More

    ಜನಸಂಖ್ಯೆ ಇಳಿಕೆ, ಚೀನಾಗೆ ಆರ್ಥಿಕ ಹೊಡೆತ; 75 ವರ್ಷಗಳಲ್ಲಿ ಜನನ ಪ್ರಮಾಣ ಕನಿಷ್ಠ

    ಬೀಜಿಂಗ್: ಚೀನಾದ ಜನಸಂಖ್ಯೆಯಲ್ಲಿ ಸತತ ಎರಡನೇ ವರ್ಷ ಕುಸಿತ ಮುಂದುವರಿದಿದೆ. ಕಳವಳಕಾರಿ ವಿಚಾರವೆಂದರೆ, ಸಾವಿನ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಲೇ ಸಾಗಿದೆ. ಕಳೆದ ವರ್ಷ ಒಟ್ಟಾರೆ ಸಂಖ್ಯೆ 20 ಲಕ್ಷ ಕುಸಿದು 140.97 ಕೋಟಿ ಆಗಿದೆ ಎಂಬುದನ್ನು ಚೀನಾದ ನ್ಯಾಷನಲ್ ಬ್ಯೂರೋ ಆಫ್ ಸ್ಟಾ್ಯಟಿಸ್ಟಿಕ್ಸ್​ನಿಂದ ಬುಧವಾರ ಬಿಡುಗಡೆಯಾದ ವಾರ್ಷಿಕ ಅಂಕಿ-ಅಂಶ ಬಹಿರಂಗಪಡಿಸಿದೆ. ಕಳೆದ ವರ್ಷ ಒಟ್ಟಾರೆ 90 ಲಕ್ಷ ಶಿಶುಗಳು ಜನಿಸಿದ್ದರೆ, ಮರಣ ಪ್ರಮಾಣವು 1.10 ಕೋಟಿ ಆಗಿದೆ.

    ಜನನ ಪ್ರಮಾಣವು ಪ್ರತಿ 1000 ಜನಸಂಖ್ಯೆಗೆ 6.39 ಶಿಶುಗಳು ಜನಿಸಿದ್ದು, ಜನನದ ದಾಖಲೀಕರಣ ಆರಂಭವಾದ 75 ವರ್ಷಗಳಲ್ಲೇ ಇದು ಅತಿ ಕಡಿಮೆಯಾಗಿದೆ. ಕಳೆದ ವರ್ಷ ಈ ಪ್ರಮಾಣವು 6.77 ಆಗಿತ್ತು. ಇನ್ನೊಂದೆಡೆ, ಪ್ರತಿ ವರ್ಷ ಸಾಯುತ್ತಿರುವವರ ಸಂಖ್ಯೆಯು ಒಂದು ಕೋಟಿಯನ್ನು ದಾಟುತ್ತಿದೆ. ಮರಣ ಪ್ರಮಾಣವು ಪ್ರತಿ ಸಾವಿರ ಜನರಿಗೆ 7.87 ಆಗಿದೆ ಎಂದು ಅಂಕಿ-ಅಂಶಗಳು ತಿಳಿಸುತ್ತವೆ.

    ಕಳೆದ ಆರು ದಶಕಗಳಲ್ಲಿ ಮೊದಲ ಬಾರಿಗೆ 2022ರಲ್ಲಿ ಚೀನಾದ ಜನಸಂಖ್ಯೆಯಲ್ಲಿ ಕುಸಿತ ದಾಖಲಾಗಿತ್ತು. ಚೀನಾದಲ್ಲಿ ಜನನ ಪ್ರಮಾಣ ತೀವ್ರವಾಗಿ ಕುಸಿದಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳ ಹಿಂದೆ ಚೀನಾ ತನ್ನ ಹೆಚ್ಚುತ್ತಿರುವ ಜನಸಂಖ್ಯೆ ಕಡಿಮೆ ಮಾಡಲು ‘ಒಂದು ಕುಟುಂಬ-ಒಂದು ಮಗು’ ನೀತಿಯನ್ನು ಜಾರಿಗೆ ತಂದಿತ್ತು. ಈ ನೀತಿಯಿಂದಾಗಿ ಚೀನಾದಲ್ಲಿ ಜನನ ಪ್ರಮಾಣದಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಇದೀಗ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ದೇಶವು ಜನಸಂಖ್ಯೆ ಕುಸಿತದ ಸಮಸ್ಯೆಯನ್ನು ಎದುರಿಸುತ್ತಿದೆ. ಮುಂಬರುವ ವರ್ಷಗಳಲ್ಲಿ ಚೀನಾದಲ್ಲಿ ಈ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಕಳೆದ ವರ್ಷ ಭಾರತವು ಚೀನಾವನ್ನು ಹಿಂದಿಕ್ಕಿ 142.86 ಕೋಟಿ ಜನರೊಂದಿಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಯಿತು. ಚೀನಾದ ಜನಸಂಖ್ಯೆ 140 ಕೋಟಿ ಇತ್ತು ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಅಂಕಿ-ಅಂಶಗಳ ಮಾಹಿತಿ ನೀಡಿದ್ದವು. 2016 ರಿಂದ ಚೀನಾದಲ್ಲಿ ಜನಸಂಖ್ಯೆ ವೃದ್ಧಿಯ ದರವು ಕಡಿಮೆಯಾಗಿದೆ.

    ಏಕೆಂದರೆ, ಚೀನಾದಲ್ಲಿ ಮಕ್ಕಳನ್ನು ಬೆಳೆಸುವ ಮತ್ತು ಶಿಕ್ಷಣದ ವೆಚ್ಚವು ಬಹಳಷ್ಟು ಹೆಚ್ಚಾಗಿದೆ. ಹೆಚ್ಚುತ್ತಿರುವ ಖರ್ಚುಗಳಿಂದಾಗಿ ಯುವ ದಂಪತಿ ಕಡಿಮೆ ಮಕ್ಕಳನ್ನು ಹೊಂದುತ್ತಿದ್ದಾರೆ ಎನ್ನಲಾಗಿದೆ. ಜನಸಂಖ್ಯೆಯನ್ನು ಹೆಚ್ಚಿಸಲು ಚೀನಾ ಉತ್ತೇಜಕ ಕ್ರಮಗಳ ಯೋಜನಾ ಸರಣಿಯನ್ನೇ ಜಾರಿಗೊಳಿಸುತ್ತಿದೆ. 2021ರ ಮೇ ತಿಂಗಳಲ್ಲಿ ಮೂರು ಮಕ್ಕಳ ನೀತಿಯನ್ನು ಜಾರಿಗೆ ತಂದಿತು. ದೇಶಾದ್ಯಂತ ಹಲವಾರು ನಗರಗಳು, ಪ್ರಾಂತ್ಯಗಳು ಮತ್ತು ಪ್ರದೇಶಗಳಲ್ಲಿ ಎರಡು ಅಥವಾ ಮೂರು ಮಗುವನ್ನು ಹೊಂದಿರುವ ಕುಟುಂಬಗಳಿಗೆ ಸಬ್ಸಿಡಿ ನೀಡುವಂತಹ ಪೋ›ತ್ಸಾಹಕ ನೀತಿಗಳನ್ನು ರೂಪಿಸಿದೆ. ಚೀನಾ 2022ರಲ್ಲಿ ಕಡಿಮೆ ವಿವಾಹ ನೋಂದಣಿಗಳನ್ನು ದಾಖಲಿಸಿದೆ. ಕೇವಲ 68.33 ಲಕ್ಷ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ಇದು 37 ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ ಎಂದು ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಈ ಹಿಂದೆ ತಿಳಿಸಿತ್ತು.

    90 ಲಕ್ಷಕ್ಕಿಳಿದ ಜನನ ಪ್ರಮಾಣ: ಕಳೆದ ವರ್ಷ ಚೀನಾದಲ್ಲಿ 90 ಲಕ್ಷ ಮಕ್ಕಳು ಜನಿಸಿದ್ದಾರೆ. ಇದು 2022 ರಲ್ಲಿ ಜನಿಸಿದ 95.6 ಲಕ್ಷ ಮಕ್ಕಳಿಗೆ ಹೋಲಿಸಿದಲ್ಲಿ ಶೇಕಡ 5 ಕಡಿಮೆಯಾಗಿದೆ ಎಂದು ಚೀನಾದ ನ್ಯಾಷನಲ್ ಬ್ಯೂರೋ ಆಫ್ ಸ್ಟಾ್ಯಟಿಸ್ಟಿಕ್ಸ್ ವರದಿ ತಿಳಿಸಿದೆ. 2016 ರಲ್ಲಿ 1.77 ಕೋಟಿ, 2017ರಲ್ಲಿ 1.72 ಕೋಟಿ, 2018ರಲ್ಲಿ 1.52 ಕೋಟಿ, 2019 ರಲ್ಲಿ 1.46 ಕೋಟಿ, 2020ರಲ್ಲಿ ಜನನ ಪ್ರಮಾಣ 1.02 ಕೋಟಿ ಆಗಿತ್ತು.

    ಸವಾಲುಗಳೇನು?: ಮುಂದಿನ ದಿನಗಳಲ್ಲಿ ಜನಸಂಖ್ಯೆ ಇನ್ನಷ್ಟು ಕುಸಿಯಲಿದೆ. ಪರಿಣಾಮವಾಗಿ ಕೆಲಸಕ್ಕೆ ಅರ್ಹ ವಯೋಮಾನದ ಜನರ ಸಂಖ್ಯೆ ಇಳಿಮುಖವಾಗುವುದು, ಖರೀದಿ ಶಕ್ತಿ ಕುಸಿಯುವುದು, ಸಾಮಾಜಿಕ ಭದ್ರತೆ ಇಲ್ಲವಾಗುವುದು ಸೇರಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts