More

    ಜನಸಂಖ್ಯೆ ನಿಯಂತ್ರಣ ಅತ್ಯವಶ್ಯಕ

    ವಿಜಯಪುರ: ಶರವೇಗದಿಂದ ಬೆಳೆಯುತ್ತಿರುವ ಜನಸಂಖ್ಯೆ ಅಪಾಯದ ಸಂಕೇತ ಹಾಗೂ ಅಭಿವೃದ್ಧಿಗೆ ಮಾರಕವಾಗಿದ್ದು, ಜನಸಂಖ್ಯೆ ನಿಯಂತ್ರಣಕ್ಕೆ ಪ್ರಯತ್ನಿಸುವುದು ಅತ್ಯವಶ್ಯಕ. ಜನಸಂಖ್ಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.

    ನಗರದ ಸಿದ್ಧೇಶ್ವರ ದೇವಸ್ಥಾನದ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ನಗರ ಆರೋಗ್ಯ ಕೇಂದ್ರ ನವಬಾಗ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಸಂಯುಕ್ತಾಶ್ರಯದಲ್ಲಿ ಮಂಗಳವಾರ ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಜನಸಂಖ್ಯೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ವಿಶ್ವ ಜನಸಂಖ್ಯೆ ದಿನ ಆಚರಿಸಲಾಗುತ್ತಿದ್ದು, ಜನಸಂಖ್ಯೆ ಹೆಚ್ಚಳಕ್ಕೆ ಅನಕ್ಷರತೆ ಪ್ರಮಾಣದಲ್ಲಿ ಹೆಚ್ಚಳ, ಬೇಗ ಮದುವೆ, ಗಂಡು ಮಗು ಬೇಕೆಂಬ ಹಂಬಲ, ಮೂಢ ನಂಬಿಕೆ, ಜನನ ಹಾಗೂ ಮರಣಗಳ ನಡುವಿನ ಅಂತರವೇ ಕಾರಣವಾಗಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಪ್ರಯತ್ನಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯಿಂದ ಜನಸಂಖ್ಯೆ ನಿಯಂತ್ರಣಕ್ಕೆ ಪ್ರಯತ್ನಿಸಬೇಕು ಎಂದು ಹೇಳಿದರು.

    ಬಿಎಲ್‌ಡಿಇಯ ಡಾ. ತನುಜಾ ಪಟ್ನಾಕರ ಮಾತನಾಡಿ, ಜನಸಂಖ್ಯೆ ನಿಯಂತ್ರಣದಿಂದ ದೇಶಕ್ಕೆ ಮಾರಕವಾಗಿರುವ ಬಡತನ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಶಾಶ್ವತ ವಿಧಾನವಾದ ಟೋಬೆಕ್ಟಮಿ, ಲೆಪ್ರೋಸ್ಕೋಪಿಕ್, ಎನ್‌ಎಸ್‌ವಿ ಹಾಗೂ ತಾತ್ಕಾಲಿಕ ವಿಧಾನಗಳಾದ ಐಯುಡಿ, ಓಪಿ, ನಿರೋಧ, ಚುಚ್ಚುಮದ್ದುಗಳ ಕುರಿತು ವಿಸ್ತಾರವಾಗಿ ತಿಳಿಸಿದರು.

    ಎಫ್‌ಡಬ್ಲೂ ಅಧಿಕಾರಿ ಡಾ. ರಾಜೇಶ್ವರಿ ಗೊಲಗೇರಿ ಮಾತನಾಡಿ, ವಿಶ್ವ ಜನಸಂಖ್ಯಾ ದಿನಾಚರಣೆಯನ್ನು 1987ರಿಂದ ಪ್ರತಿ ವರ್ಷ ಜುಲೈ 11ರಂದು ಆಚರಿಸುತ್ತ ಬರಲಾಗುತ್ತಿದೆ. ಈ ವರ್ಷ ಕುಟುಂಬ ಕಲ್ಯಾಣ ನಿಭಾಯಿಸುವ ಜವಾಬ್ದಾರಿ ಎಂಬ ಘೋಷಣೆಯೊಂದಿಗೆ ಆಚರಿಸಲಾಗುತ್ತಿದೆ ಎಂದ ಅವರು, ತಾಯಿ ಮತ್ತು ಆರೋಗ್ಯದ ಪೂರ್ಣ ತಯಾರಿ, ಜನಸಂಖ್ಯಾ ತಡೆಯಲು ಇರುವ ಮಾರ್ಗಗಳು, ಜನಸಂಖ್ಯೆಯಿಂದಾಗುವ ದುಷ್ಪರಿಣಾಮಗಳು, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಸಮಸ್ಯೆಗಳ ಕುರಿತು ಅವರು ಮಾತನಾಡಿದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಕುಮಾರ ಯರಗಲ್, ಪ್ರಾಚಾರ್ಯ ಸಿ.ಬಿ. ನಾಟೀಕರ ಮಾತನಾಡಿದರು. ಡಾ. ಜೈಬುನ್ನಿಸಾ ಬೀಳಗಿ, ಡಾ.ಕವಿತಾ ದೊಡಮನಿ, ಡಾ. ಪಿ.ಎ. ಹಿಟ್ನಳ್ಳಿ, ಜಿ.ಎಂ. ಕೋಲೂರ, ಬಿ.ಪಿ. ಜಕ್ಕನಗೌಡರ, ಗುರುಪುತ್ರ, ಎಸ್.ಎಂ. ಕುಂಬಾರ, ಆರ್.ಎಂ. ಅರಕೇರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts