More

    ಬಡವರ ಫ್ರಿಡ್ಜ್‌ಗೆ ಭಾರಿ ಡಿಮಾಂಡ್ – ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿದ ತಾಪಮಾನ

    ಹೀರಾನಾಯ್ಕ ಟಿ. ಬಳ್ಳಾರಿ
    ಗಣಿನಾಡಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿರುವ ಜನ ಬಾಯಾರಿಕೆ ತಣಿಸಿಕೊಳ್ಳಲು ಮಣ್ಣಿನ ಮಡಕೆಗಳಿಗೆ ಮೊರೆ ಹೋಗುತ್ತಿರುವುದರಿಂದ ಬಡವರ ಫ್ರಿಡ್ಜ್ ಖ್ಯಾತಿಯ ಮಡಿಕೆಗೆ ಭಾರಿ ಬೇಡಿಕೆ ಬಂದಿದೆ.

    ಆಧುನಿಕತೆ ಭರಾಟೆಯಿಂದ ಸ್ಟೀಲ್, ಪ್ಲಾಸ್ಟಿಕ್ ಅಬ್ಬರಕ್ಕೆ ಸಿಲುಕಿ ಮಣ್ಣಿನ ಮಡಕೆಗಳು ಮಾಯವಾಗಿದ್ದವು. ಬೇಸಿಗೆಯ ಬಿರು ಬಿಸಿಲಿನನಿಂದಾಗಿ ಮತ್ತೆ ಮರು ಜೀವ ಪಡೆದುಕೊಂಡಿವೆ. ಶ್ರೀಮಂತರು ಫ್ರಿಡ್ಜ್ ಖರೀದಿದರೆ, ಬಡವರು ಮಡಿಕೆ ಖರೀದಿಸುತ್ತಿದ್ದಾರೆ. ಶ್ರೀಮಂತರು ಕೂಡ ಮಡಿಕೆ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ವರ್ಷದ 7-8 ತಿಂಗಳಿಂದ ಬೇಡಿಕೆಯಿಲ್ಲದ ಕಾರಣ ಕುಂಬಾರರು ಮಡಕೆ ತಯಾರಿಸಿ ಮನೆಯಲ್ಲೇ ಸಂಗ್ರಹಿಸಿಡುತ್ತ ಬಂದಿದ್ದಾರೆ. ಕುಂಬಾರ ಕುಟುಂಬಗಳು ಸದ್ಯ ವಿಭಿನ್ನ ಮಾದರಿಯ ಮಡಕೆಗಳನ್ನು ಮಾರುಕಟ್ಟೆಗೆ ತಂದಿವೆ. ದೊಡ್ಡ ಮಡಿಕೆಗೆ 300 ನಿಂದ 400 ರೂ. ಮತ್ತು ಸಣ್ಣ ಮಡಕೆಗಳು 150 ರೂ. 250 ರೂ.ವರೆಗೆ ಮಾರಾಟವಾಗುತ್ತಿವೆ. ಆಧುನಿಕ ರೆಫ್ರಿಜಿರೇಟರ್‌ಗಳು ವಿದ್ಯುತ್ ಇದ್ದರೆ ಮಾತ್ರ ಉಪಯೋಗಕ್ಕೆ ಬರುತ್ತವೆ. ಆದರೆ, ಮಣ್ಣಿನ ಮಡಕೆಗಳು 24 ಗಂಟೆ ತಂಪಾದ ನೀರನ್ನು ಒದಗಿಸುತ್ತವೆ. ಗಡಿಗೆಗಳಲ್ಲಿನ ನೀರು ದೇಹಕ್ಕೂ ತಂಪು, ಆರೋಗ್ಯಕ್ಕೂ ಒಳ್ಳೆಯದು.

    ವಿವಿಧ ಮಾದರಿ ಮಡಿಕೆಗಳು
    ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಣ್ಣಿನ ವಿವಿಧ ಮಾದರಿಯ ಮಡಕೆಗಳನ್ನು ಕುಂಬಾರರು ತಯಾರಿಸಿದ್ದಾರೆ. ನೈಪುಣ್ಯತೆಯಿಂದ ತಯಾರಿಸಿದ ವಿವಿಧ ಮಾದರಿಯ ಮಡಕೆಗಳು ಎಲ್ಲೆಡೆ ಗಮನ ಸೆಳೆಯುತ್ತಿವೆ. ಬಳ್ಳಾರಿ ನಗರ ಸೇರಿ ಗ್ರಾಮೀಣ ಭಾಗಗಳಲ್ಲೂ ಇವುಗಳ ಮಾರಾಟ ಜೋರಾಗಿದೆ. ಹೈದರಾಬಾದ್, ರಾಜಸ್ಥಾನದಿಂದ ಬಂದಿರುವ ವಿಶೇಷ ಅಲಂಕಾರಿಕ ಮಣ್ಣಿನ ಕುಡಿಕೆಗಳು ಜನರನ್ನು ಕೈ ಬೀಸಿ ಕರೆಯುತ್ತಿದೆ.

    ವರ್ಷವಿಡೀ ಇರಲ್ಲ ವ್ಯಾಪಾರ
    ತಾಂತ್ರಿಕತೆ ಹೆಚ್ಚಾಗಿ ಗುಡಿ ಕೈಗಾರಿಕೆ ಮುಚ್ಚಿ ಹೋಗುತ್ತಿವೆ. ಮಡಕೆಗಳು ಮಾಯವಾಗಿ ಕುಂಬಾರ ಬದುಕಿನ ಮೇಲೆ ಕರಿನೆರಳು ಆವರಿಸಿದೆ. ಕುಂಬಾರ ವೃತ್ತಿ ನಂಬಿಕೊಂಡ ಅನೇಕ ಕುಟುಂಬಗಳಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಮೂಲ ಕುಲಕಸಬನ್ನೇ ಬಿಟ್ಟು ಬೇರೆ ಬೇರೆ ಉದ್ಯೋಗ ಹುಡುಕಿಕೊಂಡಿದ್ದಾರೆ. ಬೆರಳೆಣಿಕೆಯಷ್ಟು ಜನ ಮಾತ್ರ ಕುಂಬಾರಿಕೆ ಮುಂದುವರಿಸಿಕೊಂಡು ಬಂದಿದ್ದಾರೆ. ಹಬ್ಬ-ಹರಿದಿನ, ಜಾತ್ರೆ, ಮದುವೆ, ಬೇಸಿಗೆ ಮತ್ತಿತರ ಸಂದರ್ಭದಲ್ಲಿ ಮಾತ್ರ ಮಣ್ಣಿನ ಮಡಿಕೆಗಳು ಮಾರಾಟವಾಗುತ್ತವೆ. 7-8 ತಿಂಗಳಿಂದ ವ್ಯಾಪಾರವಿಲ್ಲದೇ ಇದ್ದ ಕುಂಬಾರರ ಮುಖದಲ್ಲಿ ಬೇಸಿಗೆ ಮಂದಹಾಸ ಮೂಡಿಸಿದೆ.

    ಮುಗಿಬೀಳುವ ಜನ
    20 ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯವುಳ್ಳ ಒಂದು ಮಡಕೆಗೆ 400 ರೂ. ವರೆಗೂ, 15 ಲೀಟರ್ ಸಾಮರ್ಥ್ಯದ ಮಡಿಕೆ 350 ರೂ.ವರೆಗೂ ಮಾರಾಟವಾಗುತ್ತಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯಲು ಅನುಕೂಲವಾಗುವಂತಹ ಮಣ್ಣಿನ ಬಾಟಲಿಗಳನ್ನೂ ತಯಾರು ಮಾಡಲಾಗಿದೆ. ಬಗೆ ಬಗೆಯ ವಸ್ತುಗಳನ್ನು ಮಣ್ಣಿನಿಂದ ತಯಾರಿಸಿದ್ದು, ಗ್ರಾಹಕರು ಖರೀದಿಗಾಗಿ ಮುಗಿಬೀಳುತ್ತಿದ್ದಾರೆ ಎನ್ನುತ್ತಾರೆ ಮಣ್ಣಿನ ಮಡಕೆ ಮಾರಾಟಗಾರ ಶಿವಪ್ಪ.
    

    ಬಿಸಿಲಿನ ತಾಪ ಹೆಚ್ಚಾಗಿದೆ. ಹೊರ ಹೋಗಿ ಬಂದವರು ತಣ್ಣೀರು ಕುಡಿದು ದಾಹ ನೀಗಿಸಿಕೊಳ್ಳಲು ಇಷ್ಟಪಡುತ್ತಾರೆ. ಫ್ರಿಡ್ಜ್ ನೀರು ಕುಡಿದರೆ ಆರೋಗ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ ಮಡಕೆ ಖರೀದಿ ಮಾಡುತ್ತಿದ್ದೇವೆ.
    ಹರಿಣಿ, ಗ್ರಾಹಕಿ, ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts