More

    ಬಡವಾದ ಬುಡಾ ಬಡಾವಣೆ!

    ಬೆಳಗಾವಿ: ಆಧುನಿಕ ಜಗತ್ತಿನಲ್ಲಿ ನಗರೀಕರಣ ಹೆಚ್ಚಾದಂತೆಲ್ಲ ಹಿಡಿತಕ್ಕೆ ಸಿಗದಂತೆ ನಗರಗಳು ಬೆಳೆಯುತ್ತಿವೆ. ಹೀಗೆ ಬೆಳೆಯುತ್ತಿರುವ ನಗರಗಳ ಜನತೆಗೆ ಮೂಲ ಸೌಕರ್ಯ ಕಲ್ಪಿಸಲು, ಸುವ್ಯವಸ್ಥೆ ಕಾಪಾಡಲು ನಗರಾಭಿವೃದ್ಧಿ ಪ್ರಾಧಿಕಾರ ಕೆಲಸ ಮಾಡುತ್ತದೆ. ಆದರೆ, ಬೆಳಗಾವಿ ನಗರದಲ್ಲಿ ಪ್ರಾಧಿಕಾರದಿಂದ ಹೊಸದಾಗಿ ನಿರ್ಮಾಣವಾದ ಕೆಲ ಬಡಾವಣೆಗಳು, ಮಹಾನಗರ ಪಾಲಿಕೆಗೆ ಹಸ್ತಾಂತರವಾಗದೆ ಮೂಲ ಸೌಕರ್ಯವೂ ಅರ್ಹರಿಗೆ ದಕ್ಕದಾಗಿದೆ.

    ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ವು ರಾಮತೀರ್ಥ ನಗರ ಮತ್ತು ಎಚ್.ಡಿ. ಕುಮಾರಸ್ವಾಮಿ ಲೇಔಟ್ ನಿರ್ಮಿಸಿ ದಶಕಗಳೇ ಕಳೆದಿವೆ. ಆದರೆ, ಸರ್ಕಾರದ ವಿಳಂಬ ನೀತಿ ಹಾಗೂ ಆರ್ಥಿಕ ಸಮಸ್ಯೆ ಇನ್ನಿತರ ಕಾರಣಗಳಿಂದ ಇನ್ನೂ ಈ ಬಡಾವಣೆಗಳು ಪಾಲಿಕೆಗೆ ಹಸ್ತಾಂತರಗೊಂಡಿಲ್ಲ.

    ನಗರದ ಜನಸಂಖ್ಯೆಗೆ ಅನುಗುಣವಾಗಿ ಮತ್ತು ಪ್ರತಿಯೊಬ್ಬರಿಗೂ ನಿವೇಶನ ಕಲ್ಪಿಸುವ ಉದ್ದೇಶದಿಂದ ಸರ್ಕಾರವು ಬುಡಾ ವತಿಯಿಂದ 1997ರಲ್ಲಿ 333.11ಎಕರೆ ಪ್ರದೇಶದಲ್ಲಿ ರಾಮತೀರ್ಥ ನಗರ ಮತ್ತು 2005-06ರಲ್ಲಿ 60.15 ಎಕರೆ ಪ್ರದೇಶದಲ್ಲಿ ಕುಮಾರಸ್ವಾಮಿ ಲೇಔಟ್ ನಿರ್ಮಿಸಿದೆ. ರಾಮತೀರ್ಥ ನಗರದಲ್ಲಿ 4082 ನಿವೇಶನಗಳಿದ್ದು 3812 ಹಂಚಿಕೆಯಾಗಿವೆ. ಕುಮಾರಸ್ವಾಮಿ ಲೇಔಟ್‌ನ 697 ನಿವೇಶನಗಳಿದ್ದು, 520 ಹಂಚಿಕೆಯಾಗಿವೆ. ಆದರೆ, ಅವುಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪಾಲಿಕೆಗೆ ಹಸ್ತಾಂತರಿಸುವ ಕೆಲಸ ನಡೆದಿಲ್ಲ. ಪರಿಣಾಮ ಈ ಎರಡೂ ಬಡಾವಣೆಗಳು ಸರ್ಕಾರಿ ಯೋಜನೆಗಳಿಂದ ವಂಚಿತಗೊಂಡಿವೆ.

    ನಿರ್ಲಕ್ಷ್ಯ ಆರೋಪ: ನಗರಾಭಿವೃದ್ಧಿ ಇಲಾಖೆಯ ನಿಯಮಾವಳಿ ಪ್ರಕಾರ ಬುಡಾ ಅಭಿವೃದ್ಧಿಪಡಿಸುವ ಬಡಾವಣೆಗಳನ್ನು ನಿರ್ವಹಣೆಗಾಗಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಬೇಕು. ಆದರೆ, ರಾಮತೀರ್ಥ ನಗರ ಹಾಗೂ ಕುಮಾರಸ್ವಾಮಿ ಲೇಔಟ್ ಬಡಾವಣೆ ನಿರ್ಮಾಣಗೊಂಡು ಹತ್ತು ವರ್ಷವಾಗುತ್ತ ಬಂದರೂ ಪಾಲಿಕೆಯು ಇನ್ನೂ ಅವುಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿಲ್ಲ. ವ್ಯವಸ್ಥಿತ ರೀತಿಯಲ್ಲಿ ನಗರ ಕಟ್ಟುವ ಭವಿಷ್ಯದ ಯೋಜನೆಯ ಉದ್ದೇಶ ಬುಡಾ ನಿರ್ಲಕ್ಷೃದಿಂದ ಹಾಳಾಗಿದೆ ಎನ್ನುವುದು ಬಲ್ಲ ಸಾರ್ವಜನಿಕರ ಆರೋಪವಾಗಿದೆ.

    ನಿರ್ವಹಣೆಗೆ ಅನುದಾನ ಕೊರತೆ: ಬಡಾವಣೆಗಳ ಹಸ್ತಾಂತರ ಯಾವಾಗ ಎಂಬ ಪ್ರಶ್ನೆಗೆ ಇಂದಿಗೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಬಡಾವಣೆಗಳಿಗೆ ಮೂಲ ಸೌಲಭ್ಯ ಒದಗಿಸಲು ಬುಡಾ ಬಳಿ ಅನುದಾನದ ಕೊರತೆ ಕಾಡುತ್ತಿದೆ. ಅಲ್ಲದೆ, ರಾಜ್ಯ ಸರ್ಕಾರದಿಂದ ಸಮರ್ಪಕ ಅನುದಾನ, ಸಹಕಾರ ಸಿಗದಿರುವ ಹಿನ್ನೆಲೆಯಲ್ಲಿ ಬುಡಾ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಮತ್ತೊಂದೆಡೆ ಮೂಲ ಸೌಲಭ್ಯವೇ ಇಲ್ಲದ ಬಡಾವಣೆಗಳ ನಿರ್ವಹಣೆಗೆ ಮಹಾನಗರ ಪಾಲಿಕೆಯೂ ಒಪ್ಪುತ್ತಿಲ್ಲ.

    ಒಳಚರಂಡಿ ವ್ಯವಸ್ಥೆ ಇಲ್ಲ

    ಬಡಾವಣೆಗಳ ಈ ಸಮಸ್ಯೆಗೆ ಬುಡಾ ಇನ್ನೂ ಪರಿಹಾರ ಕಲ್ಪಿಸುತ್ತಿಲ್ಲ. ಪಾಲಿಕೆಯ ಯೋಜನೆಗಳು ಈ ಬಡಾವಣೆಗೆ ಅನ್ವಯವಾಗುತ್ತಿಲ್ಲ. ಹೀಗಾಗಿ ಎರಡು ಬಡಾವಣೆಗಳೂ ಅನಾಥವಾಗಿವೆ. ಕುಮಾರಸ್ವಾಮಿ ಲೇಔಟ್ ಮತ್ತು ರಾಮತೀರ್ಥ ನಗರದ ಅಭಿವೃದ್ಧಿಗೆ ಒತ್ತಾಯಿಸಿ ನಿವಾಸಿಗಳು ನೂರಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. 20 ವರ್ಷ ಕಳೆದರೂ ಒಳಚರಂಡಿ ವ್ಯವಸ್ಥೆ ಇಲ್ಲ. ಕಸ ವಿಲೇವಾರಿ, ಚರಂಡಿ ಸ್ವಚ್ಛತೆ ಮಾತ್ರ ಪಾಲಿಕೆಗೆ ಗುತ್ತಿಗೆ ನೀಡಿದ್ದಾರೆಯೇ ಹೊರತು ಬಡಾವಣೆ ಹಸ್ತಾಂತರಿಸಿಲ್ಲ ಎಂದು ರಾಮತೀರ್ಥ ನಗರ ರಹವಾಸಿಗಳ ಅಧ್ಯಕ್ಷ ಶಿವಪ್ಪ ಎಸ್. ಕಿವಡಸಣ್ಣವರ ದೂರಿದ್ದಾರೆ.

    ಎರಡು ಬಡಾವಣೆಗಳನ್ನು ಅಭಿವೃದ್ಧಿಪಡಿಸಿದ ಬಳಿಕ ಪಾಲಿಕೆಗೆ ಹಸ್ತಾಂತರಿಸಲಾಗುವುದು. ಕುಮಾರಸ್ವಾಮಿ ಲೇಔಟ್‌ನಲ್ಲಿ ಕಾಮಗಾರಿ ಆರಂಭವಾಗಿದ್ದು, ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ರಾಮತೀರ್ಥ ನಗರ ಅಭಿವೃದ್ಧಿ ಕಾಮಗಾರಿಗೆ ಅನುಮೋದನೆ ಲಭಿಸಿದ್ದು, 7-8 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಅಭಿವೃದ್ಧಿ ಕಾಮಗಾರಿ ಸೇರಿ ಎಲ್ಲವೂ ಅರ್ಧದಲ್ಲಿಯೇ ಮೊಟಕುಗೊಂಡಿದ್ದವು. ಇದೀಗ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತ ಬಳಿಕ ಹಸ್ತಾಂತರ ಕೆಲಸ ನಡೆಯಲಿದೆ.
    | ಪ್ರೀತಂ ನಸ್ಲಾಪುರೆ, ಬುಡಾ ಆಯುಕ್ತ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts