More

    ಮಕ್ಕಳ ಸಾಧನೆಗೆ ಶಿಕ್ಷಣ, ಪೌಷ್ಟಿಕ ಆಹಾರ ಅಗತ್ಯ ; ಜಿಪಂ ಸಿಇಒ ಜಿ.ಎಂ.ಗಂಗಾಧರಸ್ವಾಮಿ ಅಭಿಪ್ರಾಯ

    ತುಮಕೂರು: ಮಕ್ಕಳ ಸಾಧನೆಗೆ ಶಿಕ್ಷಣ ಮತ್ತು ಪೌಷ್ಟಿಕ ಆಹಾರ ಅಗತ್ಯ, ಪೌಷ್ಟಿಕ ಆಹಾರದ ಕೊರತೆಯಿಂದ ಮಗುವಿನ ಬುದ್ಧಿ ಬೆಳವಣಿಗೆಯಲ್ಲಿ ಹಿನ್ನೆಡೆಯಾಗುವ ಸಾಧ್ಯತೆ ಇರುತ್ತದೆ ಎಂದು ಜಿಪಂ ಸಿಇಒ ಜಿ.ಎಂ.ಗಂಗಾಧರಸ್ವಾಮಿ ಅಭಿಪ್ರಾಯಪಟ್ಟರು.
    ಜಿಲ್ಲಾ ಬಾಲ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ವತಿಯಿಂದ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ್ ಯೋಜನೆ ‘ಪೋಷಣ್ ಪಕ್ವಾಡ್ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.

    ಮಗು ಮತ್ತು ತಾಯಿ ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರಬೇಕೆಂದರೆ ಪೌಷ್ಟಿಕ ಆಹಾರ ಬಹಳ ಮುಖ್ಯ, ಈ ನಿಟ್ಟಿನಲ್ಲಿ ಸರ್ಕಾರ ತಾಯಿ ಹಾಗೂ ಮಗುವಿನಲ್ಲಿ ಪೌಷ್ಟಿಕತೆ ಹೆಚ್ಚಿಸಲು ಅಂಗನವಾಡಿಗಳ ಮೂಲಕ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಬಡ ತಾಯಂದಿರು ಮತ್ತು ಮಕ್ಕಳಿಗೆ ಈ ಯೋಜನೆಯು ವರದಾನವಾಗಿದೆ ಎಂದರು.
    ಲಾಕ್‌ಡೌನ್ ಸಂದರ್ಭದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇನಾನಿಗಳಂತೆ ಸಲ್ಲಿಸಿದ ಸೇವೆ ಶ್ಲಾಘಿನೀಯ, ಅಂಗನವಾಡಿಗಳಲ್ಲಿ ಮಕ್ಕಳನ್ನು ತಮ್ಮ ಮಕ್ಕಳೆಂದು ಭಾವಿಸಿ ಪೋಷಣೆ ಮಾಡಿದಲ್ಲಿ ಮಕ್ಕಳು ಸದೃಢರಾಗಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆೆ, ಕಾರ್ಯಕರ್ತೆಯರು ಪ್ರತಿಭಟನೆಯಂತಹ ಯೋಚನೆ ಕೈಬಿಟ್ಟು ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಮಾತನಾಡಿ, ಪೋಷಣ್ ಪಕ್ವಾಡ್ ಅಭಿಯಾನ ದೇಶದ್ಯಾಂತ 15 ದಿನಗಳ ಕಾಲ ನಡೆಯುತ್ತದೆ, ಮಕ್ಕಳ, ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡುವ, ಗರ್ಭಿಣಿ ಮತ್ತು ಬಾಣಂತಿಯರಲ್ಲಿ ಕಂಡುಬರುವ ರಕ್ತ ಹೀನತೆ ಹೋಗಲಾಡಿಸಿ ತಾಯಂದಿರ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.

    ಮೌಲ್ಯವರ್ಧಿತ ಆಹಾರ ಸೇವನೆಯಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳ ಬಗ್ಗೆ ಜಿಲ್ಲಾ ಆಯುಷ್ ಆಧಿಕಾರಿ ಡಾ.ಎಚ್.ಸಂಜೀವ್‌ಮೂರ್ತಿ ಮಾಹಿತಿ ನೀಡಿದರು. ನಂತರ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಯೋಗ ಗುರು ಬೊಮ್ಮಣ್ಣ, ಗೀತಕ್ಕ ಮತ್ತು ಲಲಿತಕ್ಕ ಅವರಿಂದ ಯೋಗಾಭ್ಯಾಸ ಪ್ರದರ್ಶನ ಏರ್ಪಡಿಸಲಾಗಿತ್ತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಕುಮಾರಯ್ಯ, ಕಾರ್ಯಕ್ರಮ ನಿರೂಪಣಾಧಿಕಾರಿ ಶ್ರೀಧರ್, ಆರ್.ಎಂ.ದಿನೇಶ್, ಸಂಪನ್ಮೂಲ ವ್ಯಕ್ತಿ ಮಹೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts