸಲಿದ್ದರೂ, ಅದು ನಿಷ್ಪ್ರಯೋಜಕವಾಗಿದೆ.

    ಒಂದು ಕಾಲಕ್ಕೆ ಪತ್ರ ವ್ಯವಹಾರ, ತಂತಿ ಸಂದೇಶ, ಮನಿ ಆರ್ಡ್​ರ್ ಸೇವೆಗೆ ಅಂಚೆ ಕಚೇರಿ ಮೀಸಲಾಗಿದ್ದವು. ಪ್ರಸ್ತುತ ಚಲನ್ ಸ್ವೀಕೃತಿ, ಸ್ಪೀಡ್ ಪೋಸ್ಟ್, ಉಳಿತಾಯ ಖಾತೆ ಸೇವೆ, ಠೇವಣಿ, ಸುಕನ್ಯಾ ಸಮೃದ್ಧಿ ಯೋಜನೆ, ಹಣ ವರ್ಗಾವಣೆ ಸೇರಿ ನೂರಕ್ಕೂ ಅಧಿಕ ಸೇವೆಗಳನ್ನು ಅಂಚೆ ಕಚೇರಿಗಳು ನೀಡುತ್ತಿವೆ.

    1965ರಲ್ಲಿ ಗ್ರಾಮದಲ್ಲಿ ಕಾರ್ಯಾರಂಭಿಸಿದ ಅಂಚೆ ಕಚೇರಿಗೆ ಸ್ವಂತ ಕಟ್ಟಡ ನಿರ್ವಣಕ್ಕೆ ಗ್ರಾಮದ ಹೃದಯ ಭಾಗದಲ್ಲಿ ಸುಮಾರು 24 ಗುಂಟೆ ವಿಸ್ತೀರ್ಣದ ಜಾಗ ಮೀಸಲಿಡಲಾಗಿತ್ತು. ಈ ಸ್ಥಳದಲ್ಲಿ ಸುತ್ತಮುತ್ತಲಿನ ನಿವಾಸಿಗಳು ಕಸ, ತ್ಯಾಜ್ಯ ಬೇಕಾಬಿಟ್ಟಿಯಾಗಿ ಚೆಲ್ಲುತ್ತಿದ್ದರು. ಇದನ್ನು ಕಂಡ ಸ್ಥಳೀಯ ಗ್ರಾಪಂ ಜಾಗವನ್ನು ಸ್ವಚ್ಛಗೊಳಿಸಿತು. ನಂತರ ಅಂಚೆ ಇಲಾಖೆ ಅಧಿಕಾರಿಗಳು ಜಾಗದ ಸುತ್ತಲೂ ಕಲ್ಲುಗಳನ್ನು ನೆಟ್ಟು ಹದ್​ಬಸ್ತ್ (ಫೆನ್ಸಿಂಗ್) ಮಾಡಿ ಮುಗಿಸಿತಾದರೂ, ಕಟ್ಟಡ ನಿರ್ವಣಕ್ಕೆ ಮುಂದಾಗಿಲ್ಲ. ಸದ್ಯ ಆ ಜಾಗದಲ್ಲಿ ಕೆಲವರು ಡಬ್ಬಾ ಅಂಗಡಿಗಳನ್ನಿಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಸಕಲ ಸೌಲಭ್ಯಗಳುಳ್ಳ ಸುಸ್ಸಜ್ಜಿತ ಕಟ್ಟಡ ಹೊಂದಿರಬೇಕಾದ ವಿಶಾಲ ನಿವೇಶನ ಅನ್ಯ ಚಟುವಟಿಕೆಗಳ ತಾಣವಾಗಿದೆ.

    ಎಲ್ಲ ರೀತಿಯಿಂದಲೂ ಬೆಳೆಯುತ್ತಿರುವ ಬೆಳ್ಳಟ್ಟಿ ಸುತ್ತಲಿನ ಹತ್ತಾರು ಗ್ರಾಮಗಳ ವ್ಯಾಪ್ತಿ ಹೊಂದಿರುವ ಅಂಚೆ ಕಚೇರಿಗೆ ನಿತ್ಯ ನೂರಾರು ಗ್ರಾಹಕರು ಬಂದು ಹೋಗುತ್ತಾರೆ. ಬನ್ನಿಕೊಪ್ಪ ಮಠ ವ್ಯಾಪ್ತಿಗೆ ಸೇರಿದ ಗ್ರಾಮದ ಹಿರೇಮಠ ಒಡೆತನದ ಕಟ್ಟಡದಲ್ಲಿ ಮಾಸಿಕ 5 ಸಾವಿರ ರೂ. ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರು ಸೂಕ್ತ ಸೌಲಭ್ಯಗಳಿಲ್ಲದೆ ತೊಂದರೆಪಡುವಂತಾಗಿದೆ.

    ಕೇಂದ್ರ ಸರ್ಕಾರದ ಆಧೀನದಲ್ಲಿರುವ ಅಂಚೆ ಇಲಾಖೆ ಜಾಗದ ಸಂಪೂರ್ಣ ನಿರ್ಲಕ್ಷ್ಯ್ಕೊಳಗಾಗಿ ತ್ಯಾಜ್ಯ ಎಸೆಯುವ ತಾಣವಾಗಿತ್ತು. ನಂತರ ಗ್ರಾಪಂ ವತಿಯಿಂದ ಸ್ವಚ್ಛತಾ ಕಾರ್ಯ ಕೈಗೊಂಡು ಸಹಕಾರ ನೀಡಿದ್ದೇವೆ. ನಮ್ಮೂರಿನ ಅಂಚೆ ಕಚೇರಿಗೆ ಶಾಶ್ವತ ಕಟ್ಟಡ ನಿರ್ವಣವಾಗಲಿ ಎಂಬ ಆಸೆಯಿದೆ. ಅಂಚೆ ಇಲಾಖೆಯವರು ಕಟ್ಟಡ ನಿರ್ವಣಕ್ಕೆ ಸಿದ್ಧರಾದರೆ ಗ್ರಾಪಂ ಆಡಳಿತ ಮಂಡಳಿಯಿಂದ ಎಲ್ಲ ರೀತಿಯಿಂದ ಸಹಕಾರ ನೀಡುತ್ತೇವೆ. ಆದರೆ, ಅಧಿಕಾರಿಗಳ ಇಚ್ಛಾಶಕ್ತಿ ತೋರಬೇಕು.

    | ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ಬೆಳ್ಳಟ್ಟಿ ಗ್ರಾಪಂ ಸದಸ್ಯರು

    ನಿವೇಶನದಲ್ಲಿ ಫೆನ್​ಸಿಂಗ್ ಕಾರ್ಯ ಕೈಗೊಳ್ಳಲಾಗಿದೆ. ಸದರಿ ಕಟ್ಟಡ ನಿರ್ವಣಕ್ಕೆ ಅಗತ್ಯವಾದ ಅನುದಾನ ನೀಡುವುದು ಅಂಚೆ ಇಲಾಖೆಯ ಡೈರೆಕ್ಟರ್ ಜನರಲ್ ಅವರ ವ್ಯಾಪ್ತಿಗೆ ಬರುತ್ತದೆ. ಇಲಾಖೆ ಇಂಜಿನಿಯರರಿಂದ ಪ್ರಸ್ತಾವನೆ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಅನುದಾನ ದೊರಕುವವರೆಗೂ ಕಾಯಬೇಕು. ಆದರೆ, ನಿವೇಶನದಲ್ಲಿನ ಡಬ್ಬಾ ಅಂಗಡಿ ತೆರವು ಮಾಡಿ, ಖಾಲಿ ನಿವೇಶನದ ಸ್ಪಷ್ಟ ಚಿತ್ರಣ ನೀಡಬೇಕು. ಈ ಬಗ್ಗೆ ಗ್ರಾಪಂ ಆಡಳಿತ ಮಂಡಳಿ ಮತ್ತು ತಹಸೀಲ್ದಾರ್ ಗಮನಕ್ಕೆ ತರಲಾಗಿದೆ.

    | ಚಿದಾನಂದ ಪದ್ಮಶಾಲಿ, ಅಂಚೆ ಅಧೀಕ್ಷಕರು ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts