More

    ಮುಂಗಾರು ಬಿತ್ತನೆಗೆ ಹಿನ್ನಡೆ ಸಾಧ್ಯತೆ

    ರಾಣೆಬೆನ್ನೂರ: ರಾಣೆಬ್ನೆನೂರ ತಾಲೂಕಿನಲ್ಲಿ ಹತ್ತಿ ಹಾಗೂ ಮೆಕ್ಕೆಜೋಳ ಪ್ರಮುಖ ಬೆಳೆ. ಈಗಾಗಲೇ ಕೃಷಿ ಕಾರ್ಯ ಭರದಿಂದ ಸಾಗಬೇಕಿತ್ತು. ಆದರೆ, ತಾಲೂಕಿನಲ್ಲಿ ಮೋಡ ಕವಿದ ವಾತಾವರಣವಿದ್ದರೂ ಹದವಾಗಿ ಮಳೆ ಬೀಳದ ಕಾರಣ ಬಿತ್ತನೆಗೆ ಸಿದ್ಧತೆ ಮಾಡಿಕೊಂಡ ಅನ್ನದಾತ ಉತ್ತಮ ಮಳೆಗಾಗಿ ಕಾಯ್ದು ಕುಳಿತುಕೊಳ್ಳುವಂತಾಗಿದೆ.

    ತಾಲೂಕಿನಲ್ಲಿ ಕಳೆದ ವರ್ಷ ಮೇ ತಿಂಗಳ ಆರಂಭದಲ್ಲಿಯೇ ಕೃಷಿ ಚಟುವಟಿಕೆ ಚುರುಕುಗೊಂಡಿದ್ದವು. ಆದರೆ, ಈ ಬಾರಿ ಜೂನ್ ಎರಡನೇ ವಾರ ಮುಗಿದರೂ ಸಮರ್ಪಕವಾಗಿ ಮಳೆ ಬಾರದ ಕಾರಣ ಇನ್ನೂ ಬಿತ್ತನೆ ಕಾರ್ಯ ಆರಂಭಗೊಂಡಿಲ್ಲ. ರೈತರು ಆಗೊಮ್ಮೆ, ಈಗೊಮ್ಮೆ ಎನ್ನುತ್ತ ಜಮೀನು ಹಸನು ಮಾಡಿಕೊಂಡು ಮಳೆಗಾಗಿ ಎದುರು ನೋಡುತ್ತಿದ್ದಾರೆ.

    ತೌಕ್ತೆ ಚಂಡಮಾರುತದ ಪರಿಣಾಮ: ತೌಕ್ತೆ ಚಂಡ ಮಾರುತದ ಪರಿಣಮವಾಗಿ ತಾಲೂಕಿನಲ್ಲಿ ಮೇ ನಲ್ಲಿ 88 ಮಿ.ಮೀ. ವಾಡಿಕೆ ಮಳೆಯಿದ್ದರೆ, 144.74 ಮಿ.ಮೀ. ಮಳೆ ಬಿದ್ದಿದೆ. ನಂತರದಲ್ಲಿ ಆಗಾಗ ಸುರಿದ ಮಳೆ ಇದೀಗ ಮಾಯವಾಗಿದೆ. ಜೂನ್ ತಿಂಗಳಲ್ಲಿ 69 ಮಿ.ಮೀ. ವಾಡಿಕೆ ಮಳೆಯಿದ್ದರೆ, ಈವರೆಗೂ 24 ಮಿ.ಮೀ. ಮಾತ್ರ ಮಳೆ ಬದ್ದಿದೆ. ಕಳೆದ ಎರಡು ದಿನದಿಂದ ಮೋಡ ಕವಿದ ವಾತಾವರಣವಿದೆ. ಆಗಾಗ ಕೊಂಚ ಮಳೆ ಸುರಿದಿದ್ದರೂ ಭೂಮಿ ಹದವಾಗುವ ಪ್ರಮಾಣದಲ್ಲಿ ಮಳೆಯಾಗಿಲ್ಲ.

    54,924 ಹೆಕ್ಟೇರ್ ಬಿತ್ತನೆ ಗುರಿ: ತಾಲೂಕಿನಲ್ಲಿ ಪ್ರಸಕ್ತ ವರ್ಷ 38,258 ಮಳೆಯಾಶ್ರಿತ ಹಾಗೂ 16,666 ನೀರಾವರಿ ಸೇರಿ ಒಟ್ಟು 54,924 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿ 3,360 ಹೆಕ್ಟೇರ್, 39,866 ಹೆಕ್ಟೇರ್ ಮೆಕ್ಕೆಜೊಳ, 9,025 ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ.

    ಈಗಾಗಲೇ ಹತ್ತಿ, ಶೇಂಗಾ ಬಿತ್ತನೆ ಮಾಡಬೇಕಾಗಿತ್ತು. ಆದರೆ, ಮಳೆ ಕೊರತೆ ಎದುರಾದ ಹಿನ್ನೆಲೆಯಲ್ಲಿ ಹತ್ತಿ ಬಿತ್ತನೆಗೆ ಹಿನ್ನಡೆಯಾಗಿದೆ. ಆದ್ದರಿಂದ ಹತ್ತಿ ಬೆಳೆಯುವ ಪ್ರದೇಶ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

    ಬೀಜ, ಗೊಬ್ಬರ ದಾಸ್ತಾನು: ತಾಲೂಕಿನಲ್ಲಿ ಬೀಜ, ಗೊಬ್ಬರ ವಿತರಣೆಗೆ ನಗರ ಹಾಗೂ ತಾಲೂಕಿನ ಮೇಡ್ಲೇರಿ, ಕುಪ್ಪೇಲೂರ ರೈತ ಸಂಪರ್ಕ ಕೇಂದ್ರ ಮತ್ತು ಸುಣಕಲ್ಲಬಿದರಿ, ಕಾಕೋಳ, ಕೆರಿಮಲ್ಲಾಪುರ, ಹಲಗೇರಿ, ಮಾಕನೂರ, ಹಿರೇಮಾಗನೂರ, ಚಳಗೇರಿ, ಹರನಗಿರಿ ಸೇರಿ ಒಟ್ಟು 11 ಕೇಂದ್ರಗಳನ್ನು ತೆರೆಯಲಾಗಿದೆ.

    4 ಸಾವಿರ ಕ್ವಿಂಟಾಲ್ ಮೆಕ್ಕೆಜೋಳ ಬೀಜ, 1200 ಕ್ವಿಂಟಾಲ್ ಭತ್ತದ ಹಾಗೂ ಏಕದಳ ದಾನ್ಯ, ದ್ವಿದಳ ದಾನ್ಯ, ಎಣ್ಣೆಕಾಳು ಬೆಳೆಗಳು ಸೇರಿ ಒಟ್ಟು 8240 ಕ್ವಿಂಟಾಲ್ ಬೀಜದ ಬೇಡಿಕೆಯಿದೆ. ಕೃಷಿ ಇಲಾಖೆಯಲ್ಲಿ ಈಗಾಗಲೇ 2 ಸಾವಿರ ಕ್ವಿಂಟಾಲ್ ಮೆಕ್ಕೆಜೋಳ ಬೀಜ, 175 ಕ್ವಿಂಟಾಲ್ ಹತ್ತಿ, 250 ಕ್ವಿಂಟಾಲ್ ಭತ್ತದ ಬೀಜ ಹಾಗೂ ಇತರ ಬೀಜ ಸೇರಿ ಒಟ್ಟು 2847 ಕ್ವಿಂಟಾಲ್ ಬೀಜವನ್ನು ದಾಸ್ತಾನು ಮಾಡಲಾಗಿದೆ. ರೈತರ ಅವಶ್ಯಕತೆಗೆ ತಕ್ಕಂತೆ ಬೀಜ, ಗೊಬ್ಬರ ತರಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಳವರ ‘ವಿಜಯವಾಣಿ‘ಗೆ ತಿಳಿಸಿದ್ದಾರೆ.

    ಮೇ ಆರಂಭದಲ್ಲಿ ಉತ್ತಮ ಮಳೆಯಾದ ಕಾರಣ ಜಮೀನು ಹಸನು ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಈಗಾಗಲೇ ಶೇಂಗಾ, ಹತ್ತಿ ಬಿತ್ತನೆ ಮಾಡಬೇಕಿತ್ತು. ಆದರೆ, ಮಳೆ ಆಗುತ್ತಿಲ್ಲ. ಬರೀ ಮೋಡ ಕವಿದ ವಾತಾವರಣವಿದೆ. 3 ದಿನದ ಹಿಂದೆ ಬಿದ್ದ ಕೊಂಚ ಮಳೆಯ ನೀರು ಭೂಮಿಯ ಯಾವ ಭಾಗಕ್ಕೂ ಹತ್ತಿಲ್ಲ. ಇದೇ ರೀತಿ ಮುಂದುವರಿದರೆ, ಮುಂಗಾರು ಬಿತ್ತನೆಗೆ ಹಿನ್ನಡೆಯಾಗಲಿದೆ.

    | ದಿಳ್ಳೆಪ್ಪ ಕಂಬಳಿ, ರಾಹುತನಕಟ್ಟಿ ರೈತ

    ತಾಲೂಕಿನಲ್ಲಿ ಮೇ ನಲ್ಲಿ ಸುರಿದ ಮಳೆ ಈಗಿಲ್ಲ. ಇದರಿಂದ ರೈತರು ಜಮೀನು ಹಸನು ಮಾಡಿಟ್ಟು ಮಳೆಗಾಗಿ ಎದುರು ನೋಡುತ್ತಿದ್ದಾರೆ. ಹವಾಮಾನ ಇಲಾಖೆ ಪ್ರಕಾರ ಮುಂದಿನ ಎರಡ್ಮೂರು ದಿನದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.

    | ಎಚ್.ಬಿ. ಗೌಡಪ್ಪಳ್ಳವರ, ಸಹಾಯಕ ಕೃಷಿ ನಿರ್ದೇಶಕ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts